ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಡಿಯುವ ನೆಪದಲ್ಲಿ ನೀರಾವರಿಗೆ ನೀರು’

Last Updated 8 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರಗಳ ನಡುವಿನ ಪ್ರಕರಣದ ಅಂತಿಮ ಹಂತದ ವಿಚಾರಣೆಯು ಮಹದಾಯಿ ಜಲವಿವಾದ ನ್ಯಾಯಮಂಡಳಿಯಲ್ಲಿ ಗುರುವಾರ ಆರಂಭವಾಯಿತು.

ಮೊದಲ ದಿನ ಗೋವಾ ಪರ ವಾದ ಮಂಡಿಸಿದ ವಕೀಲ ಆತ್ಮಾರಾಮ ನಾಡಕರ್ಣಿ, ಕರ್ನಾಟಕವು ಕುಡಿಯುವ ನೀರಿನ ನೆಪವನ್ನು ಮುಂದಿರಿಸಿ ನೀರಾವರಿ ಉದ್ದೇಶಕ್ಕೆ ನೀರನ್ನು ಪಡೆಯಲು ಹವಣಿಸುತ್ತಿದೆ ಎಂದರು.

ಮಹದಾಯಿ ನದಿ ಹಾಗೂ ಕಳಸಾ– ಬಂಡೂರಿ ನಾಲೆಗಳಿಂದ ಮಲಪ್ರಭಾ ನದಿಗೆ 7.56 ಟಿಎಂಸಿ ಅಡಿ ನೀರನ್ನು ತಿರುಗಿಸುವ ಮೂಲಕ ನೀರಾವರಿಗೆ ಬಳಸಿಕೊಳ್ಳುವುದು ಕರ್ನಾಟಕದ ಸಂಚು. ಇದನ್ನು ಗೋವಾ ಒಪ್ಪುವುದಿಲ್ಲ ಎಂದು ಅವರು ಹೇಳಿದರು.

ಮಲಪ್ರಭಾದಲ್ಲಿ ಮಹದಾಯಿಗಿಂತ ಮೂರು ಪಟ್ಟು ನೀರು ಹರಿಯುತ್ತದೆ. ಆದರೂ, ಕರ್ನಾಟಕ 7.56 ಟಿಎಂಸಿ ಅಡಿ ನೀರನ್ನು ಹುಬ್ಬಳ್ಳಿ-– ಧಾರವಾಡ ಹಾಗೂ ಇತರ ಪ್ರದೇಶಗಳ ಜನರ ಕುಡಿಯುವ ಉದ್ದೇಶದಿಂದ ಪಡೆಯ
ಬೇಕು ಎಂಬ ದುರಾಸೆ ಹೊಂದಿದೆ. ಆ ನಗರವು ಮಹದಾಯಿ ಕಣಿವೆಯ ವ್ಯಾಪ್ತಿಗೇ ಸೇರಿಲ್ಲ ಎಂದು ಅವರು ಒತ್ತಿಹೇಳಿದರು.

ಮಲಪ್ರಭಾ ನದಿಗೆ ಸವದತ್ತಿ ಬಳಿ ನಿರ್ಮಿಸಿರುವ ಜಲಾಶಯ ಭರ್ತಿಯಾಗುತ್ತಿಲ್ಲ ಎಂಬ ಕಾರಣದಿಂದಲೇ ಮಹದಾಯಿ ನೀರನ್ನು ತಿರುಗಿಸುವ ಕಳಸಾ– ಬಂಡೂರಿ ನಾಲಾ ತಿರುವು ಯೋಜನೆ ಜಾರಿಗೊಳಿಸಲಾಗಿದೆ ಎಂದ ಅವರು, ಕರ್ನಾಟಕದಲ್ಲಿ 35 ಕಿಲೋಮೀಟರ್‌ ಮತ್ತು ಗೋವಾದಲ್ಲಿ 76 ಕಿಲೋಮೀಟರ್‌ ಸೇರಿದಂತೆ ಒಟ್ಟು 111 ಕಿಲೋಮೀಟರ್‌ ಹರಿಯುವ ಮಹದಾಯಿಯಲ್ಲಿ, ಗೋವಾ ವ್ಯಾಪ್ತಿಯಲ್ಲಿನ 46 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಲವಣಾಂಶಗಳು ಇರುವುದರಿಂದ ಬಳಕೆಗೆ ಯೋಗ್ಯವಾಗಿಲ್ಲ ಎಂದು
ಪ್ರತಿಪಾದಿಸಿದರು.

ಪಶ್ಚಿಮ ಘಟ್ಟದ ಭೀಮಗಡ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಹರಿದಿರುವ ಬಂಡೂರಿ ನಾಲೆ ತಿರುವುವ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಅರಣ್ಯ ನಾಶ ಮಾಡಿ ಈ ಯೋಜನೆ ರೂಪಿಸಿರುವುದು ಪರಿಸರ ವಿರೋಧಿಯಾಗಿದೆ. ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಕರ್ನಾಟಕ ಇದಕ್ಕಾಗಿ ಅನುಮತಿಯನ್ನೂ ಪಡೆದಿಲ್ಲ ಎಂದು ಅವರು ನ್ಯಾಯಪೀಠಕ್ಕೆ ವಿವರ ನೀಡಿದರು.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಇತ್ತೀಚಿಗೆ ಅತಿ ಹೆಚ್ಚು ನೀರನ್ನು ಅವಲಂಬಿಸುವ ಕಬ್ಬು ಬೆಳೆಯುತ್ತಿರುವುದರಿಂದ ನೀರು ಸಾಕಾಗುತ್ತಿಲ್ಲ. ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಪೂರೈಸುತ್ತಿರುವುದರಿಂದ ರೈತರ ಬೆಳೆಗೆ ನೀರು ದೊರೆಯುತ್ತಿಲ್ಲ. ಮಹದಾಯಿಯಿಂದ ನೀರನ್ನು ತಿರುಗಿಸಿ, ಆ ನೀರನ್ನು ನೀರಾವರಿಗೆ ನೀಡಬಹುದು ಎಂಬುದು ಕರ್ನಾಟಕದ ಹುನ್ನಾರವಾಗಿದೆ ಎಂದು ನಾಡಕರ್ಣಿ ಹೇಳಿದರು.

ಮಹದಾಯಿ ನೀರನ್ನು ಮಲಪ್ರಭಾ ನದಿಗೆ ತಿರುವುವ ಯೋಜನೆ ಕೈಗೆತ್ತಿಕೊಳ್ಳುವುದರಿಂದ ಗೋವಾ ಯಾವುದೇ ಸಮಸ್ಯೆ ಎದುರಿಸಲಾರದು. ಹಾಗಾಗಿ ಗೋವಾ ವಾದದಲ್ಲಿ ತರ್ಕವಿಲ್ಲ ಎಂಬುದು ಕರ್ನಾಟಕದ ವಾದವಾಗಿದೆ.

‘ಇಲಿ– ಹೆಗ್ಗಣಗಳ ಸಂಖ್ಯೆ ಹೆಚ್ಚಿದರೆ ನಂಬಬಹುದು’

ನವದೆಹಲಿ: ಹುಬ್ಬಳ್ಳಿ– ಧಾರವಾಡ ಅವಳಿ ನಗರದ ಜನಸಂಖ್ಯೆ 2044ರ ವೇಳೆಗೆ ಗಣನೀಯವಾಗಿ ಹೆಚ್ಚುವುದರಿಂದ ಆ ನಗರಕ್ಕೆ ವಾರ್ಷಿಕ 7.50 ಟಿಎಂಸಿ ಅಡಿ ನೀರಿನ ಅಗತ್ಯವಿದೆ ಎಂದು ಕರ್ನಾಟಕ ವಾದಿಸಿದೆ. ಆದರೆ, ದಿಢೀರ್‌ ಹೆಚ್ಚುವುದು ಜನಸಂಖ್ಯೆಯಲ್ಲ. ಬದಲಿಗೆ, ಇಲಿ ಮತ್ತು ಹೆಗ್ಗಣಗಳ ಸಂಖ್ಯೆ ಎಂದು ನಾಡಕರ್ಣಿ ವ್ಯಂಗ್ಯವಾಡಿದರು.

‘ಹುಬ್ಬಳ್ಳಿ– ಧಾರವಾಡ ಅವಳಿ ನಗರದ ಜನಸಂಖ್ಯೆಯು 2051ರ ವೇಳೆಗೆ 27.45 ಲಕ್ಷ ತಲುಪಲಿದೆ ಎಂಬ ಅಂದಾಜಿನೊಂದಿಗೆ ಕರ್ನಾಟಕ ಸರ್ಕಾರ ನ್ಯಾಯಮಂಡಳಿಗೆ ವರದಿ ನೀಡಿದೆ. ಜನಸಂಖ್ಯೆಗೆ ಅನುಗುಣವಾಗಿ ನೀರಿನ ಅಗತ್ಯವಿದೆ ಎಂಬುದು ಅವರ ಬೇಡಿಕೆಯಾಗಿದೆ. ಆ ನಗರದ ಜನಸಂಖ್ಯೆ ಅಷ್ಟು ಪ್ರಮಾಣದಲ್ಲಿ ಏರಲಾರದು. 2011ರ ಜನಗಣತಿ ಪ್ರಕಾರ ಅಲ್ಲಿ 9.43 ಲಕ್ಷ ಜನಸಂಖ್ಯೆ ಇದೆ. 2051ರ ವೇಳೆಗೆ ಅದು 18 ಲಕ್ಷದಷ್ಟು ಹೆಚ್ಚಿ, 27.45 ಲಕ್ಷ ಆಗುತ್ತದೆ ಎಂದರೆ ನಂಬಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಇಲಿ- ಮತ್ತು ಹೆಗ್ಗಣಗಳು ಈ ಪ್ರಮಾಣದಲ್ಲಿ ತಮ್ಮ ಸಂಖ್ಯೆ ಹೆಚ್ಚಿಸಿಕೊಂಡಿವೆ ಎಂದು ವಾದಿಸಿದರೆ ನಂಬಬಹುದು. ಆದರೆ, ಮನುಷ್ಯರ ಸಂಖ್ಯೆ ಈ ಪ್ರಮಾಣದಲ್ಲಿ ಹೆಚ್ಚುವುದಕ್ಕೆ ಹೇಗೆ ಸಾಧ್ಯ, ಇದನ್ನು ಯಾರು ನಂಬುತ್ತಾರೆ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT