ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ವರ್ಷದಿಂದ ಪೊಲೀಸರಿಗೆ ಬೇಕಿರುವ ಆರೋಪಿ

ಎಟಿಎಂ ಘಟಕದ ಭದ್ರತಾ ಸಿಬ್ಬಂದಿ ದರೋಡೆ ಮಾಡಿದ್ದ ಗ್ಯಾಂಗ್‌ನಲ್ಲಿದ್ದ
Last Updated 8 ಫೆಬ್ರುವರಿ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ಪಾಲಿಕೆ ಸದಸ್ಯೆ ರೇಖಾ ಅವರ ಪತಿ ಎಸ್‌. ಕದಿರೇಶ್‌ ಹತ್ಯೆಯಲ್ಲಿ ಕೈವಾಡವಿದೆ ಎನ್ನಲಾದ ಆರೋಪಿ ನವೀನ್‌ಗಾಗಿ 2013ರಿಂದಲೇ ಚಂದ್ರಾಲೇಔಟ್‌ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಆತ ಕೆಲ ಪ್ರಭಾವಿಗಳ ಸಹಾಯದಿಂದ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ.

‘ಅಣ್ಣನನ್ನು ನಮ್ಮದೇ ಏರಿಯಾದ (ಆಂಜನಪ್ಪ ಗಾರ್ಡನ್‌) ನವೀನ್‌, ವಿನಯ್‌ ಹಾಗೂ ಇನ್ನಿಬ್ಬರು ಯುವಕರು ಕೊಲೆ ಮಾಡಿದ್ದಾರೆ’ ಎಂದು ಸಹೋದರ ಸುರೇಶ್‌ ಅವರು ಕಾಟನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದೇ ಆಯಾಮದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ನವೀನ್‌ ಹಾಗೂ ಆತನ ಸಹಚರರ ಪೂರ್ವಾಪರ ಪತ್ತೆ ಹಚ್ಚುತ್ತಿದ್ದಾರೆ. ನವೀನ್‌ ಹಾಗೂ ಆತನ ಗ್ಯಾಂಗ್‌ನ ಒಂದೊಂದೇ ಕೃತ್ಯಗಳು ಬಯಲಾಗುತ್ತಿವೆ.

‘ಚಂದ್ರಾಲೇಔಟ್‌ ಠಾಣೆ ವ್ಯಾಪ್ತಿಯ ಗಂಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿರುವ ಎಸ್‌ಬಿಎಂ ಬ್ಯಾಂಕ್‌ ಎಟಿಎಂ ಘಟಕದಲ್ಲಿ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ದರೋಡೆ ನಡೆಸಿದ್ದ ಬಗ್ಗೆ 2013ರಲ್ಲಿ ಪ್ರಕರಣ ದಾಖಲಾಗಿತ್ತು. ಆ ಸಂಬಂಧ ಆರೋಪಿ ಮಂಜುನಾಥ್‌ ಎಂಬಾತನನ್ನು ಬಂಧಿಸಲಾಗಿತ್ತು. ಆತ, ಗಾರ್ಡನ್‌ ಶಿವಶಂಕರ್‌ ಹಾಗೂ ನವೀನ್‌ ಹೆಸರು ಬಾಯ್ಬಿಟ್ಟಿದ್ದ’ ಎಂದು ಪೊಲೀಸರು ತಿಳಿಸಿದರು.

‘ಬೈಕ್‌ನಲ್ಲಿ ಎಟಿಎಂ ಘಟಕದ ಬಳಿ ಹೋಗಿದ್ದ ಗ್ಯಾಂಗ್, ಮಾರಕಾಸ್ತ್ರ ತೋರಿಸಿ ಭದ್ರತಾ ಸಿಬ್ಬಂದಿಯನ್ನು ಬೆದರಿಸಿತ್ತು. ಜತೆಗೆ ₹13 ಸಾವಿರ ಹಣವನ್ನು ದೋಚಿ ಪರಾರಿಯಾಗಿತ್ತು. ಈ ವೇಳೆ ಸಿಬ್ಬಂದಿ ಮೇಲೆ ಹಲ್ಲೆಯನ್ನೂ ಮಾಡಿತ್ತು. ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳಲ್ಲಿ ಆರೋಪಿಗಳ ಮುಖಚಹರೆ ಸೆರೆಯಾಗಿತ್ತು. ಮಂಜುನಾಥ್‌ನಿಗೆ 7 ವರ್ಷ ಜೈಲು ಶಿಕ್ಷೆ ಆಗಿದೆ. ಆತ ಸದ್ಯ ಜೈಲಿನಲ್ಲಿದ್ದಾನೆ’ ಎಂದು ವಿವರಿಸಿದರು.

ಪ್ರಭಾವಿಗಳು, ಕೆಲ ಪೊಲೀಸರ ಸಹಕಾರ:

‘ಆರೋಪಿ ಮಂಜುನಾಥ್‌ನ ಅಣ್ಣನೇ ಗಾರ್ಡನ್‌ ಶಿವಶಂಕರ್. ಆತನ ಸಹಚರ ನವೀನ್. ಈ ಗ್ಯಾಂಗ್‌ಗೆ ಕೆಲ ಪ್ರಭಾವಿಗಳು ಹಾಗೂ ಕೆಲ ಪೊಲೀಸ್‌ ಸಿಬ್ಬಂದಿಯ ಸಹಕಾರವೂ ಇದೆ. ಅದೇ ಕಾರಣಕ್ಕೆ ಅವರು ಪದೇ ಪದೇ ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದು ಪೊಲೀಸರು ಅಸಮಾಧಾನ ಹೊರಹಾಕಿದರು.

‘ದಾಖಲೆ ಪ್ರಕಾರ ನವೀನ್‌ ಇಂದಿಗೂ ತಲೆಮರೆಸಿಕೊಂಡಿರುವ ಆರೋಪಿ. ಆದರೆ, ಆತ ಆಂಜನಪ್ಪ ಗಾರ್ಡನ್‌ ಹಾಗೂ ಬಕ್ಷಿ ಗಾರ್ಡನ್‌ನಲ್ಲಿ ರಾಜಾರೋಷವಾಗಿ ಓಡಾಡುವುದನ್ನು ನೋಡಿದ್ದೇವೆ. ಕೆಲವು ಬಾರಿ ಆತನನ್ನು ಬಂಧಿಸಲು ಹೋದಾಗ, ನಮ್ಮವರೇ ಆತನಿಗೆ ಮಾಹಿತಿ ನೀಡಿ ತಪ್ಪಿಸಿಕೊಂಡು ಹೋಗಲು ನೆರವಾಗಿದ್ದು ಗಮನಕ್ಕೆ ಬಂದಿದೆ. ಇನ್‌ಸ್ಪೆಕ್ಟರ್‌ಗಳು ಬದಲಾವಣೆ ಹಾಗೂ ಬೇರೆ ಪ್ರಕರಣಗಳ ತನಿಖೆಯಿಂದಾಗಿ, ಆತನ ಪತ್ತೆಗೆ ಚುರುಕಿನ ಕಾರ್ಯಾಚರಣೆಗಳು ನಡೆಯಲಿಲ್ಲ’ ಎಂದು ಹೇಳಿದರು.

‘ಆರೋಪಿ ಬಂಧನಕ್ಕೆ ನ್ಯಾಯಾಲಯವು ಹಲವು ಬಾರಿ ವಾರಂಟ್‌ ಹೊರಡಿಸಿದೆ. ಅದರ ಪ್ರತಿ ಸಮೇತ ಆತನ ಮನೆಗೆ ಹೋದರೆ, ಅಲ್ಲಿಂದಲೂ ಆತ ನಾಪತ್ತೆಯಾಗಿದ್ದಾನೆ. ಆತ ಮೊದಲಿದ್ದ ಮನೆಯಲ್ಲಿ ಈಗ ಬೇರೊಬ್ಬರು ವಾಸವಿದ್ದಾರೆ. ಆತನ ಹೊಸ ವಿಳಾಸ ಗೊತ್ತಿಲ್ಲ. ಹೀಗಾಗಿ ವಾರಂಟ್‌ ಎಲ್ಲಿಗೆ ತಲುಪಿಸಬೇಕು ಎಂಬುದು ತಿಳಿಯುತ್ತಿಲ್ಲ’ ಎಂದರು.

ಹಳೇಗುಡ್ಡದಹಳ್ಳಿಯಲ್ಲಿ ಅಂತ್ಯಕ್ರಿಯೆ:

ಕದಿರೇಶ್‌ ಅಂತ್ಯಕ್ರಿಯೆಯನ್ನು ಹಳೇಗುಡ್ಡದಹಳ್ಳಿಯ ರುದ್ರಭೂಮಿಯಲ್ಲಿ ಗುರುವಾರ ಸಂಜೆ ನಡೆಸಲಾಯಿತು.

ಛಲವಾದಿ ಪಾಳ್ಯದಲ್ಲಿರುವ ಅವರ ಮನೆ ಎದುರು ಬೆಳಿಗ್ಗೆ ಸಾರ್ವಜನಿಕರ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು.

ಪೊಲೀಸರ ವೈಫಲ್ಯ ಕಾರಣ

‘ದರೋಡೆ ಪ್ರಕರಣದಲ್ಲಿ ನವೀನ್‌ನನ್ನು ಬಂಧಿಸಿದ್ದರೆ ಕದರೀಶ್‌ ಜೀವ ಉಳಿಯುತ್ತಿತ್ತು. ಪೊಲೀಸರ ವೈಫಲ್ಯದಿಂದಲೇ ಆರೋಪಿಗಳು ರಾಜಾರೋಷವಾಗಿ ಬಂದು ಕೊಲೆ ಮಾಡಿ ಹೋಗಿದ್ದಾರೆ. ತಪ್ಪಿತಸ್ಥ ಪೊಲೀಸರ ವಿರುದ್ಧವೂ ಕ್ರಮ ಜರುಗಿಸಬೇಕು’ ಎಂದು ಕುಟುಂಬದವರು ಒತ್ತಾಯಿಸಿದರು.

‘ನವೀನ್ ಹಾಗೂ ವಿನಯ್‌ ಛಲವಾದಿಪಾಳ್ಯದಲ್ಲಿ ಆಡಿ ಬೆಳೆದವರು. ಕೊಲೆ ಏಕೆ ಮಾಡಿದರು ಎಂಬುದು ಗೊತ್ತಿಲ್ಲ. ಅವರ ಹಿಂದೆ ಕಾಣದ ಕೈಗಳು ಇರಬಹುದು. ಅವರೆಲ್ಲರನ್ನೂ ಬಂಧಿಸಿ ಶಿಕ್ಷಿಸಬೇಕು’ ಎಂದು ಆಗ್ರಹಿಸಿದರು.

ತಮಿಳುನಾಡಿಗೆ ವಿಶೇಷ ತಂಡ

ಕೊಲೆಯ ಬಳಿಕ ಆರೋಪಿಗಳು ತಮಿಳುನಾಡಿಗೆ ಹೋಗಿ ತಲೆಮರೆಸಿಕೊಂಡಿರುವ ಮಾಹಿತಿ ಇದೆ. ಪೊಲೀಸರ ವಿಶೇಷ ತಂಡವು ಗುರುವಾರ ಬೆಳಿಗ್ಗೆ ಅಲ್ಲಿಗೆ ಹೋಗಿ ಸ್ಥಳೀಯ ಪೊಲೀಸರ ನೆರವಿನಿಂದ ಹುಡುಕಾಟ ನಡೆಸಿತು.

ಜೈಲಿನಲ್ಲೇ ನಡೆಯಿತಾ ಸಂಚು?

ಕಾಟನ್‌ಪೇಟೆ ರೌಡಿ ಜೋಪಡಿ ರಾಜೇಂದ್ರ ಕೊಲೆ ಪ್ರಕರಣದಲ್ಲಿ ಕದಿರೇಶ್‌ ಆರೋಪಿಯಾಗಿದ್ದರು. ರಾಜೇಂದ್ರನ ಸಹಚರರಾದ ಪೀಟರ್‌ ಹಾಗೂ ಮಂಜುನಾಥ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವರಿಬ್ಬರು ಸೇರಿಯೇ ಸಂಚು ರೂಪಿಸಿ ನವೀನ್‌ನನ್ನು ಬಳಸಿಕೊಂಡು ಕೊಲೆ ಮಾಡಿಸಿರಬಹುದು ಎಂಬ ಅನುಮಾನ ಪೊಲೀಸರಿಗೆ ಇದೆ.

‘ಕೆಲವೇ ದಿನಗಳಲ್ಲಿ ಪೀಟರ್‌ ಬಿಡುಗಡೆ ಆಗಲಿದ್ದಾನೆ. ಆತನಿಗೂ ಕದಿರೇಶ್‌ ಅವರಿಗೂ ಮೊದಲಿನಿಂದಲೂ ವೈಷಮ್ಯವಿತ್ತು. ಆತ ಹೊರಗೆ ಬರುವ ಮುನ್ನವೇ ಕೊಲೆ ಆಗಿದೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT