ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ನ್ಯಾಯಮಂಡಳಿ ಅವಧಿ ವಿಸ್ತರಣೆ ಬೇಡ

Last Updated 8 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹದಾಯಿ ನ್ಯಾಯಮಂಡಳಿ ಅವಧಿಯನ್ನು ಮತ್ತೊಂದು ಅವಧಿಗೆ (ಎರಡು ವರ್ಷ) ವಿಸ್ತರಿಸಬೇಕೆಂಬ ಗೋವಾ ಸರ್ಕಾರದ‍ ಪ್ರಸ್ತಾವವನ್ನು ಕರ್ನಾಟಕ ಸರ್ಕಾರ ತಿರಸ್ಕರಿಸಿದೆ.

ಉಭಯ ಸದನಗಳ ನಾಯಕರ ಜತೆ ಗುರುವಾರ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನ್ಯಾಯಮಂಡಳಿಯು ಅಂತಿಮ ವಿಚಾರಣೆ ಇದೇ 6ರಿಂದ ನಡೆಯಬೇಕಾಗಿತ್ತು. ಆದರೆ, ವಿಚಾರಣೆಯ ಅವಧಿ ವಿಸ್ತರಿಸುವಂತೆ ಗೋವಾ ಪ್ರಸ್ತಾವ ಮಾಡಿತ್ತು. ಈ ಬಗ್ಗೆ ರಾಜ್ಯದ ನಿಲುವು ತಿಳಿಸುವಂತೆ ನ್ಯಾಯಮಂಡಳಿ ಕೇಳಿತ್ತು. ಗುರುವಾರ (ಫೆ.8) ವಿಚಾರಣೆ ಆರಂಭವಾಗಿದ್ದು, ಗೋವಾ ಬೇಡಿಕೆ ತಿರಸ್ಕರಿಸುವುದಾಗಿ ಕರ್ನಾಟಕ ಸ್ಪಷ್ಟವಾಗಿ ತಿಳಿಸಿದೆ’ ಎಂದರು.

ವಿರೋಧ ಪಕ್ಷಗಳ ನಾಯಕರ ಜತೆ ಸಮಾಲೋಚನೆ ನಡೆಸಿಯೇ ಜಲ ವಿವಾದಗಳ ಕುರಿತು ನಿಲುವು ತೆಗೆದುಕೊಳ್ಳುವ ‍ಪರಿಪಾಠ ಇದೆ. ಮಹದಾಯಿ ವಿಷಯದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಲು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ವಿರೋಧ ಪಕ್ಷಗಳ ನಾಯಕರಾದ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಜೆಡಿಎಸ್‌ನ ಎನ್.ಎಚ್. ಕೋನರಡ್ಡಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ ಎಂದೂ ಅವರು ಹೇಳಿದರು.

ಕರ್ನಾಟಕದ ವಕೀಲರಾಗಿದ್ದ ಫಾಲಿ ಎಸ್. ನಾರಿಮನ್ ಅನಾರೋಗ್ಯದ ಕಾರಣ ಹಾಜರಾಗುತ್ತಿಲ್ಲ. ಅವರ ಬದಲು ಮಾಜಿ ಅಟಾರ್ನಿ ಜನರಲ್ ಅಶೋಕ ದೇಸಾಯಿ ಹಾಗೂ ಹಿರಿಯ ವಕೀಲ ಶ್ಯಾಮ್ ದಿವಾನ್‌ ನ್ಯಾಯಮಂಡಳಿ ಮುಂದೆ ವಾದ ಮಾಡಲಿದ್ದಾರೆ ಎಂದರು.

ಅವಧಿ ವಿಸ್ತರಣೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಅವಧಿ ವಿಸ್ತರಣೆ ಮಾಡಲೇಬೇಕಾದರೆ ಅಂತರ ರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಹೀಗಾದಲ್ಲಿ ಸಮಸ್ಯೆ ಬಗೆಹರಿಯುವುದು ಮತ್ತಷ್ಟು ವಿಳಂಬವಾಗಲಿದೆ. ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ವಿವಾದವಾಗಿರುವುದರಿಂದ ಆದ್ಯತೆ ಮೇರೆಗೆ ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂಬುದು ರಾಜ್ಯದ ನಿಲುವು ಎಂದು ಅವರು ಹೇಳಿದರು.

ಮಹದಾಯಿ ನೀರಿನ ಬೇಡಿಕೆಗೆ ಸಂಬಂಧಿಸಿದ ಎಲ್ಲ ದಾಖಲೆ ಹಾಗೂ ಸಾಕ್ಷಿ‍–  ಪುರಾವೆಗಳನ್ನು ಈಗಾಗಲೇ ನ್ಯಾಯಮಂಡಳಿಗೆ ಒದಗಿಸಲಾಗಿದೆ. ಲಿಖಿತ ಹೇಳಿಕೆಗಳನ್ನು ಸಲ್ಲಿಸಲಾಗಿದೆ. ವಾದ ಮತ್ತು ಪ್ರತಿವಾದ ಮಾತ್ರ ಬಾಕಿ ಇದೆ. ಮೂಲ ಅರ್ಜಿಯನ್ನು ಗೋವಾ ಸಲ್ಲಿಸಿದ್ದು, ಆ ಸರ್ಕಾರವೇ ವಾದ ಮಂಡಿಸಬೇಕಾಗಿದೆ. ಪ್ರತಿವಾದಿಗಳಾಗಿರುವ ಕರ್ನಾಟಕ ಮತ್ತು ಮಹಾರಾಷ್ಟ್ರಗಳು ನಂತರ ವಾದ ಮಂಡಿಸಲಿವೆ ಎಂದೂ ಅವರು ವಿವರಿಸಿದರು.

ತಿರಸ್ಕಾರ ಏಕೆ?

ಮಹದಾಯಿ ನದಿ ನೀರಿನ ಹಂಚಿಕೆ ವಿಷಯದಲ್ಲಿ  ಗೋವಾ ಸರ್ಕಾರದ ತಕರಾರು ತೆಗೆದಿದ್ದರಿಂದಾಗಿ 2010ರ ನವೆಂಬರ್ 16 ರಂದು ನ್ಯಾಯಮಂಡಳಿ ರಚಿಸಲಾಗಿದೆ. 2013ರ ನವೆಂಬರ್ 16ರಂದು ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಅಂತರರಾಜ್ಯ ಜಲ ವಿವಾದ ಕಾಯ್ದೆ ಅನುಸಾರ ಅಸ್ತಿತ್ವಕ್ಕೆ ಬಂದ ಮೂರು ವರ್ಷದೊಳಗೆ ವಿಚಾರಣೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ವಿಚಾರಣೆ ಪೂರ್ಣಗೊಳ್ಳದೇ ಇದ್ದರೆ ಒಂದು ಬಾರಿ ಮಾತ್ರ ಅವಧಿಯನ್ನು ಎರಡು ವರ್ಷ ವಿಸ್ತರಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಈಗಾಗಲೇ ಒಂದು ಬಾರಿ ಅವಧಿ ವಿಸ್ತರಣೆಯಾಗಿದ್ದು, 2018ರ ಆಗಸ್ಟ್‌ 20ರೊಳಗೆ ವಿಚಾರಣೆ ಪೂರ್ಣಗೊಳಿಸಿ ನ್ಯಾಯಮಂಡಳಿ ವರದಿ ಸಲ್ಲಿಸಬೇಕಿದೆ.

ಈಗ ಅವಧಿ ವಿಸ್ತರಿಸಿದರೆ ಕಳಸಾ–ಬಂಡೂರಿ ಯೋಜನೆ ಅನುಷ್ಠಾನಕ್ಕೆ ಇರುವ ತೊಡಕು ಮತ್ತೆ ಎರಡು ವರ್ಷ ವಿಳಂಬವಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಗೋವಾ ಬೇಡಿಕೆ ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT