ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಜ್ ಮಹಲ್ ರಕ್ಷಣೆಗೆ ಮುನ್ನೋಟ ಸಿದ್ಧಪಡಿಸಿ’

Last Updated 8 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ತಾಜ್‌ ಮಹಲ್‌ನ ಸಂರಕ್ಷಣೆಗೆ ಸಂಬಂಧಿಸಿದಂತೆ ನಾಲ್ಕು ವಾರಗಳ ಒಳಗೆ ಮುನ್ನೋಟ ವರದಿಯನ್ನು ನೀಡಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

‘ವಾಯು ಮಾಲಿನ್ಯ ಮತ್ತು ಅರಣ್ಯ ನಾಶದಿಂದ ತಾಜ್‌ ಮಹಲ್ ನಾಶವಾಗುತ್ತಿದೆ. ಇವುಗಳಿಂದ ಅದನ್ನು ರಕ್ಷಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿ’ ಎಂದು ಪರಿಸರ ಹೋರಾಟಗಾರ ಎಂ.ಸಿ.ಮೆಹ್ತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ.

‘ಸರ್ಕಾರ ಈಗ ತೆಗೆದುಕೊಂಡಿರುವ ಕ್ರಮಗಳ ಮೂಲಕ ತಾಜ್ ಮಹಲ್ ಅನ್ನು ಹೆಚ್ಚೆಂದರೆ 100 ವರ್ಷ ಸಂರಕ್ಷಿಸಬಹುದು ಅಷ್ಟೆ. ಹೀಗಾಗಿ ಸ್ಮಾರಕದ ರಕ್ಷಣೆಗೆ ಅತ್ಯಂತ ದೀರ್ಘವಾದ ಮುನ್ನೋಟದ ಅವಶ್ಯಕತೆ ಇದೆ. ಅಂತಹ ಮುನ್ನೋಟದ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸಿ’ ಎಂದು ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರಿದ್ದ ಪೀಠವು ಹೇಳಿತು.

‘ತಾಜ್ ಮಹಲ್ ಪ್ರದೇಶದಲ್ಲಿ ದಿಡೀರ್‌ ಎಂದು ಚರ್ಮ ಕೈಗಾರಿಕೆಗಳು ಮತ್ತು ಹೋಟೆಲ್‌ಗಳು ಭಾರಿ ಸಂಖ್ಯೆಯಲ್ಲಿ ಆರಂಭವಾಗಿವೆ. ಇದರ ಹಿಂದೆ ಯಾವುದಾದರೂ ಬಲವಾದ ಕಾರಣವಿದೆಯೇ’ ಎಂದು ಪೀಠ ಪ್ರಶ್ನಿಸಿತು. ‘ಈ ಬಗ್ಗೆಯೂ ವಿವರಣೆ ನೀಡಿ’ ಎಂದು ಉತ್ತರ ಪ್ರದೇಶ ಸರ್ಕಾರದ ಪರ ಹಾಜರಿದ್ದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅವರಿಗೆ ಪೀಠ ಸೂಚಸಿತು.

‘ಆಗ್ರಾ ನಗರಕ್ಕೆ ನೀರು ಪೂರೈಕೆ ಕೊಳವೆಗಳನ್ನು ಅಳವಡಿಸಬೇಕಿದೆ. ಇದಕ್ಕಾಗಿ ‘ತಾಜ್ ಮಹಲ್ ಪ್ರದೇಶ’ದಲ್ಲಿರುವ 234 ಮರಗಳನ್ನು ಕತ್ತರಿಸಬೇಕಿದೆ. ಮರಗಳನ್ನು ಕತ್ತರಿಸಲು ಅನುಮತಿ ನೀಡಿ’ ಎಂದು ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನೂ ಪೀಠ ನಡೆಸಿತು. ‘ಈವರೆಗೆ ತಾಜ್ ಮಹಲ್ ಪ್ರದೇಶದಲ್ಲಿ ಎಷ್ಟು ಸಸಿಗಳನ್ನು ನೆಟ್ಟಿದ್ದೀರಿ, ಮರಗಳನ್ನು ಬೆಳೆಸಿದ್ದೀರಿ ಎಂಬುದರ ಬಗ್ಗೆ ಮಾಹಿತಿ ನೀಡಿ’ ಎಂದು ಸರ್ಕಾರಕ್ಕೆ ಆದೇಶಿಸಿತು.

ತಾಜ್ ಮಹಲ್ ಪ್ರದೇಶ

10,400 ಚದರ ಕಿ.ಮೀ

ತಾಜ್‌ ಮಹಲ್ ಪ್ರದೇಶದ ವ್ಯಾಪ್ತಿ

ಆಗ್ರಾ, ಫಿರೋಜಾಬಾದ್, ಮಥುರಾ, ಹಥ್ರಾಸ್ ಮತ್ತು ಇಟಾ ಜಿಲ್ಲೆಗಳ ಹಲವು ಭಾಗಗಳು ಈ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT