ಗುರುವಾರ , ಡಿಸೆಂಬರ್ 12, 2019
25 °C

ಕುಮಾರಸ್ವಾಮಿ ಎದುರು ನಿಲ್ಲುವವರು ಯಾರು?

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ಕುಮಾರಸ್ವಾಮಿ ಎದುರು ನಿಲ್ಲುವವರು ಯಾರು?

ರಾಮನಗರ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಸ್ಪರ್ಧಿಸಲಿರುವ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಯಾರು ಯಾರು ಪ್ರತಿಸ್ಪರ್ಧಿಯಾಗಲಿದ್ದಾರೆ ಎನ್ನುವ ಕುತೂಹಲ ಜನರಲ್ಲಿ ಮೂಡಿದೆ.

ಕಾಂಗ್ರೆಸ್‌ನಿಂದ ಈ ಹಿಂದೆ ಮೂವರ ಹೆಸರನ್ನು ಪಕ್ಷದ ನಾಯಕರು ಅಂತಿಮಗೊಳಿಸಿದ್ದರು. ಈ ಪೈಕಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್‌ ಅಧ್ಯಕ್ಷ ಗಾದಿಯನ್ನು ಬಿಟ್ಟುಕೊಡದ ಕಾರಣಕ್ಕೆ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗಿದ್ದು, ಕಾಂಗ್ರೆಸ್‌ನಿಂದ ಬಹುತೇಕ ಹೊರಬಿದ್ದಿದ್ದಾರೆ. ಹಾಲಿ ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಚಂದ್ರಶೇಖರ್‌ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಹೆಸರು ಚಾಲ್ತಿಯಲ್ಲಿದ್ದು, ಇದರಲ್ಲಿ ಇಕ್ಬಾಲ್‌ ಹುಸೇನ್ ಅವರ ಹೆಸರನ್ನು ಪಕ್ಷದ ವರಿಷ್ಠರು ಅಂತಿಮಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಕ್ಬಾಲ್‌ ಹುಸೇನ್‌ ಈಗಾಗಲೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆ ಸಮಯದಲ್ಲಿಯೇ ಕೊಂಚ ಹೆಸರು ಮಾಡಿದ್ದಾರೆ. ಕನಕಪುರ ತಾಲ್ಲೂಕಿನವರಾಗಿದ್ದಾರೆ. ರಾಮನಗರ ಕ್ಷೇತ್ರಕ್ಕೆ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹಾಗೂ ಮರಳವಾಡಿ ಹೋಬಳಿಗಳು ಒಳಪಡಲಿವೆ. ಹೀಗಾಗಿ ಆ ಭಾಗದ ಮತಗಳನ್ನು ಸೆಳೆಯುವ ಜೊತೆಗೆ ರಾಮನಗರದಲ್ಲಿ ಬಹುಸಂಖ್ಯಾತರಾದ ಮುಸ್ಲಿಂ ಸಮುದಾಯದ ಮತಗಳನ್ನೂ ಪಡೆಯುವ ಕನಸಿನೊಂದಿಗೆ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ ಎಲ್.ಚಂದ್ರಶೇಖರ್ ಸಹ ರೇಸ್‌ನಲ್ಲಿ ಇದ್ದು, ಸ್ಥಳೀಯರನ್ನೇ ಅಭ್ಯರ್ಥಿಯಾಗಿ ಮಾಡಬೇಕು ಎನ್ನುವ ಕೂಗು ಇದೆ. ಅಂತಿಮವಾಗಿ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್ ಅಭ್ಯರ್ಥಿ ಹೆಸರನ್ನು ಘೋಷಿಸಲಿದ್ದಾರೆ.

ಫೇಸ್‌ಬುಕ್‌ನಲ್ಲಿ ವಾಕ್ಸಮರ: ಇಕ್ಬಾಲ್‌ ಹುಸೇನ್‌ ಹಾಗೂ ಚಂದ್ರಶೇಖರ್ ಅವರ ಅಭಿಮಾನಿಗಳು ತಮ್ಮ ನಾಯಕರ ಪ್ರಚಾರಕ್ಕೆಂದು ಫೇಸ್‌ಬುಕ್‌ನಲ್ಲಿ ಖಾತೆ ತೆರೆದಿದ್ದು, ಅಲ್ಲಿಯೇ ವಾಕ್ಸಮರ ನಡೆಸಿದ್ದಾರೆ. ಇಬ್ಬರೂ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಅಭಿಮಾನಿಗಳ ನಡುವೆಯೇ ಒಬ್ಬರನ್ನೊಬ್ಬರು ಕಾಲೆಳೆಯುವ ಕೆಲಸವೂ ನಡೆಯುತ್ತಿದೆ.

ಮನೆಯೊಂದು ಮೂರು ಬಾಗಿಲು: ರಾಮನಗರ ರಾಜಕಾರಣದಲ್ಲಿ ಬಿಜೆಪಿಯ ಸದ್ಯದ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತೆ ಆಗಿದೆ. ಒಂದೆಡೆ ಸ್ವಯಂಘೋಷಿತ ಅಭ್ಯರ್ಥಿ ಜಗದೀಶಗೌಡ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮತ್ತೊಂದೆಡೆ ಅನ್ಯ ಪಕ್ಷಗಳ ಅತೃಪ್ತರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಕಮಲ ಪಾಳಯದ ಮುಖಂಡರು ಮುಂದಾಗಿರುವುದು ಕುತೂಹಲ ಕೆರಳಿಸಿದೆ.

ಪಕ್ಷದ ಮುಖಂಡ ಎಂ. ರುದ್ರೇಶ್ ನೇತೃತ್ವದ ನಿಯೋಗವು ಈಚೆಗೆ ಮಂಜುಳಾ ಮರಿದೇವರು ಅವರ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನಿಸಿರುವುದು ಕುತೂಹಲ ಮೂಡಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದ ಮರಿದೇವರು ಅಕಾಲಿಕ ನಿಧನದಿಂದ ಅವರ ಕುಟುಂಬದ ಮೇಲೆ ಅನುಕಂಪದ ಅಲೆ ಇದೆ. ಇದೇ ಮುಂದಿನ ಚುನಾವಣೆಯಲ್ಲಿ ಕೆಲಸ ಮಾಡಬಹುದು ಎನ್ನುವ ವಿಶ್ವಾಸದಿಂದ ಮರಿದೇವರು ಪತ್ನಿಯನ್ನು ಕಣಕ್ಕೆ ಇಳಿಸಲು ಬಿಜೆಪಿ ಚಿಂತನೆ ನಡೆಸಿದೆ.

ಕಂಠೀರವ ಸ್ಟುಡಿಯೊದ ಮಾಜಿ ಅಧ್ಯಕ್ಷರೂ ಆಗಿರುವ ಎಂ.ರುದ್ರೇಶ್‌ ಹೆಸರು ಸಹ ಚಾಲ್ತಿಯಲ್ಲಿ ಇದೆ.

ಕ್ಷೇತ್ರದಲ್ಲಿ ಸದ್ಯ ಸಕ್ರಿಯ ರಾಜಕಾರಣದಿಂದ ದೂರ ಉಳಿದಿರುವ ಇನ್ನಷ್ಟು ಮುಖಂಡರನ್ನು ಬಿಜೆಪಿ ಸಂಪರ್ಕಿಸುತ್ತಿದೆ. ಚುನಾವಣೆ ಘೋಷಣೆ ನಂತರದಲ್ಲಿ ಆದರೂ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಮತ್ತೊಂದೆಡೆ ಜಗದೀಶ ಗೌಡರ ಪ್ರಚಾರದಿಂದ ಕೆಲವು ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಇರಿಸು ಮುರಿಸಾಗಿದೆ. ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡದಂತೆ ಪಕ್ಷದ ಸಭೆಯೊಳಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಹಿರಂಗವಾಗಿಯೂ ಹೇಳಿಕೆ ನೀಡತೊಡಗಿದ್ದಾರೆ.

ಇತರರ ಒಲವು: ಬಹುಜನ ಸಮಾಜ ಪಕ್ಷವೂ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ನಾಗೇಶ್‌ ಅವರೇ ಕ್ಷೇತ್ರದ ಅಭ್ಯರ್ಥಿಯೂ ಆಗುವ ಸಾಧ್ಯತೆ ಇದೆ. ವಿಕಲಚೇತನರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಮಂಜುನಾಥ್ ಸಹ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಇತರೆ ರಾಜಕೀಯ ಪಕ್ಷಗಳೂ ಅಭ್ಯರ್ಥಿ ಆಯ್ಕೆಯ ಸಿದ್ಧತೆಯಲ್ಲಿವೆ. ಗಮನ ಸೆಳೆಯುವ ಕ್ಷೇತ್ರ ಇದಾಗಿರುವ ಕಾರಣ ಸ್ಪರ್ಧಿಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇದೆ.

ಯೋಗೇಶ್ವರ್‌ ನಿರಾಸಕ್ತಿ?

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅರಳಿಸುವ ಜವಾಬ್ದಾರಿ ಹೊತ್ತಿರುವ ಶಾಸಕ ಸಿ.ಪಿ. ಯೋಗೇಶ್ವರ್‌ ತಮ್ಮದೇ ಜಿಲ್ಲೆಯ ರಾಜಕೀಯದಲ್ಲಿ ಇನ್ನೂ ಅಷ್ಟು ಆಸಕ್ತಿ ವಹಿಸಿಲ್ಲ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಮೈಸೂರು–ಮಂಡ್ಯ ಭಾಗದ ರಾಜಕಾರಣದಲ್ಲಿ ಅವರು ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಆದರೆ ಚನ್ನಪಟ್ಟಣ ಹೊರತುಪಡಿಸಿ ಜಿಲ್ಲೆಯ ಉಳಿದ ಮೂರು ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರ ಜೊತೆ ಅಷ್ಟಾಗಿ ಸಂಪರ್ಕದಲ್ಲಿ ಇಲ್ಲ ಎಂಬ ಮಾತುಗಳೂ ಇವೆ.

* * 

ಕಾಂಗ್ರೆಸ್ ಅಭ್ಯರ್ಥಿ ಕುರಿತು ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಇನ್ನೊಂದು ವಾರದಲ್ಲಿ ಅಭ್ಯರ್ಥಿ ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ

ಎಸ್. ಗಂಗಾಧರ್

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)