ಮಾವಿನ ಮಡಿಲಲಿ ಗುಡುಗು ಸಹಿತ ಮಳೆ

7

ಮಾವಿನ ಮಡಿಲಲಿ ಗುಡುಗು ಸಹಿತ ಮಳೆ

Published:
Updated:

ಶ್ರೀನಿವಾಸಪುರ: ಪಟ್ಟಣದ ಸುತ್ತಮುತ್ತ ಬುಧವಾರ ರಾತ್ರಿ ಗುಡುಗು ಮಿಂಚಿನಿಂದ ಕೂಡಿದ ಮಳೆ ಸುರಿಯಿತು. ಮಳೆಯೊಂದಿಗೆ ಬೀಸಿದ ಬಿರುಗಾಳಿಯ ಹೊಡೆತಕ್ಕೆ ಮಾವು ಹಾಗೂ ನುಗ್ಗೆ ಹೂವು ಉದುರಿಬಿದ್ದಿವೆ.

ಬುಧವಾರ ಬೆಳಿಗ್ಗೆ ಮೋಡ ಮುಸುಗಿದ ವಾತಾವರಣ ಇತ್ತಾದರೂ, ಮಳೆಯ ನಿರೀಕ್ಷೆ ಇರಲಿಲ್ಲ. ರೈತರು ಎಂದಿನಂತೆ ಅವರೆ ಹಾಗೂ ಹುರುಳಿ ಕಾಯಿ ಒಕ್ಕಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಸಂಜೆ ಕತ್ತಲಾಗುತ್ತಿದ್ದಂತೆ ಆಕಾಶ ಕಪ್ಪುಗಟ್ಟಿತು. ಆದರೂ ರೈತರು ಅದನ್ನು ನಿರ್ಲಕ್ಷಿಸಿ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಇದ್ದಕ್ಕಿದಂತೆ ಆಕಾಶದಲ್ಲಿ ಗುಡುಗು ಸಿಡಿಲಿನ ಆರ್ಭಟ ಶುರುವಾಯಿತು.

ನೋಡುತ್ತಿದ್ದಂತೆ ಬಿರುಗಾಳಿಯೊಂದಿಗೆ ಜೋರು ಮಳೆ ಸುರಿಯತೊಡಗಿತು. ಮಳೆಯ ನಿರೀಕ್ಷೆ ಇಲ್ಲದ ರೈತರು, ಅನಿರೀಕ್ಷಿತ ಮಳೆಯಿಂದ ಕಂಗಾಲಾದರು. ಮನೆ ಮಂದಿಯೆಲ್ಲ ಸೇರಿ ಬೀಜ ಉಡ್ಡೆ ಮಾಡುವ ಕಾರ್ಯದಲ್ಲಿ ನಿರತರಾದರು. ಪ್ಲಾಸ್ಟಿಕ್‌ ಹಾಳೆ ಮುಚ್ಚಿ ಕಾಳು ನೆನೆಯದಂತೆ ಮಾಡುವ ಪ್ರಯತ್ನ ಮಾಡಿದರು. ಆದರೂ ಸ್ವಲ್ಪ ಪ್ರಮಾಣದ ಧಾನ್ಯ ನೆನೆದೇ ಹೋಯಿತು.

ಜಾನುವಾರು ಮೇವಿಗಾಗಿ ಸಂಗ್ರಹ ಮಾಡಿದ್ದ ಹುರುಳಿ ಹೊಟ್ಟು ಹಾಗೂ ಅವರೆ ಹೊಟ್ಟು ಮಳೆಗೆ ಸಿಕ್ಕಿ ನಿರಾಯಿತು. ಅದೇ ಸಂದರ್ಭದಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮವಾಗಿ ರೈತರು ಹೆಚ್ಚಿನ ತೊಂದರೆಗೆ ಒಳಗಾದರು. ಕೆಲವರು ಪ್ಲಾಸ್ಟಿಕ್‌ ಹಾಳೆಯನ್ನು ಹೊಟ್ಟಿನ ಮೇಲೆ ಹೊದಿಸಿ ರಕ್ಷಣೆ ಮಾಡಲು ಪ್ರಯತ್ನಿಸಿದರಾದರೂ, ಬಿರುಗಾಳಿ ಅವರ ಪ್ರಯತ್ನಕ್ಕೆ ತೊಂದರೆ ಕೊಟ್ಟಿತು.

ಪಟ್ಟಣದಲ್ಲಿ ಚರಂಡಿಗಳು ಮಳೆ ನೀರಿನಿಂದ ತುಂಬಿ ಹರಿದವು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ನಾಗರಿಕರ ಓಡಾಟಕ್ಕೆ ತೊಂದರೆ ಉಂಟಾಯಿತು. ಬಿರುಗಾಳಿ ಹೊಡೆತಕ್ಕೆ ಪೂರ್ಣ ಪ್ರಮಾಣದಲ್ಲಿ ಅರಳಿದ್ದ ಮಾವಿನ ಹೂವುಗಳು ಉದುರಿವೆ ಎಂದು ಮಣಿಗಾನಹಳ್ಳಿ ಗ್ರಾಮದ ಮಾವು ಬೆಳೆಗಾರ ಎನ್‌.ಶ್ರೀರಾಮರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry