ಮಂಗಳವಾರ, ಡಿಸೆಂಬರ್ 10, 2019
20 °C

‘ಸ್ಕೆಚ್ ಹಾಕಿದ್ದರೆ ಹೇಳಿ, ಸಾವಿಗೆ ಹೆದರುವುದಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸ್ಕೆಚ್ ಹಾಕಿದ್ದರೆ ಹೇಳಿ, ಸಾವಿಗೆ ಹೆದರುವುದಿಲ್ಲ’

ಬೆಂಗಳೂರು: ‘ಮೊನ್ನೆ ರುದ್ರೇಶ್, ನಿನ್ನೆ ಕದಿರೇಶ್, ನಾಳೆ ಯಾರಿಗೆ ಸ್ಕೆಚ್ ಹಾಕಿದ್ದೀರಿ’ ಎಂದು ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರಶ್ನಿಸಿದಾಗ, ಆಡಳಿತ ಪಕ್ಷದ ಕಡೆಯವರು ‘ಸಿ.ಟಿ. ರವಿ’ ಹೆಸರು ಕೂಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ಗದ್ದಲಕ್ಕೆ ಕಾರಣವಾಯಿತು.

ಕಾಂಗ್ರೆಸ್‌ ಸದಸ್ಯರ ವರ್ತನೆಯಿಂದ ಕೆರಳಿದ ಸಿ.ಟಿ. ರವಿ, ‘ಸ್ಕೆಚ್ ಹಾಕಿದ್ದರೆ ಹೇಳಿ, ಸಾವಿಗೆ ಹೆದರುವುದಿಲ್ಲ’ ಎಂದು ಕೂಗಾಡಿದರು. ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಉಪ ನಾಯಕ ಆರ್‌. ಅಶೋಕ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರವಿಂದ ಲಿಂಬಾವಳಿ, ಡಿ.ಎನ್‌. ಜೀವರಾಜ್, ‘ರವಿ ಹೆಸರು ಹೇಳಿದವರು ಯಾರೆಂಬುದು ಗೊತ್ತಾಗಬೇಕು’ ಎಂದು ಪಟ್ಟು ಹಿಡಿದರು.

ತಕ್ಷಣ ಮಧ್ಯ ಪ್ರವೇಶಿಸಿದ ಸಚಿವರಾದ ಕಾಗೋಡು ತಿಮ್ಮಪ್ಪ, ಕೃಷ್ಣ ಬೈರೇಗೌಡ, ‘ರವಿ ಹೆಸರನ್ನು ತಮಾಷೆಗಾಗಿ ಹೇಳಿದ್ದಾರೆ. ಈ ವಿಷಯ ದೊಡ್ಡದು ಮಾಡುವ ಅಗತ್ಯವಿಲ್ಲ. ಇದಕ್ಕೆ ವಿಷಾದಿಸುತ್ತೇವೆ’ ಎಂದರು.

ಅಷ್ಟಕ್ಕೆ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು, ‘ಶಾಸಕರ ಹೆಸರು ಪ್ರಸ್ತಾಪಿಸಿ ಸ್ಕೆಚ್ ಹಾಕಿದ್ದೇವೆ ಎನ್ನುವುದು ಸರಿಯಲ್ಲ. ಸಿ.ಟಿ. ರವಿಗೆ ಈಗಾಗಲೇ ಕೊಲೆ ಬೆದರಿಕೆ ಇದೆ. ಇಂಥ ಸಂದರ್ಭದಲ್ಲಿ ಈ ರೀತಿ ಹೇಳಿಕೆ ಸರಿಯಲ್ಲ. ಯಾವ ಸದಸ್ಯರು ಹೇಳಿದ್ದಾರೆ ಎಂಬುವುದು ರಾಜ್ಯದ ಜನರಿಗೆ ಗೊತ್ತಾಗಲಿ’ ಎಂದರು.

‘ರವಿಗೆ ಸ್ಕೆಚ್ ಹಾಕಿದ್ದೇವೆ ಎಂದು ಆಡಳಿತ ಪಕ್ಷದ ಸದಸ್ಯರೇ ಹೇಳುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಪೊಲೀಸರ ಬಗ್ಗೆ ಜನರಿಗೆ ಭಯವಿಲ್ಲ’ ಎಂದು ಶೆಟ್ಟರ್‌ ಆಕ್ರೋಶ ವ್ಯಕ್ತಪಡಿಸಿದರು.

‘ಶಾಸಕರಿಗೆ ಸ್ಕೆಚ್ ಹಾಕಿದ್ದೇವೆ ಎಂದು ಹೇಳುವುದಕ್ಕೆ ನಾಚಿಕೆ ಆಗಬೇಕು’ ಎಂದು ಕಾಗೇರಿ ಹೇಳುತ್ತಿದಂತೆಯೇ ಅರವಿಂದ ಲಿಂಬಾವಳಿ, ‘ಯಾರು ಹೇಳಿದರು. ಅವರ ಹೆಸರು ಹೇಳಿ’ ಎಂದು ಒತ್ತಾಯಿಸಿದರು. ಆಗ ಕಾಗೋಡು ತಿಮ್ಮಪ್ಪ, ‘ಹೇಳುತ್ತೇವೆ, ಕುಳಿತುಕೊಳ್ಳಿ’ ಎಂದರು. ಆಗ, ಮತ್ತೆ ಎರಡೂ ಪಕ್ಷಗಳ ಸದಸ್ಯರ ನಡುವೆ ವಾಗ್ಯುದ್ಧ ನಡೆಯಿತು.

ಕೊನೆಗೆ ಸಚಿವ ಕೃಷ್ಣ ಬೈರೇಗೌಡ ವಿಷಾದ ವ್ಯಕ್ತಪಡಿಸುವುದರೊಂದಿಗೆ ಗದ್ದಲ ತಣ್ಣಗಾಯಿತು.‌

ಪ್ರತಿಕ್ರಿಯಿಸಿ (+)