ಭಾನುವಾರ, ಡಿಸೆಂಬರ್ 8, 2019
25 °C

ನಮ್ಮ ಪ್ರಜಾಪ್ರಭುತ್ವ ರೋಗಗ್ರಸ್ತವೇ?

Published:
Updated:
ನಮ್ಮ ಪ್ರಜಾಪ್ರಭುತ್ವ ರೋಗಗ್ರಸ್ತವೇ?

ನಮ್ಮ ದೇಶ ಗಣರಾಜ್ಯವಾಗಿ 68 ವರ್ಷವಾಯಿತು. ಈಗಲೂ ಪ್ರಜಾಪ್ರಭುತ್ವ ಜೀವಂತವಾಗಿರುವುದು ಕೇವಲ ತಮ್ಮ ನಾಲಿಗೆಯ ಬಲದಿಂದ ಎಂದು ನಮ್ಮ ಪ್ರಜಾಪ್ರತಿನಿಧಿಗಳು ನಂಬಿರುವಂತೆ ತೋರುತ್ತದೆ. ಪ್ರಜಾಸತ್ತೆಗೆ ರಾಜಕಾರಣಿಯ ನಾಲಿಗೆಯ ಅಗತ್ಯ ಇದೆಯೇ, ಇದ್ದರೆ ಎಷ್ಟು ಎಂದು ಈಗಲಾದರೂ ಜನ ಯೋಚಿಸಬೇಕು.

ಒಬ್ಬ ರಾಜಕಾರಣಿ ಇನ್ನೊಬ್ಬ ರಾಜಕಾರಣಿಯನ್ನು ಅನಾಗರಿಕವಾಗಿ ಹೀನಾಯ ಭಾಷೆಯಲ್ಲಿ ಹಳಿಯುವುದೇ ಇವತ್ತು ರಾಜಕಾರಣಿಗಳ ಸಾಮರ್ಥ್ಯ ಎಂಬಂತಾಗಿದೆ. ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಎಲ್ಲರೂ ಇದೇ ರೀತಿ ಮಾತಾಡುವುದಾದರೆ, ಜನಸಮೂಹ ಇದನ್ನು ಆನಂದದಿಂದ ಆಲಿಸುವುದಾದರೆ, ಜಗತ್ತು ಮೆಚ್ಚಿಕೊಂಡಿರುವ ನಮ್ಮ ಭಾರತೀಯ ಸಂಸ್ಕೃತಿಗೆ ಗ್ರಹಣ ಹಿಡಿದಿದೆ ಎಂದೇ ಭಾವಿಸಬೇಕಾಗುತ್ತದೆ.

ಒಬ್ಬರನ್ನೊಬ್ಬರು ಹಳಿಯುವುದರಿಂದ ಅವರ ವ್ಯಕ್ತಿತ್ವಕ್ಕೆ ಕೆಟ್ಟ ಬಣ್ಣ ಬರುತ್ತದೆಯೇ ವಿನಾ ಲಾಭವೇನೂ ಇಲ್ಲ.

ಈ ರಾಜಕಾರಣಿಗಳ ಎಲ್ಲ ಅನಾಗರಿಕ ಮಾತುಗಳ ಗುದ್ದಾಟ, ಬೈಗುಳ, ಆಯಾ ರಾಜ್ಯದ ಭಾಷೆಗಳಲ್ಲಿ ನಡೆಯುತ್ತದೆ. ನಮ್ಮ ದೇಶದಲ್ಲಿ ನೂರಾರು ಭಾಷೆಗಳು ಇರುವುದರಿಂದ ಎಲ್ಲರಿಗೂ ಎಲ್ಲರ ಮಾತು ಅರ್ಥವಾಗುವುದಿಲ್ಲ. ಇವರ ಮಾತನ್ನು ಜಾಗತಿಕ ಭಾಷೆಯಾದ ಇಂಗ್ಲಿಷ್‌ಗೆ ಭಾಷಾಂತರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ, ನಮ್ಮ ದೇಶ ಎಂಥ ಅನಾಗರಿಕ ನಡೆ ನುಡಿಯ ರಾಜಕಾರಣಿಗಳ ದೇಶ ಎಂದು ಇಡೀ ಜಗತ್ತಿನಲ್ಲಿ ಸುದ್ದಿಯಾದೀತು. ಸಾಮಾಜಿಕ ಜಾಲತಾಣದಲ್ಲಿ ಎಲ್ಲ ಬಗೆಯ ‘ಕ್ರೈಮ್‍ ಕೀಟಲೆ’ ಮತ್ತು ‘ಶುದ್ಧ ಕೀಟಲೆ’ ನಡೆಯುತ್ತದೆ. ಭಾರತದ ರಾಜಕಾರಣಿಗಳ ಮಾತಿನ ವರಸೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡು ಜಗತ್ತಿಡೀ ಸುದ್ದಿಯಾದರೆ ಆಶ್ಚರ್ಯವಿಲ್ಲ!

ಮಹಾಭ್ರಷ್ಟ ಎಂದು ಜಗಜ್ಜಾಹೀರಾಗಿರುವ ಉಮೇದುವಾರನಿಗೆ ಜನ ಕಣ್ಣು ಮುಚ್ಚಿ ವೋಟು ಹಾಕುತ್ತಿದ್ದಾರೆ. ಯಾಕೆ, ಏನು ಎಂಬ ವಿಚಾರವೇ ಜನಮನದಲ್ಲಿ ಇಲ್ಲ. ಪ್ರಜಾಪ್ರತಿನಿಧಿಯಾಗಲು ಅಭ್ಯರ್ಥಿಯಾಗಿ ಮುಂದೆ ಬರುವುದು ಪ್ರಜಾಪ್ರಭುತ್ವದಲ್ಲಿ ಸರಿ. ಆದರೆ ಆತ ಎಂಥವನು ಎನ್ನುವುದನ್ನು ಇಡೀ ಜನಸಮೂಹ ಕಾಣಲಾರದು. ಆದ್ದರಿಂದ ಸಮಾಜದಲ್ಲಿ ಪ್ರಜ್ಞಾವಂತರೂ ಪ್ರಾಜ್ಞರೂ ಗುಣವಂತರೂ ಆದ ಹಿರಿಯ ವ್ಯಕ್ತಿಗಳ, ಮುತ್ಸದ್ದಿಗಳ ಸಂಘಟನೆಗಳು ಊರೂರಿನಲ್ಲಿ ಸೃಷ್ಟಿಯಾಗಬೇಕು. ಅವು  ಜನರೊಡನೆ ಸಮಾಲೋಚನೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.

‘ಚುನಾವಣೆಯಲ್ಲಿ ಆಯ್ಕೆಗೊಂಡು ಶಾಸಕ ಅಥವಾ ಸಂಸದ ಆದ ಬಳಿಕ ಒಂದಾದ ಮೇಲೆ ಇನ್ನೊಂದರಂತೆ ಜನರು ಆಮಂತ್ರಿಸಿದಲ್ಲಿಗೆಲ್ಲಾ ಹೋಗಿ ಭಾಷಣ ಮಾಡುವುದಿಲ್ಲ. ಆ ಕೆಲಸ ಜನಪರ, ಸಮಾಜಪರವಾದುದಾದರೆ ಮಾತ್ರ ಮಾಡುತ್ತೇವೆ. ಅದಕ್ಕಾಗಿ ಸಮಯ ಹಾಳು ಮಾಡುವುದಿಲ್ಲ. ಸರ್ಕಾರ ನಮಗೆ ಕೊಡುವ ನಿಧಿಯನ್ನು ಸಂಪೂರ್ಣವಾಗಿ ಸಮಾಜದಲ್ಲಿ ನಡೆಯಲೇಬೇಕಾದ ಕಾಮಗಾರಿಗಳಿಗೆ ಖರ್ಚು ಮಾಡುತ್ತೇವೆ. ಸರ್ಕಾರಕ್ಕೆ ಹಿಂತಿರುಗಿಸುವುದಿಲ್ಲ’ ಎಂದು ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಬೇಕು. ಅವರ ಈ ನಿರ್ಧಾರವನ್ನು ಸಮಾಜದ ಗಮನಕ್ಕೆ ತರಬೇಕು.

ವಾಸ್ತವದಲ್ಲಿ, 50-60 ವರ್ಷಗಳಿಂದಲೂ ನಮ್ಮ ಪ್ರಜಾಸತ್ತೆಯು ನರಳುತ್ತಲೇ ಚಲಿಸಿದೆ. ಕಾಲದಿಂದ ಕಾಲಕ್ಕೆ ಕೆಲವು ಪಕ್ಷಗಳು ಜನರಿಗೆ ಹಣ, ಬಟ್ಟೆಬರೆ ಮತ್ತಿನ್ನೇನೋ ವಸ್ತುಗಳನ್ನು ದಾನ ಮಾಡಿ, ಬದಲಿಗೆ ವೋಟು ಪಡೆದು ರಾಜ್ಯಭಾರ ಮಾಡಿವೆ. ಈ ಕಾರಣದಿಂದ ಜನರ ಆತ್ಮಾಭಿಮಾನ ಕರಗಿದೆ, ವಿವೇಕ ನಶಿಸಿದೆ, ಉತ್ತಮ ಪ್ರಜೆಗೆ ಇರಬೇಕಾದ ಪ್ರಜ್ಞಾವಂತಿಕೆ ಬಹುತೇಕ ಅದೃಶ್ಯವಾಗಿದೆ. ಕ್ರಿಯಾಶೀಲತೆ ದುರ್ಬಲವಾಗಿದೆ. ಹೀಗಾದರೆ, ನಮ್ಮ ದೇಶಕ್ಕೆ ಸದೃಢ ಪ್ರಜಾಪ್ರಭುತ್ವ ಹೇಗೆ ದೊರಕೀತು?

ನಮ್ಮ ಪ್ರಜಾಪ್ರಭುತ್ವದ ಅತಿದೊಡ್ಡ ದೋಷವೆಂದರೆ, ಆಡಳಿತ ನಡೆಸುವ ಪಕ್ಷ ಮತ್ತು ವಿರೋಧ ಪಕ್ಷಗಳು ನಿರಂತರ ಗುದ್ದಾಡುವುದು ಮತ್ತು ಅದೇ ರಾಜಕಾರಣ ಎಂದು ಭಾವಿಸುವುದು. ಇದರಿಂದಾಗಿ ಪಾರ್ಲಿಮೆಂಟಿಗೆ ಮತ್ತು ಅಸೆಂಬ್ಲಿಗಳಿಗೆ ಆಗಾಗ ಲಕ್ವ ಬಡಿಯುವುದನ್ನು ಇಷ್ಟು ವರ್ಷಗಳಿಂದ ನೋಡುತ್ತಿದ್ದೇವೆ. ಇದು ದೇಶಕ್ಕೆ ಪ್ರಗತಿಯ ಬದಲು ದುರ್ಗತಿಯ ದಾರಿ ತೋರಿಸುತ್ತದೆ. ಇಡೀ ದೇಶ ಇದನ್ನು ವಿಷಾದದಿಂದ ನೋಡುತ್ತಿದೆ. ಆದರೆ ರಾಜಕಾರಣಿಗಳು ಕುರುಡಾಗಿ ಅದೇ ಹಳೆಯ ಕೊಳಕು ಓಣಿಯಲ್ಲಿ ತೆವಳುತ್ತಾ ಸಾಗುತ್ತಿದ್ದಾರೆ.

ಸದಾ ಛಿದ್ರವಾಗಿಯೇ ಇರುವ ರಾಜಕೀಯ ಪಕ್ಷಗಳು ನಮ್ಮ ಪ್ರಜಾಪ್ರಭುತ್ವವನ್ನು ಹೇಗೆ ಕೊಳಕಾಗಿಸಿವೆ ಎನ್ನುವುದನ್ನು ನಾವು ನೋಡುತ್ತಾ ಇದ್ದೇವೆ. ವಾಸ್ತವದಲ್ಲಿ, ದೇಶದಲ್ಲಿ ಎರಡು ಅಥವಾ ಮೂರು ಪಕ್ಷಗಳು ಮಾತ್ರ ಇರಬೇಕು. ಹಾಗಿದ್ದರೆ ಅವು ಸ್ವಚ್ಛ ಪಕ್ಷಗಳಾಗಿ ಇರುತ್ತವೆ. ವಿರೋಧ ಪಕ್ಷ ಎಂದರೆ ಸರ್ಕಾರವನ್ನು ಸದಾಕಾಲ ವಿರೋಧಿಸುತ್ತಲೇ ಇರಬೇಕಾದ ಪಕ್ಷ ಎಂಬ ತಪ್ಪು ಕಲ್ಪನೆ ತೊಲಗಬೇಕು.

ರಾಜಕಾರಣಿಗಳ ಚಾರಿತ್ರ್ಯ, ಗುಣನಡತೆ ನೋಡದೆ, ಅಗೋಚರವಾಗಿರುವ ‘ಪಕ್ಷ’ ಎಂಬುದಕ್ಕೆ ಜನ ಯಾಕೆ ಅಂಟಿಕೊಳ್ಳುತ್ತಾರೆ, ಅಂಥ ‘ಪಕ್ಷ’ ಎಂಬ ರೂಪರಹಿತವಾದ, ಆಕಾರವಿಲ್ಲದ ಏನೂ ಆಗಿರದೇ ಇರುವುದಕ್ಕೆ ಯಾಕೆ ಕಣ್ಣು ಮುಚ್ಚಿ ವೋಟು ಹಾಕುತ್ತಾರೆ ಎಂಬುದರ ಬಗ್ಗೆ ಜನರೊಡನೆ ಸಭೆ ನಡೆಸಿ ಚರ್ಚಿಸಬೇಕು. ಮತದಾನಮಾಡುವ ಬಗ್ಗೆ ಅವರಿಗೆ ತಿಳಿವಳಿಕೆ ನೀಡಬೇಕು. ಈ ಸಭೆಯಲ್ಲಿ ಆಗಿರುವ ನಿರ್ಧಾರದಂತೆ, ತಾವು ಆಯ್ಕೆ ಮಾಡಿದ ಅಭ್ಯರ್ಥಿಗೆ ಜನ ವೋಟು ಹಾಕಲಿ. ರಾಜಕಾರಣಿಗಳು ಮತದಾನಕ್ಕೆ ಮೊದಲು ಸಭೆ ನಡೆಸಲಿ, ಜನರಿಗೆ ಒಳ್ಳೆಯ ಮಾತಿನಲ್ಲಿ ಪ್ರಜಾಸತ್ತೆಯ ಗುಣಗಳ ಬಗ್ಗೆ ತಿಳಿಸಲಿ. ‘ವೋಟು ಕೊಡಿ’ ಎಂದು ಕೂಗಿಕೊಂಡು ಹೋಗಲು ರಸ್ತೆಗೆ ಮಕ್ಕಳನ್ನು ತಳ್ಳುವುದು ಬೇಡ.

ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಮಕ್ಕಳಿಗೂ ಜನಸಾಮಾನ್ಯರಿಗೂ ತಿಳಿಹೇಳುವ ಒಳ್ಳೆಯ ಕೆಲಸವನ್ನು ಎಲ್ಲಾ ರಾಜಕಾರಣಿಗಳು ಮತ್ತು ರಾಜಕೀಯ ಕಾರ್ಯಕರ್ತರು ಮಾಡಲಿ.

ವೋಟು ಕೇಳುವ ಪೋಸ್ಟರುಗಳನ್ನು ಗೋಡೆಗಳ ಮೇಲೆ ಅಂಟಿಸುವ ಪರಿಪಾಟ ಸರಿಯಲ್ಲ ಎಂದು ಅಭ್ಯರ್ಥಿಮಾತ್ರವಲ್ಲ, ಜನರು ಕೂಡ ಅರ್ಥ ಮಾಡಿಕೊಳ್ಳಬೇಕು.

ಯಾವುದೇ ಸಭೆಯಲ್ಲಿ ರಾಜಕಾರಣಿ ಭಾಷಣ ಮಾಡುವುದಿದ್ದರೆ, ‘ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ’ ಎಂಬ ದಾಸರ ಹಾಡನ್ನು ಧ್ವನಿವರ್ಧಕದ ಮೂಲಕ ದೊಡ್ಡ ದನಿಯಲ್ಲಿ ಹಾಡಿಸಬೇಕು.

ಪ್ರತಿಕ್ರಿಯಿಸಿ (+)