ನಲವತ್ತರ ಹೊತ್ತು, ‘ಬಂಡಾಯ’ದ ಹೊಸ ಹುಟ್ಟು?

7
ಮಾರ್ಚ್ 11ರಂದು ಬೆಂಗಳೂರಿನಲ್ಲಿ ಸಮಾನ ಮನಸ್ಕರ ಸಮಾವೇಶ

ನಲವತ್ತರ ಹೊತ್ತು, ‘ಬಂಡಾಯ’ದ ಹೊಸ ಹುಟ್ಟು?

Published:
Updated:

ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯಗಳು ಹಾಗೂ ಕೆಳಸ್ತರದ ಜನರಿಗೆ ಧ್ವನಿಯಾಗುವ ಉದ್ದೇಶದ ‘ಬಂಡಾಯ ಸಂಘಟನೆ’ಯನ್ನು ಪುನಶ್ಚೇತನಗೊಳಿಸುವ ಚಟುವಟಿಕೆಗಳು ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಸಮಾನ ಮನಸ್ಕರ ಸಭೆ ಮಾರ್ಚ್ 11ರಂದು ನಡೆಯಲಿದೆ.

ಬಂಡಾಯ ಸಂಘಟನೆಗೆ ನಲವತ್ತು ವರ್ಷವಾಗುತ್ತಿರುವ ಸಂದರ್ಭದಲ್ಲಿ ಚದುರಿಹೋದ ಸಮಾನಮನಸ್ಕರನ್ನು ಒಟ್ಟಿಗೆ ತರುವ ಪ್ರಯತ್ನ ನಡೆಯುತ್ತಿದೆ. 1979ರ ಮಾರ್ಚ್ 11ರಂದು ಬಂಡಾಯ ಸಂಘಟನೆ ರೂಪ ತಾಳುವ ನಿರ್ಣಯ ಪ್ರಕಟವಾದಾಗ, ಅದರ ಪ್ರಧಾನ ಸಂಚಾಲಕರಾಗಿ ಬರಗೂರು ರಾಮಚಂದ್ರಪ್ಪ ಆಯ್ಕೆಯಾಗಿದ್ದರು.

ಈಗಲೂ ಅವರು ಸಂಘಟನೆಯ ಪುನಶ್ಚೇತನದ ನೇತೃತ್ವ ವಹಿಸಿದ್ದಾರೆ.

‘ಸಂಘಟನೆ ರೂಪುಗೊಂಡು ಇಪ್ಪತ್ತೈದು ವರ್ಷಗಳ ಕಾಲ ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡಿತು. ನಂತರ ಸಂಘಟನೆಯ ಸದಸ್ಯರು ಬೇರೆ ಬೇರೆ ದಿಕ್ಕುಗಳಲ್ಲಿ ಚದುರಿಹೋದರು. ಅವರನ್ನೆಲ್ಲ ಮತ್ತೆ ಒಂದೇ ವೇದಿಕೆಗೆ ತರುವ ಪ್ರಯತ್ನ ನಡೆಸುತ್ತಿದ್ದೇವೆ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಬರಗೂರು ಹೇಳಿದರು.

ಪ್ರಗತಿಪರರ ಒಗ್ಗೂಡಿಸುವಿಕೆ: ‘ಮಾರ್ಕ್ಸ್, ಗಾಂಧಿ, ಅಂಬೇಡ್ಕರ್‍ ಚಿಂತನೆಗಳಲ್ಲಿ ನಂಬಿಕೆಯುಳ್ಳವರು, ವಿವಿಧ ಸಿದ್ಧಾಂತಗಳನ್ನು ನೆಚ್ಚಿದವರು ಬಂಡಾಯ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಈಗ ಅವರೆಲ್ಲರ ನಡಿಗೆ ಬೇರೆ ಬೇರೆಯಾಗಿದೆ. ಅವರನ್ನೆಲ್ಲ ಒಗ್ಗೂಡಿಸುವುದು ಇಂದಿನ ಅಗತ್ಯ. ಪ್ರಗತಿಪರ ಮತ್ತು ಪ್ರಜಾಪ್ರಭುತ್ವ ನಿಲುವಿಗೆ ಬದ್ಧವಾದ ಎಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನ ನಡೆಸುತ್ತಿದ್ದೇವೆ’ ಎಂದರು.

ಮಾರ್ಚ್ 11ರ ಸಭೆಯನ್ನು ‘ಆತ್ಮಾವಲೋಕನದ ಸಭೆ’ ಎಂದು ಕರೆಯುವ ಅವರು, ಸಂಘಟನೆಯಲ್ಲಿ ಗುರ್ತಿಸಿಕೊಂಡಿದ್ದ ಎಲ್ಲ ಪ್ರಮುಖರನ್ನು ಒಟ್ಟುಗೂಡಿಸಿ ಸಂಘಟನೆಯ ಸ್ವರೂಪ-ಸಾಧ್ಯತೆಗಳ ಕುರಿತು ಚರ್ಚಿಸುವುದಾಗಿ ಹೇಳಿದರು.

‘ಬೆಂಗಳೂರಿನ ನಂತರ ಮೈಸೂರು, ಚಿತ್ರದುರ್ಗ, ಧಾರವಾಡ, ಬೆಳಗಾವಿ ಮುಂತಾದೆಡೆಗಳಲ್ಲಿ ವಲಯವಾರು ಸಮಾವೇಶ ನಡೆಸಲಾಗುವುದು. ಕಮ್ಮಟಗಳ ಮೂಲಕ ಯುವಜನರಲ್ಲಿ ಬಂಡಾಯ ಸಂಘಟನೆಯ ಕುರಿತು ಅರಿವು ಮೂಡಿಸಲು ಪ್ರಯತ್ನಿಸಲಾಗುವುದು. ಒಂದು ವರ್ಷ ಕಾಲ ನಡೆಯುವ ಈ ಕಾರ್ಯಕ್ರಮಗಳು ಸಂಘಟನೆಯ ಸ್ವರೂಪವನ್ನು ಹೆಚ್ಚು ಸ್ಪಷ್ಟಪಡಿಸಲಿವೆ’ ಎಂದು ಬರಗೂರು ತಿಳಿಸಿದರು.

ಬಂಡಾಯ ಹೆಚ್ಚು ಪ್ರಸ್ತುತ: ‘ಊಳಿಗಮಾನ್ಯ ಪದ್ಧತಿ ಹಾಗೂ ಜಾತೀಯತೆಗೆ ವಿರೋಧದ ಸ್ವರೂಪದಲ್ಲಿ ಬಂಡಾಯದ ಸಂಘಟನೆ ಆರಂಭವಾಯಿತು. ಈಗ ಧರ್ಮ, ಸಂಸ್ಕೃತಿ ಹೆಸರಿನಲ್ಲಿಯೂ ಜನರಲ್ಲಿ ಒಡಕು ಮೂಡಿಸುವ ಪ್ರಯತ್ನಗಳು ಹೆಚ್ಚುತ್ತಿವೆ. ಹೀಗಾಗಿ ಬಂಡಾಯ ಸಂಘಟನೆಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ’ ಎನ್ನುವುದು ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಕವಯಿತ್ರಿ ಸುಕನ್ಯಾ ಅಭಿಪ್ರಾಯ.

‘ಎಲ್ಲ ಚಳವಳಿಗಳೂ ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಬಂಡಾಯದ ಪುನರುತ್ಥಾನ ಅಗತ್ಯ. ಜನಸಾಮಾನ್ಯರು ಹಾಗೂ ದುರ್ಬಲರ ವಿರುದ್ಧದ ಶೋಷಣೆಯನ್ನು ಪ್ರತಿಭಟಿಸಲು ಸಮಾನ ಮನಸ್ಕರು ಒಗ್ಗೂಡಬೇಕಾಗಿದೆ’ ಎನ್ನುವುದು ಅವರ ಅನಿಸಿಕೆ.

ಕವಿ ಸುಬ್ಬು ಹೊಲೆಯಾರ್‌ ಕೂಡ ಸಂಘಟನೆಯನ್ನು ಮತ್ತೆ ಕ್ರಿಯಾಶೀಲಗೊಳಿಸುವ ಅಗತ್ಯವನ್ನು ಪ್ರತಿಪಾದಿಸುತ್ತಾರೆ. ಆದರೆ, ಬಂಡಾಯದ ಆಶಯಗಳು ಈಗಲೂ ಚಾಲ್ತಿಯಲ್ಲಿರುವುದನ್ನು ಅವರು ನೆನಪಿಸುತ್ತಾರೆ. ‘ಹೊಸ ತಲೆಮಾರಿನ ಬರಹಗಾರರ ಕೃತಿಗಳಲ್ಲಿ ಬಂಡಾಯದ ಆಶಯಗಳು ಪ್ರಖರವಾಗಿವೆ, ಪರಿಣಾಮಕಾರಿಯಾಗಿವೆ. ಆಶಯಗಳ ರೂಪದಲ್ಲಿ ಒಂದಾಗಿರುವ ಮನಸ್ಸುಗಳು ಸಂಘಟನೆಯ ರೂಪ ತಾಳುವುದು ಸ್ವಾಗತಾರ್ಹ’ ಎನ್ನುವ ಅನಿಸಿಕೆ ಅವರದು.

ಯುವಜನರ ಕೈಗೆ ಸಂಘಟನೆ: ಮುಂದಿನ ದಿನಗಳಲ್ಲಿ ಬಂಡಾಯ ಸಂಘಟನೆಯ ನೇತೃತ್ವವನ್ನು ಯುವಜನರಿಗೆ ವಹಿಸುವ ಚಿಂತನೆ ಬರಗೂರರದು. ‘ಯುವ ತಲೆಮಾರಿಗೆ ಬಂಡಾಯದ ಆಶಯವನ್ನು ಬಿತ್ತುವ ಕೆಲಸವನ್ನು ನಾವು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಯುವ ಮನಸ್ಸುಗಳೇ ಸಂಘಟನೆಯನ್ನು ಮುನ್ನಡೆಸುತ್ತವೆ’ ಎನ್ನುತ್ತಾರೆ.

ಸುಕನ್ಯಾ ಅವರು ಕೂಡ ಹೊಸ ತಲೆಮಾರಿನಲ್ಲಿ ಬಂಡಾಯದ ಆಶಯಗಳನ್ನು ಜಾಗೃತಗೊಳಿಸುವ ಅಗತ್ಯವನ್ನು ಒತ್ತಿಹೇಳುತ್ತಾರೆ. ‘ಈವರೆಗೆ ಮೌನ ಸಂವಾದದ ಮೂಲಕ ಚಾಲ್ತಿಯಲ್ಲಿದ್ದ ಆಶಯಗಳು ಸಂಘಟನೆಯ ಸ್ವರೂಪ ತಾಳುವ ಸಮಯ ಸನ್ನಿಹಿತವಾಗಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾದ ಶಕ್ತಿಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಸಂಘಟನೆಯ ಮೂಲಕ ಇಂದಿನ ತರುಣ ತರುಣಿಯರು ಯಶಸ್ವಿಯಾಗಿ ನಿಭಾಯಿಸುತ್ತಾರೆ’ ಎನ್ನುವ ವಿಶ್ವಾಸ ಅವರದು.

ನಾಲ್ಕು ದಶಕಗಳ ಇತಿಹಾಸ: ಚಿಂತಕ ಡಿ.ಆರ್‍. ನಾಗರಾಜ್ ನೀಡಿದ ‘ಖಡ್ಗವಾಗಲಿ ಕಾವ್ಯ; ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎನ್ನುವ ಘೋಷ ವಾಕ್ಯದ ಬಂಡಾಯ ಸಂಘಟನೆ ಶುರುವಾದುದು 1979ರಲ್ಲಿ. ಸಂಘಟನೆಯ ರೂಪ ತಾಳುವ ನಿರ್ಧಾರವನ್ನು ಆ ವರ್ಷದ ಮಾರ್ಚ್ 10, 11ರಂದು ಬೆಂಗಳೂರಿನ ದೇವಾಂಗ ಹಾಸ್ಟೆಲ್‍ನಲ್ಲಿ ಸೇರಿದ್ದ ಸಮಾನ ಮನಸ್ಕರ ಸಮಾವೇಶ ಕೈಗೊಂಡಿತ್ತು. ಸಾಮಾಜಿಕ ತಾರತಮ್ಯಗಳ ವಿರುದ್ಧ ಗಟ್ಟಿ ಧ್ವನಿ ಎತ್ತುತ್ತಿದ್ದ ಬಂಡಾಯದ ಕಾರ್ಯಕರ್ತರು, ತಮ್ಮ ಸಂಘಟನೆಯ ಆಶಯಗಳನ್ನು ಸಾಹಿತ್ಯ ಪಂಥವನ್ನಾಗಿಯೂ ರೂಪಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry