ಮಂಗಳವಾರ, ಡಿಸೆಂಬರ್ 10, 2019
21 °C

ಮಿತ್ರಕೂಟ ರಚನೆಗೆ ಸೋನಿಯಾ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿತ್ರಕೂಟ ರಚನೆಗೆ ಸೋನಿಯಾ ಒಲವು

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ‘ಸಮಾನ ಮನಸ್ಕ’ ರಾಜಕೀಯ ಪಕ್ಷಗಳ ಮೈತ್ರಿಕೂಟ ರಚನೆಯ ಅಗತ್ಯ ಇದೆ ಎಂದು ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಹೇಳಿದ್ದಾರೆ.  ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಪುನಶ್ಚೇತನ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ ಎಂದು ಹೇಳಿದ್ದಾರೆ. ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗಮನಾರ್ಹ ಸಾಧನೆ, ರಾಜಸ್ಥಾನದಲ್ಲಿ ನಡೆದ ಉಪಚುನಾವಣೆಗಳ ಭಾರಿ ಗೆಲುವುಗಳನ್ನು ಉಲ್ಲೇಖಿಸಿ ಸೋನಿಯಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುದನ್ನು ಇದು ಸೂಚಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶವು ಕಾಂಗ್ರೆಸ್‌ನ ಪುನಶ್ಚೇತನವನ್ನು ಮತ್ತಷ್ಟು ದೃಢಪಡಿಸಲಿದೆ’ ಎಂದು ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಸಜ್ಜಾಗಲು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸೃಷ್ಟಿಯಾಗಿರುವ ಅಸಮಾಧಾನವನ್ನು ಪಕ್ಷದ ಬೆಂಬಲವಾಗಿ ಪರಿ

ವರ್ತಿಸಲು ಸೋನಿಯಾ ಅವರು ಸೂಚಿಸಿದ್ದಾರೆ.

ಮೈತ್ರಿಕೂಟ ನಾಯಕತ್ವಕ್ಕೆ ಪೈಪೋಟಿ

ವಿರೋಧ ಪಕ್ಷಗಳ ಮೈತ್ರಿಕೂಟದ ನೇತೃತ್ವ ವಹಿಸಿಕೊಳ್ಳಲು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಮುಂದಾಗಿರುವ ಸಂದರ್ಭದಲ್ಲಿಯೇ ಸಮಾನಮನಸ್ಕ ಪಕ್ಷಗಳನ್ನು ಒಂದುಗೂಡಿಸಲು ಸೋನಿಯಾ ಮುಂದಾಗಿದ್ದಾರೆ. ಗಣರಾಜ್ಯೋತ್ಸವ ದಿನ ಮುಂಬೈಯಲ್ಲಿ ನಡೆದ ‘ಸಂವಿಧಾನ ಉಳಿಸಿ’ ರ‍್ಯಾಲಿಯ ನೇತೃತ್ವವನ್ನು ಪವಾರ್‌ ವಹಿಸಿಕೊಂಡಿದ್ದರು. ಕೇಂದ್ರ ಸರ್ಕಾರದ ವಿರುದ್ಧ ನಡೆದ ಈ ಜಾಥಾದಲ್ಲಿ ವಿರೋಧ ಪಕ್ಷಗಳ ವಿವಿಧ ಮುಖಂಡರು ಭಾಗಿಯಾಗಿದ್ದರು.

ವಿರೋಧ ಪಕ್ಷಗಳ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳುವ ಹಲವು ಪ್ರಯತ್ನಗಳನ್ನು ಮಮತಾ ಅವರೂ ಮಾಡಿದ್ದಾರೆ.

ಈ ಮಧ್ಯೆ, ವಿರೋಧ ಪಕ್ಷಗಳ ಗುಂಪಿನ ನಾಯಕತ್ವವನ್ನು ಮರಳಿ ಪಡೆಯಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಅದರ ಭಾಗವಾಗಿಯೇ ಈ ತಿಂಗಳ ಒಂದರಂದು ಸೋನಿಯಾ ಅಧ್ಯಕ್ಷತೆಯಲ್ಲಿ ವಿರೋಧ ಪಕ್ಷಗಳ ಸಭೆ ಕರೆಯಲಾಗಿತ್ತು. 17 ವಿರೋಧ ಪಕ್ಷಗಳ ಮುಖಂಡರು ಅದರಲ್ಲಿ ಭಾಗಿಯಾಗಿದ್ದರು.

‘ಈಗ ರಾಹುಲ್‌ ನನ್ನ ಬಾಸ್‌’

ರಾಹುಲ್‌ ಗಾಂಧಿ ಈಗ ತಮಗೂ ಬಾಸ್‌ (ಮುಖ್ಯಸ್ಥ). ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು 19 ವರ್ಷ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಹೇಳಿದರು. ರಾಹುಲ್‌ ನೇತೃತ್ವದಲ್ಲಿ ಪಕ್ಷದ ಅವಕಾಶಗಳ ಪುನಶ್ಚೇತನಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಸೋನಿಯಾ ಕೋರಿದರು.

ತಾವು ಅಧ್ಯಕ್ಷರಾಗಿದ್ದಾಗ ತೋರುತ್ತಿದ್ದ ಅದೇ ನಿಷ್ಠೆ, ಬದ್ಧತೆ ಮತ್ತು ಹುರುಪಿನಿಂದ ಕೆಲಸ ಮಾಡುವಂತೆ ಅವರು ವಿನಂತಿಸಿದರು.

ಸಂಘಟನಾತ್ಮಕ ವಿಚಾರಗಳನ್ನು ಚರ್ಚಿಸಲು ಪಕ್ಷದ ಮುಖಂಡರು ಕೆಲವೊಮ್ಮೆ ಸೋನಿಯಾ ಅವರನ್ನು ಭೇಟಿಯಾಗುತ್ತಿದ್ದಾರೆ. ಹಾಗಾಗಿ ಸೋನಿಯಾ ಈ ಸಂದೇಶ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಕಳೆದ ಡಿಸೆಂಬರ್‌ 16ರಂದು ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಅಧಿಕಾರ ವಹಿಸಿಕೊಂಡಿದ್ದಾರೆ.

* ಈಗಿನ ಕೇಂದ್ರ ಸರ್ಕಾರವು ಹಿಂದಿನ ಯುಪಿಎ ಸರ್ಕಾರದ ಯೋಜನೆಗಳನ್ನು ಬೇರೆ ಹೆಸರುಗಳಲ್ಲಿ ಜಾರಿಗೆ ತರುತ್ತಿದೆ. ಈಗಿನದ್ದು ಗರಿಷ್ಠ ಪ್ರಚಾರ, ಕನಿಷ್ಠ ಸರ್ಕಾರದಂತೆ ಕಾಣಿಸುತ್ತಿದೆ

-ಸೋನಿಯಾ ಗಾಂಧಿ, ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ

ಪ್ರತಿಕ್ರಿಯಿಸಿ (+)