ಮಂಗಳವಾರ, ಡಿಸೆಂಬರ್ 10, 2019
26 °C

ಮರಳು ಟೆಂಡರ್‌ನಲ್ಲಿ ಅಕ್ರಮ: ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಳು ಟೆಂಡರ್‌ನಲ್ಲಿ ಅಕ್ರಮ: ಶೆಟ್ಟರ್

ಬೆಂಗಳೂರು: ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳುವ ₹7,020 ಕೋಟಿ ಮೊತ್ತದ ಟೆಂಡರ್‌ನಲ್ಲಿ ಭಾರಿ ಅಕ್ರಮ ನಡೆದಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆಗ್ರಹಿಸಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಟೆಂಡರ್ ಪ್ರಕ್ರಿಯೆ ತಮಗೆ ಸಂಬಂಧಿಸಿದ್ದಲ್ಲ ಎಂದು ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಗಣಿ ಸಚಿವ ವಿನಯ ಕುಲಕರ್ಣಿ ಪ್ರತಿಪಾದಿಸುತ್ತಿದ್ದಾರೆ. ಹಾಗಿದ್ದರೆ ಮೈಸೂರ್‌ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ನಡೆಸಿದ ಈ ಹಗರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಹೇಳಿದರು.

ಪ್ರತಿ ವರ್ಷ ₹36 ಲಕ್ಷ ಮೌಲ್ಯದ ಲೆಕ್ಕದಲ್ಲಿ ಐದು ವರ್ಷದ ಅವಧಿಗೆ ಮರಳು ಆಮದು ಮಾಡಿಕೊಳ್ಳುವ ಟೆಂಡರ್‌ ಅನ್ನು ದುಬೈ ಮೂಲದ ಪೊಸೈಡನ್ ಕಂಪೆನಿಗೆ ನೀಡಲಾಗಿದೆ. ಕಂಪೆನಿ ನೀಡಿದ ವಿಳಾಸ, ದೂರವಾಣಿ ಸಂಖ್ಯೆ ಎಲ್ಲವೂ ನಕಲಿ. ಸಿಂಗಪುರದ ಆಕ್ಸಿಸ್‌ ಕ್ರೆಡಿಟ್ ಬ್ಯಾಂಕ್‌ ಹೆಸರಿನಲ್ಲಿ ಬ್ಯಾಂಕ್ ಗ್ಯಾರಂಟಿ ನೀಡಲಾಗಿದೆ. ಆದರೆ, ಆ ಬ್ಯಾಂಕ್ ಅಸ್ತಿತ್ವದಲ್ಲೇ ಇಲ್ಲ ಎಂದು ಹೇಳಿದರು.

ಮಲೇಷ್ಯಾದಲ್ಲಿ 50 ಕೆ.ಜಿ ತೂಕದ ಮರಳು ₹107 ಕ್ಕೆ ಸಿಗಲಿದೆ. ಎಂಎಸ್‌ಐಎಲ್ ₹200 ನಿಗದಿ ಮಾಡಿದೆ. ಯಾರಿಗೆ ಮಾಮೂಲು ನೀಡಲು ₹93 ಹೆಚ್ಚುವರಿಯಾಗಿ ನಿಗದಿ ಮಾಡಲಾಗಿದೆ ಎಂದೂ ಅವರು ಪ್ರಶ್ನಿಸಿದರು.

ಆಮದು ಮರಳು ಪ್ರತಿಟನ್‌ಗೆ ₹4,000 ಆಗಲಿದ್ದು, 10 ಟನ್ ಸಾಮರ್ಥ್ಯದ ಒಂದು ಟ್ರಕ್‌ ಮರಳಿಗೆ ₹40,000 ನಿಗದಿಯಾಗಲಿದೆ. ಹುಬ್ಬಳ್ಳಿಯಲ್ಲಿ ₹20,000ದಿಂದ ₹25,000ವರೆಗೆ ಒಂದು ಟ್ರಕ್‌ ಮರಳು ಸಿಗುತ್ತಿದೆ. ದುಬಾರಿ ದರ ನೀಡಿ ಆಮದು ಮಾಡಿಕೊಳ್ಳುವ ಅಗತ್ಯವೇನು ಎಂದು ಅವರು ಕೇಳಿದರು.

ದಾಖಲೆ ಕೊಡಿ: ಶೆಟ್ಟರ್ ಆಪಾದನೆಯನ್ನು ನಿರಾಕರಿಸಿದ ಸಚಿವ ಆರ್.ವಿ.ದೇಶಪಾಂಡೆ, ‘ನಿಮ್ಮ ಬಳಿ ದಾಖಲೆ ಇದ್ದರೆ ಕೊಡಿ. ಯಾರೇ ತಪ್ಪು ಮಾಡಿದ್ದರೂ ಕ್ರಮ ಜರುಗಿಸಲಾಗುವುದು. ಯಾರನ್ನೂ  ರಕ್ಷಿಸುವ ಪ್ರಶ್ನೆ ಇಲ್ಲ. ಆಮದು ಮರಳಿಗಿಂತ  ಕಡಿಮೆ ದರದಲ್ಲಿ ಇಲ್ಲಿಯೇ ಸಿಗುವುದಾದರೆ ಅಲ್ಲಿಂದ ತರಿಸುವ ಅಗತ್ಯವೇ ಇಲ್ಲ’ ಎಂದು ಪ್ರತಿಪಾದಿಸಿದರು.

‘ಒಂದು ಚೀಲ ಮರಳು ಕೂಡ ರಾಜ್ಯಕ್ಕೆ ಬಂದಿಲ್ಲ. ಅಕ್ರಮ ನಡೆಯಲು ಹೇಗೆ ಸಾಧ್ಯ’ ಎಂದು ಸಚಿವ ವಿನಯ ಕುಲಕರ್ಣಿ ಪ್ರಶ್ನಿಸಿದರು.

ಎಲ್ಲ ಸರ್ಕಾರಗಳು ಇರುವಾಗಲೂ ಇದೇ ಸಮಸ್ಯೆ: ಶೆಟ್ಟರ್ ಮಾತನಾಡುವ ವೇಳೆ ಸದನದಲ್ಲಿ ಬಹುತೇಕ ಸಚಿವರು ಗೈರಾಗಿದ್ದರು. ಇದರಿಂದ ಬೇಸರಗೊಂಡ ಶೆಟ್ಟರ್, ‘ವಿರೋಧ ಪಕ್ಷದ ನಾಯಕ ಮಾತನಾಡುವಾಗ ಮುಖ್ಯಮಂತ್ರಿಗಳೇ ಇರಬೇಕಿತ್ತು’ ಎಂದರು.

ಅಷ್ಟರಲ್ಲಿ ಮುಖ್ಯಮಂತ್ರಿ ಸದನಕ್ಕೆ ಬಂದರು. ‘ಶೆಟ್ಟರ್, ಏನ್ರೀ ನಿಮ್ಮ ಸಮಸ್ಯೆ?' ಎಂದರು. ‘ಮೊದಲ ಸಾಲಿನ ಎಲ್ಲ ಕುರ್ಚಿಗಳು ಖಾಲಿಯಾಗಿವೆ. ಅಧಿಕಾರಿಗಳೂ ಇಲ್ಲ. ನಾನು ಯಾರಿಗಾಗಿ ಮಾತನಾಡಲಿ?’ ಎಂದು ಶೆಟ್ಟರ್‌ ಅವರು ಪ್ರಶ್ನಿಸಿದರು.

‘ಈ ರೋಗ ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರವಲ್ಲ, ಎಲ್ಲ ಸರ್ಕಾರಗಳು ಇರುವಾಗಲೂ ಇತ್ತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದರು.

‘ಕಡ್ಲೆಕಾಯಿ ಆಸೆಗೆ ನೀವೆಲ್ಲ ಬೋನಿಗೆ ಬಿದ್ದಿದ್ದೀರಿ’

‘ಬಿಜೆಪಿ ಪ್ರತಿಪಾದಿಸುವ ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಒಪ್ಪುವ ಪ್ರಶ್ನೆ ಇಲ್ಲ. ಎಲ್ಲ ಮನುಷ್ಯರು ಒಗ್ಗಟ್ಟಿನಿಂದ ಬದುಕಬೇಕೆಂಬುದು ನನ್ನ ನಂಬಿಕೆ' ಎಂದು ಆರೋಗ್ಯ ಸಚಿವ ರಮೇಶ್‍ಕುಮಾರ್ ಹೇಳಿದರು.

ಶೆಟ್ಟರ್ ಮಾತನಾಡುತ್ತಿದ್ದ ವೇಳೆ, ‘ಈ ಸರ್ಕಾರ ಘೋಷಿಸಿದ ರೈತರ ಸಾಲ ಮನ್ನಾದ ಫಲವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ತಲುಪಿಸುತ್ತೇವೆ’ ಎಂದರು.

‘ನಿಮಗೆ ಆ ಕಷ್ಟ ಬರಬಾರದೆಂದು ನಾವೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ’ ಎಂದು ರಮೇಶ್‍ಕುಮಾರ್ ತಿರುಗೇಟು ನೀಡಿದರು.

‘ನಾವೇ ಅಧಿಕಾರಕ್ಕೆ ಬರುವುದು ನಿಶ್ಚಿತ. ರಮೇಶ್‍ಕುಮಾರ್ ನಮ್ಮ ಪಕ್ಷಕ್ಕೆ ಬರಲಿದ್ದಾರೆ’ ಎಂದು ಬಿಜೆಪಿಯ ಲಕ್ಷ್ಮಣ ಸವದಿ ಕೆಣಕಿದರು.

ಆಗ ರಮೇಶ್‍ಕುಮಾರ್, ‘ಕೋತಿಯನ್ನು ಬೋನಿಗೆ ಬೀಳಿಸಿಕೊಳ್ಳಲು ಕಡ್ಲೆಕಾಯಿ ಇಟ್ಟಿರುತ್ತಾರೆ. ಕಡ್ಲೆಕಾಯಿ ಆಸೆಗೆ ನೀವೆಲ್ಲ ಬೋನಿಗೆ (ಬಿಜೆಪಿ) ಬಿದ್ದಿದ್ದೀರಿ’ ಎಂದು ಕಿಚಾಯಿಸಿದರು.

‘ಬೆವರು (ರಕ್ತ) ಒಬ್ಬರದ್ದು. ಊಟ ಮತ್ತೊಬ್ಬರದ್ದು ಎಂದು ಆಗಬಾರದು. ಬೆವರಿಗೆ ಬೆಲೆ ಇಲ್ಲದ ಸಮಾಜ ನಾಗರಿಕ ಸಮಾಜವೇ ಅಲ್ಲ. ಹೀಗಾಗಿ, ನನ್ನ ನಂಬಿಕೆಯನ್ನು ನನ್ನ ಪಕ್ಷ ಒಪ್ಪದೆ ಇರಬಹುದು. ಆದರೆ, ನನ್ನ ಸಿದ್ಧಾಂತ ಎಂದಿಗೂ ಬದಲಾಗದು’ ಎಂದೂ ರಮೇಶ್ ಕುಮಾರ್ ಹೇಳಿದರು.

‘ಎಲ್ಲ ಸರ್ಕಾರಗಳು ಇರುವಾಗಲೂ ಇದೇ ಸಮಸ್ಯೆ’

ಶೆಟ್ಟರ್ ಮಾತನಾಡುವ ವೇಳೆ ಸದನದಲ್ಲಿ ಬಹುತೇಕ ಸಚಿವರು ಗೈರಾಗಿದ್ದರು. ಇದರಿಂದ ಬೇಸರಗೊಂಡ ಶೆಟ್ಟರ್, ‘ವಿರೋಧ ಪಕ್ಷದ ನಾಯಕ ಮಾತನಾಡುವಾಗ ಮುಖ್ಯಮಂತ್ರಿಗಳೇ ಇರಬೇಕಿತ್ತು’ ಎಂದರು.

ಅಷ್ಟರಲ್ಲಿ ಮುಖ್ಯಮಂತ್ರಿ ಸದನಕ್ಕೆ ಬಂದರು. ‘ಶೆಟ್ಟರ್, ಏನ್ರೀ ನಿಮ್ಮ ಸಮಸ್ಯೆ?' ಎಂದರು. ‘ಮೊದಲ ಸಾಲಿನ ಎಲ್ಲ ಕುರ್ಚಿಗಳು ಖಾಲಿಯಾಗಿವೆ. ಅಧಿಕಾರಿಗಳೂ ಇಲ್ಲ. ನಾನು ಯಾರಿಗಾಗಿ ಮಾತನಾಡಲಿ?’ ಎಂದು ಶೆಟ್ಟರ್‌ ಪ್ರಶ್ನಿಸಿದರು.

‘ಈ ರೋಗ ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರವಲ್ಲ, ಎಲ್ಲ ಸರ್ಕಾರಗಳು ಇರುವಾಗಲೂ ಇತ್ತು’ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

* ಇದು ಜನರಿಗೆ ನೀಡಿರುವ ಮರಳು ಭಾಗ್ಯವಲ್ಲ. ಜನರನ್ನು ಮರುಳು ಮಾಡುವ ಭಾಗ್ಯ

 - ಜಗದೀಶ ಶೆಟ್ಟರ್‌, ವಿರೋಧ ಪಕ್ಷದ ನಾಯಕ

ಪ್ರತಿಕ್ರಿಯಿಸಿ (+)