ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಹಳ್ಳಿ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ

Last Updated 9 ಫೆಬ್ರುವರಿ 2018, 7:09 IST
ಅಕ್ಷರ ಗಾತ್ರ

ತುಮಕೂರು: ಕೆಲವೇ ತಿಂಗಳುಗಳ ಹಿಂದೆ ಶಾಲೆಯ ದುಸ್ಥಿತಿ ಕಂಡು ಕೊರಗುತ್ತಿದ್ದ ಶಿಕ್ಷಣ ಪ್ರೇಮಿಗಳು, ಗ್ರಾಮಸ್ಥರು ಈಗ ಶಾಲೆಯ ಕುರಿತು ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ದುಂಬಾಲು ಬಿದ್ದಿದ್ದಾರೆ.

ಇದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಊರ್ಡಿಗೆರೆ ಹೋಬಳಿಯ ಹಿರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಈಗಿನ ಸ್ಥಿತಿ. ಶಾಲೆಯು ಹೊಸ ಕಟ್ಟಡ, ಮೂಲಸೌಕರ್ಯಗಳೊಂದಿಗೆ ಗಮನ ಸೆಳೆಯುತ್ತಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ಅವರ ಇಚ್ಛಾಶಕ್ತಿಯ ಫಲವಾಗಿ ಶಾಲೆಯ ಚಿತ್ರಣ ಬದಲಾಗಿದೆ. 88 ವರ್ಷ ಹಳೆಯದಾದ ಈ ಶಾಲೆಯನ್ನು ಶೈಕ್ಷಣಿಕ ಹಾಗೂ ಮೂಲಸೌಕರ್ಯ ವಿಚಾರದಲ್ಲಿ ಯಾವುದೇ ಖಾಸಗಿ ಶಾಲೆಗಳನ್ನು ಸಮರ್ಥವಾಗಿ ಎದುರಿಸುವಂತೆ ಸಿದ್ಧಗೊಳಿಸಲಾಗಿದೆ.

ಈ ಶಾಲೆ ಅಭಿವೃದ್ಧಿಗೆ ಶಾಸಕರು ₹ 1.5 ಕೋಟಿ ಯೋಜನೆ ರೂಪಿಸಿದ್ದು, ಸದ್ಯ ₹ 1.20 ಕೋಟಿ ಮೊತ್ತದಲ್ಲಿ ಹತ್ತು  ಸುಸಜ್ಜಿತ ಕೊಠಡಿಗಳು ನಿರ್ಮಾಣ ಆಗಿವೆ. ಗ್ರಂಥಾಲಯ, ಕಂಪ್ಯೂಟರ್ ಕೊಠಡಿ ನಿರ್ಮಿಸಲಾಗಿದೆ.

ಗ್ರಂಥಾಲಯದಲ್ಲಿ ಸುಸಜ್ಜಿತವಾಗಿ ರೂಪಿಸಲಾಗುತ್ತಿದ್ದು, ಆಸನ, ಪಠ್ಯ, ವ್ಯಕ್ತಿತ್ವ ವಿಕಸನಕ್ಕೆ, ಜ್ಞಾನಾರ್ಜನೆಗೆ ಉಪ ಯುಕ್ತ ಪುಸ್ತಕಗಳನ್ನು ಇಡಲಾಗುತ್ತದೆ. ಏಕಕಾಲಕ್ಕೆ 30 ಮಕ್ಕಳು ಕುಳಿತು ಬಳಕೆ ಮಾಡುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ತಾಂತ್ರಿಕ ಶಿಕ್ಷಣ ಶಿಕ್ಷಕರನ್ನು ಶಾಸಕರ ಅನುದಾನದಲ್ಲಿಯೇ ನಿಯೋಜಿಸಲಾ ಗುವುದು ಎಂದು ಶಾಸಕರಾದ ಬಿ.ಸುರೇಶ್‌ಗೌಡ ಅವರು ಭರವಸೆ ನೀಡಿದ್ದಾರೆ ಎಂದು ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ನಾಗಮಣಿ ವಿವರಿಸಿದರು.

ಈ ಶಾಲೆ ಪ್ರಾರಂಭವಾದಾಗ ನಾಲ್ಕು ಕೊಠಡಿಗಳಿದ್ದವು. 1ನೇ ತರಗತಿಯಿಂದ 7 ತರಗತಿಯವರೆಗೆ ಇಪ್ಪತ್ತು ವರ್ಷಗಳ ಹಿಂದೆ 400 ವಿದ್ಯಾರ್ಥಿಗಳ ಹಾಜರಾತಿ ಇರುತ್ತಿತ್ತು. ಈಗ 127 ವಿದ್ಯಾರ್ಥಿಗಳ ಹಾಜರಾತಿ ಇದೆ. ಕಾರಣ ಈ ಶಾಲೆ ಸುತ್ತಮುತ್ತ ನಾಲ್ಕಾರು ಕಿ.ಮೀಯಲ್ಲಿ 5 ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಪ್ರಾರಂಭಗೊಂಡಿರುವುದು. ಈಗ ನಮ್ಮ ಶಾಲೆಯು ಆ ಶಾಲೆಗಳನ್ನು ಮೀರಿ ಬೆಳೆದಿದೆ’ ಎಂದು ಶಾಲೆಯ ಶಿಕ್ಷಕಿ ಸುಧಾಮಣಿ ಹೆಮ್ಮೆಯಿಂದ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಸಕರ ವಿಶೇಷ ಆಸಕ್ತಿ ಮತ್ತು ಕಾಪ್ರಾಡ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಎಚ್.ಜಿ.ಚಂದ್ರಶೇಖರ್ ಅವರ ವಿಶೇಷ ಕಾಳಜಿಯಿಂದ ನಮ್ಮ ಶಾಲೆಯು ಈ ಹಂತಕ್ಕೆ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಇದೇ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ, ಯುಕೆಜಿ ಜತೆಗೆ 8ನೇ ತರಗತಿಯೂ ಈ ಶಾಲೆಯಲ್ಲಿ ಪ್ರಾರಂಭವಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಮೂಲಸೌಕರ್ಯಗಳು ಶಾಲೆಗೆ ಲಭಿಸಿರುವುದು ಸಂತೋಷವಾಗಿದೆ ಎಂದು ಸಿಆರ್‌ಪಿ ಟಿ.ಎನ್.ಜಗದೀಶ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ನಾನು ಈ ಶಾಲೆಯ ಹಳೆಯ ವಿದ್ಯಾರ್ಥಿ. ಶಿಥಿಲಗೊಂಡ ಶಾಲೆಯ ಕಂಡು ಬಹಳ ವೇದನೆಯಾಗುತ್ತಿತ್ತು. ಶಾಸಕರಿಗೆ ಗ್ರಾಮಸ್ಥರಿಗೆ ಶಾಲೆ ಅಭಿವೃದ್ಧಿಗೆ ಮನವಿ ಮಾಡಿದಾಗ ಹೆಚ್ಚು ಕಾಳಜಿ ತೋರಿಸಿದರು. ಆಗಸ್ಟ್‌ನಲ್ಲಿ ಶಂಕು ಸ್ಥಾಪನೆ ಮಾಡಿ 5–6 ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳುವಂತೆ ಮಾಡಿದ್ದಾರೆ. ಅನುದಾನ ನಿರೀಕ್ಷೆಯಲ್ಲಿಯೇ ₹ 70 ಲಕ್ಷ ಸಾಲ ಮಾಡಿ ಶಾಸಕರು ಈ ಕೆಲಸ ಮಾಡಿದ್ದಾರೆ’ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಜಗದೀಶ್ ವಿವರಣೆ ನೀಡಿದರು.

ನೂತನ ಕಟ್ಟಡ ಉದ್ಘಾಟನೆ: ಶಾಲೆಯ ವಜ್ರ ಮಹೋತ್ಸವ, ಶಾಲಾ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಶುಕ್ರವಾರ (ಫೆ. 9ರಂದು) ಬೆಳಿಗ್ಗೆ 11ಕ್ಕೆ  ನಡೆಯಲಿದೆ. ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ, ಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ, ‘ಪ್ರಜಾವಾಣಿ’ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅತಿಥಿಗಳಾಗಿ ಪಾಲ್ಗೊಳ್ಳುವರು.

‘ಗ್ರಾಮೀಣ ಮಕ್ಕಳ ಉನ್ನತಿಗೆ ಆದ್ಯತೆ’

‘ಶಿಕ್ಷಣದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂಬುದರಲ್ಲಿ ಅಚಲ ನಂಬಿಕೆ ನನ್ನದು. ಹೀಗಾಗಿ, ಕ್ಷೇತ್ರದಲ್ಲಿ ಸುಸಜ್ಜಿತ ಸರ್ಕಾರಿ ಶಾಲೆಗಳ ನಿರ್ಮಾಣಕ್ಕೆ, ನವೀಕರಣಕ್ಕೆ ಆದ್ಯತೆ ನೀಡಲಾಗಿದೆ’ ಎಂದು ಶಾಸಕ ಬಿ.ಸುರೇಶಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿರೇಹಳ್ಳಿ ಶಾಲೆಗೆ 88 ವರ್ಷ. ದಲಿತರು ಬಡವರು, ಕಾರ್ಮಿಕರ ಮಕ್ಕಳೇ ಹೆಚ್ಚು ಸರ್ಕಾರಿ ಶಾಲೆಗೆ ಬರುತ್ತಾರೆ. ಶಿಥಿಲಗೊಂಡ ಶಾಲೆ ಅಭಿವೃದ್ಧಿಪಡಿಸಲಾಯಿತು’ ಎಂದು ಹೇಳಿದರು.

ಈ ಪ್ರಯತ್ನಕ್ಕೆ ಉದಾರ ಮನಸ್ಸಿನಿಂದ ಕೈ ಜೋಡಿಸಿದವರು ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಕಾಪ್ರಾಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್.ಜಿ.ಚಂದ್ರಶೇಖರ್ ಅವರು ಎಂದು ಹೇಳಿದರು.

ಈಗಾಗಲೇ ಕ್ಷೇತ್ರದಲ್ಲಿ ಹೆತ್ತೇನಹಳ್ಳಿ, ಗೂಳೂರು, ಹೊನಸಿಗೆರೆ, ಬೆಳ್ಳಾವಿ, ನಾಗವಲ್ಲಿ, ಊರ್ಡಿಗೆರೆ, ಊರುಕೆರೆ, ದುರ್ಗದಹಳ್ಳಿ, ಮಸ್ಕಲ್, ಸೀತಕಲ್ಲು, ದೊಡ್ಡವೀರನಹಳ್ಳಿ ಗ್ರಾಮದಲ್ಲಿ ಇಂತಹ ಶಾಲೆಗಳನ್ನು ನಿರ್ಮಿಸಲಾಗಿದೆ. ಶಿಕ್ಷಣ ವಾರ್ತೆ ಪತ್ರಿಕೆಯಲ್ಲೂ ಶಾಲೆ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಹಿರೇಹಳ್ಳಿ ಶಾಲೆಯ ವಿಶೇಷ ಎಂದರೆ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ಜತೆಗೆ ಧ್ಯಾನ ಮಂದಿರವನ್ನು ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ಹಳ್ಳಿ ಮಕ್ಕಳ ಶಿಕ್ಷಣಕ್ಕಾಗಿ ಸಣ್ಣ ಕೊಡುಗೆ

ಈ ಶಾಲೆಯ ಬಗ್ಗೆ ನಮಗೊಂದಿಷ್ಟು ಪ್ರೀತಿ ಇದ್ದೇ ಇತ್ತು. ಶಾಸಕರು ಕ್ಷೇತ್ರದಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿ ಯೋಜನೆ, ಅಭಿವೃದ್ಧಿಯಾದ ಶಾಲೆ ಕಂಡಾಗ ಈ ಶಾಲೆ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂಬ ಉತ್ಸುಕತೆ ಮೂಡಿತು ಎಂದು ಕಾಪ್ರಾಡ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಎಚ್.ಜಿ.ಚಂದ್ರಶೇಖರ್ ’ಪ್ರಜಾವಾಣಿ’ಗೆ ವಿವರಿಸಿದರು.

ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯ ಕೊರತೆ ಇರುವುದರಿಂದಲೇ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ. ಇದು ವಾಸ್ತವ. ಸರ್ಕಾರಿ ಶಾಲೆಯಲ್ಲೇ ಅಂತಹ ಸೌಕರ್ಯ, ಶಿಕ್ಷಣ ಲಭಿಸಿದರೆ ಹೆಚ್ಚಿನ ಹಣ ಕೊಟ್ಟು ಬೇರೆ ಕಡೆ ತಮ್ಮ ಮಕ್ಕಳನ್ನು ಯಾಕೆ ಸೇರಿಸುತ್ತಾರೆ ಎಂದು ಪ್ರಶ್ನಿಸಿದರು.

ಹಿರೇಹಳ್ಳಿ ಶಾಲೆಯಲ್ಲಿ ಹಳ್ಳಿಮಕ್ಕಳು, ಕಾರ್ಮಿಕರ ಮಕ್ಕಳೇ ಓದುತ್ತಿದ್ದಾರೆ. ಸೌಕರ್ಯಯುತ ಶಾಲೆಯಲ್ಲಿ ಶಿಕ್ಷಣ ಲಭಿಸಿ ಭವಿಷ್ಯ ಉಜ್ವಲವಾದರೆ ಅದೇ ದೊಡ್ಡ ನಮಗೆ ಖುಷಿ. ಹೀಗಾಗಿ, ಈ ಶಾಲೆಗೆ ಒಂದಿಷ್ಟು ಸಹಾಯ ಮಾಡಲಾಗಿದೆ. ಅಡುಗೆ ಕೊಠಡಿ, ಶೌಚಾಲಯ ನಿರ್ಮಾಣಕ್ಕೂ ಆರ್ಥಿಕ ನೆರವು ಕಲ್ಪಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT