8 ವರ್ಷದ ಬಳಿಕ ಹೊಸ ಸಮಿತಿ ನೇಮಕ!

7

8 ವರ್ಷದ ಬಳಿಕ ಹೊಸ ಸಮಿತಿ ನೇಮಕ!

Published:
Updated:
8 ವರ್ಷದ ಬಳಿಕ ಹೊಸ ಸಮಿತಿ ನೇಮಕ!

ಬಳ್ಳಾರಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಹೈದರಾಬಾದ್‌–ಕರ್ನಾಟಕ ಅಧ್ಯಯನ ಪೀಠ ಸ್ಥಾಪನೆಗೆ ಸಂಬಂಧಿಸಿ ಸಮಗ್ರ ಅಧ್ಯಯನ ನಡೆಸಿ ರೂಪುರೇಷೆಗಳನ್ನು ಸಿದ್ಧಪಡಿಸಲು ಎಂಟು ವರ್ಷದ ಹಿಂದೆ ರಚಿಸಲಾಗಿದ್ದ ಸಮಿತಿಯನ್ನು ವಿಸರ್ಜಿಸಿ ಉನ್ನತಶಿಕ್ಷಣ ಇಲಾಖೆಯು ಹೊಸ ಸಮಿತಿಯನ್ನು ರಚಿಸಿದೆ. ಕಲಬುರ್ಗಿ ಪ್ರಾದೇಶಿಕ ಆಯುಕ್ತರು ಅಧ್ಯಕ್ಷರಾಗಿರುವ ಸಮಿತಿಯು ಒಂದು ತಿಂಗಳೊಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಜ.25ರಂದು ಇಲಾಖೆಯು ಆದೇಶ ಹೊರಡಿಸಿದೆ.

14 ಸದಸ್ಯರು: ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಆರ್‌.ನಿರಂಜನ್‌ ಸೇರಿದಂತೆ ರಾಜ್ಯದ ಇತಿಹಾಸ, ಮಾನವಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರದಲ್ಲಿ ಪರಿಣಿತರಾದ ವಿವಿಧ ವಿಶ್ವವಿದ್ಯಾಲಯಗಳ ಬೋಧಕ 14 ಸದಸ್ಯರನ್ನು ಸಮಿತಿಗೆ ನೇಮಕ ಮಾಡಲಾಗಿದೆ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಮೊಹ್ಮದ್‌ ನಜರುಲ್‌ ಬಾರಿ, ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಎನ್‌.ಎಲ್‌.ರಾಜೇಂದ್ರಪ್ರಸಾದ್‌, ನಿವೃತ್ತ ಪ್ರಾಧ್ಯಾಪಕ ಮಹಾಬಲೇಶ್ವರಪ್ಪ, ಉರ್ದು ಲೇಖಕ ಮಾಜಿದ ದಾಗಿ, ನಿವೃತ್ತ ಪ್ರಾಧ್ಯಾಪಕಿ ಪ್ರೊ.ಛಾಯಾದೇಗಾಂಕರ, ಪ್ರೊ.ಜಗನ್ನಾಥ ಸಿಂದೆ, ಪ್ರೊ.ಎಸ್‌.ಎ.ಪಾಲೇಕರ್, ಪ್ರೊ.ಜಯಶ್ರೀ ದಂಡೆ, ಉರ್ದು ಅಕಾಡೆಮಿ ಮಾಜಿ ಅಧ್ಯಕ್ಷ ವಹಾಬ್‌ ಅಂದಲೀಬ್‌, ಕೊಪ್ಪಳದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್‌.ಮಲ್ಲಿಕಾರ್ಜುನ, ನಿವೃತ್ತ ಎಡಿಜಿಪಿ ಕೆ.ಎಸ್‌.ಎನ್‌.ಚಿಕ್ಕೆರೂರು, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಅಮರೇಶ ನುಗಡೋಣಿ ಸಮಿತಿಯಲ್ಲಿದ್ದಾರೆ. ಕಲಬುರ್ಗಿಯ ಲಕ್ಷ್ಮಣ ದಸ್ತಿ ಸದಸ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ನಿಷ್ಕ್ರಿಯವಾಗಿದ್ದ ಸಮಿತಿ: ಇದಕ್ಕೂ ಮುನ್ನ, ಪ್ರೊ.ವಸಂತ ಕುಷ್ಠಗಿ ಅಧ್ಯಕ್ಷತೆಯಲ್ಲಿ 2010ರ ಸೆಪ್ಟೆಂಬರ್‌ನಲ್ಲಿ ರಚಿಸಲಾಗಿದ್ದ ಸಮಿತಿಯು ಪ್ರಗತಿ ಸಾಧಿಸದೇ ಇದ್ದುದರಿಂದ ಸಮಿತಿಯನ್ನು ಪುನರ್‌ರಚಿಸುವಂತೆ ಕೋರಿ 2016ರ ಡಿಸೆಂಬರ್‌ನಲ್ಲಿ ಅಂದಿನ ಪ್ರಾದೇಶಿಕ ಆಯುಕ್ತರು ಇಲಾಖೆಗೆ ಪತ್ರ ಬರೆದಿದ್ದರು. ಅದಾಗಿ ಒಂದು ವರ್ಷ ಕಳೆದ ಬಳಿಕ ಹೊಸ ಸಮಿತಿ ರಚನೆಯ ಆದೇಶವು ಜ.25ರಂದು ಹೊರಬಿದ್ದಿದೆ.

ನಿನ್ನೆ ದೊರಕಿತು: ‘ಸಮಿತಿಗೆ ನೇಮಿಸಿದ ಆದೇಶ ಪತ್ರವು ಬುಧವಾರವಷ್ಟೇ ನನ್ನ ಕೈಸೇರಿತು. ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅಧ್ಯಯನ ಪೀಠ ಸ್ಥಾಪನೆ ಸಂಬಂಧ ಸಲಹೆಗಳನ್ನು ನೀಡುವೆ’ ಎಂದು ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎನ್‌.ಎಲ್‌.ರಾಜೇಂದ್ರ ಪ್ರಸಾದ್‌ ‘ಪ್ರಜಾವಾಣಿ’ಗೆ  ಗುರುವಾರ ತಿಳಿಸಿದರು.

* * 

ಹೈ–ಕ ಭಾಗದ ಜನಜೀವನದ ಒಳಿತಿಗಾಗಿ ಮತ್ತು ಸಮಗ್ರ ಅಭಿವೃದ್ಧಿಗೆ ನೀಲಿನಕ್ಷೆಯನ್ನು ದೊರಕಿಸವ ರೀತಿಯಲ್ಲಿ ಅಧ್ಯಯನ ಪೀಠವು ರೂಪುಗೊಳ್ಳಬೇಕು

–ಎನ್‌.ಎಲ್‌.ರಾಜೇಂದ್ರಪ್ರಸಾದ್‌, ನೂತನ ಸಮಿತಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry