ಬುಧವಾರ, ಡಿಸೆಂಬರ್ 11, 2019
26 °C

ರಾಜಾಜಿನಗರ: ಮಧುಮೇಹ ಕೇಂದ್ರ ಸೇವೆಗೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಾಜಿನಗರ: ಮಧುಮೇಹ ಕೇಂದ್ರ ಸೇವೆಗೆ ಸಜ್ಜು

ಬೆಂಗಳೂರು: ಮಧುಮೇಹ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಲು ರಾಜಾಜಿನಗರದ ಹಳೆ ಪೊಲೀಸ್‌ ಠಾಣೆ ವೃತ್ತದ ಬಳಿ ‘ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಮಧುಮೇಹ ಚಿಕಿತ್ಸಾ ಕೇಂದ್ರ’ ತಲೆ ಎತ್ತಿದೆ.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಆರಂಭಿಸಿರುವ ಕೇಂದ್ರವನ್ನು ಪೀಣ್ಯ ರೋಟರಿ ಸಂಸ್ಥೆ ನಿರ್ವಹಿಸಲಿದೆ. ಬೇರೆಡೆಗೆ ಹೋಲಿಸಿದರೆ ತಪಾಸಣೆ ಮತ್ತು ಚಿಕಿತ್ಸಾ ಶುಲ್ಕ ಶೇ 60ರಿಂದ 70ರಷ್ಟು ಕಡಿಮೆ ಇರಲಿದೆ ಎಂದು ಶಾಸಕ ಎಸ್‌.ಸುರೇಶ್‌ಕುಮಾರ್‌ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಒಂದೇ ಸೂರಿನಡಿ ಆರೋಗ್ಯ ಕ್ಷೇತ್ರದ 3ಡಿ ಯೋಜನೆಗಳನ್ನು (ಡಯಾಲಿಸಿಸ್‌, ಡಯಾಗ್ನಸ್ಟಿಕ್‌, ಡಯಾಬಿಟಿಸ್‌ ಕೇಂದ್ರ) ಹೊಂದಬೇಕೆಂಬ ನಮ್ಮ ಸಂಕಲ್ಪ ಈಡೇರಿದೆ’ ಎಂದರು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 5 ವರ್ಷಗಳ ಹಿಂದೆ ನಿರ್ಮಿಸಿರುವ 11 ಹಾಸಿಗೆಗಳ ಡಯಾಲಿಸಿಸ್ ಕೇಂದ್ರವನ್ನೂ ಪೀಣ್ಯ ರೋಟರಿ ಸಂಸ್ಥೆ ನಿರ್ವಹಿಸುತ್ತಿದೆ. ಇದರಲ್ಲಿ ನಿತ್ಯ 22 ರೋಗಿಗಳು ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದಾರೆ. ಇದುವರೆಗೆ 28,896 ರೋಗಿಗಳಿಗೆ ಸೌಲಭ್ಯ ಒದಗಿಸಲಾಗಿದೆ. ಬಡವರಿಗೆ ಡಯಾಲಿಸಿಸ್‌ ಉಚಿತ. ಆರ್ಥಿಕ ಚೈತನ್ಯ ಇರುವವರಿಂದ ₹500 ಶುಲ್ಕ ಪಡೆಯಲಾಗುತ್ತಿದೆ ಎಂದರು.

ಡಯಾಗ್ನಸ್ಟಿಕ್‌ ಸೆಂಟರ್‌ ಅನ್ನು ಬಸವೇಶ್ವರನಗರ ರೋಟರಿ ಸಂಸ್ಥೆ ನಿರ್ವಹಿಸುತ್ತಿದೆ. ಇದರಲ್ಲಿ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಎಕ್ಸ್ ರೇ ಹಾಗೂ ಸ್ಕ್ಯಾನಿಂಗ್‌ ಪರೀಕ್ಷೆ ಸೌಲಭ್ಯ ಇದೆ. ಶೇ 50ರಷ್ಟು ಕಡಿಮೆ ಶುಲ್ಕ ಪಡೆದು ಸೇವೆ ಒದಗಿಸಲಾಗುತ್ತಿದೆ. ಮಧುಮೇಹ ಕೇಂದ್ರದಲ್ಲಿ ವರ್ಷಕ್ಕೆ 30,000 ಜನರಿಗೆ ಸೇವೆ ನೀಡುವ ಗುರಿ ಇದೆ ಎಂದರು.

ಮಧುಮೇಹ ಕೇಂದ್ರದ ನಿರ್ದೇಶಕ ಬದರಿನಾಥ್‌, ‘ಜರ್ಮನ್‌ ತಂತ್ರಜ್ಞಾನದ ಬಯೋ ಕೆಮಿಸ್ಟ್ರಿ ಅನಲೈಸರ್‌ ರಕ್ತ ತಪಾಸಣಾ ಉಪಕರಣ ಖರೀದಿ

ಸಲಾಗಿದೆ. ಇದರ ಬೆಲೆ ₹38 ಲಕ್ಷ. ಒಂದು ಗಂಟೆಯಲ್ಲಿ 640 ಮಂದಿಯ ರಕ್ತದ 28 ಬಗೆಯ ಪರೀಕ್ಷೆ ವರದಿ ಸಿಗುತ್ತದೆ’ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಇದೇ 9ರಂದು ಬೆಳಿಗ್ಗೆ 8 ಗಂಟೆಗೆ ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಬಿ.ಎಸ್‌.ಯಡಿಯೂರಪ್ಪ, ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌, ಮೇಯರ್‌ ಆರ್‌.ಸಂಪತ್‌ರಾಜ್‌, ಪಾಲಿಕೆ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.

ಅಂಕಿ ಅಂಶ

₹2.25 ಕೋಟಿ

ಮಧುಮೇಹ ಕೇಂದ್ರಕ್ಕೆ ವಿನಿಯೋಗಿಸಿದ ಅನುದಾನ

₹1.25 ಕೋಟಿ

ಶಾಸಕರ ಸ್ಥಳೀಯ ಕ್ಷೇತ್ರ ಅಭಿವೃದ್ಧಿ ನಿಧಿ

₹1 ಕೋಟಿ

ಕೇಂದ್ರ ಸರ್ಕಾರದ ಅನುದಾನ

ಪ್ರತಿಕ್ರಿಯಿಸಿ (+)