ಶುಕ್ರವಾರ, ಡಿಸೆಂಬರ್ 13, 2019
27 °C

ವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ ಕೋರ್ಟ್ ತೀರ್ಪು ಸ್ವಾಗತಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ ಕೋರ್ಟ್ ತೀರ್ಪು ಸ್ವಾಗತಾರ್ಹ

ಇಬ್ಬರು ವಯಸ್ಕ ವ್ಯಕ್ತಿಗಳ ಮದುವೆಯಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಎತ್ತಿಹೇಳಿದೆ. ಈ ಮೂಲಕ, ನಾಗರಿಕ ಹಾಗೂ ಕಾನೂನುಬದ್ಧ ಸಮಾಜದ ಮೂಲತತ್ವಗಳನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ವಿವಾಹದ ಕಾನೂನುಬದ್ಧತೆಯನ್ನು ನಿರ್ಧಾರ ಮಾಡಬೇಕಿದ್ದಲ್ಲಿ ಅದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದೂ ಕೋರ್ಟ್ ಹೇಳಿದೆ. ಈ ವಿಚಾರದಲ್ಲಿ ತಲೆ ಹಾಕಲು ಯಾವುದೇ ಸಾಮಾಜಿಕ ಗುಂಪಿಗೆ ಅಧಿಕಾರವಿಲ್ಲ ಎಂದು ಅದು ಸ್ಪಷ್ಟ ಮಾತುಗಳಲ್ಲಿ ಹೇಳಿರುವುದು ಸರಿಯಾದುದು. ಸಮಾಜದ ಆತ್ಮಸಾಕ್ಷಿ ರಕ್ಷಕರು ಎಂಬಂಥ ಉತ್ಪ್ರೇಕ್ಷಿತ ಸ್ಥಾನಮಾನವನ್ನು ಜಾತಿ ಪಂಚಾಯಿತಿಗಳಿಗೆ (ಖಾಪ್ ಪಂಚಾಯಿತಿ) ನೀಡಲೂ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ವಯಸ್ಕರ ನಡುವಿನ ಪರಸ್ಪರ ಒಪ್ಪಿತ ವಿವಾಹಸಂಬಂಧವನ್ನು ಪ್ರಶ್ನಿಸಿ ಕಿರುಕುಳ ನೀಡಲು ಈ ಜಾತಿ ಪಂಚಾಯಿತಿಗಳಿಗೆ ಮಾತ್ರವಲ್ಲ ಹೆತ್ತವರಿಗೂ ಅಧಿಕಾರವಿಲ್ಲ ಎಂದು ಕಠಿಣ ಮಾತುಗಳಲ್ಲಿ ಹೇಳಲಾಗಿದೆ. ಈ ಹಿಂದೆ ಇಂತಹ ವಿವಾಹಗಳಿಗೆ ಸಂಬಂಧಿಸಿದಂತೆ, ಅನೇಕ ರೀತಿಯ ಬರ್ಬರ ಶಿಕ್ಷೆಗಳನ್ನು ಜಾತಿ ಪಂಚಾಯಿತಿಗಳು ವಿಧಿಸಿವೆ. ಅಷ್ಟೇ ಅಲ್ಲ, ಅನೇಕ ಮರ್ಯಾದೆಗೇಡು ಹತ್ಯೆಗಳಿಗೂ ಇವು ಕಾರಣವಾಗಿವೆ. ಕುಟುಂಬ ಅಥವಾ ಸಮುದಾಯದ ಗೌರವ ಕಾಪಾಡುವ ಹೆಸರಲ್ಲಿ ಇಂತಹ ಅತಿರೇಕಗಳು ಆಯಾ ಸಮುದಾಯಗಳಲ್ಲಿ ಸಾಮಾಜಿಕ ಮಾನ್ಯತೆ ಗಿಟ್ಟಿಸಿಕೊಂಡಿವೆ ಎಂಬುದೇ ನಾಚಿಕೆಗೇಡು. ಸಂವಿಧಾನದಲ್ಲಿ ವ್ಯಕ್ತಿಗಳಿಗೆ ನೀಡಲಾಗಿರುವ ಆಯ್ಕೆ ಸ್ವಾತಂತ್ರ್ಯದ ನೇರ ಉಲ್ಲಂಘನೆ ಇದು.

ಸ್ನೇಹ ಅಥವಾ ವಿವಾಹಕ್ಕೆ ಧಾರ್ಮಿಕ ಗಡಿರೇಖೆಗಳನ್ನು ಬಲವಂತದಿಂದ ಹೇರುವ ಪ್ರಯತ್ನ ಅನಾಗರಿಕವಾದದ್ದು. ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಅಂಕಿತ್ ಸಕ್ಸೇನಾನನ್ನು ಯುವತಿಯ ಮನೆಯವರೇ ಕೊಲೆ ಮಾಡಿದ್ದಾರೆ ಎಂಬಂಥ ಆರೋಪದ ಪ್ರಕರಣ ಇತ್ತೀಚೆಗೆ ದೆಹಲಿಯಲ್ಲಿ ನಡೆದಿರುವುದು ದಾರುಣವಾದದ್ದು. ಎಂದರೆ, ಇಂತಹ ಮರ್ಯಾದೆಗೇಡು ಹತ್ಯೆಗಳು ಹಳ್ಳಿಗಳಿಗಷ್ಟೇ ಸೀಮಿತವಲ್ಲ ಎಂಬುದನ್ನು ಈ ದಾರುಣ ಘಟನೆ ಮತ್ತೊಮ್ಮೆ ನೆನಪಿಸಿದೆ. ನಾವು ನವ ಭಾರತ ಸೃಷ್ಟಿಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಈ ನವ ಭಾರತದಲ್ಲಿ ನಾಗರಿಕ ಮೌಲ್ಯಗಳು ಕುಸಿತ ಕಾಣುವಂತಾಗಬಾರದು.

ಸಂಪ್ರದಾಯದ ಹೆಸರಲ್ಲಿ ವ್ಯಕ್ತಿಗಳ ಮೇಲೆ ನಿರ್ಬಂಧಗಳನ್ನು ಹೇರುವ ಸಮುದಾಯಗಳ ಇಂತಹ ನಡೆಗಳು ಸೃಜನಾತ್ಮಕತೆ ಹಾಗೂ ಪ್ರತಿರೋಧಗಳನ್ನು ಹತ್ತಿಕ್ಕುತ್ತವೆ. ಇದರಿಂದ ವ್ಯಕ್ತಿಯ ಆಯ್ಕೆ ಹಾಗೂ ಸ್ವಾತಂತ್ರ್ಯಗಳು ಆಧುನಿಕ ಸಮಾಜದಲ್ಲಿ ನೆಲೆ ಕಳೆದುಕೊಳ್ಳುವಂತಾಗುವುದು ಅಸಂಗತ. ಆದರೆ, ಇಂತಹ ಜಾತಿ ಪಂಚಾಯಿತಿಗಳಿಗೆ ರಾಜಕೀಯ ಬೆಂಬಲ ಇರುತ್ತದೆ ಎಂಬುದು ದುರದೃಷ್ಟಕರ. ಈ ಜಾತಿಗುಂಪುಗಳನ್ನೂ ಮತಬ್ಯಾಂಕ್‍‍ಗಳಾಗಿ ರಾಜಕೀಯ ಪಕ್ಷಗಳು ಪರಿಭಾವಿಸುವಂತಹದ್ದು ಖಂಡನಾರ್ಹ ನಡೆ.

ಈ ಹಿಂದೆ ಕೂಡ ಖಾಪ್ ಪಂಚಾಯಿತಿಗಳ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಮಾತುಗಳನ್ನಾಡಿದೆ. ಆದರೂ ಇವುಗಳ ಹಾವಳಿ ಮುಂದುವರಿದೇ ಇದೆ. ಮರ್ಯಾದೆಗೇಡು ಹತ್ಯೆಗಳಿಗೆ ದಕ್ಕುತ್ತಿರುವ ಸಾಮಾಜಿಕ ಅನುಮೋದನೆಯೇ ಇದಕ್ಕೆ ಕಾರಣ.

ಹೀಗಾಗಿ ಈ ಹತ್ಯೆಗಳು ಮುಂದುವರಿಯುತ್ತಲೇ ಇವೆ. ಕಾನೂನಿನ ಸಮರ್ಥ ಬಳಕೆಯೂ ಸಾಧ್ಯವಾಗುತ್ತಿಲ್ಲ. ಏಕೆಂದರೆ ಸಾಕ್ಷಿಗಳು ಸಾಕ್ಷ್ಯ ನುಡಿಯುವುದು ಕಷ್ಟ. ಪ್ರಕರಣಗಳನ್ನು ಮುಚ್ಚಿಹಾಕುವಲ್ಲಿ ಪೊಲೀಸ್ ವ್ಯವಸ್ಥೆ ಮೇಲೆ ರಾಜಕೀಯ ಒತ್ತಡಗಳೂ ಗುಟ್ಟಿನ ವಿಚಾರವಾಗಿ ಉಳಿದಿಲ್ಲ. ಇಂತಹ ಸಂದರ್ಭದಲ್ಲಿ ವೈಯಕ್ತಿಕ ಸಂಬಂಧಗಳು, ಸ್ವಘೋಷಿತ ಪರಂಪರೆ ರಕ್ಷಕರ ಕೆಂಗಣ್ಣಿಗೆ ಗುರಿಯಾಗಿ ಜೀವಗಳ ಹತ್ಯೆಯಾಗುವುದು ಮುಂದುವರಿದೇ ಇದೆ. ಹುಸಿ ಪರಂಪರೆ ರಕ್ಷಕರು ಸೃಷ್ಟಿಸುತ್ತಿರುವ ಸದ್ಯದ ಇಂತಹ ವಿಷಮಯ ಸನ್ನಿವೇಶದಲ್ಲಿ ಸುಪ್ರೀಂ ಕೋರ್ಟ್ ಮಾತುಗಳಾದರೂ ಎಚ್ಚರಿಕೆ ಗಂಟೆಯಾಗಲಿ.

ಪ್ರತಿಕ್ರಿಯಿಸಿ (+)