ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕರಿಗೆ ಟಿಕೆಟ್‌ ಆತಂಕ, ಮತದಾರರಿಗೆ ಕುತೂಹಲ

Last Updated 9 ಫೆಬ್ರುವರಿ 2018, 9:26 IST
ಅಕ್ಷರ ಗಾತ್ರ

ಬೀದರ್‌: ಚುನಾವಣಾ ಆಯೋಗ ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಅಧಿಸೂಚನೆ ಹೊರಡಿಸಬೇಕಿದೆ. ಆದರೆ, ಆಗಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಬಿಚ್ಚಿಕೊಂಡಿದೆ. ರಾಜಕೀಯ ಪಕ್ಷಗಳ ಎರಡನೇ ಸಾಲಿನ ನಾಯಕರು ತಮ್ಮ ಪಕ್ಷದ ವರಿಷ್ಠರ ಮೇಲೆ ಪ್ರಭಾವ ಬೀರಿ ಟಿಕೆಟ್‌ ಪಡೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ನಾಯಕರು ಟಿಕೆಟ್‌ ಆತಂಕದಲ್ಲಿದ್ದರೆ, ಮತದಾರರು ಕುತೂಹಲದಲ್ಲಿದ್ದಾರೆ.

ಬೀದರ್‌ ವಿಧಾನಸಭಾ ಕ್ಷೇತ್ರದ ಬಗೆಗೆ ಹೇಳುವುದಾದರೆ ಇಲ್ಲಿ ಈ ಬಾರಿ ಘಟಾನುಘಟಿಗಳು ಇಲ್ಲ. ಕಾಂಗ್ರೆಸ್‌ನ ಶಾಸಕ ರಹೀಂ ಖಾನ್‌ ಮರು ಆಯ್ಕೆಯ ಹುಮ್ಮಸ್ಸಿನಲ್ಲಿದ್ದಾರೆ. ಮುಖ್ಯಮಂತ್ರಿಯೊಂದಿಗೆ ನೇರ ಸಂಪರ್ಕ ಇರುವ ಕಾರಣ ಟಿಕೆಟ್‌ ಸಹಜವಾಗಿ ದೊರೆಯಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ.

ಶಾಹಿನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮನ್ನಾನ್‌ ಸೇಠ್‌ ಅವರು ಹಾಲಿ ಶಾಸಕ ರಹೀಂ ಖಾನ್ ಜನರೊಂದಿಗೆ ಹೆಚ್ಚು ಬೆರೆಯುತ್ತಿಲ್ಲ ಎನ್ನುವ ಕಾರಣ ನೀಡಿ ಪಕ್ಷದೊಳಗೆ ಅಸಮಾಧಾನದ ಕಿಡಿ ಹಚ್ಚಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತಿದ್ದಾರೆ. ಮುಂಚೆ ಕಾಂಗ್ರೆಸ್‌ನಲ್ಲೇ ಇದ್ದ ಸೇಠ್ ಹಿಂದಿನ ಚುನಾವಣೆಯಲ್ಲಿ ಬೀದರ್‌ ದಕ್ಷಿಣ ಕ್ಷೇತ್ರದಿಂದ ಬಿಎಸ್‌ಪಿಯಿಂದ ಸ್ಪರ್ಧಿಸಿ ಪರಾಭವಗೊಂಡು ಮತ್ತೆ ಕಾಂಗ್ರೆಸ್‌ಗೆ ಬಂದಿದ್ದಾರೆ.

15 ದಿನಗಳ ಅವಧಿಯಲ್ಲೇ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. 13 ಜನ ಮುಖಂಡರು ತಾವೂ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಕೊನೆಯ ಗಳಿಗೆಯಲ್ಲಿ ರಹೀಂ ಖಾನ್ ಹಾಗೂ ಮನ್ನಾನ್‌ ಸೇಠ್‌ ಮಧ್ಯೆ ಟಿಕೆಟ್‌ಗೆ ಪೈಪೋಟಿ ನಡೆದರೂ ಅಚ್ಚರಿ ಇಲ್ಲ.

ಮಾಜಿ ಸಚಿವ ದಿ.ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಮೂರು ತಿಂಗಳ ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬೆಂಬಲಿಗರ ಶಕ್ತಿ ಪ್ರದರ್ಶಿಸಿ ಬಿಜೆಪಿಗೆ ಸೇರಿದ್ದಾರೆ. ಯಡಿಯೂರಪ್ಪ ಬಹಿರಂಗವಾಗಿಯೇ ಸೂರ್ಯಕಾಂತ ಅವರ ಬೆನ್ನು ತಟ್ಟಿ ಪಕ್ಷದ ಟಿಕೆಟ್‌ ಕೊಡುವ ಭರವಸೆ ನೀಡಿದ್ದಾರೆ.

ಇನ್ನೊಂದೆಡೆ ಹಿಂದೂ ಸಂಘಟನೆಯಲ್ಲಿ 30 ವರ್ಷಗಳಿಂದ ಗುರುತಿಸಿಕೊಂಡಿರುವ ಈಶ್ವರ ಸಿಂಗ್‌ ಠಾಕೂರ್‌ ಹಾಗೂ ಉದ್ಯಮಿ ಗುರುನಾಥ ಕೊಳ್ಳೂರ್‌ ಅವರೂ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈಶ್ವರಸಿಂಗ್‌ ಅವರಿಗೆ ರಾಜ್ಯದ ನಾಯಕರಿಗಿಂತಲೂ ರಾಷ್ಟ್ರೀಯ ನಾಯಕರ ಮೇಲೆ ಅತಿಯಾದ ವಿಶ್ವಾಸ ಇದೆ. ಅವರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರನ್ನು ಭೇಟಿಯಾಗಿ ಪಕ್ಷದ ಚಟುವಟಿಕೆಗಳ ಬಗೆಗೆ ವಿವರಣೆ ನೀಡಿದ್ದಾರೆ. ತಮಗೇ ಟಿಕೆಟ್‌ ಕೊಡುವಂತೆ ಮನವಿ ಮಾಡಿರುವ ವಿಷಯ ಬಿಜೆಪಿ ವಲಯದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

‘ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುವೆ. ಪಕ್ಷದ ರಾಷ್ಟ್ರೀಯ ಸಮಿತಿಯು ಟಿಕೆಟ್‌ ಅಂತಿಮಗೊಳಿಸಲಿದೆ. ಪಕ್ಷದಲ್ಲಿನ ಸುದೀರ್ಘ ಸೇವೆಯನ್ನು ಪರಿಗಣಿಸಿ ನನಗೆ ಟಿಕೆಟ್‌ ಕೊಡುವ ಆತ್ಮವಿಶ್ವಾಸ ಇದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್‌ ಠಾಕೂರ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಕೊಳ್ಳೂರ್‌ ಅವರೂ ಪಕ್ಷದ ಅನೇಕ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.

ಜಾತ್ಯತೀತ ಜನತಾದಳದಲ್ಲಿ ಹೊಸ ಮುಖಗಳೇ ಕಾಣುತ್ತಿವೆ. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಮುಖಂಡ ಅಶೋಕ ಕರಂಜಿ ಹಾಗೂ ವ್ಯಾಪಾರಿ ಚಂದು ಪಸರಗೆ ಟಿಕೆಟ್‌ ಆಕಾಂಕ್ಷಿ ಆಗಿದ್ದಾರೆ. ಕುಮಾರಸ್ವಾಮಿ ಅವರಿಗೆ ರಮೇಶ ಪಾಟೀಲ ಬಗೆಗೆ ಒಲವು ಇದೆ. ಆದರೂ ಇವರೆಲ್ಲರೂ ಟಿಕೆಟ್‌ ದೊರೆತ ನಂತರವೇ ಪ್ರಚಾರ ಆರಂಭಿಸಲು ನಿರ್ಧರಿಸಿದ್ದಾರೆ.

‘ನಗರಸಭೆಯಲ್ಲಿ ಜೆಡಿಎಸ್‌ನ 9 ಸದಸ್ಯರಿದ್ದಾರೆ. ಬೀದರ್‌ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಭಾವ ಇರುವುದಕ್ಕೆ ಇದು ಉತ್ತಮ ಉದಾಹರಣೆ. ರಾಷ್ಟ್ರೀಯ ಪಕ್ಷಗಳು ಏನೇ ತಂತ್ರ ರೂಪಿಸಿದರೂ ಮತದಾರರು ಪ್ರಾದೇಶಿಕ ಪಕ್ಷವನ್ನು ಕಡೆಗಣಿಸಲಾರರು’ ಎನ್ನುತ್ತಾರೆ ಜೆಡಿಎಸ್‌ನ ರಮೇಶ ಪಾಟೀಲ ಸೊಲ್ಲಾಪುರ.

ಇತಿಹಾಸ ಸೃಷ್ಟಿಸಿದ್ದ ಹಾಸ್ಮಿ

1994ರಲ್ಲಿ ರಾಜ್ಯ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಹುಜನ ಸಮಾಜ ಪಕ್ಷದ ಈ ಕ್ಷೇತ್ರದಲ್ಲಿ ಖಾತೆ ತೆರೆದು ಗಮನ ಸೆಳೆದಿತ್ತು. ಜುಲ್ಫೇಕರ್‌ ಹಾಸ್ಮಿ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ್ದರು.

ನಂತರ ಕಾಂಗ್ರೆಸ್‌ ಸೇರಿ, ತದ ನಂತರ ಜೆಡಿಎಸ್‌ ಸೇರಿ ಅಲ್ಲಿಂದಲೂ ಹೊರ ಬಂದು ಈಗ ಮತ್ತೆ ಬಹುಜನ ಸಮಾಜ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. 1994ರ ನಂತರದ ಚುನಾವಣೆಗಳಲ್ಲಿ ಅವರು 40 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದ ದಾಖಲೆಗಳು ಇವೆ. ಆದರೆ, ಕಳೆದ ಬಾರಿ ಕೇವಲ ಎರಡು ಸಾವಿರ ಮತ ಪಡೆದಿದ್ದರು.

ಮುಸ್ಲಿಮರ ಹಕ್ಕುಗಳಿಗೆ ಹೋರಾಟ ನಡೆಸುವ ಮಜಲಿಸ್‌ ಇತ್ತೆ? ಹಾದ್ ಮುಸ್ಲಿಮಿನ್‌ ಪಾರ್ಟಿ (ಎಂಐಎಂ) ಬೆಂಬಲದೊಂದಿಗೆ ಜುಲ್ಫೇಕರ್‌ ಹಾಸ್ಮಿ ಬಿಎಸ್‌ಪಿಯಿಂದ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ರಹೀಂ ಖಾನ್ ಹಾಗೂ ಜುಲ್ಫೇಕರ್‌ ಹಾಸ್ಮಿ ಬಿಟ್ಟರೆ ಉಳಿದ ಎಲ್ಲರೂ ಹೊಸಬರೇ ಆಗಿದ್ದಾರೆ.

ಸತತ ಎರಡನೇ ಬಾರಿ ಒಬ್ಬರೇ ಗೆದ್ದಿದ್ದರು

ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ ಮಕ್ಸೂದ್‌ಅಲಿ ಖಾನ್‌ ನಂತರ ಒಬ್ಬ ಅಭ್ಯರ್ಥಿಯೂ ಸತತ ಎರಡನೇ ಬಾರಿಗೆ ಗೆದ್ದಿರುವ ದಾಖಲೆ ಇಲ್ಲ. ಮುಸ್ಲಿಂ ಅಭ್ಯರ್ಥಿಗಳೇ ಅತಿಹೆಚ್ಚು ಬಾರಿ ಗೆಲುವು ಸಾಧಿಸಿದ್ದಾರೆ. ಮೂರು ಬಾರಿ ಉಪ ಚುನಾವಣೆ ನಡೆದರೂ ಮುಸ್ಲಿಂ ಅಭ್ಯರ್ಥಿಯೇ ಗೆದ್ದಿದ್ದಾರೆ.

ಈ ಕ್ಷೇತ್ರದಲ್ಲಿ ಆರ್ಯವೈಶ್ಯ, ಬ್ರಾಹ್ಮಣ, ಮರಾಠಾ ಹಾಗೂ ಕುರುಬ ಸಮುದಾಯದ ಅಭ್ಯರ್ಥಿಗಳು ಗೆದ್ದಿದ್ದಾರೆ. ಹಿಂದೆ ರಾಜಕೀಯದಲ್ಲಿ ಜಾತಿ ಬೆರೆತುಕೊಂಡಿರಲಿಲ್ಲ. ಈಗ ಜಾತಿಯೇ ಪ್ರಾಮುಖ್ಯ ಪಡೆದಿದೆ. ಹೀಗಾಗಿ ಪ್ರತಿಯೊಬ್ಬರು ಜಾತಿ ಲೆಕ್ಕಚಾರ ಹಾಕಿಕೊಂಡು ಸ್ಪರ್ಧೆಗೆ ಇಳಿಯಲು ಮುಂದಾಗಿದ್ದಾರೆ.

2,04,252 ಒಟ್ಟು ಮತದಾರರು (2016 ರ ಪ್ರಕಾರ)


1,05,418 ಪುರುಷರು


98,838 ಮಹಿಳೆಯರು


214 ಮತಗಟ್ಟೆ ಕೇಂದ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT