8 ಅಧ್ಯಯನ ಪೀಠ ಸ್ಥಾಪನೆಗೆ ಒಪ್ಪಿಗೆ

7

8 ಅಧ್ಯಯನ ಪೀಠ ಸ್ಥಾಪನೆಗೆ ಒಪ್ಪಿಗೆ

Published:
Updated:

ತುಮಕೂರು: ರೈತ ಹೋರಾಟಗಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಸ್ವಾಮಿ ವಿವೇಕಾನಂದ, ಶ್ರೀಬಸವೇಶ್ವರ, ನಾಡಪ್ರಭು ಕೆಂಪೇಗೌಡ, ಗೌತಮ ಬುದ್ಧ, ಶಿಶುನಾಳ ಷರೀಫ ಅಧ್ಯಯನ ಪೀಠ ಸ್ಥಾಪಿಸಲು ತಿಪಟೂರಿನಲ್ಲಿ ಬುಧವಾರ ನಡೆದ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸಭೆ ಒಪ್ಪಿಗೆ ಸೂಚಿಸಿದೆ.

ಈ ಪೀಠಗಳಿಗೆ ವಿ.ವಿಯೇ ತಲಾ ₹ 50 ಲಕ್ಷ ನೀಡಲು ಒಪ್ಪಿದೆ. ಈ ಹಣವನ್ನು ಠೇವಣಿ ಇಟ್ಟು ಇದರಲ್ಲಿ ಬರುವ ಬಡ್ಡಿ ಹಣದಲ್ಲಿ ಪೀಠದ ಕಾರ್ಯಕ್ರಮಗಳನ್ನು ನಡೆಸಲು ಒಪ್ಪಿಗೆ ನೀಡಲಾಗಿದೆ.

ನಂಜುಂಡಸ್ವಾಮಿ ಅಧ್ಯಯನ ಪೀಠವು ತಿಪಟೂರಿನಲ್ಲಿರುವ ವಿ.ವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದೆ. ಉಳಿದ ಪೀಠಗಳು ತುಮಕೂರಿನ ವಿ.ವಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುವವು. ವಾರದಲ್ಲಿ ಹಣ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಯಿತು.

ದೇವರಾಜು ಅರಸು ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರಕ್ಕೆ ₹ 2 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲು ಒಪ್ಪಿಗೆ ನೀಡಲಾಯಿತು. ಜುಂಜಪ್ಪ ಅಧ್ಯಯನ ಪೀಠ ಸ್ಥಾಪಿಸಲು ಸಹ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲು ಅನುಮೋದನೆ ಪಡೆಯಲಾಯಿತು. ಆದರೆ ಅನುದಾನ ಮೊತ್ತದ ಬಗ್ಗೆ ಚರ್ಚೆಯಾಗಲಿಲ್ಲ. ಸರ್ಕಾರ ಅನುದಾನ ನೀಡಿದರೆ ಈ ಎರಡೂ ಪೀಠಗಳು ಸ್ಥಾಪನೆಯಾಗಲಿವೆ.

ಜುಂಜಪ್ಪ ಅಧ್ಯಯನ ಪೀಠ ಸ್ಥಾಪಿಸುವಂತೆ ತುಮಕೂರು ವಿ.ವಿಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು  ಪ್ರಸ್ತಾವನೆ ಸಲ್ಲಿಸಿದ್ದರು. ಜುಂಜಪ‍್ಪ ಹಾಗೂ ದೇವರಾಜ ಅರಸು ಪೀಠ ಸ್ಥಾಪನೆಯ ಸಾಧ್ಯತೆ ಪರಿಶೀಲಿಸಲು ಡಾ.ಮೂಗೇಶಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

’ಜುಂಜಪ್ಪ ತುಮುಕೂರು ಜಿಲ್ಲೆಗೆ ಸಂಬಂಧಿಸಿದ ವ್ಯಕ್ತಿ. ಈ  ಪೀಠ ಸ್ಥಾಪನೆಯಿಂದ ವಿ.ವಿಗೆ ಘನತೆ ಬರಲಿದೆ.  ಜುಂಜಪ್ಪನ ಆದರ್ಶ, ಸಾಧನೆಗಳನ್ನು ರಾಜ್ಯದ ಎಲ್ಲ ಕಡೆ ಪಸರಿಸಬಹುದು. ಜುಂಜಪ್ಪನಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವ, ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ ಸ್ಥಾಪಿಸುವ ಕೆಲಸವನ್ನು ಪೀಠ ಮಾಡಬೇಕು’ ಎಂದು ಸಮಿತಿಯ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು.

ಹಿಂದುಳಿದ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಸಂಶೋಧನೆ, ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ವಿಶೇಷ ಉಪನ್ಯಾಸ ನಡೆಸುವ ಉದ್ದೇಶ ದೇವರಾಜು ಅರಸು ಪೀಠ ಹೊಂದಿದೆ.

ಅಭಿನಂದನೆ: ನಂಜುಂಡಸ್ವಾಮಿ ಅಧ್ಯಯನ ಪೀಠ ಸ್ಥಾಪಿಸುವ ವಿ.ವಿ ನಿರ್ಧಾರವನ್ನು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಎಸ್‌.ದೇವರಾಜ್‌, ಬೆಲೆ ಕಾವಲು ಸಮಿತಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ ಕೆಳಹಟ್ಟಿ ಸ್ವಾಗತಿಸಿದರು. ಎಪಿಎಂಸಿಯಲ್ಲಿ ಸಿಂಡಿಕೇಟ್ ಸದಸ್ಯರನ್ನು ಭೇಟಿ ಮಾಡಿದ ಇವರಿಬ್ಬರೂ ತಂಡಕ್ಕೆ ಹಾಗೂ ಕುಲಪತಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಎಪಿಎಂಸಿಗೆ ಭೇಟಿ ನೀಡಿದ ಸದಸ್ಯರು

ತಿಪಟೂರು ಎಪಿಎಂಸಿಗೆ ಸಿಂಡಿಕೇಟ್‌ ಸದಸ್ಯರು ಭೇಟಿ ನೀಡಿದರು. ತೆಂಗು ಡಿಪ್ಲೊಮಾ ಕೋರ್ಸ್ ಆರಂಭಿಸುವ ಬಗ್ಗೆ ಎಪಿಎಂಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕೋರ್ಸ್‌ ಆರಂಭಿಸಲು ಬೇಕಾದ ಕಟ್ಟಡವನ್ನು ತಾತ್ಕಾಲಿಕವಾಗಿ ಪಡೆದುಕೊಳ್ಳುವಂತೆ ಪ್ರಭಾರ ಕುಲಪತಿ ಜಯಶೀಲ ಅವರಿಗೆ ಎಪಿಎಂಸಿ ಕಾರ್ಯದರ್ಶಿ ಗಾಯತ್ರಿ ತಿಳಿಸಿದರು.

ತಿಪಟೂರು ತಾಲ್ಲೂಕಿನ ರಂಗಾಪುರ ಬಳಿ ವಿ.ವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಟ್ಟಡ ಆದ ಬಳಿಕ ಅಲ್ಲಿಗೆ ಕೋರ್ಸ್‌ ಸ್ಥಳಾಂತರಿಸಲಾಗುವುದು ಎಂದು ಜಯಶೀಲ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry