ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶ್ರಮಣ ಬಾಹುಬಲಿ

Last Updated 8 ಫೆಬ್ರುವರಿ 2018, 18:55 IST
ಅಕ್ಷರ ಗಾತ್ರ

ಆಧ್ಯಾತ್ಮಿಕ ಕ್ಷೇತ್ರದಲ್ಲಿ ಶ್ರಮಣ ಪದಕ್ಕೆ ವಿಶೇಷ ಮಹತ್ವವಿದೆ. ವೇದಪೂರ್ವ ಕಾಲದಿಂದಲೂ ಶ್ರಮಣ ಪರಂಪರೆ ಭಾರತೀಯ ಸಂಸ್ಕೃತಿಯ ಅಭಿನ್ನ ಅಂಗವಾಗಿ ಬೆಳೆದು ಬಂದಿದೆ. ವೈದಿಕ, ಬೌದ್ಧ, ಜೈನ ಗ್ರಂಥಗಳಲ್ಲಿ; ಶಿಲಾಲೇಖಗಳಲ್ಲಿ, ವಿದೇಶಿ ಯಾತ್ರಿಕರ ಬರಹಗಳಲ್ಲಿ ಈ ಪರಂಪರೆಯ ಮಾಹಿತಿಗಳು ದೊರೆಯುತ್ತವೆ.

ಮೆಗಸ್ಥಾನೀಸನು, ‘ಶ್ರಮಣರು ಬ್ರಾಹ್ಮಣರು ಹಾಗೂ ಬೌದ್ಧರಿಗಿಂತ ಬೇರೆಯಾಗಿದ್ದರು. ಅವರು ಚಂದ್ರಗುಪ್ತನೊಂದಿಗೆ ಘನಿಷ್ಠ ಸಂಬಂಧ ಹೊಂದಿದ್ದರು’ ಎಂದು ದಾಖಲಿಸಿದ್ದಾನೆ. ಚಂದ್ರಗುಪ್ತ ಮೌರ್ಯನು ಶ್ರುತ ಕೇವಲಿ ಭದ್ರ ಬಾಹುಗಳ ಶಿಷ್ಯನಾಗಿ, ಮುನಿದೀಕ್ಷಿತನಾಗಿ ಶ್ರವಣಬೆಳ್ಗೊಳಕ್ಕೆ ಬಂದಿದ್ದನು. ಸಮ್ರಾಟ್ ಖಾರವೇಲನ ಶಿಲಾಲೇಖದಲ್ಲಿ ಕಂಡುಬರುವಂತೆ ಖಾರವೇಲನು ಶತಸಹಸ್ರ (ಲಕ್ಷ) ಅರ್ಹ ಶ್ರಮಣರಿಗೆ ಪಾನ-ಭೋಜನವನ್ನು ನೀಡುತ್ತಿದ್ದನು.

ವೈದಿಕ ಪರಂಪರೆಯ ವೇದ, ಪುರಾಣ, ಉಪನಿಷತ್ತುಗಳಲ್ಲಿ ಶ್ರಮಣರ ಪ್ರಸ್ತಾಪ ಬರುವುದು. ಅಲ್ಲೆಲ್ಲ ಅವರನ್ನು ಆತ್ಮವಿದ್ಯಾ ವಿಶಾರದರು, ಶಾಂತರು, ಊರ್ಧ್ವಗಮನದಿಂದ ಬ್ರಹ್ಮಲೋಕಕ್ಕೆ ಹೋಗಬಲ್ಲರು ಎಂದೆಲ್ಲ ಬಣ್ಣಿಸಲಾಗಿದೆ. ಬುದ್ಧನು ಸಾಧಕನಾಗಿದ್ದಾಗ ಅಚೇಲಕತ್ವ ಮೊದಲಾದ ಶ್ರಮಣಧರ್ಮದ ಆಚರಣೆಗಳನ್ನು ಆಶ್ರಯಿಸಿದ್ದನು. ಬೌದ್ಧ ಧರ್ಮದ ಸಾರಗ್ರಂಥವಾದ ಧಮ್ಮಪದದಲ್ಲಿ, ‘ಶ್ರಮಣರು ಒಳ್ಳೆಯ ಆಚರಣೆವುಳ್ಳವರು, ದ್ವೇಷ ರಹಿತರು, ಎಲ್ಲ ಪ್ರಾಣಿಗಳಲ್ಲಿ ಅಹಿಂಸಾ ಭಾವನೆ ಉಳ್ಳವರು’ ಎಂದು ವರ್ಣಿಸಲಾಗಿದೆ.

