ಬುಧವಾರ, ಡಿಸೆಂಬರ್ 11, 2019
23 °C

‘ಕದನ’ಕ್ಕೂ ಮುನ್ನವೇ ಶುರುವಾದ ‘ಕೆಸರೆರಚಾಟ’

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

‘ಕದನ’ಕ್ಕೂ ಮುನ್ನವೇ ಶುರುವಾದ ‘ಕೆಸರೆರಚಾಟ’

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ವಿವಿಧ ಪಕ್ಷಗಳ ನಾಯಕರು ಚುನಾವಣಾ ‘ಅಖಾಡ’ ಸಿದ್ಧಗೊಳಿಸುವಲ್ಲಿ ತೊಡಗಿರುವ ನಡುವೆಯೇ, ಉಪನ್ಯಾಸಕ ಪ್ರದೀಪ್ ಈಶ್ವರ್ ಅವರು ಶಾಸಕ ಡಾ.ಕೆ.ಸುಧಾಕರ್ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಎತ್ತಿರುವ ಪ್ರಶ್ನೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.

ಜನವರಿ 27ರಿಂದ ಫೆಬ್ರುವರಿ 7ರವರೆಗೆ ಪ್ರದೀಪ್‌ ಅವರು ಶಾಸಕರಿಗೆ ಎಂಟು ಪ್ರಶ್ನೆಗಳನ್ನು ಮುಂದಿಟ್ಟು ಅದನ್ನು ವಿಡಿಯೊ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಗರಸಭೆ ಸದಸ್ಯರೊಬ್ಬರು ಕೊಟ್ಟ ದೂರಿನ ಮೆರೆಗೆ ಫೆ.6ರಂದು ಪ್ರದೀಪ್ ಅವರನ್ನು ಪೊಲೀಸರು ಬಂಧಿಸಿದ್ದರು.

ಈ ಸುದ್ದಿ ತಿಳಿದ್ದದ್ದೇ ತಡ ಅದನ್ನು ಖಂಡಿಸಿ ಪಕ್ಷಾತೀತವಾಗಿ ನೂರಾರು ಜನ ಬೀದಿಗೆ ಇಳಿದು, ಜಾಮೀನಿನ ಮೇಲೆ ಹೊರಬಂದ ಅವರನ್ನು ಪಟಾಕಿ ಸಿಡಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದು, ಪ್ರದೀಪ್‌ ಅವರ ಮಾತಿಗೆ ರಾಜಕೀಯ ‘ಆಯಾಮ’ ತಂದು ಕೊಟ್ಟಿದೆ.

ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವ ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಬಲಿಜ ಸಮುದಾಯದ ಮುಖಂಡ ಕೆ.ವಿ.ನವೀನ್‌ ಕಿರಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಮತ್ತು ಕೆಲ ಜೆಡಿಎಸ್‌ ಮುಖಂಡರು ಬಂಧನದ ಸಂದರ್ಭದಲ್ಲಿ ಪ್ರದೀಪ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಶಾಸಕ ಸುಧಾಕರ್ ಮತ್ತು ಮತ್ತವರ ಬೆಂಬಲಿಗರನ್ನು ಕೆರಳಿಸಿದೆ.

ಚುನಾವಣೆ ಎಂಬ ‘ರಣರಂಗ’ಕ್ಕೆ ಪೂರ್ವಭಾವಿಯಾಗಿ ‘ಶಸ್ತ್ರಾಭ್ಯಾಸ’ದಲ್ಲಿ ತೊಡಗಿಸಿಕೊಂಡವರೆಲ್ಲ ಇದೀಗ ಪ್ರದೀಪ್ ಅವರ ವಿಚಾರದಲ್ಲಿ ‘ಕದನ’ಕ್ಕೂ ಮುನ್ನವೇ ಆರೋಪ, ಪ್ರತ್ಯಾರೋಪ ಮಾಡುತ್ತ ‘ಕೆಸರೆರಚಾಟ’ದಲ್ಲಿ ತೊಡಗಿಸಿಕೊಂಡಿದ್ದು, ಕ್ಷೇತ್ರದಲ್ಲಿ ಜನರನ್ನು ಕುತೂಹಲದ ಜತೆಗೆ ಜಿಜ್ಞಾಸೆಗೆ ದೂಡಿದೆ.

ಇದೇ ವಿಚಾರವಾಗಿ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರ ಬೆಂಬಲಿಗರು, ‘ಸುಧಾಕರ್ ಅವರನ್ನು ರಾಜಕೀಯವಾಗಿ ಎದುರಿಸುವ ಶಕ್ತಿ ಇಲ್ಲದ ಒಬ್ಬ ಪಕ್ಷೇತರ ಅಭ್ಯರ್ಥಿ (ನವೀನ್‌ ಕಿರಣ್), ಜೆಡಿಎಸ್ ಮತ್ತು ಬಿಜೆಪಿಯವರು ಸೇರಿಕೊಂಡು, ಪ್ರದೀಪ್‌ ಅವರಿಂದ ಶಾಸಕರ ವಿರುದ್ಧ ಹೀನಾಯವಾಗಿ ಮಾತನಾಡಿಸುತ್ತಿದ್ದಾರೆ. ಜತೆಗೆ ಜಾತಿ ಜಾತಿಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದೊಂದು ವ್ಯವಸ್ಥಿತ ಪಿತೂರಿ. ಪ್ರಜ್ಞಾವಂತ ಜನರು ಇದಕ್ಕೆ ಸೊಪ್ಪು ಹಾಕುವುದಿಲ್ಲ’ ಎಂದು ತಿಳಿಸಿದ್ದರು.

ಇದೇ ವೇಳೆ ಅವರು, ‘ಪ್ರದೀಪ್ ಶಾಸಕರಿಗೆ ₹ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಶಾಸಕರು ಹಣ ಕೊಡಲಿಲ್ಲ. ಅದರ ಬೆನ್ನಲ್ಲೇ ಪ್ರದೀಪ್ ಅವರು ನವೀನ್‌ ಕಿರಣ್‌ ಅವರನ್ನು ಭೇಟಿ ಮಾಡಿದ ಮಾರನೇ ದಿನದಿಂದಲೇ ವಿಡಿಯೊ ಹರಿಬಿಡುತ್ತಿದ್ದಾರೆ. ನಮ್ಮಲ್ಲಿ ಈ ಬಗ್ಗೆ ಸಾಕ್ಷ್ಯಗಳಿವೆ. ಅವುಗಳನ್ನು ಎಸ್‌ಪಿ ಅವರಿಗೆ ನೀಡಿ ದೂರು ದಾಖಲಿಸುತ್ತೇವೆ. ಜತೆಗೆ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ’ ಎಂದು ತಿಳಿಸಿದ್ದರು.

ಈ ಬೆಳವಣಿಗೆ ಕುರಿತು ಸುಧಾಕರ್, ‘ನನ್ನ ಅಭಿವೃದ್ಧಿ ಮತ್ತು ಆಡಳಿತದಲ್ಲಿ ವಿರೋಧಿಗಳಿಗೆ ಯಾವುದೇ ಹುಳುಕು ಸಿಗಲಿಲ್ಲ. ಹೀಗಾಗಿ ಕೆಲವರು ಪ್ರದೀಪ್‌ ಅವರನ್ನು ಮುಂದೆ ಬಿಟ್ಟು ನನ್ನ ವೈಯಕ್ತಿಕ ತೇಜೋವಧೆ ಮಾಡಲು, ಹೇಡಿತನದ ರಾಜಕೀಯ ಮಾಡಲು ಹೊರಟಿದ್ದಾರೆ. ಚುನಾವಣೆ ಹತ್ತಿರವಿರುವ ಕಾರಣಕ್ಕೆ ನನ್ನ ಮೇಲೆ ಕೆಸರೆರಚುವ ಕೆಲಸ ಮಾಡುತ್ತಿದ್ದಾರೆ. ಇದು ಫಲಿಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು.

ಕುರಿತು ಜೆಡಿಎಸ್ ಮುಖಂಡ ಕೆ.ಪಿ.ಬಚ್ಚೇಗೌಡ ಅವರನ್ನು ವಿಚಾರಿಸಿದರೆ, ‘ಶಾಸಕನಾದವನು ಪ್ರತಿ ವರ್ಷ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕು. ಶಾಸಕರು ಸಾರ್ವಜನಿಕ ನೌಕರ ಎಂದು ಪರಿಗಣಿಸುವುದರಿಂದ ಸಾರ್ವಜನಿಕರಿಗೆ ಅವರೂ ಉತ್ತರದಾಯಿಗಳಾಗಿರುತ್ತಾರೆ. ಪ್ರದೀಪ್‌ ಅವರು ಶಾಸಕರಿಗೆ ಸಾರ್ವಜನಿಕವಾಗಿ ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದಾರೆ. ಎಲ್ಲಿಯೂ ತೇಜೋವಧೆ ಮಾಡಿಲ್ಲ’ ಎಂದು ಹೇಳುತ್ತಾರೆ.

‘ಶಾಸಕರು ಪ್ರದೀಪ್‌ ಅವರ ಪ್ರಶ್ನೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲೇ ಅಥವಾ ಪತ್ರ ಬರೆದು ಉತ್ತರಿಸಬಹುದಿತ್ತು. ಪ್ರದೀಪ್‌ ಅವರ ಬಂಧನದ ದಿನ ಅವರೊಂದಿಗೆ ಕಾಣಿಸಿಕೊಂಡಿದ್ದ ನಮ್ಮ ಪಕ್ಷದ ಇಬ್ಬರು ಮುಖಂಡರು ವೃತ್ತಿಯಿಂದ ವಕೀಲರು. ಅವರು ತಮ್ಮ ಕಕ್ಷಿದಾರರ ಪರವಾಗಿ ಅಲ್ಲಿ ಹೋಗಿದ್ದಾರೆ ವಿನಾ ಪಕ್ಷದ ಪರವಾಗಿ ಬೆಂಬಲ ನೀಡಲು ಹೋಗಿಲ್ಲ. ಅಲ್ಲಿ ಎಲ್ಲ ಪಕ್ಷದವರೂ ನೆರೆದಿದ್ದರು. ಇದರಲ್ಲಿ ಜೆಡಿಎಸ್ ಕೈವಾಡ ಇಲ್ಲ. ಇವತ್ತು ವಾಕ್‌ ಸ್ವಾತಂತ್ರ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ಚಿಕ್ಕಬಳ್ಳಾಪುರ ತಲುಪಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಅವರನ್ನು ಕೇಳಿದರೆ, ‘ಪ್ರದೀಪ್ ಅವರನ್ನು ಬಂಧಿಸಿದ್ದು ತಪ್ಪು ಎಂದು ಹೇಳುವ ಉದ್ದೇಶಕ್ಕಷ್ಟೇ ನಾನು ತಹಶೀಲ್ದಾರ್ ಅವರಿಗೆ ಮನವರಿಕೆ ಮಾಡಿಕೊಡಲು ಹೋಗಿದ್ದೇ ವಿನಾ, ವಿಡಿಯೊ ವಿಚಾರ ಶಾಸಕರು ಮತ್ತು ಪ್ರದೀಪ್‌ ಅವರಿಗೆ ಬಿಟ್ಟದ್ದು. ಅದಕ್ಕೂ ನಮಗೂ ಸಂಬಂಧವಿಲ್ಲ’ ಎನ್ನುತ್ತಾರೆ.

‘ಇತ್ತೀಚೆಗೆ ಒಬ್ಬ ಮೌಲ್ವಿ ನಮ್ಮ ಜನಸಂಖ್ಯೆ ಜಾಸ್ತಿಯಾದರೆ ಹಿಂದೂಗಳ ಮನೆಗೆ ನುಗ್ಗಿ ಅವರನ್ನು ನಾಲ್ಕು ಕಾಲಲ್ಲಿ ನಮಾಜು ಮಾಡಿಸುತ್ತೇವೆ ಎಂದು ಅವಹೇಳನಕಾರಿ ಮಾತನಾಡಿದ ವಿಡಿಯೊ ವೈರಲ್‌ ಆಗಿದೆ. ಅಂತಹ ದೇಶದ್ರೋಹಿಗಳ ವಿರುದ್ಧ ಕ್ರಮಕೈಗೊಳ್ಳದ ಪೊಲೀಸರು ಪ್ರದೀಪ್ ಅವರನ್ನು ಮಾತ್ರ ಎಷ್ಟು ಬೇಗ ಬಂಧಿಸಿ, ಪ್ರಕರಣ ದಾಖಸಲಿಸುತ್ತಾರೆ ನೋಡಿ? ಕಾಂಗ್ರೆಸ್‌ ಸರ್ಕಾರದ ದೌರ್ಜನ್ಯದ ವಿರುದ್ಧ ಬಿಜೆಪಿ ಧ್ವನಿ ಎತ್ತುತ್ತದೆ. ಪ್ರದೀಪ್‌ ಅವರಿಗೆ ಹಿಂದುಗಡೆಯಿಂದ ಬೆಂಬಲ ನೀಡುವ ನೀಚ ಸ್ವಭಾವ ನಮ್ಮದಲ್ಲ’ ಎಂದು ಕಾಂಗ್ರೆಸ್‌ನವರ ಆರೋಪ ನಿರಾಕರಿಸುತ್ತಾರೆ.

ಚುನಾವಣೆ ದಿನಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿಯೇ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಈ ಹೊಸ ವಿದ್ಯಮಾನ ಶಾಸಕರಿಗೆ ಇರುಸು ಮುರುಸು ಉಂಟು ಮಾಡುವ ಜತೆಗೆ ಅವರ ಎದುರಾಳಿಗಳ ಕೈಗೆ ಹೊಸದೊಂದು ‘ಅಸ್ತ್ರ’ ಒದಗಿಸಿಕೊಟ್ಟಿದೆ. ಇದು ಇಷ್ಟಕ್ಕೆ ನಿಲ್ಲುತ್ತದೆಯೋ ಅಥವಾ ಹೊಸ ಸ್ವರೂಪ ಪಡೆಯುತ್ತದೆಯೋ ಕಾಯ್ದ ನೋಡಬೇಕು.

ಆರೋಪ ಸಾಬೀತಾದರೆ ತಲೆ ಬಾಗುವೆ

ತಮ್ಮ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಗಳಿಗೆ ಉತ್ತರಿಸಿದ ನವೀನ್ ಕಿರಣ್, ‘ಪ್ರದೀಪ್‌ ಅವರನ್ನು ವಿಡಿಯೊ ಮಾಡಲು ಉತ್ತೇಜಿಸುತ್ತಿರುವುದು ನಾನು ಎನ್ನುವುದು ನೂರಕ್ಕೆ ನೂರು ಸುಳ್ಳು. ನನ್ನ ಮನೆಯ ಸಿಸಿ ಟಿವಿ ಕ್ಯಾಮೆರಾ ದೃಶ್ಯಗಳನ್ನು ನಾನು ನೀಡಲು ಸಿದ್ಧನಿರುವೆ. ಒಂದೊಮ್ಮೆ ಪ್ರದೀಪ್‌ ಅವರು ಜ.26ರಂದು ನನ್ನ ಮನೆಗೆ ಭೇಟಿ ನೀಡಿದ್ದರೂ ಎಂಬುದನ್ನು ಆರೋಪ ಮಾಡಿದವರು ಸಾಬೀತು ಮಾಡಿದರೆ ಅವರಿಗೆ ನಾನು ತಲೆ ಬಾಗುವೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವವರಿಗೆ ಸಹಕಾರ ಕೊಡುವುದು ನನ್ನ ಉದ್ದೇಶ. ಹಾಗಾಗಿ ಪ್ರದೀಪ್‌ ಅವರನ್ನು ಬಂಧಿಸಿದ ಸಂದರ್ಭದಲ್ಲಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದೇನೆ. ಅವರು ಎಲ್ಲಿಯೂ ತಮ್ಮ ವಿಡಿಯೊದಲ್ಲಿ ಅವಾಚ್ಯ, ಅಸಂವಿಧಾನಿಕ ಪದ ಬಳಸಿಲ್ಲ. ಪ್ರಜ್ಞಾವಂತ ನಾಗರಿಕನಾಗಿ ಚಿಕ್ಕಬಳ್ಳಾಪುರ ಜನರಲ್ಲಿ ಇರುವ ಕೆಲ ಮೂಲಭೂತ ಪ್ರಶ್ನೆಗಳನ್ನು ಅವರು ಎತ್ತಿದ್ದಾರೆ. ಶಾಸಕರು ಆ ಪ್ರಶ್ನೆಗಳಿಗೆ ಉತ್ತರಿಸುವುದು ಬಿಟ್ಟು, ನಮ್ಮ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ’ ಎನ್ನುತ್ತಾರೆ.

ಏನಂತಾರೆ ಪ್ರದೀಪ್ ಈಶ್ವರ್?

‘ಪ್ರದೀಪ್ ಶಾಸಕರ ವಿರುದ್ಧ ಕಾನೂನು ಸಮರ ಸಾರಲಿ ಎಂದು ಹೇಳುವವರು ಮೊದಲು ಧೈರ್ಯವಿದ್ದರೆ ನನ್ನ ವಿರುದ್ಧ ಕಾನೂನು ಸಮರ ಸಾರಲಿ. ಇನ್ನು, ಶಾಸಕರಿಗೆ ಧೈರ್ಯವಿದ್ದರೆ ನನ್ನ ಎಂಟು ಪ್ರಶ್ನೆಗಳಿಗೆ ಉತ್ತರಿಸಲಿ. ಜನಾಭಿಪ್ರಾಯ ತೆಗೆದುಕೊಳ್ಳದೆ ನಾನು ನ್ಯಾಯಾಲಯಕ್ಕೆ ಹೋದರೆ, ಕ್ಷೇತ್ರದಲ್ಲಿ ಏನಾಗಿದೆ ಎನ್ನುವುದು ಜನಸಾಮಾನ್ಯರಿಗೆ ಗೊತ್ತಾಗಬೇಕಲ್ಲ? ನಾನು ಪ್ರಸ್ತಾಪಿಸಿರುವ ಎಲ್ಲ ಪ್ರಶ್ನೆಗಳು ನನ್ನವು ಅಲ್ಲ. ಅದು ವಾಸ್ತವ.

ನನ್ನ ಒಂದು ಪುಸ್ತಕ ಶಾಸಕರಿಗೆ ಕೊಡಲು ಅವರ ಮನೆಗೆ ಹೋಗಿದ್ದು ನಿಜ. ಆದರೆ ಆ ದಿನ ಶಾಸಕರು ನನಗೆ ಸಿಗಲೇ ಇಲ್ಲ. ನಾನು ಶಾಸಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರ ಬಗ್ಗೆ ಸಾಕ್ಷ್ಯವಿದ್ದರೆ ಕೂಡಲೇ ಬಹಿರಂಗಗೊಳಿಸಲಿ. ನನ್ನ ಹಿಂದೆ ಯಾವುದೇ ವ್ಯಕ್ತಿ, ಪಕ್ಷಗಳು ಇಲ್ಲ’ ಎಂದು ಪ್ರದೀಪ್ ಈಶ್ವರ್ ಶಾಸಕರ ಬೆಂಬಲಿಗರ ಆರೋಪ ನಿರಾಕರಿಸುತ್ತಾರೆ.

ಪ್ರದೀಪ್ ವಿಡಿಯೊಗಳಲ್ಲಿ ಏನಿದೆ?

ಪ್ರದೀಪ್ ಅವರು ತಮ್ಮ ವಿಡಿಯೊಗಳಲ್ಲಿ ಶಾಸಕರಿಗೆ ನೇರವಾಗಿ ಕೆಲ ಪ್ರಶ್ನೆಗಳನ್ನು ಕೇಳುವ ಜತೆಗೆ ಜನರಿಗೆ ಆಸೆ, ಆಮಿಷಕ್ಕೆ ಬಲಿಯಾಗಬೇಡಿ. ಉತ್ತಮ ಜನನಾಯಕನನ್ನು ಆಯ್ಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

‘ಶಾಸಕರು ಪ್ರತಿಯೊಂದು ಗುತ್ತಿಗೆಗಳನ್ನು ತಮ್ಮ ಬಾಮೈದನಿಗೆ ಕೊಡಿಸುತ್ತ ಗುತ್ತಿಗೆದಾರರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಶ್ರೀಲಂಕಾದಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ. ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಶಾಸಕರಾದ ಬಳಿಕ ತಮ್ಮ ನಿಲುವು ಬದಲಾಯಿಸಿಕೊಂಡು ಜನವಿರೋಧಿ ಧೋರಣೆ ತಳೆದಿದ್ದಾರೆ’ ಎಂದು ಆರೋಪಿಸಿದ್ದಾರೆ.

ಜತೆಗೆ, ‘ಮನೆ ಮುಂದೆ ದಿನಗಟ್ಟಲೇ ಕಾಯಿಸುವ, ನಾವು ಹುಡುಕಿಕೊಂಡು ಹೋದರೂ ಸಿಗದೆ ಇರುವ ನಾಯಕ ಬೇಕಿಲ್ಲ. ನಮ್ಮನ್ನೇ ಹುಡುಕಿಕೊಂಡು ಬರುವ ನಾಯಕ ನಮಗೆ ಬೇಕು. ನಾಯಕ ಯಾರು ಎಂದು ನೀವು ನಿರ್ಧರಿಸಿ. ಮಿಕ್ಸಿ, ಫ್ರಿಡ್ಜ್‌ಗೆ ಆಸೆ ಬಿದ್ದು ನಿಮ್ಮ ಮಕ್ಕಳ ಭವಿಷ್ಯ ಬಲಿಗೊಡಬೇಡಿ. ಒಂದು ಬಾರಿ ಬದಲಾವಣೆಗೆ ಪ್ರಯತ್ನಿಸಿ, ನಿಮ್ಮ ಕಷ್ಟ ಸುಖ ಕೇಳುವ ಜನನಾಯಕ ಬೇಕು. ನಿರ್ಧಾರ ನಿಮ್ಮದು. ಯಾರು ನಮ್ಮ ಮುಂದಿನ ನಾಯಕರು ನಿಮ್ಮ ಆತ್ಮಸಾಕ್ಷಿ ಕೇಳಿಕೊಳ್ಳಿ’ ಎನ್ನುತ್ತ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಪ್ರದೀಪ್ ಅವರ ವಿಡಿಯೊಗಳ ಕೊನೆಯಲ್ಲಿ ನವೀನ್‌ ಕಿರಣ್ ಅವರ ಭಾವಚಿತ್ರಗಳನ್ನು ಬಳಸಿಕೊಂಡು ಅವುಗಳಿಗೆ ವಿವಿಧ ಜನಪ್ರಿಯ ಗೀತೆಗಳನ್ನು ಹಿನ್ನೆಲೆಯಾಗಿ ಬಳಸಿರುವುದು ಕಾಂಗ್ರೆಸ್‌ ಮುಖಂಡರ ‘ಕೈ’ಗೆ ‘ಅಸ್ತ್ರ’ ಒದಗಿಸಿಕೊಟ್ಟಂತಾಗಿದೆ

ಪ್ರತಿಕ್ರಿಯಿಸಿ (+)