ಮಂಗಳವಾರ, ಡಿಸೆಂಬರ್ 10, 2019
20 °C

ಗರ್ಭಾವತರಣ ಕಲ್ಯಾಣ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರ್ಭಾವತರಣ ಕಲ್ಯಾಣ ಮಹೋತ್ಸವ

ಶ್ರವಣಬೆಳಗೊಳ: ತ್ಯಾಗಮೂರ್ತಿ ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಆಚರಿಸುವ ಪಂಚಕಲ್ಯಾಣ ಧಾರ್ಮಿಕ ವಿಧಿ, ವಿಧಾನಗಳಿಗೆ ಸಂಸ್ಕಾರ ಮಂಟಪದಲ್ಲಿ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಬೆಳಿಗ್ಗೆ ಸುಪ್ರಭಾತ, ಜಪಾನುಷ್ಠಾನ, ಜಿನಾಭಿಷೇಕ, ಆರಾಧನೆಗಳು ಸಂಸ್ಕಾರ ಮಂಟಪದಲ್ಲಿ ನೆರವೇರಿದವು. ಇಂದ್ರ ಇಂದ್ರಾಣಿ ಪದವೀಧಾರಕರು, ಅಷ್ಟಕನ್ನಿಕೆಯರು ಮತ್ತು ಚಪ್ಪನ್‌ ಕನ್ನಿಕೆಯರು ಪೂಜಾ ವಿಧಿ–ವಿಧಾನಗಳಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಪಂಚಕಲ್ಯಾಣದ ವಿಧಿಯ ಮಂಡಲ ರಚನೆ ಮಾಡಿ, ಗರ್ಭ ಸಂಸ್ಕಾರ ಕ್ರಿಯೆಯ ಪೂಜಾ ವಿಧಿ ನೆರವೇರಿಸಲಾಯಿತು.

ನಂತರ ತೀರ್ಥಂಕರರ ತಾಯಿ ಮರುದೇವಿ ಕಾಣುವ 16 ಸ್ವಪ್ನಗಳ ದೃಶ್ಯಾವಳಿ, ಸೀಮಂತ ಕಾರ್ಯದ ವಿಧಿಗಳು, ಕುಬೇರನಿಂದ ರತ್ನವೃಷ್ಟಿ, ರಾಜಭವನದ ಉದ್ಘಾಟನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ವೈಭವಯುತವಾಗಿ ನೆರವೇರಿದವು.

ಕಾರ್ಯಕ್ರಮಕ್ಕೂ ಮೊದಲು ಗರ್ಭ ಕಲ್ಯಾಣದ ಪ್ರಯುಕ್ತ ಭವ್ಯ ಮೆರವಣಿಗೆ ನಡೆಯಿತು. ವರ್ಧಮಾನ ಸಾಗರ ಮಹಾರಾಜರು, ಆಚಾರ್ಯರು ಹಾಗೂ ಸಂಘಸ್ಥ ತ್ಯಾಗಿಗಳು ಸಾನ್ನಿಧ್ಯ ವಹಿಸಿದ್ದರು.

ಪೂಜಾ ಕಾರ್ಯಗಳ ನೇತೃತ್ವವನ್ನು ಪ್ರತಿಷ್ಠಾಚಾರ್ಯರಾದ ಡಿ.ಪಾರ್ಶ್ವನಾಥ ಶಾಸ್ತ್ರಿ, ಎಸ್‌.ಪಿ.ಉದಯಕುಮಾರ್‌ ಶಾಸ್ತ್ರಿ, ಎಸ್‌.ಡಿ.ನಂದಕುಮಾರ್‌ ಮತ್ತು ತಂಡದವರು ವಹಿಸಿದ್ದರು.

ಪಟ್ಟಣದಲ್ಲಿ ₹ 3.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಬಸ್‌ ನಿಲ್ದಾಣವನ್ನು ಸಚಿವ ಎ.ಮಂಜು ಮತ್ತು ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.

ಪ್ರತಿಕ್ರಿಯಿಸಿ (+)