ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನದಲ್ಲಿ ಮಕ್ಕಳ ಆಸಕ್ತಿ ಬೆಳೆಯುವ ಪ್ರಯತ್ನ

Last Updated 9 ಫೆಬ್ರುವರಿ 2018, 7:02 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳನ್ನು ಮೂಲ ವಿಜ್ಞಾನದತ್ತ ಸೆಳೆಯುವ ನಿಟ್ಟಿನಲ್ಲಿ ‘ವಿಜ್ಞಾನ ಚಟುವಟಿಕೆ ಕೇಂದ್ರ’ ತಾಲ್ಲೂಕಿನ ಆಯನೂರಿನಲ್ಲಿ ಕಾರ್ಯಾರಂಭ ಮಾಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ವ ಶಿಕ್ಷಣ ಅಭಿಯಾನದ ಅಡಿ ನಿರ್ಮಿಸಿರುವ ಈ ವಿಜ್ಞಾನ ಚಟುವಟಿಕೆ ಕೇಂದ್ರವು ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಾಯೋಗಿಕವಾಗಿ ವಿಜ್ಞಾನ ಶಿಕ್ಷಣವನ್ನು ಒದಗಿಸಲು ಹಾಗೂ ದುರ್ಬಲ ಮಕ್ಕಳನ್ನು ಉತ್ತೇಜಿಸಲು ಶ್ರಮಿಸುತ್ತಿದೆ. ಅಲ್ಲದೇ ಶಿಕ್ಷಕರ ಕಲಿಕಾ ಚಿಂತನೆಯನ್ನು ಮಾರ್ಪಡಿಸುವಲ್ಲಿ ಪರಿಣಾಮಕಾರಿಯಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಷನ್ ಸಹಭಾಗಿತ್ವದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕಾ ವಿಧಾನ, ಮಕ್ಕಳ ಕೇಂದ್ರಿತ ಕಲಿಕೆ, ವಿವಿಧ ವಿಧಾನಗಳ ಮೂಲಕ ಶಿಕ್ಷಣ ಹೇಳಿಕೊಡಲಾಗುತ್ತದೆ. ರಾಜ್ಯ ಮತ್ತು ಎನ್‌ಸಿಇಆರ್‌ಟಿ ಪಠ್ಯಕ್ರಮಗಳ ತರಬೇತಿ ನೀಡಲಾಗುತ್ತದೆ. ಈ ಕೇಂದ್ರ ಕಾರ್ಯಾರಂಭ ಮಾಡಿ 2 ತಿಂಗಳುಗಳಾಗಿದ್ದು, ಈಗಾಗಲೇ ಜಿಲ್ಲೆಯ ವಿವಿಧ ಭಾಗದ ಶಾಲಾ ವಿದ್ಯಾರ್ಥಿಗಳು ಕೇಂದ್ರದ ಪ್ರಯೋಜನ ಪಡೆದುಕೊಂಡಿದ್ದಾರೆ.

ಪ್ರಯೋಗ ಶಾಲೆ ಕೊಠಡಿ: ಕೇಂದ್ರದಲ್ಲಿ ಜೀವವಿಜ್ಞಾನ, ಶರೀರ ರಚನಾ ವಿಜ್ಞಾನ, ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಹೀಗೆ ವಿಜ್ಞಾನಕ್ಕೆ ಸಂಬಂಧಿಸಿದ 5 ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ತಲಾ ಒಂದೊಂದು ತರಗತಿ, ಮಾದರಿ, ಕಾರ್ಯಾಗಾರ ಕೊಠಡಿಗಳು, ದಾಸ್ತಾನು ಕೋಣೆ, ಶೆಡ್‌, ಅಡುಗೆ ಮನೆ ನಿರ್ಮಿಸಲಾಗಿದೆ. ಕೇಂದ್ರದಲ್ಲಿ 5 ಶಿಕ್ಷಕರು ಲಭ್ಯರಿದ್ದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಿದ್ದಾರೆ.

₹ 30 ಲಕ್ಷದ ಉಪಕರಣ: ವಿಜ್ಞಾನ ಕೇಂದ್ರಕ್ಕೆ ₹ 30 ಲಕ್ಷದ ಉಪಕರಣಗಳನ್ನು ಖರೀದಿಸಲಾಗಿದೆ. ಕೇಂದ್ರದಲ್ಲಿರುವ ಶಿಕ್ಷಕರು ಉಪಕರಣಗಳನ್ನು ಬಳಸಿಕೊಂಡು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ. ಜೀವಶಾಸ್ತ್ರದ ಮಾಹಿತಿ ನೀಡುವಾಗ ಮನುಷ್ಯ ದೇಹದ ಅಂಗಾಂಗಗಳ ಕಾರ್ಯಾಚರಣೆಯನ್ನು ಪ್ರಾಯೋಗಿಕವಾಗಿ ತಿಳಿಸಲಿದ್ದಾರೆ. ಕೇಂದ್ರದಲ್ಲಿ ದಿನಕ್ಕೆ 120ರಿಂದ 150 ವಿದ್ಯಾರ್ಥಿಗಳಿಗೆ ಈ ಚಟುವಟಿಕೆ ಆಧಾರಿತ ಉಚಿತ ತರಬೇತಿ ನೀಡಬಹುದು. ಖಾಸಗಿ ವಿದ್ಯಾರ್ಥಿಗಳಿಗೂ ತರಬೇತಿ ನೀಡಲು ಅವಕಾಶ ಇದೆ ಎನ್ನುತ್ತಾರೆ ಕೇಂದ್ರದ ಉಸ್ತುವಾರಿ ನಾಗಭೂಷಣ್‌.

ಪ್ರಗತಿ ಪರಿಶೀಲನೆ: ರಜಾ ದಿನಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ವಿಜ್ಞಾನ ಕೇಂದ್ರ ಕಾರ್ಯನಿರ್ವಹಿಸಲಿದೆ. ಇಲ್ಲಿ ಮಾರ್ಗದರ್ಶನ ಪಡೆದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗೆಗೆ ಆಸಕ್ತಿ ಮೂಡುತ್ತದೆ ಹಾಗೂ ಕಲಿಕೆಯಲ್ಲಿ ಪ್ರಗತಿ ಹೊಂದುತ್ತಾರೆ ಎಂದು ಅವರು ತಿಳಿಸಿದರು.

ಬಿಸಿಯೂಟ, ಬಸ್‌ ವ್ಯವಸ್ಥೆ: ತರಬೇತಿಗೆ ಬರುವ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಇರಲಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಶಾಲಾ ಅವಧಿಯಲ್ಲಿಯೇ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಕೇಂದ್ರಕ್ಕೆ ಕರೆತರುವ ಉದ್ದೇಶವಿದೆ. ಈ ಎರಡೂ ವ್ಯವಸ್ಥೆಗಳನ್ನು ಶೀಘ್ರದಲ್ಲೇ ಜಾರಿ ಮಾಡಲಾಗುತ್ತದೆ ಎನ್ನುತ್ತಾರೆ ಅವರು.

ಉದ್ಘಾಟನೆ ಆಗದ ಕೇಂದ್ರ

‘ಶಿವಮೊಗ್ಗದಿಂದ 20 ಕಿ.ಮೀ. ದೂರದ ಆಯನೂರಿನ ಸರ್ಕಾರಿ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ವಿಜ್ಞಾನ ಕೇಂದ್ರ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದ್ದರೂ ಅಧಿಕೃತವಾಗಿ ಉದ್ಘಾಟನೆಗೊಂಡಿಲ್ಲ. ಅಲ್ಲದೆ ಈ ಕೇಂದ್ರ ಇಂದಿಗೂ ಸರ್ಕಾರಿ ಸ್ವಾಮ್ಯದಲ್ಲಿಯೇ ಇದ್ದು, ಅಗಸ್ತ್ಯ ಫೌಂಡೇಷನ್‌ಗೆ ಹಸ್ತಾಂತರಗೊಂಡಿಲ್ಲ. ಕೆಲವೇ ದಿನಗಳಲ್ಲಿ ಕೇಂದ್ರ ಉದ್ಘಾಟನೆಯಾಗಲಿದೆ. ನಂತರ ನಮ್ಮ ಉಸ್ತುವಾರಿಗೆ ಸಿಗಲಿದೆ ಎನ್ನುತ್ತಾರೆ’ ಅಗಸ್ತ್ಯ ಫೌಂಡೇಷನ್‌ನ ನಾಗಭೂಷಣ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT