ಕದಿರೇಶ್ ರೌಡಿ ಶೀಟರ್: ಗೃಹ ಸಚಿವ ರೆಡ್ಡಿ

7

ಕದಿರೇಶ್ ರೌಡಿ ಶೀಟರ್: ಗೃಹ ಸಚಿವ ರೆಡ್ಡಿ

Published:
Updated:

ಬೆಂಗಳೂರು: ಬುಧವಾರ ಸಂಜೆ ಕೊಲೆಯಾದ ಬಿಜೆಪಿ ಮುಖಂಡ ಎಸ್. ಕದಿರೇಶ್ 2012ರಿಂದ ರೌಡಿ ಶೀಟರ್‌ ಆಗಿದ್ದು, ಅವರ ವಿರುದ್ಧ 13ರಿಂದ 14 ಕ್ರಿಮಿನಲ್‌ ಮೊಕದ್ದಮೆಗಳು ಇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಗೆ ತಿಳಿಸಿದರು.

ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯರು ಈ ವಿಷಯ ಕುರಿತು ಪ್ರಸ್ತಾಪಿಸಿದ್ದರು. ‌

ನವೀನ್ ಹಾಗೂ ವಿನಯ್ ಮತ್ತಿತರರು ಸೇರಿ ಮಾರಕಾಸ್ತ್ರಗಳಿಂದ ಕದಿರೇಶ್ ಅವರನ್ನು ಕೊಲೆ ಮಾಡಿದ್ದಾರೆ. ಉಳಿದ ಆರೋಪಿಗಳನ್ನು ಗುರುತಿಸಿರುವ ಪೊಲೀಸರು ಸದ್ಯವೇ ಬಂಧಿಸಲಿದ್ದಾರೆ. ಹತ್ಯೆಗೆ ವೈಯಕ್ತಿಕ ಅಥವಾ ರಾಜಕೀಯ ದ್ವೇಷ ಕಾರಣವೇ ಎಂಬುದು ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಗೊತ್ತಾಗಲಿದೆ ಎಂದರು.

ದಾಸರಹಳ್ಳಿಯ ಕಾರ್ಪೊರೇಟರ್ ಗೋವಿಂದೇಗೌಡ ಕೊಲೆಯಾಗಿದ್ದರು. ಅವರು ಬೇರೆಯವರಿಗೆ ಹೊಡೆದಿದ್ದಕ್ಕೆ ಪ್ರತೀಕಾರವಾಗಿ ಅವರ ಕೊಲೆ ನಡೆದಿತ್ತು. ಇಬ್ಬರೂ ಬಿಜೆಪಿಯವರಾಗಿದ್ದು, ಕೊಲೆ ಮಾಡಿದವರು ಹಿಂದೂಗಳೇ ಆಗಿದ್ದಾರೆ ಎಂದು ರೆಡ್ಡಿ ವಿವರಿಸಿದರು.

‘ಶಾಸಕರು, ಸಂಸದರ ಶಿಫಾರಸು ಆಧರಿಸಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮಾಡುತ್ತಿರುವುದರಿಂದ ಇಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂಬ ವಿರೋಧ ಪಕ್ಷದ ಸದಸ್ಯರ ಆರೋಪ ಸರಿಯಲ್ಲ. ನಿಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಪೊಲೀಸರ ವರ್ಗಾವಣೆಗಾಗಿ ರಚಿಸಿರುವ ಪೊಲೀಸ್ ಸಿಬ್ಬಂದಿ ಮಂಡಳಿ (ಪಿಇಬಿ) ಮೂಲಕವೇ ವರ್ಗಾವಣೆ ಮಾಡಲಾಗುತ್ತಿತ್ತು. ಈಗಲೂ ಅದನ್ನೇ ಮಾಡುತ್ತಿದ್ದೇವೆ’ ಎಂದೂ ಅವರು ಪ್ರತಿಪಾದಿಸಿದರು.

‘ಅಪರಾಧ ಶೂನ್ಯ ಸ್ಥಿತಿ ಅಸಾಧ್ಯ’

ಅಪರಾಧವೇ ನಡೆಯದಂತಹ ಪರಿಸ್ಥಿತಿ ನಿರ್ಮಾಣ ಮಾಡಲು ಸಾಧ್ಯವೇ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಅಪರಾಧಗಳು ಹಿಂದೆಯೂ ಆಗುತ್ತಿದ್ದವು, ಈಗಲೂ ಆಗುತ್ತಿವೆ. ಅಪರಾಧ ಶೂನ್ಯ ಪರಿಸ್ಥಿತಿ ಎಲ್ಲಿಯಾದರೂ ನಿರ್ಮಾಣವಾಗುತ್ತದೆ ಎಂದರೆ ಕಾನೂನು, ಪೊಲೀಸ್ ಸಿಬ್ಬಂದಿ, ಹೈಕೋರ್ಟ್‌ ಯಾವುದೂ ಬೇಕಾಗುವುದಿಲ್ಲ ಎಂದರು.

ಕದಿರೇಶ್ ವಿರುದ್ಧದ ಮೊಕದ್ದಮೆಗಳು

2 ಕೊಲೆ

2 ಕೊಲೆ ಯತ್ನ

3 ಹಲ್ಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry