ಮಂಗಳವಾರ, ಡಿಸೆಂಬರ್ 10, 2019
20 °C

ಬೀದಿಗಿಳಿದ ಬಿಸಿಯೂಟ ನೌಕರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದಿಗಿಳಿದ ಬಿಸಿಯೂಟ ನೌಕರರು

ಬೆಂಗಳೂರು: ತಿಂಗಳಿಗೆ ₹ 18 ಸಾವಿರ ಕನಿಷ್ಠ ವೇತನ ನೀಡಬೇಕೆಂದು ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ನಗರದಲ್ಲಿ ಗುರುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಇದರಿಂದಾಗಿ ರಾಜ್ಯಾದ್ಯಂತ ಬಿಸಿಯೂಟ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತೆಯರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಆಗ ಅವರನ್ನು ಪೊಲೀಸರು ತಡೆದರು.

‘ಗುರುವಾರದಿಂದ ಬಿಸಿಯೂಟ ಸ್ಥಗಿತಗೊಳಿಸಲಾಗಿದೆ. ಮುಷ್ಕರದ ಬಗ್ಗೆ ಎಂಟು ದಿನಗಳ ಮುಂಚಿತವಾಗಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಹೀಗಾಗಿ, ತೊಂದರೆಗೆ ನಾವು ಕಾರಣವಲ್ಲ’ ಎಂದು ಸಂಘದ ಅಧ್ಯಕ್ಷೆ ವರಲಕ್ಷ್ಮೀ ತಿಳಿಸಿದರು.

‘ವಿಷಯ ಗೊತ್ತಿದ್ದರೂ ಅಧಿಕಾರಿಗಳು ಹಾಗೂ ಸಚಿವರು ಕ್ರಮಕೈಗೊಂಡಿಲ್ಲ. ನಮ್ಮ ಜತೆ ಮಾತುಕತೆಗೆ ಮುಂದಾಗಿಲ್ಲ. ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ರೂಪದ ಭರವಸೆ ಸಿಗುವವರೆಗೆ ಧರಣಿ ಕೈಬಿಡುವುದಿಲ್ಲ’ ಎಂದರು.

‘ಊಟದ ಪಾತ್ರೆಗಳನ್ನು ಎತ್ತಿ ಸ್ವಚ್ಛಗೊಳಿಸಬೇಕು. ದೂರದ ಪ್ರದೇಶಗಳಿಂದ ನೀರು ತರಬೇಕು. ಮಕ್ಕಳಿಗೆ ಊಟ ಬಡಿಸಬೇಕು. ಇಷ್ಟು ಕೆಲಸ ಮಾಡಲು ನಮಗೆ ಶಕ್ತಿ ಬೇಡವೇ. ಸರ್ಕಾರ ನೀಡುವ ಪುಡಿಗಾಸಿನಲ್ಲಿ ನಮ್ಮ ಹೊಟ್ಟೆ ತುಂಬಿಸಲೇ ಅಥವಾ ನಮ್ಮ ಮಕ್ಕಳ ಹಸಿವು ನೀಗಿಸಲೇ’ ಎಂದು ಚಿತ್ರದುರ್ಗದ ಲಕ್ಷ್ಮಮ್ಮ ಪ್ರಶ್ನಿಸಿದರು.

**

ಮೂರನೇ ದಿನಕ್ಕೆ ಕಾಲಿಟ್ಟ ಧರಣಿ

ಕನಿಷ್ಠ ವೇತನಕ್ಕಾಗಿ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಸಚಿವ ತನ್ವೀರ್ ಸೇಠ್ ಸ್ಥಳಕ್ಕೆ ಬಂದು ಲಿಖಿತ ಹೇಳಿಕೆ ನೀಡದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಬಿಸಿಯೂಟ ಕಾರ್ಯಕರ್ತೆಯರು ಪಟ್ಟು ಹಿಡಿದರು.

‘ಸೌಜನ್ಯಕ್ಕಾದರೂ ಸಮಸ್ಯೆ ಆಲಿಸಲು ಯಾರೊಬ್ಬರೂ ಬಂದಿಲ್ಲ. ಮಾನವೀಯತೆ ಮರೆತ ಸರ್ಕಾರ ಹಠಮಾರಿತನ ತೋರುತ್ತಿದೆ. ಅದರ ದುಪ್ಪಟ್ಟು ಹಠವನ್ನು ನಾವೂ ತೋರುತ್ತೇವೆ’ ಎಂದು ಹೇಳಿದರು.

**

ಬೇಡಿಕೆಗಳು

* ಯೋಜನೆಗೆ ಕೇಂದ್ರ ಸರ್ಕಾರ ಕಡಿತಗೊಳಿಸಿದ ಅನುದಾನ ವಾಪಸ್ ನೀಡಬೇಕು

* ಸಂಘ–ಸಂಸ್ಥೆಗಳಿಗೆ ಯೋಜನೆಯ ಜವಾಬ್ದಾರಿ ವಹಿಸಬಾರದು

* ‘ಡಿ’ ದರ್ಜೆ ನೌಕರರೆಂದು ಪರಿಗಣಿಸಬೇಕು

* ಹಾಜರಾತಿ ನೆಪವೊಡ್ಡಿ ಕೆಲಸದಿಂದ ತೆಗೆಯಬಾರದು

* ಪಿಂಚಣಿ ವ್ಯವಸ್ಥೆ, ಬೇಸಿಗೆ ರಜೆ ಅವಧಿಯಲ್ಲೂ ವೇತನ ನೀಡಬೇಕು

* ಸರಿಯಾದ ಸಮಯಕ್ಕೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸಬೇಕು

ಪ್ರತಿಕ್ರಿಯಿಸಿ (+)