ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ನೀತಿ ಅಪಾಯಕರ: ಅರುಂಧತಿ ನಾಗ್

Last Updated 8 ಫೆಬ್ರುವರಿ 2018, 20:47 IST
ಅಕ್ಷರ ಗಾತ್ರ

ಪ್ರಜಾವಾಣಿ ಕೇಳಿದ ಐದು ಪ್ರಶ್ನೆಗಳು

* ಆರ್ಥಿಕ ನೀತಿ, ಧಾರ್ಮಿಕ ನೀತಿ, ಸಾಮಾಜಿಕ ನೀತಿಗಳನ್ನು ಚುನಾವಣೆ ಸಂದರ್ಭದಲ್ಲಿ ನೋಡುತ್ತಿದ್ದೇವೆ. ಸಾಂಸ್ಕೃತಿಕ ನೀತಿ ಎನ್ನುವುದೊಂದು ಇದೆಯೇ? ಇರಬೇಕೇ?
* ಕರ್ನಾಟಕದಲ್ಲಿರುವ ರಾಜಕೀಯ ಪಕ್ಷಗಳಿಗೆ ಸಾಂಸ್ಕೃತಿಕವಾಗಿ ಒಂದು ಸ್ಪಷ್ಟ ನಿಲುವು ಇದೆ ಎಂದು ನಿಮಗನ್ನಿಸುತ್ತಿದೆಯೇ?
* ಕರ್ನಾಟಕದ ಸಂದರ್ಭದಲ್ಲಿ ಸಂಸ್ಕೃತಿ- ಭಾಷೆಗೆ ಸಂಬಂಧಿಸಿದಂತೆ ಸ್ಪರ್ಧಿಗಳು/ ರಾಜಕೀಯ ಪಕ್ಷಗಳಿಂದ ಮತದಾರರು ಯಾವ ವಿಷಯಗಳನ್ನು ನಿರೀಕ್ಷಿಸಬೇಕು?
* ಸಾಂಸ್ಕೃತಿಕ ನೀತಿ ಎನ್ನುವುದು ಪ್ರಾದೇಶಿಕವಾಗಿ ಮತ್ತು ರಾಷ್ಟ್ರೀಯವಾಗಿ ಬೇರೆ ಬೇರೆ ಇರಬೇಕೇ? ಒಂದೇ ಆಗಿರಬೇಕೇ?
* ಸಾಂಸ್ಕೃತಿಕ ನೀತಿಯನ್ನು ನಿರ್ಧರಿಸುವುದು ಹೇಗೆ? ಯಾರು? ಇದರಲ್ಲಿ ಜನರ ಪಾತ್ರವೆಷ್ಟು? ರಾಜಕೀಯ ಪಕ್ಷಗಳ ಪಾತ್ರವೆಷ್ಟು?

****

ಸಾಂಸ್ಕೃತಿಕ ನೀತಿಯನ್ನು ರೂಪಿಸುವ ಚಿಂತನೆ ತುಂಬಾ ಡೇಂಜರಸ್‍. ನಮ್ಮದು ಬಹುತ್ವದ ದೇಶ. ಇಂಥಲ್ಲಿ ನಿರ್ದಿಷ್ಟವಾದ ಕಲ್ಚರಲ್‍ ಪಾಲಿಸಿ ರೂಪಿಸಿಬಿಟ್ಟರೆ ತುಂಬಾ ಅಪಾಯಕರ. ಯಾರಿಗಾಗಿ, ಯಾರ ದೃಷ್ಟಿಯಿಂದ ಈ ನೀತಿ ರೂಪಿಸುತ್ತಿದ್ದೇವೆ ಎನ್ನುವ ಎಚ್ಚರ ಬೇಕು. ಸಂವಿಧಾನದ ಆಶಯಗಳಿಗೆ ತೊಡಕಾಗಬಾರದು.

ಧರ್ಮ, ಸಂಸ್ಕೃತಿ ಎಲ್ಲವೂ ಸೇರಿಕೊಂಡಿರುವ ಭಾರತದ ಜೀವನವಿಧಾನದಲ್ಲಿ ನಿರ್ದಿಷ್ಟವಾದ ಕೇಂದ್ರ ಎನ್ನುವುದಿಲ್ಲ. ಒಂದು ಸಂಗತಿ ಎನ್ನು ವುದಿಲ್ಲ. ಸಂಸ್ಕೃತಿ ಕೂಡ ಏಕಮುಖವಾದುದಲ್ಲ. ಇಂಥ ಸಂದರ್ಭದಲ್ಲಿ ಪಾಲಿಸಿ ರೂಪಿಸುವ ಚಿಂತನೆಯೇ ಸರಿಯಾದುದಲ್ಲ. ಅದನ್ನು ಸೆನ್ಸಾರ್‍ ಅನ್ನಿ ಅಥವಾ ನೀತಿಸಂಹಿತೆ ಅನ್ನಿ, ಅದರ ಪರಿಣಾಮ ಅಪಾಯಕರ. ಸಾಂಸ್ಕೃತಿಕ ನೀತಿ ಸರ್ವಸಮ್ಮತ ಆಗಿರುವುದು ಸಾಧ್ಯವಿಲ್ಲ.

ಒಂದು ನೀತಿ ರೂಪಿಸುವುದೇ ಆದಲ್ಲಿ ಅದು ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುವಂತೆ ಇರಬೇಕು. ಪುಟ್ಟ ಭಾಷೆ, ಅತಿ ಸಣ್ಣ ಕಲಾಪ್ರಕಾರ ಹಾಗೂ ಆಚರಣೆಗೆ ಅವಕಾಶ ಇರಬೇಕು. ಆದರೆ, ಭಾರತದಂತಹ ದೇಶದಲ್ಲಿ ಇದು ಸಾಧ್ಯವೇ? ಹೀಗೆಯೇ ಆಗಬೇಕು, ಈ ದಿಕ್ಕಿನಲ್ಲಿಯೇ ಸಾಗಬೇಕು ಎನ್ನುವುದನ್ನು ಹೇಳುವುದು ಹೇಗೆ? ನಮ್ಮಲ್ಲಿ ಕಲೆ ಮತ್ತು ಧರ್ಮದ ನಡುವೆ ಅತಿ ತೆಳುವಾದ ಗೆರೆಯಿದೆ. ನಮ್ಮ ಎಲ್ಲ ಕಲೆಗಳೂ ಹುಟ್ಟಿರುವುದು ಧಾರ್ಮಿಕ ಆಚರಣೆಗಳಿಂದ. ಗ್ರೀಸ್‍-ರೋಮ್‍ ಸಂಸ್ಕೃತಿಗಳು ಕೂಡ ಧರ್ಮದಿಂದ ಹೊರತಾದುವಲ್ಲ. ಕಲೆ ಮತ್ತು ಧಾರ್ಮಿಕತೆಯನ್ನು ಬೇರೆ ಮಾಡುವುದು ಕಷ್ಟ.

ಧರ್ಮವನ್ನೇ ಭಾರತೀಯ ಸಂಸ್ಕೃತಿ ಎಂದು ಆರೋಪಿಸುವುದು, ಪ್ರತಿಪಾದಿಸುವುದು ತಪ್ಪು. ಎಷ್ಟೋ ನಾಗರಿಕತೆಗಳು, ಪ್ರಭಾವಗಳು ಸೇರಿಕೊಂಡು ಒಂದು ಸಂಸ್ಕೃತಿ ರೂಪುಗೊಳ್ಳುತ್ತದೆ. ದಾಳಿಗಳು ಕೂಡ ಸಂಸ್ಕೃತಿಯನ್ನು ಪ್ರಭಾವಿಸುತ್ತವೆ. ಇದನ್ನೆಲ್ಲ ಒಡೆದು ನೋಡುವುದು, ಪ್ರತ್ಯೇಕಿಸುವುದು ಸರಿಯಲ್ಲ.

ನಮ್ಮ ಸಂಸ್ಕೃತಿ ಚೆನ್ನಾಗಿಯೇ ಇದೆ. ರಾಜಕೀಯ ಪ್ರವೇಶ ಆಗುತ್ತಿರುವುದೇ ತೊಂದರೆ. ಭಾಷೆ ಪ್ರತಿ ಹತ್ತು ಕಿಲೊ ಮೀಟರ್‍ಗೆ ಬದಲಾಗುತ್ತಾ ಹೋಗುತ್ತದೆ. ಹೀಗಿರುವಾಗ ಭಾಷೆಗೆ ಸಂಬಂಧಿಸಿದಂತೆ ನಿರ್ಣಯಗಳನ್ನು ಕೈಗೊಳ್ಳುವವರು ಯಾರು? ನಿಯಂತ್ರಿಸುವವರು ಯಾರು? ಇಂಥ ಸೂಕ್ಷ್ಮ ಸಂಗತಿಗಳಲ್ಲಿ ರಾಜಕಾರಣ ಪ್ರವೇಶ ಮಾಡಬಾರದು. ಇರುವುದನ್ನು ಉಳಿಸಿಕೊಂಡು ಹೋಗಬೇಕು, ಅಷ್ಟೆ. ಸಾಂಸ್ಕೃತಿಕ ಸಂಗತಿಗಳನ್ನು ಯಾರಾದರೂ ನಿರ್ಧರಿಸುವ ಅಗತ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ.

ನಾನು ಹುಟ್ಟಿದ್ದು ದೆಹಲಿಯಲ್ಲಿ, ಬೆಳೆದಿದ್ದು ಮುಂಬೈನಲ್ಲಿ. ಇಲ್ಲಿಗೆ ಬಂದು ಕನ್ನಡ ಕಲಿತೆ. ಮಾಡುತ್ತಿರುವುದು ಕನ್ನಡ ನಾಟಕ. ಗಾಳಿಯ ರೀತಿ ಹೋಗುತ್ತಿರಬೇಕು, ನೀರಿನ ರೀತಿ ನಮ್ಮ ಬದುಕಿರಬೇಕು. ನಾವು ರಂಗಭೂಮಿಯವರು- ಜರ್ಮನಿಯಲ್ಲಿ ಎರಡನೇ ವಿಶ್ವಯುದ್ಧಕ್ಕೆ ಮುನ್ನ ಬರೆದ ನಾಟಕವನ್ನು ಮಾಡುತ್ತೇವೆ. ಎರಡು ಸಾವಿರ ವರ್ಷಗಳ ಹಿಂದಿನ ಭಾಸನ ನಾಟಕವನ್ನೂ ಪ್ರದರ್ಶಿಸುತ್ತೇವೆ. ಇದ್ಯಾವುದೂ ನಮಗೆ ತೊಂದರೆ ಎನ್ನಿಸದು. ವರ್ತಮಾನದ ರಂಗಭೂಮಿಯಲ್ಲಿ ಭಾಷೆ, ಧರ್ಮ ಮಹತ್ವ ವಹಿಸುವುದಿಲ್ಲ. ಈ ಸ್ವಾತಂತ್ರ್ಯ ಕಲೆ- ಸಂಸ್ಕೃತಿಗೆ ಅಗತ್ಯ.

ನನ್ನ ಪ್ರಕಾರ ಯಾವುದೇ ಕಲೆ ಸ್ವಾತಂತ್ರ್ಯಕ್ಕಾಗಿ ತುಡಿಯುತ್ತಿರುತ್ತದೆ. ನಮಗೆ ಬೇಕಾದುದನ್ನು ಆರಿಸಿಕೊಂಡು, ನಮ್ಮ ಪ್ರೇಕ್ಷಕರಿಗೆ ಬೇಕಾದುದನ್ನು ಪ್ರಸ್ತುತಪಡಿಸುತ್ತೇವೆ. ಪ್ರೇಕ್ಷಕರಿಗೆ ಇಷ್ಟವಾಗದಿದ್ದರೆ ಎರಡು ಪ್ರದರ್ಶನಗಳಲ್ಲಿ ಕೊನೆಗೊಳ್ಳುತ್ತದೆ. ಮತ್ತೆ ವಿಮರ್ಶೆ ಶುರುವಾಗುತ್ತದೆ.

ಸಾಂಸ್ಕೃತಿಕ ನೀತಿ ರೂಪಿಸುವುದರ ಬಗ್ಗೆ ನನಗೆ ವಿರೋಧವಿದೆ. ನಾವು ಒಂದು ನೀತಿಸಂಹಿತೆ ರೂಪಿಸುತ್ತೇವೆ, ಅದರಡಿಯಲ್ಲಿ ಎಲ್ಲ ಚಟುವಟಿಕೆಗಳು ನಡೆಯಬೇಕು ಎನ್ನುವುದೇ ಸರಿಯಾದುದಲ್ಲ.

ಸರ್ಕಾರಕ್ಕೆ ಇರಬೇಕಾದುದು ಸಾಂಸ್ಕೃತಿಕ ದೃಷ್ಟಿಕೋನವಲ್ಲ, ಅಭಿವೃದ್ಧಿಯ ಕುರಿತ ದೃಷ್ಟಿ ಕೋನ. ಸರ್ಕಾರ ಇರುವುದು ಏತಕ್ಕೆ? ಅದು ಅಭಿವೃದ‍್ಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ನಾಟಕವನ್ನೂ ನಾವೇ ಮಾಡುತ್ತೇವೆ ಎನ್ನುವಂತಿಲ್ಲ. ಅದನ್ನು ಕಲಾವಿದರಿಗೆ ಬಿಟ್ಟುಬಿಡಬೇಕು. ಸರ್ಕಾರ ಮೂಲ ಸೌಕರ್ಯ ಒದಗಿಸಬೇಕು. ಕಲಾವಿದರನ್ನು ಉತ್ತೇಜಿಸುವುದು, ಸೃಜನಶೀಲತೆ ರಕ್ಷಿಸು ವುದು ಸಮಾಜದ ಜವಾಬ್ದಾರಿ. ಸೃಜನಶೀಲ ಚಟುವಟಿಕೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಿದರಷ್ಟೇ ಸಾಕು.

-ಅರುಂಧತಿ ನಾಗ್, ರಂಗಕರ್ಮಿ

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT