ಮಂಗಳವಾರ, ಡಿಸೆಂಬರ್ 10, 2019
21 °C
ನಗರಾಭಿವೃದ್ಧಿ ಇಲಾಖೆ ಅನುಮೋದನೆ ಬಳಿಕ ಕಾಮಗಾರಿ

ಸೋಮಸುಂದರಪಾಳ್ಯ ಕೆರೆ ಪುನಶ್ಚೇತನಕ್ಕೆ ಸಿದ್ಧತೆ

ಎನ್‌. ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಸೋಮಸುಂದರಪಾಳ್ಯ ಕೆರೆ ಪುನಶ್ಚೇತನಕ್ಕೆ ಸಿದ್ಧತೆ

ಬೆಂಗಳೂರು: ನಗರದ ಕೂಡ್ಲು ಗೇಟ್‌ ಬಳಿಯ ಸೋಮಸುಂದರಪಾಳ್ಯ ಕೆರೆಯನ್ನು ಪುನಶ್ಚೇತನಗೊಳಿಸಲು ಬಿಬಿಎಂಪಿ ಮುಂದಾಗಿದೆ.

ಕೆರೆಯ ಹೂಳು ತೆಗೆಯುವುದು, ಕಾಲುವೆಯಲ್ಲಿ ಹರಿದುಬರುತ್ತಿರುವ ಕೊಳಚೆ ನೀರನ್ನು ಬೇರೆಡೆ ತಿರುಗಿಸುವುದು, ನಡಿಗೆ ಪಥ ನಿರ್ಮಾಣ, ತಂತಿಬೇಲಿ ಅಳವಡಿಕೆ, ನಡುಗಡ್ಡೆ, ಜೌಗು ಪ್ರದೇಶ ನಿರ್ಮಾಣ ಹಾಗೂ ಹಸಿರೀಕರಣ ಮಾಡಲು ಉದ್ದೇಶಿಸಲಾಗಿದೆ.

ಕೆರೆಯ ಜಾಗವನ್ನು ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮವು (ಕೆಸಿಡಿಸಿ) ಒತ್ತುವರಿ ಮಾಡಿದೆ. ಈ ಜಾಗದಲ್ಲಿ ಆರ್‌ಡಿಎಫ್‌ (ರೆಫ್ಯೂಸ್ಡ್‌ ಡಿರೈವ್ಡ್‌ ಫ್ಯೂಯಲ್) ಹಾಕಿ ಮಣ್ಣು ಮುಚ್ಚಲಾಗಿದೆ. ಇದನ್ನು ಸ್ವಾಧೀನಕ್ಕೆ ಪಡೆದು ನೆಡುತೋಪು ನಿರ್ಮಿಸಲು ಪಾಲಿಕೆ ನಿರ್ಧರಿಸಿದೆ.

ಜಲಮೂಲವನ್ನು ಪುನಶ್ಚೇತನಗೊಳಿಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌ (ಕೆರೆಗಳು) ಜಗನ್ನಾಥ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಗಳದಲ್ಲೇ ಅಯ್ಯಪ್ಪಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಸರ್ವೆ ನಡೆಸಿದ್ದಾರೆ. ಪಾಲಿಕೆಯ ಆಯುಕ್ತರು ಕೆಸಿಡಿಸಿ ಅಧಿಕಾರಿಗಳೊಂದಿಗೆ ಎರಡು ಬಾರಿ ಸಭೆ ನಡೆಸಿದ್ದಾರೆ. ಆಂಧ್ರಪ್ರದೇಶದ ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಗೆ ಆರ್‌ಡಿಎಫ್‌ ರವಾನಿಸಲಾಗುತ್ತಿದೆ. ಬಳಿಕ, ಈ ಜಾಗವನ್ನು ಹಸ್ತಾಂತರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.

(ಹಂದಿಗಳ ಆವಾಸ ಸ್ಥಾನವಾದ ಕೆರೆಯಂಗಳ)

ಕೆರೆಯ ಸದ್ಯದ ಸ್ಥಿತಿ:

ಕೊಳಚೆ ನೀರು ಸೇರಿ ಜಲಮೂಲ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಅಂಗಳದ ಸುತ್ತಲೂ ಕಸ ಹಾಗೂ ಕಟ್ಟಡದ ಅವಶೇಷಗಳನ್ನು ಸುರಿಯಲಾಗಿದೆ. ಹೂಳು ತುಂಬಿದ್ದು, ಅಲ್ಲಲ್ಲಿ ನಡುಗಡ್ಡೆಗಳು ನಿರ್ಮಾಣವಾಗಿವೆ. ಈ ಭಾಗದಲ್ಲಿ ಹುಲ್ಲು, ಕಳೆ ಬೆಳೆದಿದೆ. ಕೆರೆಯಂಗಳವೇ ಹಂದಿಗಳ ಆವಾಸಸ್ಥಾನವಾಗಿದೆ. ಇಲ್ಲಿನ ನೀರು ದುರ್ವಾಸನೆ ಬೀರುತ್ತಿದೆ.

ಜಲಮೂಲದ ಸುತ್ತಲೂ ತಂತಿ ಬೇಲಿ ಅಳವಡಿಸಿದ್ದರೂ ಅಲ್ಲಲ್ಲಿ ಅದನ್ನು ಮುರಿಯಲಾಗಿದೆ. ಹೊಸಪಾಳ್ಯ ಭಾಗದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಈ ಕಡೆಯಿಂದ ಕೆರೆಯನ್ನು ಪ್ರವೇಶಿಸಲು ಅವಕಾಶವಿರುವುದರಿಂದ ಸ್ಥಳೀಯರು ಕಸ ಹಾಕುತ್ತಿದ್ದಾರೆ.

ಮನೆಗೆ ನುಗ್ಗುತ್ತಿದೆ ಕೊಳಚೆ ನೀರು

‘ಕೆರೆಯ ನೀರು ಹೊರ ಹೋಗದಂತೆ ಕೋಡಿಯನ್ನು ಮುಚ್ಚಲಾಗಿದೆ. ನೀರಿನ ಮಟ್ಟ ಹೆಚ್ಚುತ್ತಿದ್ದು, ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಕೊಳಚೆ ನೀರಿನಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಡೆಂಗಿ, ಚಿಕೂನ್‌ ಗುನ್ಯದಂತಹ ರೋಗಗಳ ಭೀತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ’ ಎಂದು ಹೊಸಪಾಳ್ಯ ನಿವಾಸಿ ನದೀಮ್‌ ಅಳಲು ತೋಡಿಕೊಂಡರು.

ತ್ಯಾಜ್ಯ ನೀರು ಕೆರೆಗೆ

ಹೊಸಪಾಳ್ಯದಲ್ಲಿ ಕೊಳಚೆ ನೀರು ಹೋಗಲು ಚರಂಡಿಗಳನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಆದರೆ, ಆ ನೀರು ಕೆರೆಗೆ ಹೋಗುತ್ತಿದೆ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಕೊಳಚೆ ನೀರು ಜಲಮೂಲ ಸೇರುತ್ತಿದೆ. ಇದನ್ನು ತಡೆಗಟ್ಟಬೇಕು ಎಂದು ಹೊಸಪಾಳ್ಯದ ರಘು ಒತ್ತಾಯಿಸಿದರು.

‘ಒತ್ತುವರಿ ತೆರವುಗೊಳಿಸಿ’

‘ಕೆರೆಯನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದೆವು. ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡಿದ್ದೆವು. ಜಲಮೂಲವನ್ನು ಪುನಶ್ಚೇತನಗೊಳಿಸುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ತ್ವರಿಗತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು’ ಎಂದು ‘ಕೂಡ್ಲು ಗೇಟ್‌, ಹರಳೂರು, ಹರಳುಕುಂಟೆ, ಸೋಮಸುಂದರಪಾಳ್ಯ ಮತ್ತು ಪರಂಗಿಪಾಳ್ಯ (ಕೆಎಚ್‌ಎಚ್‌ಎಸ್‌ಪಿ) ಪ್ರದೇಶ ನಿವಾಸಿಗಳ ಸಂಘ’ದ ಖಜಾಂಚಿ ಲಲಿತಾಂಬಾ ಒತ್ತಾಯಿಸಿದರು.

ಅಂಕಿ–ಅಂಶ

₹4 ಕೋಟಿ

ಕೆರೆ ಪುನಶ್ಚೇತನಕ್ಕೆ ಅಂದಾಜು ವೆಚ್ಚ

16 ಎಕರೆ 29 ಗುಂಟೆ

ಕೆರೆಯ ಮೂಲ ವಿಸ್ತೀರ್ಣ

4 ಎಕರೆ

ಕೆಸಿಡಿಸಿ ಘಟಕದಿಂದ ಒತ್ತುವರಿ

* ಸುಮಾರು 5 ಎಕರೆಯಷ್ಟು ಭೂಮಿ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಬೇಕು.

–ಲಲಿತಾಂಬಾ, ಖಜಾಂಚಿ, ಕೆಎಚ್‌ಎಚ್‌ಎಸ್‌ಪಿ

ಪ್ರತಿಕ್ರಿಯಿಸಿ (+)