ಜೈನಧರ್ಮವು ಸಂಪೂರ್ಣವಾಗಿ ಶ್ರಮಣ ಪರಂಪರೆಯ ಧರ್ಮ. ಆಚಾರ್ಯ ಕುಂದಕುಂದರ ಪ್ರವಚನಸಾರ ಮೊದಲಾದ ಗ್ರಂಥಗಳಲ್ಲಿ ಶ್ರಮಣರ ಲಕ್ಷಣಾದಿಗಳು ಪ್ರಸ್ತಾಪಗೊಂಡಿವೆ. ಆರಂಭದಲ್ಲಿಯೇ ಆಚಾರ್ಯರು, ‘ಪಡಿವಜ್ಜದಿ ಸಾಮಣ್ಣಂ ಜದಿ ಇಚ್ಛದಿ ದುಃಖ ಪರಿಮೊಕ್ಖಂ’ ಅಂದರೆ, ಒಂದು ವೇಳೆ ದುಃಖದಿಂದ ಪೂರ್ಣವಾಗಿ ಬಿಡುಗಡೆ ಬೇಕಾದರೆ, ಶ್ರಮಣ ಧರ್ಮವನ್ನು ಸ್ವೀಕರಿಸು’ ಎಂದಿದ್ದಾರೆ. ‘ಶುದ್ಧ ಮನಸ್ಸುಳ್ಳವರೇ ಶ್ರಮಣರು. ಅವರಲ್ಲಿ ಪಾಪ ಭಾವನೆ ಇರುವುದಿಲ್ಲ. ಅವರು ಸ್ವಜನ-ಪರಜನರಲ್ಲಿ, ಮಾನ-ಅವಮಾನದಲ್ಲಿ ಸಮತ್ವ ಹೊಂದಿರುವರು. ಅಲ್ಲದೆ, ಅವರಿಗೆ ದುಃಖವು ಅಪ್ರಿಯವಾಗಿರುವಂತೆ, ಎಲ್ಲರಿಗೂ ದುಃಖ ಅಪ್ರಿಯವಾಗಿದೆ ಎಂದು ತಿಳಿದು, ಅವರು ಯಾವ ಜೀವಿಗಳನ್ನೂ ಕೊಲ್ಲುವುದಿಲ್ಲ, ಇತರರಿಗೂ ಕೊಲ್ಲಲು ಪ್ರೇರೇಪಿಸುವುದಿಲ್ಲ. ಈ ಸಮತ್ವ ಭಾವನೆಯಿಂದ ಅವರು ಶ್ರಮಣ ಪದವನ್ನು ಹೊಂದುವರು’ ಎಂಬುದಾಗಿ ಸ್ಥಾನಾಂಗ ಗ್ರಂಥದಲ್ಲಿ ಹೇಳಿದೆ.

ಆಚಾರ್ಯ ಹರಿಭದ್ರರು, ‘ಯಾರು ತಪಸ್ಸಿನಲ್ಲಿ ಶ್ರಮ ಪಡುವರೋ, ಅವರೇ ಶ್ರಮಣರು’ ಎಂದರೆ; ಆಚಾರ್ಯ ರವಿಷೇಣರು, ‘ತಪಸ್ಸೇ ಶ್ರಮ’ ಎಂದಿರುವರು. ಭರತ ಚಕ್ರವರ್ತಿಯ ಮೇಲೆ ವಿಜಯವನ್ನು ಸಾಧಿಸಿದ ಬಾಹುಬಲಿ, ಎಲ್ಲವನ್ನು ಪರಿತ್ಯಜಿಸಿ ತಪಸ್ವಿಯಾದನು. ನಿಂತ ಸ್ಥಳದಲ್ಲೇ ಶಿಲೆಯಂತೆ ನಿಂತು, ಒಂದು ವರ್ಷದವರೆಗೆ ತಪಸ್ಸು ಮಾಡಿದರು. ಸತತವಾಗಿ ತಪಗೈಯುವಷ್ಟು ಶಾರೀರಿಕ ಬಲ ಬಾಹುಬಲಿಯಲ್ಲಿತ್ತು. ಈ ರೀತಿ ಶ್ರಮ ವಹಿಸಿ ಯಾರೂ ತಪಸ್ಸು ಮಾಡಿರಲಿಲ್ಲ. ಇಂಥ ನಿದರ್ಶನ ಹಿಂದೆಯೂ ಇರಲಿಲ್ಲ, ಮುಂದೆಯೂ ಕಾಣಲಿಲ್ಲ. ಇದು ಇಡೀ ಜಗತ್ತಿನಲ್ಲೇ ಏಕೈಕ ನಿದರ್ಶನ. ಈ ಹಿನ್ನೆಲೆಯಲ್ಲಿ ಬಾಹುಬಲಿ ಮಹಾಶ್ರಮಣ. ಇಂಥ ಬೆಳಗೊಳದ ಮಹಾಶ್ರಮಣನಿಗೆ ಪ್ರಸ್ತುತ ಜರಗುವ ಮಹಾಮಸ್ತಕಾಭಿಷೇಕದ ದೃಶ್ಯಗಳನ್ನು ಕಣ್ತುಂಬಿ ನೋಡೋಣ, ಹೃದಯ ತುಂಬಿ ಆನಂದಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT