ಎಸ್‌ಬಿಐ ಎಂಫ್‌: ತೆರಿಗೆ ಸ್ನೇಹಿ ಯೋಜನೆ

7
ಹಳೆ, ಹೊಸ ಹೂಡಿಕೆದಾರರಿಗೂ ‘ಬಂಧನ್‌ ಎಸ್‌ಡಬ್ಲ್ಯುಪಿ’ ಅನ್ವಯ

ಎಸ್‌ಬಿಐ ಎಂಫ್‌: ತೆರಿಗೆ ಸ್ನೇಹಿ ಯೋಜನೆ

Published:
Updated:

ಮುಂಬೈ: ಮ್ಯೂಚುವಲ್‌ ಫಂಡ್‌ನಲ್ಲಿನ ಹೂಡಿಕೆಯಿಂದ ಪ್ರತಿ ತಿಂಗಳೂ ಕುಟುಂಬದ ಸದಸ್ಯರಿಗೆ ವ್ಯವಸ್ಥಿತವಾಗಿ ಹಣ ವಿತರಿಸುವ ಹೊಸ ತೆರಿಗೆ ಸ್ನೇಹಿ ಯೋಜನೆಯನ್ನು ಎಸ್‌ಬಿಐ ಮ್ಯೂಚುವಲ್‌ ಫಂಡ ಆರಂಭಿಸಿದೆ.

‘ಬಂಧನ್‌ ಎಸ್‌ಡಬ್ಲ್ಯುಪಿ’ ಹೆಸರಿನ (ವ್ಯವಸ್ಥಿತವಾಗಿ ಹಣ ಮರಳಿ ಪಡೆಯುವ ) ಈ ಹೊಸ ಯೋಜನೆಯನ್ನು ಹಾಲಿ ಮತ್ತು ಹೊಸ ಹೂಡಿಕೆದಾರರಿಗೂ ಅನ್ವಯವಾಗಲಿದೆ. ಮ್ಯೂಚುವಲ್‌ ಫಂಡ್‌ ಹೂಡಿಕೆಯ ‘ವೃದ್ಧಿ ಆಯ್ಕೆ’ಯಲ್ಲಿನ ಕೆಲ ಮೊತ್ತವನ್ನು ಪ್ರತಿ ತಿಂಗಳೂ ಪಾಲಕರು, ಮಕ್ಕಳು ಅಥವಾ ಪತಿ / ಪತ್ನಿಗೆ ನಿಯಮಿತವಾಗಿ ಪಾವತಿಸುವ ವ್ಯವಸ್ಥೆ ಇದಾಗಿದೆ.

ಸದ್ಯಕ್ಕೆ ಲಾಭಾಂಶ ಪಾವತಿ ಮತ್ತು ಲಾಭಾಂಶ ಮರುಹೂಡಿಕೆ ಆಯ್ಕೆ ಮಾಡಿಕೊಂಡಿರುವ ಹೂಡಿಕೆದಾರರೂ ’ವೃದ್ಧಿ ಆಯ್ಕೆ’ (ಗ್ರೋತ್‌ ಆಪ್ಶನ್‌) ಯೋಜನೆಗೆ ವರ್ಗಾವಣೆಗೊಂಡು ಈ ಸೌಲಭ್ಯ ಪಡೆದುಕೊಳ್ಳಬಹುದು. ವಾಪಸ್‌ ಪಡೆಯುವ ಕನಿಷ್ಠ ಮೊತ್ತ ಪ್ರತಿ ತಿಂಗಳಿಗೆ ₹ 5,000ರಂತೆ 12 ತಿಂಗಳಿಗೆ ನಿಗದಿಪಡಿಸಲಾಗಿದೆ.

‘ಈ ಬಂಧನ್‌ ಎಸ್‌ಡಬ್ಲ್ಯುಪಿ’ ಯೋಜನೆಯಡಿ ಕುಟುಂಬ ಸದಸ್ಯರಿಗೆ ವರ್ಗಾವಣೆಯಾಗುವ ಮೊತ್ತವನ್ನು ಕಾಯ್ದೆಯಡಿ ಕೊಡುಗೆ (ಗಿಫ್ಟ್‌) ಎಂದು ಪರಿಗಣಿಸುವುದರಿಂದ ತೆರಿಗೆ ಅನ್ವಯಿಸುವುದಿಲ್ಲ. ಲಾಭಾಂಶ ವಿತರಣೆಗಿಂತ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ’ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಪಿ. ಸಿಂಗ್‌ ಅವರು ಹೇಳಿದ್ದಾರೆ.

‘ಮಧ್ಯವಯಸ್ಕರು ಮತ್ತು ನಿವೃತ್ತಿ ಅಂಚಿನಲ್ಲಿ ಇರುವವರಿಗೆ ಇದು ಉತ್ತಮ ಯೋಜನೆಯಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನುರಾಧ ರಾವ್‌ ಹೇಳಿದ್ದಾರೆ.

ಷೇರುಗಳಲ್ಲಿನ ಹೂಡಿಕೆಯ ದೀರ್ಘಾವಧಿ ಬಂಡವಾಳ ಗಳಿಕೆಯು ₹ 1ಲಕ್ಷ ಮೀರಿದ ಸಂದರ್ಭದಲ್ಲಿ  ಮತ್ತು ಷೇರು ಸಂಬಂಧಿತ ಮ್ಯೂಚುವಲ್‌ ಫಂಡ್‌ಗಳಿಂದ ವಿತರಿಸುವ ಲಾಭದ ಮೇಲೆ ಶೇ 10 ರಷ್ಟು ತೆರಿಗೆ ವಿಧಿಸುವ ಬಜೆಟ್‌ ಪ್ರಸ್ತಾವಗಳ ಬೆನ್ನಲ್ಲೇ ಈ ಯೋಜನೆ ಪ್ರಕಟಗೊಂಡಿದೆ.

**

ಎರಡು ಬಗೆಯ ಯೋಜನೆ

ಮ್ಯೂಚುವಲ್‌ ಫಂಡ್‌ಗಳಲ್ಲಿ ವೃದ್ಧಿ ಮತ್ತು ಲಾಭಾಂಶ ವಿತರಣೆ ಹೆಸರಿನ ಎರಡು ಬಗೆಯ ಯೋಜನೆಗಳು ಇರುತ್ತವೆ. ವೃದ್ಧಿ ಆಯ್ಕೆಯಲ್ಲಿನ ಲಾಭವನ್ನು ಅದೇ ಯೋಜನೆಯಲ್ಲಿ ಮರು ಹೂಡಿಕೆ ಮಾಡಲಾಗುವುದು. ಇದರಿಂದ ದೀರ್ಘಾವಧಿಯಲ್ಲಿ ಯೋಜನೆಯ ನಿವ್ವಳ ಸಂಪತ್ತು ಮೌಲ್ಯ (ಎನ್‌ಎವಿ) ಹೆಚ್ಚಳಗೊಳ್ಳುತ್ತದೆ.

ಲಾಭಾಂಶ ವಿತರಣೆ ಆಯ್ಕೆಯಲ್ಲಿ ಲಾಭವನ್ನು ಮರು ಹೂಡಿಕೆ ಮಾಡುವುದಿಲ್ಲ. ಕಾಲ ಕಾಲಕ್ಕೆ ಹೂಡಿಕೆದಾರರಿಗೆ ವಿತರಿಸಲಾಗುವುದು. ಯೋಜನೆ ಲಾಭ ಗಳಿಸಿದರೆ ಮಾತ್ರ ಲಾಭಾಂಶ ಘೋಷಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry