ಶುಕ್ರವಾರ, ಡಿಸೆಂಬರ್ 13, 2019
27 °C

ಪ್ರೇಮಿಗಳಿಗೆ ಗುದ್ದು: ಜನ ವಿರೋಧವೇ ಮದ್ದು

ವೈ.ಗ. ಜಗದೀಶ್/ ವಿ.ಎಸ್. ಸುಬ್ರಹ್ಮಣ್ಯ/ ರಾಜಲಕ್ಷ್ಮಿ ಕೋಡಿಬೆಟ್ಟು Updated:

ಅಕ್ಷರ ಗಾತ್ರ : | |

ಪ್ರೇಮಿಗಳಿಗೆ ಗುದ್ದು: ಜನ ವಿರೋಧವೇ ಮದ್ದು

ಮಂಗಳೂರು: ಕಾಲೇಜುಗಳಲ್ಲಿ ಕಲಿಯುವ, ಸಹೋದ್ಯೋಗಿಗಳಾದ ಹಿಂದೂ ಯುವತಿ, ಮುಸ್ಲಿಂ ಯುವಕ ಒಟ್ಟಿಗೆ ಓಡಾಡಿದರೆ ಬೆನ್ನತ್ತಿ ಹೊಡೆಯುವ ಕೆಟ್ಟ ಚಾಳಿ ಕರಾವಳಿಯಲ್ಲಿ ಸಾಂಕ್ರಾಮಿಕ ರೋಗದಂತೆ ಹರಡಿರುವುದು ಕಾಣಿಸುತ್ತದೆ.

‘ಇದು ಸ್ವಧರ್ಮ ರಕ್ಷಣೆಯ ಕೈಂಕರ್ಯ’ ಎಂದು ಸಂಘಪರಿವಾರದ ಸಂಘಟನೆಗಳು ಪ್ರತಿಪಾದಿಸುತ್ತವೆ. ಈ ಆಕ್ರಮಣಗಳಿಗೆ ಬಲಿಯಾಗುವವರಲ್ಲಿ ಹಾಗೂ ಅವರ ಪೋಷಕರಲ್ಲಿ ಇದರ ಬಗ್ಗೆ ಕಡು ಆಕ್ರೋಶವಿದೆ. ಆದರೆ, ಬಜರಂಗ ದಳದ ದಬ್ಬಾಳಿಕೆಯ ಮುಂದೆ ಇದನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಯಾರೂ ಧೈರ್ಯ ತೋರುತ್ತಿಲ್ಲ. ಕುಟುಂಬದ ಮರ್ಯಾದೆ ಕಾರಣಕ್ಕೆ ಕೆಲವರು ಪೊಲೀಸರಿಗೆ ದೂರು ನೀಡಲು ಮುಂದಾಗುವುದಿಲ್ಲ. ದಾಳಿ ಮಾಡುವವರಿಗೆ ಸಜ್ಜನರ ಮೌನ ರಕ್ಷಣಾ ಕವಚವಾಗಿದೆ ಎಂಬ ಅಭಿಪ್ರಾಯ ಬಲವಾಗಿದೆ.

ಕರಾವಳಿ ಮಾತ್ರವಲ್ಲದೇ, ಇಡೀ ಕರ್ನಾಟಕದ ಎಲ್ಲ ಜಾತಿಯ ಜನರ ಮೇಲೆ ತಮ್ಮದೇ ಪ್ರಭಾವ ಇಟ್ಟುಕೊಂಡಿರುವ ಧಾರ್ಮಿಕ ಮುಖಂಡರೊಬ್ಬರನ್ನು ‘ಪ್ರಜಾವಾಣಿ’ ಈ ಬಗ್ಗೆ ಪ್ರಶ್ನಿಸಿತು.

ಕರಾವಳಿಯ ವಿಷಮ ಸ್ಥಿತಿಯ ಬಗ್ಗೆ ಅಲ್ಲಿಯವರೆಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಅವರು, ತಮ್ಮ ಮೊಬೈಲ್ ರೆಕಾರ್ಡರ್ ಅನ್ನು ಆಫ್ ಮಾಡಿದರು. ‘ನೀವೂ ಪುಸ್ತಕ, ಪೆನ್ನು ಮುಚ್ಚಿ’ ಎಂದು ನಗುತ್ತಲೇ ಸೂಚಿಸಿದರು.

‘ನಾನು ಅದನ್ನು ಸುತಾರಾಂ ಒಪ್ಪುವುದಿಲ್ಲ. ನಾನು ಆ ಬಗ್ಗೆ ಪ್ರತಿಕ್ರಿಯಿಸಿ ನೀವು ಅದನ್ನು ಪ್ರಕಟಿಸಿದರೆ ನಾಳೆ ಬೆಳಿಗ್ಗೆಯಿಂದ ವಾಟ್ಸ್ ಆಪ್, ಫೇಸ್ ಬುಕ್ ನಲ್ಲಿ ನನ್ನ ಮೇಲೆ ದಾಳಿ ಆರಂಭವಾಗುತ್ತದೆ. ನಾನು ಬದುಕಲು ಬಿಡುವುದುಂಟೆ’ ಎಂದರು. ಯಾರನ್ನಾದರೂ ಪ್ರಭಾವಿಸುವ, ತಮ್ಮ ಶಕ್ತಿಯಿಂದ ಸರ್ಕಾರವನ್ನೇ ತಮ್ಮ ಬಳಿಗೆ ಕರೆಸಿಕೊಳ್ಳುವ ಗಣ್ಯರೊಬ್ಬರಿಗೆ ಇಂತಹ ಅಸಹಾಯಕ ಪರಿಸ್ಥಿತಿ ಇರುವುದನ್ನು ಈ ಮಾತುಗಳು ಧ್ವನಿಸುತ್ತಿದ್ದವು.

‘ಪ್ರೇಮ, ಅನೈತಿಕ ಸಂಬಂಧಗಳ ಕಥೆಗಳನ್ನು ನಮ್ಮ ಟಿ.ವಿ ಧಾರಾವಾಹಿಗಳು, ಸಿನಿಮಾದಲ್ಲಿ ಮೂರೂ ಹೊತ್ತು ತೋರಿಸುತ್ತಾರೆ. ಇನ್ನು ವಾಸ್ತವದಲ್ಲಿ ಮಾಡಬೇಡಿ ಎಂದು ತಡೆಯುವುದು ಎಷ್ಟು ಸರಿ’ ಎಂದೂ ಅವರು ಪ್ರತಿಪಾದಿಸಿದರು.

ಯುವ ಸಮೂಹದಲ್ಲಿ ಭಿನ್ನ ಅಭಿಪ್ರಾಯ: ದಕ್ಷಿಣ ಕನ್ನಡದ ಕಾಲೇಜುಗಳಲ್ಲಿ ಪರಿಸ್ಥಿತಿ ಹೀಗಿದ್ದರೂ ಶಂಕಿತ ‘ಲವ್‌ ಜಿಹಾದ್‌’ ವಿರುದ್ಧ ಬಜರಂಗದಳ ಮತ್ತು ದುರ್ಗಾವಾಹಿನಿ ಸಮರ ಸಾರಿದೆ. ಲವ್‌ಜಿಹಾದ್‌ ವಿರುದ್ಧ ಜಾಗೃತಿ ಅಭಿಯಾನವನ್ನೇ ನಡೆಸುತ್ತಿದೆ. ಆದರೆ ಕಾಲೇಜುಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಮಾತನಾಡಿಸಿದಾಗ ಅವರಲ್ಲಿ ಅಂತಹ ಆತಂಕವೇನೂ ಕಂಡು ಬರಲಿಲ್ಲ.

‘ಹಿಂದೂ ಹುಡುಗಿಯರನ್ನು ಮುಸ್ಲಿಂ ಹುಡುಗರು ಪ್ರೀತಿಸಿ ಮದುವೆಯಾಗುವ ಪ್ರಕರಣಗಳನ್ನು ತಡೆಯಲು ಈ ’ಲವ್‌ ಜಿಹಾದ್‌’ ಎಂಬ ಅತಿರೇಕದ ಪದವನ್ನು ಬಳಸಲಾಗುತ್ತದೆ. ಪ್ರೀತಿಸುವುದು ಅವರವರ ಮರ್ಜಿಗೆ ಬಿಟ್ಟ ವಿಷಯ ಅಲ್ಲವೇ. ಮುಸ್ಲಿಮರನ್ನು ಪ್ರೀತಿಸಿ ಮದುವೆಯಾದ ಮಹಿಳೆಯರು ಐಎಸ್‌ ಭಯೋತ್ಪಾದಕ ಸಂಘಟನೆ ಸೇರಿದ್ದಾರೇನೋ ಎಂಬಂತೆ ರಾದ್ಧಾಂತ ಸೃಷ್ಟಿಸುತ್ತಾರೆ. ಹಾಗೇನು ಆಗಿಲ್ಲ’ ಎಂದು ಬಿಸಿಎ ಓದುತ್ತಿರುವ ರೀನಾ ಮಥಾಯಸ್‌ ವಿಶ್ಲೇಷಿಸುತ್ತಾರೆ.

ಆದರೆ ದುರ್ಗಾವಾಹಿನಿಯರಲ್ಲಿ ಸಕ್ರಿಯರಾಗಿರುವ ಸೀಮಾ ಕೆ. ಈ ಮಾತನ್ನು ಒಪ್ಪುವುದಿಲ್ಲ. ‘ಜಿಹಾದ್‌ ಎಂದರೆ ಯುದ್ಧವೇ ನಡೆಯಬೇಕಿಲ್ಲ. ಹಿಂದೂ ಹುಡುಗಿಯರನ್ನು ಮದುವೆಯಾಗುವುದೇ ಧರ್ಮ ರಕ್ಷಣೆಗೆ ನೀಡುವ ಕೊಡುಗೆ ಎಂದು ಮುಸ್ಲಿಂ ಹುಡುಗರು ಭಾವಿಸುತ್ತಾರೆ. ಆದ್ದರಿಂದಲೇ ಪ್ರೇಮ ವಿವಾಹಗಳು ನಡೆದಾಗ ಹುಡುಗಿಯ ಮತಾಂತರ ಕಡ್ಡಾಯವಾಗಿ ಆಗಿರುತ್ತದೆ. ಮದುವೆಯ ಬಳಿಕ ಆಕೆಯ ಸಾಮಾಜಿಕ ಬದುಕೂ ಮುಕ್ತಾಯವಾಗಿ ಬಿಡುತ್ತದೆ. ಆಕೆ ಎಲ್ಲಿದ್ದಾಳೆ, ಹೇಗಿದ್ದಾಳೆ ಎಂಬ ಮಾಹಿತಿಯೂ ದೊರೆಯುವುದಿಲ್ಲ’ ಎಂದು ಹೇಳಿದ ಅವರು, ಕೆಲ ಪ್ರೇಮ ವಿವಾಹಗಳ ಉದಾಹರಣೆಗಳನ್ನು ಕೊಡುತ್ತಾರಾದರೂ ನಿರ್ದಿಷ್ಟ ಪ್ರಕರಣಗಳ ದಾಖಲೆಯನ್ನು ನೀಡಲಿಲ್ಲ.

ಆದರೆ ಪೊಲೀಸ್‌ ಅಧಿಕಾರಿಗಳ ಪ್ರಕಾರ ಈವರೆಗೆ ಯಾವುದೇ ‘ಲವ್‌ ಜಿಹಾದ್‌’ ಪ್ರಕರಣ ಜಿಲ್ಲೆಯಲ್ಲಿ ವರದಿಯಾಗಿಲ್ಲ.

‘ನೈಜ ಪ್ರೇಮವೇ ಆಗಿದ್ದಲ್ಲಿ, ಫೇಸ್‌ಬುಕ್‌ನಲ್ಲಿ ಹಿಂದೂ ಹೆಸರಿನಲ್ಲಿ ನಕಲಿ ಖಾತೆಯ ಮೂಲಕ, ಮೊಬೈಲ್‌ ರಿಚಾರ್ಜ್‌ ಅಂಗಡಿಗಳಲ್ಲಿ ದೊರೆಯುವ ನಂಬರ್‌ಗಳನ್ನು ಬಳಸಿಕೊಂಡು ಹಿಂದೂ ಹುಡುಗಿಯರನ್ನು ಕೇಂದ್ರೀಕರಿಸಿ ಸಂವಾದ ಶುರು ಮಾಡುವ ಅಗತ್ಯವಿರುತ್ತದೆಯೇ’ ಎಂದು ಪ್ರಶ್ನಿಸುತ್ತಾರೆ ಬಜರಂಗದಳದ ಮುಖಂಡ ರಾಮ್‌ಪ್ರಸಾದ್‌.

‘ರಿಚಾರ್ಜ್‌ ಸಂದರ್ಭದಲ್ಲಿ ಕೊಡುವ ನಂಬರ್‌ಗಳಿಗೆ ಮಿಸ್ಡ್‌ಕಾಲ್‌ ಬರುವ, ಬಳಿಕ ಪ್ರೇಮದ ನಾಟಕ ಆಡುವ ಹತ್ತಾರು ಪ್ರಕರಣಗಳನ್ನು ಗಮನಿಸಿದ್ದೇವೆ. ಪ್ರೇಮ ಸಹಜವಾಗಿ ಅರಳುವಂತಹುದು. ಹೀಗೆ ಮಿಸ್ಡ್‌ಕಾಲ್‌ ಎಂಬ ಒಂದೇ ಶೈಲಿಯ ಹಲವು ಪ್ರೇಮ ಪ್ರಕರಣಗಳನ್ನು ಗಮನಿಸಿದರೆ ಸಂಶಯ ಬಾರದೇ ಇರುತ್ತದೆಯೇ? ಅಂತಹ ಸುಳಿಗೆ ಬೀಳದಂತೆ ಹುಡುಗಿಯರಲ್ಲಿ ಜಾಗೃತಿ ಮೂಡಿಸುವುದರಲ್ಲಿ ತಪ್ಪೇನಿದೆ’ ಎಂದೂ ಅವರು ಪ್ರಶ್ನಿಸುತ್ತಾರೆ.

‘ಇದು ಬರೀ ಚುನಾವಣೆಯ ಗಿಮಿಕ್‌. ನಮ್ಮ ಮನೆ ಹುಡುಗಿಯರಲ್ಲಿ ಜಾಗೃತಿ ಮೂಡಿಸುವ ಕಾಳಜಿ ಇವರಿಗೆ ಈ ವರ್ಷವೇ ಯಾಕೆ ಬಂತು? ಲವ್‌ ಜಿಹಾದ್‌ ಬಗ್ಗೆ 2009ರಲ್ಲಿಯೇ ಕೇರಳದಲ್ಲಿ ಬಹಳ ಚರ್ಚೆಯಾಗಿತ್ತು. ಹಿಂದೂಗಳ ಬಗ್ಗೆ ತಮಗೆ ಕಾಳಜಿ ಇದೆ ಎಂದು ಚುನಾವಣೆ ಸಂದರ್ಭದಲ್ಲಿ ಪ್ರದರ್ಶನ ಮಾಡುವುದಷ್ಟೇ ಈ ಜಾಗೃತಿ ಅಭಿಯಾನದ ಉದ್ದೇಶ’ ಎಂದು ಉಪನ್ಯಾಸಕರೊಬ್ಬರು ಅಸಮಾಧಾನ ಹೊರಹಾಕಿದರು.

ಪ್ರತ್ಯೇಕ ಶಿಕ್ಷಣದಿಂದಾದ ಅಂತರ: ‘ಕೇರಳದಲ್ಲಿ ಏನೇ ಆಗಿರಲಿ, ಕರಾವಳಿಯ ಮಟ್ಟಿಗೆ ಪರಿಸ್ಥಿತಿ ಸೌಹಾರ್ದವಾಗಿದೆ. ‘ಲವ್ ಜಿಹಾದ್‌’ ಆತಂಕ ದೂರವಾಗಬೇಕಾದರೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆಯಾಗಬೇಕು. ಮಕ್ಕಳನ್ನು ತಮ್ಮ ಧರ್ಮದ ಪ್ರತ್ಯೇಕ ಶಿಕ್ಷಣ ಸಂಸ್ಥೆಗೆ ಕಳಿಸುವ ಬದಲು ಸಾಮಾನ್ಯ ಶಾಲೆಗಳಿಗೆ ಕಳುಹಿಸಬೇಕು. ಅದರಲ್ಲಿಯೂ ಮುಸ್ಲಿಂ ಮಹಿಳೆಯರು ಹೆಚ್ಚು ಶಿಕ್ಷಣ ಪಡೆದು, ಸಾಮಾಜಿಕವಾಗಿ ಹೆಚ್ಚು ಸಕ್ರಿಯರಾಗಬೇಕು. ಹಾಗಾದಾಗ ವಿವಾಹದ ಬಳಿಕ ಅವರ ಸಾಮಾಜಿಕ ಬದುಕನ್ನು ಕಸಿದುಕೊಳ್ಳಲಾಗುತ್ತದೆ ಎಂಬ ಆರೋಪವೂ ಬರುವುದಿಲ್ಲ’ ಎನ್ನುವುದು ಹಲವು ಪೋಷಕರ ಅಭಿಪ್ರಾಯ.

ಜಸ್ಟೀಸ್‌ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿ ಅಸಿಯಾ ಲಿಫಾನ್‌ ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತಾರೆ: ಶಿಕ್ಷಣವೆಂದರೆ ಜ್ಞಾನವನ್ನು ಪಡೆಯುವುದು. ಅದು ಕೇವಲ ಪುಸ್ತಕದ ಜ್ಞಾನ ಮಾತ್ರವಲ್ಲ. ಸಹಬಾಳ್ವೆಯ ಜ್ಞಾನವನ್ನೂ ವಿದ್ಯಾರ್ಥಿ ಸಮೂಹ ಪಡೆಯಬೇಕು. ಮುಸ್ಲಿಂ ಹುಡುಗಿಯರು ಕೇವಲ ಮುಸ್ಲಿಂ ಕಾಲೇಜಿನಲ್ಲಿ ಮಾತ್ರ ಕಲಿಯುವುದು ಅಥವಾ ಹಿಂದೂಗಳು ಅವರ ಧರ್ಮದವರು ನಡೆಸುವ ಸಂಸ್ಥೆಗಳಲ್ಲಿ ಕಲಿಯುವುದಕ್ಕಿಂತ ಎಲ್ಲರೂ ಒಂದಾಗಿ ಕಲಿಯುವ ಅವಕಾಶ ಇರಬೇಕು. ಒಬ್ಬರಿಗೆ ಇನ್ನೊಂದು ಧರ್ಮದ ಆಚರಣೆಗಳ ಅರಿವು ಸಾಧ್ಯವಾಗುತ್ತದೆ. ಸಾಮರಸ್ಯದ ಬದುಕು ಸಾಧ್ಯವಾಗಬೇಕಾದರೆ ಬೇರೆ ಧರ್ಮದ ಆಚಾರ ವಿಚಾರವನ್ನು ತಿಳಿಯಬೇಕು. ಆಗ ಯಾವುದೇ ಧರ್ಮದಲ್ಲಿ ದುಷ್ಕರ್ಮಿಗಳು ‘ಲವ್‌ ಜಿಹಾದ್‌’ ಅಥವಾ ಇನ್ಯಾವುದೇ ರೀತಿಯಲ್ಲಿ ಸಾಮರಸ್ಯ ಕೆಡಿಸಲು ಯತ್ನಿಸಿದರೂ ಸ್ನೇಹ, ಪ್ರೀತಿ ವಿಶ್ವಾಸ ಇರುವ ಇತರರು ಸಂತ್ರಸ್ತರ ಪರ ನಿಲ್ಲುವುದು ಸಾಧ್ಯವಾಗುತ್ತದೆ.

(ನಾಳಿನ ಸಂಚಿಕೆಯಲ್ಲಿ- ಮಾಧ್ಯಮಗಳ ಪಾತ್ರ: ಹಿಂಸೆಗೆ ‘ಸೂತ್ರ’)

**

ಅಭಿಪ್ರಾಯಗಳು

ಭಿನ್ನ ಧರ್ಮಕ್ಕೆ ಸೇರಿದ ಹುಡುಗ-ಹುಡುಗಿಯರು ಒಟ್ಟಿಗೆ ಹೋಗುವಾಗ ಬೆನ್ನತ್ತಿ ಹೊಡೆಯುವುದು ಸರಿಯಲ್ಲ. ಅವಸರದಲ್ಲಿ ಯಾರೂ ಇದನ್ನು ಮಾಡಬಾರದು. ಸಂದರ್ಭ ಬಂದಾಗಲೆಲ್ಲ ಒತ್ತಿ ಹೇಳಿದ್ದೇವೆ.

-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

**

ಹಿಂದು ಸಮಾಜದ ರಕ್ಷಣೆಗೆ ಕಾಂಪೌಂಡ್ ಕಟ್ಟಿದರೆ ಬೇಡ ಎನ್ನುವುದೇಕೆ? ಲವ್ ಜಿಹಾದ್ ಹೆಸರಿನಲ್ಲಿ ಪ್ರೇಮದ ನಾಟಕ ಆಡುವವರನ್ನು ಹೊಡೆಯಿರಿ ಎಂದು ಹೇಳಿಲ್ಲ. ನಮ್ಮ ಹುಡುಗಿಯರ ರಕ್ಷಣೆ ನಮ್ಮ ಹೊಣೆ. ಹೆಂಡತಿಯನ್ನು ನಿಮ್ಮ ಎದುರೇ ಹೊತ್ತುಕೊಂಡು ಹೋದಾಗ ಸುಮ್ಮನಿದ್ದರೆ ನಿಮ್ಮಷ್ಟು ಷಂಡರು ಯಾರಿದ್ದಾರೆ. ಎದ್ದು ನಿಂತು ಪ್ರತಿಭಟಿಸಿದ್ದಕ್ಕೆ ನೀವು (ಅ)ನೈತಿಕ ಪೊಲೀಸ್ ಗಿರಿ ಹೆಸರಿಟ್ಟಿದ್ದೀರಿ.

-ಕಲ್ಲಡ್ಕ ಪ್ರಭಾಕರ್ ಭಟ್, ಆರ್ ಎಸ್ ಎಸ್ ಮುಖಂಡ

*

ಹುಡುಗ-ಹುಡುಗಿ ವಯೋ ಸಹಜ ಪ್ರೇಮಕ್ಕೆ ಅಡ್ಡಿ ಮಾಡುವುದು ಸರಿಯಲ್ಲ. ಮುಸ್ಲಿಂ ಹುಡುಗಿ, ಜೈನ ಹುಡುಗ ಹಿಂದೆ ಮದುವೆಯಾದರು. ಆಗೆಲ್ಲ ಇಂತಹದು ಇರಲಿಲ್ಲ.

-ಬಸ್ತಿ ವಾಮನ ಶೆಣೈ, ಗೌಡ ಸಾರಸ್ವತ ಸಮಾಜದ ಪ್ರಮುಖ

*

ಬೇರೆಯವರ ಮನೆಯ ಹೆಣ್ಣು ಮಕ್ಕಳಿಗೆ ಹೊಡೆಯುವುದು ಸರಿಯಲ್ಲ. ನೈಜ ಪ್ರೀತಿಯಿಂದ ಮದುವೆಯಾಗ್ತಾನೆ ಎಂದರೆ ಮುಸ್ಲಿಮನಿಗೆ ನಾವು ತೊಂದರೆ ಕೊಡುವುದಿಲ್ಲ. ಆದರೆ ನಮ್ಮ ಧರ್ಮದ ಹುಡುಗಿಯರನ್ನು ವಂಚಿಸುವ ಯುವಕರಿಗೆ ಪೆಟ್ಟು ಕೊಟ್ಟ ಘಟನೆ ನಡೆದಿರಬಹುದು.

-ಶರಣ್ ಪಂಪ್ ವೆಲ್, ಬಜರಂಗದಳ ದಕ್ಷಿಣ ಪ್ರಾಂತ್ಯ ಸಂಚಾಲಕ

*

ಯುವಕ ಯುವತಿಯರಿಗೆ ಅವರದ್ದೇ ಆದ ಜವಾಬ್ದಾರಿಗಳಿವೆ. ಅವರ ಹಕ್ಕನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಇಂಥ ಕೃತ್ಯಗಳಿಗೆ ಯಾರೂ ಬೆಂಬಲ ನೀಡುವುದಿಲ್ಲ.

-ದಯಾನಾಥ ಕೋಟ್ಯಾನ್, ಮೊಗವೀರ ಸಮಾಜದ ಪ್ರಮುಖ

*

ಹುಡುಗ-ಹುಡುಗಿಯರು ಜತೆಗೆ ಓಡಾಡಿದರೆ ಹೊಡೆಯುವುದು ತಪ್ಪು. ಆದರೆ, ಇದನ್ನು ಬಹಿರಂಗವಾಗಿ ಖಂಡಿಸಲು, ಹೋರಾಟ ಮಾಡಲು ಯಾರೂ ಧೈರ್ಯ ಮಾಡುತ್ತಿಲ್ಲ.

–ನವೀನಚಂದ್ರ ಸುವರ್ಣ, ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ

ಪ್ರತಿಕ್ರಿಯಿಸಿ (+)