‘ಇದು ರಾಧೆಯ ಪ್ರೀತಿಯ ರೀತಿ...’

7

‘ಇದು ರಾಧೆಯ ಪ್ರೀತಿಯ ರೀತಿ...’

Published:
Updated:
‘ಇದು ರಾಧೆಯ ಪ್ರೀತಿಯ ರೀತಿ...’

ಪ್ರೀತಿಯ ಮಾತು ಬಂದಾಗಲೆಲ್ಲಾ ರಾಧೆಯ ಉಲ್ಲೇಖವಾಗುತ್ತದೆ. ಶ್ಯಾಮನ ಒಲವೇ ರಾಧೆಗೆ ಬದುಕು. ಅದರಲ್ಲಿಯೇ ತಲ್ಲೀನವಾಗಿರುವ ರಾಧೆಗೆ ಶ್ಯಾಮ ಬರೀ ವ್ಯಕ್ತಿಯಷ್ಟೇ ಅಲ್ಲ ಗಮ್ಯತಾಣ ಕೂಡಾ. ಆದರೆ, ಅಂಥ ರಾಧೆಯ ಪ್ರೀತಿಯಿಂದ ಬಾಹ್ಯವಾಗಿ ದೂರವಾಗುವ ಶ್ಯಾಮ, ಕೃಷ್ಣನಾಗಿ ರೂಪುಗೊಳ್ಳುತ್ತಾನೆ.

ಇತ್ತ ರಾಧೆಗೋ ಒಲವಿನ ಶ್ಯಾಮನ ಮೇಲಷ್ಟೇ ಪ್ರೀತಿ. ಆಕೆಗೆ ಕೃಷ್ಣನ ಹಂಗು ಬೇಕಿಲ್ಲ. ಹೀಗೆ ಶ್ಯಾಮನ ಒಲವಿನಲ್ಲೇ ಬದುಕು ಕಟ್ಟಿಕೊಳ್ಳುವ ರಾಧೆಯ ಅಂತರಂಗವನ್ನು ‘ರಾಧಾ’ ಏಕವ್ಯಕ್ತಿ ಪ್ರದರ್ಶನ ಅನಾವರಣ ಮಾಡುತ್ತದೆ.

ನಿರ್ದೇಶಕ ಡಾ.ಶ್ರೀಪಾದ ಭಟ್ ಅವರ ರಂಗಮೂಸೆಯಲ್ಲಿ ನೃತ್ಯದೊಂದಿಗೆ ಬಣ್ಣದ ಬದುಕಿಗೆ ‘ರಾಧಾ’ ವಿಭಿನ್ನವಾಗಿ ತೆರೆದುಕೊಂಡಿದ್ದಾಳೆ.

‘ಕೃಷ್ಣ ಇಲ್ಲಿ ನೆಪ ಮಾತ್ರ. ಮುಗ್ಧ ಶ್ಯಾಮ ಯಾವಾಗ ಕೃಷ್ಣನ ರೂಪದಲ್ಲಿ ರಾಜಕಾರಣಿಯಾಗಿ ಪರಿವರ್ತನೆಯಾಗುತ್ತಾನೋ ಆಗ ರಾಧೆ ವಿಮುಖಳಾಗುತ್ತಾಳೆ. ಶ್ಯಾಮನಿಂದ ಬರೀ ಒಲವನ್ನಷ್ಟೇ ಸ್ವೀಕರಿಸುವ ರಾಧೆ ಒಂಟಿಯಾಗಿ ಬದುಕುವ ನಿರ್ಧಾರ ಕೈಗೊಳ್ಳುತ್ತಾಳೆ. ಇಲ್ಲವಳು ದುರಂತ ನಾಯಕಿಯಲ್ಲ. ಬದಲಿಗೆ ಘನತೆಯುಳ್ಳ, ಅಸ್ಮಿತೆಯುಳ್ಳ ಹೆಣ್ಣು. ಅದನ್ನು ಈ ನಾಟಕ ನಿರೂಪಿಸುತ್ತದೆ’ ಎನ್ನುತ್ತಾರೆ ಶ್ರೀಪಾದ ಭಟ್.

ಏಕವ್ಯಕ್ತಿ ಪ್ರದರ್ಶನದುದ್ದಕ್ಕೂ ರಾಧಾ–ಶ್ಯಾಮ–ಕೃಷ್ಣನ ಹಲವು ರೂಪಗಳನ್ನು ರಂಗದ ಮೇಲೆ ಪ್ರಸ್ತುತ ಪಡಿಸಲಾಗಿದೆ.

ಒಂಟಿ ಬದುಕನ್ನು ಪ್ರೀತಿಯಿಂದಲೇ ಆಯ್ಕೆ ಮಾಡಿಕೊಳ್ಳುವ ರಾಧೆ, ಘನತೆಯಿಂದ ಬದುಕು ತ್ತಾಳೆ. ಕೃಷ್ಣನಿಗೆ ರಾಜಕೀಯ ಘನತೆ ದೊರೆತಾಗ ಅವನು ಅದಕ್ಕೆ ತಕ್ಕಂತೆ ರಾಜಕುಮಾರಿ ರುಕ್ಮಿಣಿಯನ್ನು ಮದುವೆಯಾಗುತ್ತಾನೆ. ಆಗಲೂ ರಾಧೆ ವಿಚಲಿತಳಾಗುವುದಿಲ್ಲ. ಆಕೆ ಸಾಮಾನ್ಯ ಹೆಣ್ಣಾದರೂ ತನ್ನ ಬದುಕನ್ನು ಕೊನೆಗಾಣಿಸುವುದಿಲ್ಲ. ಏಕೆಂದರೆ ಅವಳು ಪ್ರೀತಿಸಿದ್ದು ಶ್ಯಾಮನನ್ನು. ಅವನ ಒಲವಿನ ಧಾರಣಾ ಶಕ್ತಿಯಿಂದಲೇ ಆಕೆ ಇಡೀ ಜಗತ್ತನ್ನು ಪ್ರೀತಿಸತೊಡಗುತ್ತಾಳೆ. ಇದುವೇ ‘ರಾಧಾ’ಳ ಅಂತರಂಗ.

ಮೂಲತಃ ನೃತ್ಯ ಕಲಾವಿದೆ ಆಗಿರುವ ಮಂಜುಳಾ ಸುಬ್ರಹ್ಮಣ್ಯ ಅವರು ‘ರಾಧಾ’ ಆಗಿ ಇಡೀ ನಾಟಕಕ್ಕೆ ಜೀವ ತುಂಬಿದ್ದಾರೆ. ರಂಗಭೂಮಿಯೊಂದಿಗೆ ನೃತ್ಯಕಲಾ ಪ್ರಕಾರದ ಅನುಸಂಧಾನವನ್ನೂ ಈ ನಾಟಕದಲ್ಲಿ ನಿರ್ದೇಶಕರು ಮಾಡಿದ್ದಾರೆ.

‘ಊರ್ಮಿಳಾ ನಂತರ ಎರಡನೇ ಏಕವ್ಯಕ್ತಿ ಪ್ರದರ್ಶನ ಇದು. ‘ಊರ್ಮಿಳಾ’ದಲ್ಲಿ ನೃತ್ಯಕ್ಕೆ ಹೆಚ್ಚು ಅವಕಾಶವಿರಲಿಲ್ಲ. ಈಗ ‘ರಾಧಾ’ದಲ್ಲಿ ನೃತ್ಯ ಮತ್ತು ಅಭಿನಯ ಎರಡರ ಹದಪಾಕವಿದೆ. ಕಲಾವಿದೆಯಾಗಿ ಇಂಥ ಭಿನ್ನ ಪ್ರಯೋಗಕ್ಕೆ ಒಗ್ಗಿಸಿಕೊಂಡಿರುವ ಬಗ್ಗೆ  ಖುಷಿಯಿದೆ. ಈ ನಾಟಕದಲ್ಲಿ ರಾಧೆ ಪಾತ್ರದಲ್ಲಿಯೇ ನೃತ್ಯದ ಛಾಯೆಯಿದೆ. ಅದುವೇ ಈ ನಾಟಕದ ವಿಶೇಷ ಗುಣ’ ಎನ್ನುತ್ತಾರೆ ರಾಧಾ ಪಾತ್ರಧಾರಿ ಮಂಜುಳಾ ಸುಬ್ರಹ್ಮಣ್ಯ.

‘ಶ್ಯಾಮನ ಬಗ್ಗೆ ಅಗಾಧ ಪ್ರೀತಿ, ನಂಬಿಕೆ ಇಟ್ಟುಕೊಂಡಿರುವ ರಾಧೆ ಇಲ್ಲಿದ್ದಾಳೆ. ಆ ಪ್ರೀತಿಯ ಗಟ್ಟಿತನದಿಂದಲೇ ಎಲ್ಲವನ್ನೂ ಆಕೆ ಎದುರಿಸಿ ನಿಲ್ಲುತ್ತಾಳೆ. ಒಂಟಿ ಹೆಣ್ಣು ಘನತೆಯಿಂದ ಬದುಕಬಲ್ಲಳು ಎನ್ನುವುದನ್ನು ನಿರೂಪಿಸುತ್ತಾಳೆ. ಜಗತ್ತಿನ ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳದ ರಾಧಾ, ಇಂದಿನ ಆಧುನಿಕ ಸ್ವತಂತ್ರ ಮನೋಭಾವದ ಹೆಣ್ಣಿನ ಪ್ರತೀಕವಾಗಿ ಗೋಚರಿಸುತ್ತಾಳೆ’ ಎನ್ನುತ್ತಾರೆ ಅವರು.

ಹೆಣ್ಣಿನ ಅಸ್ಮಿತೆಯ ಚಹರೆಗಳು ಬದಲಾಗುತ್ತಿರುವ ಕಾಲಘಟ್ಟದಲ್ಲಿ ರಾಧೆಯ ಒಂಟಿ ಬದುಕಿನ ಆಯ್ಕೆ ಹೆಣ್ಣಿನ ದ್ಯೋತಕ. ಘನವಾಗಿ ಒಂಟಿ ಬದುಕನ್ನು ಸಂಭ್ರಮಿಸುವ ರಾಧೆಯ ಬಳಿಗೆ ಕೃಷ್ಣ ಬರಬೇಕಾದರೆ ಅವನು ಶ್ಯಾಮನಾಗಿಯೇ ಬರಬೇಕಾಗುತ್ತದೆ ಎಂಬುದನ್ನು ‘ರಾಧಾ’ ಸೂಚ್ಯವಾಗಿ ಹೇಳುತ್ತದೆ.

ಇಂದು ರಾತ್ರಿ 7ಕ್ಕೆ ‘ರಾಧಾ’ ಏಕವ್ಯಕ್ತಿ

ರಂಗ ಪ್ರದರ್ಶನ


ಪ್ರಸ್ತುತಿ: ಮಂಜುಳಾ ಸುಬ್ರಹ್ಮಣ್ಯ

ರಚನೆ: ಸುಧಾ ಆಡುಕಳ

ನಿರ್ದೇಶನ: ಡಾ.ಶ್ರೀಪಾದ ಭಟ್

ರಂಗವಿನ್ಯಾಸ: ಮೋಹನ ಸೋನ,

ರಾಜು ಮಣಿಪಾಲ

ಆಯೋಜನೆ: ಅನಾವರಣ,

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ

ಅವಧಿ: ಒಂದು ಗಂಟೆ, ಉಚಿತ ಪ್ರವೇಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry