‘ಜೈ ಶ್ರೀ ರಾಂ’ ಎನ್ನುವಂತೆ ಬಲವಂತ: ಕಪಾಳಕ್ಕೆ ಹೊಡೆತ

7
ಮುಸ್ಲಿಂ ವ್ಯಕ್ತಿ ಮೇಲೆ ಹಿಂದೂ ಯುವಕನ ಹಲ್ಲೆ ವಿಡಿಯೊ ವೈರಲ್

‘ಜೈ ಶ್ರೀ ರಾಂ’ ಎನ್ನುವಂತೆ ಬಲವಂತ: ಕಪಾಳಕ್ಕೆ ಹೊಡೆತ

Published:
Updated:

ಜೈಪುರ: ಇಲ್ಲಿನ ಹಿಂದೂ ಯುವಕನೊಬ್ಬ ಮುಸ್ಲಿಂ ವ್ಯಕ್ತಿಯೊಬ್ಬರ ಕಪಾಳಕ್ಕೆ ಹೊಡೆದು, ‘ಜೈ ಶ್ರೀ ರಾಂ’ ಎಂದು ಹೇಳುವಂತೆ ಒತ್ತಾಯಿಸುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂಬಂಧ ಇಲ್ಲಿನ ಅಬು ರೋಡ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

‘ಮೂರು ನಿಮಿಷದಷ್ಟಿರುವ ವಿಡಿಯೊವನ್ನು ಕಳೆದ ವಾರ ಚಿತ್ರಿಸಲಾಗಿದೆ. ಮಂಗಳವಾರವಷ್ಟೇ ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿನಯ್ ಕುಮಾರ್ (22) ಎಂಬಾತ ಮೊಹಮ್ಮದ್ ಸಲೀಂ (45) ಎಂಬುವರ ಕಪಾಳಕ್ಕೆ 25 ಬಾರಿ ಹೊಡೆಯುತ್ತಾನೆ. ಅದರ ಮಧ್ಯೆ ‘ಜೈ ಶ್ರೀ ರಾಂ’ ಎಂದು ಹೇಳುವಂತೆ ಸಲೀಂ ಅವರನ್ನು ಒತ್ತಾಯಿಸುತ್ತಾನೆ. ಆದರೆ ಸಲೀಂ ‘ದೇವರು ಎಲ್ಲರಗಿಂತ ದೊಡ್ಡವನು’ ಎಂದು ಹೇಳುವುದು ವಿಡಿಯೊದಲ್ಲಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಇಲ್ಲಿನ ಕೆಲವು ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿ, ದೂರು ದಾಖಲಿಸಿದವು.

ದೂರು ದಾಖಲಾದ ವಿಷಯ ಬಹಿರಂಗವಾಗುತ್ತಿದ್ದಂತೆ ವಿನಯ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ಮತ್ತೊಂದು ವಿಡಿಯೊ ಪ್ರಕಟಿಸಿ ಕ್ಷಮೆ ಕೇಳಿದ್ದಾನೆ. ‘ಕುಡಿದ ಮತ್ತಿನಲ್ಲಿ ನಾನು ಹಾಗೆ ಮಾಡಿದ್ದೇನೆ. ನಾನು ಮಾಡಿದ ಕೃತ್ಯದಿಂದ ನನಗೇ ನಾಚಿಕೆಯಾಗುತ್ತಿದೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಆತ ವಿಡಿಯೊದಲ್ಲಿ ಬೇಡಿ ಕೊಂಡಿದ್ದಾನೆ.

ಉದ್ದೇಶಪೂರ್ವಕವಾಗಿ ನೋವುಂಟು ಮಾಡಿದ, ದ್ವೇಷವನ್ನು ಹರಡಿದ, ಧಾರ್ಮಿಕ ಭಾವನೆಗೆ ಧಕ್ಕೆ ತಂದ ಮತ್ತು ಶಾಂತಿ ಕದಡಿದ ಆರೋಪಗಳ ಅಡಿ ವಿನಯ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ವಿನಯ್ ಮತ್ತು ಸಲೀಂ ಪರಸ್ಪರ ಪರಿಚಿತರು. ಹಲ್ಲೆ ನಡೆಯುವುದಕ್ಕಿಂತ ಮೊದಲು ಇಬ್ಬರೂ ಒಟ್ಟಿಗೇ ಕುಳಿತು ಮದ್ಯ ಕುಡಿದಿದ್ದರು. ಅದೇ ಮತ್ತಿನಲ್ಲಿ ಹಲ್ಲೆ ನಡೆದಿರುವ ಸಾಧ್ಯತೆ ಇದೆ’ ಎಂದು ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry