ಭಾನುವಾರ, ಡಿಸೆಂಬರ್ 8, 2019
25 °C

ದಾವಣಗೆರೆ ಉತ್ತರಕ್ಕೆ ಉತ್ತರಾಧಿಕಾರಿ ಯಾರು?

ಎಚ್‌. ಬಾಲಚಂದ್ರ Updated:

ಅಕ್ಷರ ಗಾತ್ರ : | |

ದಾವಣಗೆರೆ ಉತ್ತರಕ್ಕೆ ಉತ್ತರಾಧಿಕಾರಿ ಯಾರು?

ದಾವಣಗೆರೆ: 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ವಿಧಾನಸಭಾ ಕ್ಷೇತ್ರ ದಾವಣಗೆರೆ ಉತ್ತರ. ಇದುವರೆಗೂ ಇಲ್ಲಿ ಎರಡು ಚುನಾವಣೆಗಳು ಮಾತ್ರ ನಡೆದಿವೆ. ಒಮ್ಮೆ ಬಿಜೆಪಿ ಗೆಲುವು ಪಡೆದರೆ, ಮತ್ತೊಮ್ಮೆ ಕಾಂಗ್ರೆಸ್‌ ಜಯ ಸಾಧಿಸಿದೆ.

ದಾವಣಗೆರೆ ಉತ್ತರ ಕ್ಷೇತ್ರ ಜಿಲ್ಲೆಯಲ್ಲಿ ಪ್ರತಿಷ್ಠೆಯ ಕಣ ಎಂದೇ ಗುರುತಿಸಿಕೊಂಡಿದೆ. ಹಿಂದಿನ ಫಲಿತಾಂಶಗಳನ್ನು ವಿಶ್ಲೇಷಿಸಿದರೆ, ಹಾಲಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹಾಗೂ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌ ನಡುವಿನ ರಾಜಕೀಯ ಜಂಗೀಕುಸ್ತಿಯ ವೇದಿಕೆ ಎಂದೇ ಹೇಳಬಹುದು. ಇವರಿಬ್ಬರ ಮಧ್ಯೆ ಜೆಡಿಎಸ್‌ ಪ್ರಭಾವ ಕೂಡ ಅಲ್ಪಮಟ್ಟಿಗಿದೆ ಎನ್ನಬಹುದು.

ಎಸ್‌ಎಆರ್‌ಗೆ ಮರುಹುಟ್ಟು: ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿದ್ದ ಮಾಯಕೊಂಡ, ಪರಿಶಿಷ್ಟ ಜಾತಿಗೆ ಮೀಸಲಾಯಿತು. ಅಲ್ಲಿಯವರೆಗೂ ಮಾಯಕೊಂಡದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದ ಬಿಜೆಪಿಯ ಎಸ್‌.ಎ.ರವೀಂದ್ರನಾಥ್‌ ಅನಿವಾರ್ಯವಾಗಿ ಕ್ಷೇತ್ರ ಬದಲಿಸಬೇಕಾಯಿತು.

ಮಾಯಕೊಂಡ ವ್ಯಾಪ್ತಿಯಲ್ಲಿದ್ದ ಹಲವು ಪ್ರದೇಶಗಳು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗಿದ್ದರಿಂದ ಎಸ್‌ಎಆರ್ ಉತ್ತರದತ್ತಲೇ ಮುಖ ಮಾಡಿದರು. 2008ರ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದರು. ಗೆದ್ದೂ ಬಂದರು.

ಕಾಂಗ್ರೆಸ್‌ ಬಂಡಾಯ; ಎಸ್‌ಎಆರ್‌ಗೆ ಲಾಭ: ಕಾಂಗ್ರೆಸ್‌ ಪಕ್ಷದಲ್ಲಿ ಭುಗಿಲೆದ್ದ ಟಿಕೆಟ್‌ ಬಂಡಾಯ ಹಾಗೂ ನಾಮಪತ್ರ ಸಲ್ಲಿಕೆ ಸಂದರ್ಭ ನಡೆದ ಹೈಡ್ರಾಮಾ

ದಿಂದಾಗಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೇ ಸ್ಪರ್ಧಿಸಲಾಗಲಿಲ್ಲ. ಪರಿಣಾಮ ರವೀಂದ್ರನಾಥ್ ಅನಾಯಾಸವಾಗಿ ಗೆದ್ದರು. ಅದು 53,910 ಮತಗಳ ಅಂತರದ ಗೆಲುವು. ರಾಜ್ಯದಲ್ಲೇ ಅತಿಹೆಚ್ಚು ಮತಗಳ ಅಂತರದಿಂದ ಗೆದ್ದವರ ಪೈಕಿ ಎಸ್‌ಎಆರ್ ಕೂಡ ಒಬ್ಬರಾಗಿದ್ದರು.

ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಿ.ಎಂ.ಸತೀಶ್‌ 21,888 ಮತ ಪಡೆದರೆ, ಸ್ಪರ್ಧಿಸಿದ್ದ 9 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು ಎನ್ನುತ್ತಾರೆ ಹಿರಿಯ ಪತ್ರಕರ್ತ ನಜೀರ್. 2007ರಲ್ಲಿ ಅಂದಿನ ಬಿಜೆಪಿ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡದೆ ವಚನಭ್ರಷ್ಟ ಕಳಂಕ ಹೊತ್ತುಕೊಂಡಿದ್ದರು. ಯಡಿಯೂರಪ್ಪ ಮೇಲಿನ ಮತದಾರರ ಅನುಕಂಪವೂ ರವೀಂದ್ರನಾಥ್‌ ಭಾರೀ ಅಂತರದ ಗೆಲುವು ಪಡೆಯಲು ಪ್ರಮುಖ ಕಾರಣ ಎನ್ನುತ್ತಾರೆ ಅವರು.

2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ನಡೆದು ಉತ್ತರ ಕ್ಷೇತ್ರ ಕಾಂಗ್ರೆಸ್‌ ಪಾಲಾಯಿತು. ಎಸ್‌.ಎಸ್‌.ಮಲ್ಲಿಕಾರ್ಜುನ 88,101 ಮತಗಳನ್ನು ಪಡೆದು 57,280 ಮತಗಳ ಅಂತರದಿಂದ ರವೀಂದ್ರನಾಥ್ (30,821) ಅವರನ್ನು ಪರಾಭವಗೊಳಿಸಿದರು.

ಎಸ್‌.ಎಸ್‌.ಎಂಗೆ ಇದು ಮೊದಲ ಗೆಲುವೇನೂ ಆಗಿರಲಿಲ್ಲ. 1999ರ ವಿಧಾನಸಭಾ ಚುನಾವಣೆಯಲ್ಲೇ ದಾವಣಗೆರೆ ಕ್ಷೇತ್ರದಲ್ಲಿ 54,401 ಮತ ಪಡೆದು ಬಿಜೆಪಿಯ ಯಶವಂತರಾವ್ ಜಾಧವ್‌ (50,108) ವಿರುದ್ಧ ಗೆದ್ದಿದ್ದರು. ಮೊದಲ ಗೆಲುವಿನಲ್ಲೇ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವರಾಗಿದ್ದರು. ಅಂದಿನ ಸರ್ಕಾರದಲ್ಲಿ ಅತಿ ಕಿರಿಯ ಸಚಿವ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು ಎನ್ನುತ್ತಾರೆ ಹಿರಿಯ ಪತ್ರಕರ್ತ ಎಚ್‌.ಬಿ.ಮಂಜುನಾಥ್‌.

2004ರ ಚುನಾವಣೆಯಲ್ಲಿ ತಂದೆ ಶಾಮನೂರು ಶಿವಶಂಕರಪ್ಪ ಗೆದ್ದರು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡೆಯಾದ ಬಳಿಕ ಅಪ್ಪ ದಕ್ಷಿಣಕ್ಕೆ ಬಂದರೆ, ಮಗ ಉತ್ತರಕ್ಕೆ ಹೋದರು ಎನ್ನುತ್ತಾರೆ ಅವರು.

2018 ಚುನಾವಣೆಯಲ್ಲಿ ಬಹುತೇಕ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮಧ್ಯೆಯೇ ಹಣಾಹಣಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಯಡಿಯೂರಪ್ಪ, ರವೀಂದ್ರನಾಥ್ ಅವರಿಗೆ ಟಿಕೆಟ್‌ ಕೊಡುವುದಾಗಿ ಹೇಳಿದ್ದಾರೆ. ಬಿಜೆಪಿಯ ಬಣ ರಾಜಕೀಯವೂ ತಣ್ಣಗಾಗಿ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದಲೂ ಮಲ್ಲಿಕಾರ್ಜುನ ಅವರಿಗೇ ಟಿಕೆಟ್‌ ದೊರೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಉಳಿದಂತೆ ಜೆಡಿಎಸ್‌ನಿಂದ ಮುಖಂಡರಾದ ಬಾತಿಶಂಕರ, ಸಂಗಜ್ಜಗೌಡರ, ದಾಸಕರಿಯಪ್ಪ ಅವರ ಪುತ್ರ ಗಣೇಶ್‌ ದಾಸಕರಿಯಪ್ಪಗೆ ಟಿಕೆಟ್‌ ಸಿಗುವ ಸಾಧ್ಯತೆಗಳಿವೆ.

ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎಂದು ಪಣತೊಟ್ಟಿರುವ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಒಂದಷ್ಟು ಕೆಲಸ ಮಾಡಿದ್ದಾರೆ. ಪ್ರಮುಖ ರಸ್ತೆಗಳು ಸಿಮೆಂಟ್‌ ರಸ್ತೆಗಳಾಗಿ ಬದಲಾಗಿವೆ. ಕೆರೆಗಳನ್ನು ತುಂಬಿಸಲು ಪ್ರಯತ್ನಿಸಿದ್ದಾರೆ ಎನ್ನುತ್ತಾರೆ ಪತ್ರಕರ್ತ ನಜೀರ್.

ಬಿಜೆಪಿಯಲ್ಲಿ ಈಗಷ್ಟೇ ಬಂಡಾಯದ ಬಿಸಿ ಆರಿದಂತೆ ಕಾಣುತ್ತಿದೆ. ಯಡಿಯೂರಪ್ಪ ಬಂದುಹೋದ ಬಳಿಕ ಜಿ.ಎಂ.ಸಿದ್ದೇಶ್ವರ ಹಾಗೂ ಎಸ್‌.ಎ.ರವೀಂದ್ರನಾಥ್‌ ಬಣಗಳು ವೇದಿಕೆ ಮೇಲೆ ಒಂದಾಗಿ ಕಾಣಿಸಿಕೊಳ್ಳುತ್ತಿವೆ. ಬಿಜೆಪಿಯ ಹಿರಿಯ ಮುಖಂಡರಲ್ಲಿ ಒಬ್ಬರಾಗಿರುವ ಹಾಗೂ ನೇರ, ನಿಷ್ಠುರ ವ್ಯಕ್ತಿತ್ವದ ಎಸ್‌ಎಆರ್‌ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಬಲರಾಗಿರುವಂತೆ ಕಾಣುತ್ತಿದೆ ಎನ್ನುತ್ತಾರೆ ಅವರು.

2008 ವಿಧಾನಸಭಾ ಚುನಾವಣೆ

ಬಿಜೆಪಿಯ ಎಸ್‌.ಎ.ರವೀಂದ್ರನಾಥ್ ಗೆಲುವು

ಪಡೆದ ಮತ 75798

ಗೆಲುವಿನ ಅಂತರ 53910

ಸಮೀಪದ ಪ್ರತಿಸ್ಪರ್ಧಿ–ಬಿ.ಎಂ.ಸತೀಶ್‌, ಜೆಡಿಎಸ್‌

ಪಡೆದ ಮತ 21,888

2013ರ ವಿಧಾನಸಭಾ ಚುನಾವಣೆ

ಕಾಂಗ್ರೆಸ್‌ನ ಎಸ್‌.ಎಸ್‌.ಮಲ್ಲಿಕಾರ್ಜುನ ಗೆಲುವು

ಪಡೆದ ಮತ 88,101

ಗೆಲುವಿನ ಅಂತರ 57280

ಪ್ರತಿಸ್ಪರ್ಧಿ

ಬಿಜೆಪಿಯ ಎಸ್‌.ಎ.ರವೀಂದ್ರನಾಥ್‌

ಪಡೆದ ಮತ (30821)

ಮತಗಳ ಸಮೀಕರಣ

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರ ನೋಡಿದರೆ ಲಿಂಗಾಯತರ ಪ್ರಾಬಲ್ಯವೇ ಹೆಚ್ಚು. ನಂತರ ಪರಿಶಿಷ್ಟ ಜಾತಿ ಹಾಗೂ ಪಂಗಡದವರು, ಮುಸ್ಲಿಮರು ಹಾಗೂ ಕುರುಬರು, ಉಪ್ಪಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)