ಹಿರಿಯ ನಾಗರಿಕನಿಂದ ₹22.54 ಲಕ್ಷ ಪಡೆದು ವಂಚನೆ

7

ಹಿರಿಯ ನಾಗರಿಕನಿಂದ ₹22.54 ಲಕ್ಷ ಪಡೆದು ವಂಚನೆ

Published:
Updated:

ಬೆಂಗಳೂರು: ಉದ್ಯೋಗ ಕೊಡಿಸುವ ನೆಪದಲ್ಲಿ ಗೋಪಾಲ್ ಸುಬ್ರಮಣಿಯನ್ ಅಯ್ಯರ್(63) ಎಂಬುವರನ್ನು ಸಂಪರ್ಕಿಸಿದ ಆನ್‌ಲೈನ್ ವಂಚಕ, ₹22.54 ಲಕ್ಷ ಪಡೆದು ವಂಚಿಸಿದ್ದಾನೆ.

ಮತ್ತಿಕೆರೆ ನಿವಾಸಿಯಾದ ಗೋಪಾಲ್ ಅವರಿಗೆ ಇತ್ತೀಚೆಗೆ ಅಪರಿಚಿತ ವ್ಯಕ್ತಿಯೊಬ್ಬರಿಂದ ಇ–ಮೇಲ್ ಬಂದಿತ್ತು. ಕೆನಾಡದಲ್ಲಿ ಕೆಲಸ ಕೊಡಿಸುವುದಾಗಿ ಅದರಲ್ಲಿ ಬರೆಯಲಾಗಿತ್ತು. ಅದನ್ನು ನಂಬಿದ್ದ ಅವರು, ಪ್ರತಿಯಾಗಿ ಅದಕ್ಕೆ ಒಪ್ಪಿಗೆ ಸೂಚಿಸಿ ಇ–ಮೇಲ್ ಕಳುಹಿಸಿದ್ದರು.

ಅದಕ್ಕೆ ಉತ್ತರಿಸಿದ್ದ ವಂಚಕ ‘ಕೈ ತುಂಬ ಸಂಬಳ ಸಿಗುತ್ತದೆ. ಆದರೆ, ಕೆಲಸ ಪಡೆಯಲು ಮುಂಗಡವಾಗಿ ಶುಲ್ಕ ನೀಡಬೇಕು’ ಎಂದು ಹೇಳಿದ್ದ. ಅದನ್ನೂ ನಂಬಿದ್ದ ಗೋಪಾಲ್, ವಂಚಕನ ಬ್ಯಾಂಕಿನ ಖಾತೆಗೆ (00493080100) ಹಂತ ಹಂತವಾಗಿ‌ ಹಣ ಜಮೆ ಮಾಡಿದ್ದರು.

ಹಲವು ದಿನಗಳಾದರೂ ಕೆಲಸ ಕೊಡಿಸದೆ ಆತ ಸತಾಯಿಸುತ್ತಿದ್ದ. ಬಳಿಕ ಸಂಪರ್ಕ ಮಾಡುವುದನ್ನೇ ನಿಲ್ಲಿಸಿದ್ದ. ಆತನ ಇ–ಮೇಲ್‌ ಐಡಿಗೆ ಹಲವು ಬಾರಿ ಗೋಪಾಲ್, ಸಂದೇಶ ಕಳುಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆಗ ತಾನು ಮೋಸ ಹೋಗಿರುವುದಾಗಿ ಅರಿತ ಅವರು, ದೂರು ಕೊಟ್ಟಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದರು.

ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ₹ 1.73 ಲಕ್ಷ ವಂಚನೆ:

ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯ ಮಾತು ನಂಬಿದ ಚಾಮರಾಜನಗರದ ಕವಿತಾ (25), ₹1.73 ಲಕ್ಷ ಕಳೆದುಕೊಂಡಿದ್ದಾರೆ.

ಅವರಿಗೆ ಕೆಲ ದಿನಗಳ ಹಿಂದೆ ಕಾರ್ನಲ್ ವಾರಿಯರ್ ಎಂಬಾತ ಪರಿಚಯವಾಗಿದ್ದ. ಫೇಸ್‌ಬುಕ್‌ನಲ್ಲೇ ಅವರಿಬ್ಬರು ಸ್ನೇಹಿತರಾಗಿದ್ದರು. ಕೆಲ ದಿನಗಳ ಬಳಿಕ, ‘ನಿಮ್ಮ ಖಾತೆಗೆ ಹಣ ಹಾಕುತ್ತೇನೆ. ಅದನ್ನು ಪಡೆಯಲು ಮುಂಗಡವಾಗಿ ₹75 ಸಾವಿರ ಪಾವತಿಸಬೇಕು’ ಎಂದು ಕವಿತಾ ಅವರಿಗೆ ಹೇಳಿದ್ದ.

ಅದನ್ನು ನಂಬಿದ್ದ ಅವರು ಆತನ ಬ್ಯಾಂಕಿನ ಖಾತೆಗೆ ಹಣ ಜಮೆ ಮಾಡಿದ್ದರು. ಬಳಿಕ ಬೇರೆ ಬೇರೆ ಕಾರಣಗಳನ್ನು ನೀಡಿ ಹಂತ ಹಂತವಾಗಿ ಒಟ್ಟು ₹ 1.73 ಲಕ್ಷವನ್ನು ತನ್ನ ಬ್ಯಾಂಕಿನ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದಾನೆ.

ಮತ್ತೆ ಹಣ ಹಾಕುವಂತೆ ವಂಚಕ ಕೇಳಿದ್ದಾನೆ. ಅದಕ್ಕೆ ಒಪ್ಪದ ಕವಿತಾ, ಆತನೊಂದಿಗೆ ಜಗಳವಾಡಿದ್ದಾರೆ. ಬಳಿಕ ತಾನು ಮೋಸ ಹೋಗಿರುವುದನ್ನು ಅರಿತು ದೂರು ಕೊಟ್ಟಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry