ಕನ್ನಡ ತೇರು ಎಳೆಯಲು ಕೈಜೋಡಿಸಿ

7

ಕನ್ನಡ ತೇರು ಎಳೆಯಲು ಕೈಜೋಡಿಸಿ

Published:
Updated:

ನರಸಲಗಿ (ಬಸವನಬಾಗೇವಾಡಿ): ‘ಗ್ರಾಮದಲ್ಲಿ ಫೆ.17ರಂದು ಹಮ್ಮಿಕೊಂಡಿರುವ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕನ್ನಡದ ತೇರನೆಳೆಯಲು ಎಲ್ಲರೂ ಕೈಜೋಡಿಸಬೇಕು’ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಣ್ಣ ಎಚ್‌.ಎಸ್‌ ಮನವಿ ಮಾಡಿದರು.

ಗ್ರಾಮದಲ್ಲಿ ನಡೆಯಲಿರುವ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕುರಿತು ಚರ್ಚಿಸಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಶಿಕ್ಷಕರು ಸಹ ಕಾರ್ಯ ನಿರ್ವಹಿಸುವ ಮೂಲಕ ಸಮ್ಮೇಳನವನ್ನು ಯಶಸ್ಸುಗೊಳಿಸಬೇಕು’ ಎಂದೂ ಮನವಿ ಮಾಡಿದರು. ‘ಸಮ್ಮೇಳನದ ದಿನ ಸಮ್ಮೇಳನ ಅಧ್ಯಕ್ಷರ ಸ್ವಾಗತ, ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಶಿಕ್ಷಕರು, ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಮಕ್ಕಳಿಗೆ ಸಮ್ಮೇಳನದ ಮಹತ್ವ ತಿಳಿಸಿಕೊಡುವಂತಾಗಬೇಕು’ ಎಂದು ಹೇಳಿದರು.

ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಯುವರಾಜ ಮಾದನಶೆಟ್ಟಿ, ಶಿಕ್ಷಕ ವೈ.ಕೆ.ಪತ್ತಾರ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಮಹತ್ವನ್ನು ತಿಳಿಸಿಕೊಡುವುದರೊಂದಿಗೆ ಕನ್ನಡಾಭಿಮಾನವನ್ನು ಬೆಳೆಸುತ್ತದೆ ಎಂದು ಹೇಳಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಆರ್‌.ಜಿ.ಅಳ್ಳಗಿ ಮಾತನಾಡಿ, ವಿವಿಧ ಸಮಿತಿಗಳ ಸದಸ್ಯರು ಸಂಘಟಿತ ಕಾರ್ಯದಲ್ಲಿ ತೊಡಗುವ ಮೂಲಕ ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಸಾಹಿತ್ಯ ಸಮ್ಮೇಳನವನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಮೂಲಕ ಗ್ರಾಮೀಣ ಜನರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿಯ ಮಹತ್ವ ತಿಳಿಸಿಕೊಡುವ ಕಾರ್ಯ ಮಾಡಲಾಗುತ್ತಿದೆ’ ಎಂದು ಹೇಳಿದರು.

ಹಿರಿಯ ಶಿಕ್ಷಕ ಗಿರಿಸಾಗರ, ಎ.ಎಂ.ಹಳ್ಳೂರ ಮಾತನಾಡಿದರು. ಡಿ.ಎಸ್.ಪಾಟೀಲ, ಆರ್.ಎಸ್.ಹಚಡದ, ನಾಗೇಶ ನಾಗೂರ ಉಪಸ್ಥಿತರಿದ್ದರು. ಸಿಆರ್‌ಸಿ ಕೊಟ್ರೇಶ ಹೆಗಡ್ಯಾಳ ನಿರೂಪಿಸಿ, ವಂದಿಸಿದರು. ಸಭೆಯಲ್ಲಿ ಇವಣಗಿ, ಹಂಚಿನಾಳ, ನರಸಲಗಿ, ಅಂಬಳನೂರ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry