ಮಂಗಳವಾರ, ಡಿಸೆಂಬರ್ 10, 2019
20 °C

ಯಶ್ವಸಿ ಏಜೆಂಟರಾಗುವುದು ಹೇಗೆ?

Published:
Updated:
ಯಶ್ವಸಿ ಏಜೆಂಟರಾಗುವುದು ಹೇಗೆ?

ವೇಗವಾಗಿ ಬೆಳೆಯುತ್ತಿರುವ ರಿಯಲ್‌ ಎಸ್ಟೇಟ್‌ ಉದ್ಯಮ ಹಲವು ಮಂದಿಗೆ ಉದ್ಯೋಗವನ್ನೂ ನೀಡಿದೆ. ಅದರಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳದ್ದೂ ಬಹುಮುಖ್ಯ ಪಾತ್ರ. ಶ್ರಮದ ಜೊತೆಗೆ ನಂಬಿಕೆ ಗಳಿಸಿದರೆ ಮಾತ್ರವೇ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ.

*ಸ್ಥಳೀಯ ಜ್ಞಾನ: ಉದ್ಯಮದಲ್ಲಿ ಪಕ್ವತೆ ಗಳಿಸಲು ಸ್ಥಳೀಯ ಜ್ಞಾನ ಅವಶ್ಯ. ಸ್ಥಳೀಯವಾಗಿ ಯಾವ ನಿವೇಶನ ಖಾಲಿಯಿದೆ. ಯಾವ ಜಾಗ ಯಾರ ಹೆಸರಿನಲ್ಲಿದೆ. ಮಾರುಕಟ್ಟೆ ಯಾವ ಪರಿಸ್ಥಿತಿಯಲ್ಲಿದೆ. ರಿಯಾಲ್ಟಿ ಕ್ಷೇತ್ರದ ಏರಿಳಿತ... ಹೀಗೆ ಸಕಲ ಮಾಹಿತಿಯ ಅರಿವಿರಬೇಕು.

*ಸಂವಹನ ಕಲೆ ಅಗತ್ಯ: ಒಳ್ಳೆಯ ಏಜೆಂಟ್‌ ಎನಿಸಿಕೊಳ್ಳಲು ಇರಬೇಕಾದ ಮುಖ್ಯವಾದ ಗುಣವಿದು. ಹಾಗಾಗಿ ಚೆನ್ನಾಗಿ ಮಾತನಾಡುವ ಕಲೆಯನ್ನು ಸಿದ್ಧಿಸಿಕೊಳ್ಳಿ. ಗಲ್ಲಿ ಗಲ್ಲಿಗೆ ಏಜೆಂಟರೂ ಸಿಗುವುದರಿಂದ ನಿಮ್ಮ ವರ್ತನೆ ವೃತ್ತಿಯ ಯಶಸ್ಸನ್ನು ಅವಲಂಬಿಸುತ್ತದೆ. ಮಾತು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಸೃಷ್ಟಿಸುತ್ತದೆ.

*ತಂತ್ರಜ್ಞಾನದ ಅರಿವು: ಈಗಂತೂ ಬಹುತೇಕರು ತಂತ್ರಜ್ಞಾನವನ್ನು ನೆಚ್ಚಿಕೊಂಡಿದ್ದಾರೆ. ಏಜೆಂಟರನ್ನು ಹುಡುಕಿಕೊಂಡು ಹೋಗುವುದಕ್ಕಿಂತ ತಂತ್ರಜ್ಞಾನದ ಮೂಲಕವೇ ಅವರ ಸಂಪರ್ಕ ಸಾಧಿಸುವವರು ಹೆಚ್ಚು. ಸಾಮಾಜಿಕ ಜಾಲತಾಣಗಳು ಖರೀದಿದಾರರು ಮತ್ತು ಮಾರಾಟಗಾರರ ನಡುವೆ ಸೇತುವೆಯಾಗಿದೆ. ಹೀಗಾಗಿ ಏಜೆಂಟರು ತಂತ್ರಜ್ಞಾನದ ಬಳಕೆಯ ಅರಿವು ಬೆಳೆಸಿಕೊಳ್ಳಬೇಕು.

*ಉತ್ತಮ ಗುರು: ಒಮ್ಮೆಲೇ ಉದ್ಯಮಕ್ಕೆ ಇಳಿಯುವ ಮೊದಲು ಪ್ರಾರಂಭದಲ್ಲಿ ಒಳ್ಳೆಯ ಗುರುವನ್ನು ಆರಿಸಿಕೊಂಡು ಅವರಿಂದ ಉದ್ಯಮದ ಒಳಹೊರಗನ್ನು ಅರಿತುಕೊಳ್ಳಿ.

*ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಿ: ಹಣ ಗಳಿಸುವ ಹಂಬಲದಲ್ಲಿ ಖರೀದಾರರಿಗೆ ಸಿಕ್ಕಾಪಟ್ಟೆ ಶುಲ್ಕ ವಿಧಿಸಬೇಡಿ. ಇದರಿಂದ ನೀವು ಗ್ರಾಹಕರ ವಿಶ್ವಾಸವನ್ನೇ ಕಳೆದುಕೊಳ್ಳುತ್ತೀರಿ. ಇದರಿಂದ ನಿಮ್ಮ ಬಳಿ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಬಹುದು.

*ಕಚೇರಿ ಪ್ರಾರಂಭಿಸಿ: ಮನೆಯಲ್ಲಿಯೇ ಉದ್ಯಮ ಆರಂಭಿಸುವುದರಿಂದ ವೃತ್ತಿ ಬದ್ಧತೆ ಇರುವುದಿಲ್ಲ. ಹಾಗಾಗಿ ಸುಸಜ್ಜಿತವಾದ ಕಚೇರಿ ಆರಂಭಿಸಿ. ಜೊತೆಗೆ ಖರೀದಾರರು, ಗೃಹ ಸಾಲದ ಆಫರ್‌ಗಳು, ಮಾರಾಟಗಾರರು, ಹೂಡಿಕೆದಾರರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ. ಅದನ್ನು ಲಿಖಿತ ರೂಪದಲ್ಲಿ ಇರಿಸಿಕೊಳ್ಳಿ.

*ಗ್ರಾಹಕರ ಅಭಿರುಚಿಗೆ ಸ್ಪಂದಿಸಿ: ಗ್ರಾಹಕರ ಅಭಿರುಚಿ ಅರಿತು ಅದಕ್ಕೆ ತಕ್ಕಂತೆ ಅವರಿಗೆ ಮನೆ ತೋರಿಸಿ. ಹತ್ತು, ಹದಿನೈದು ಮನೆ ತೋರಿಸಿ, ಅವರಿಗೂ ನಿರಾಸೆ ಉಂಟುಮಾಡುವುದಕ್ಕಿಂತ ಅವರ ಅಗತ್ಯಕ್ಕೆ ಅನುಗುಣವಾಗಿ ಒಳ್ಳೆಯ ಮನೆ ತೋರಿಸಿ, ಅವರ ಕೆಲಸ ಸುಲಭವಾಗಿಸಿ.

ಪ್ರತಿಕ್ರಿಯಿಸಿ (+)