ಬಾಯಿ ಮುಚ್ಚಿಸುವ ಕೆಲಸ ನಡೆದಿದೆ

7

ಬಾಯಿ ಮುಚ್ಚಿಸುವ ಕೆಲಸ ನಡೆದಿದೆ

Published:
Updated:

ಧಾರವಾಡ: ‘ದೇಶದಲ್ಲಿ ಸಾಮಾನ್ಯ ಮನುಷ್ಯ ಮಾತನಾಡಲಾರ ಸ್ಥಿತಿಯಲ್ಲಿದ್ದಾನೆ. ಕೋಮು ಗಲಭೆಗಳು ಸಮಾಜದಲ್ಲಿ ಹೆಚ್ಚಾಗುತ್ತಿವೆ’ ಎಂದು ಹಿರಿಯ ಪತ್ರಕರ್ತೆ ಡಾ.ವಿಜಯಾ ಹೇಳಿದರು.

ಇಲ್ಲಿನ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾಂಗಣದಲ್ಲಿ ಗುರು ವಾರ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ‘ಅನನ್ಯ ಮಹಿಳೆಯೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಕ್ತವಾಗಿ ಸಮಾಜದಲ್ಲಿ ಅಭಿಪ್ರಾಯ ಹೇಳುವವರ ಬಾಯಿ ಮುಚ್ಚಿಸುವ ಕೆಲಸ ನಡೆದಿದೆ. ಆದರೆ, ಕೆಲವರು  ಹೊಂದಾಣಿಕೆ ಮಾಡಿಕೊಂಡು ಚಿಂತೆ ಇಲ್ಲದಂತೆ ಚೆನ್ನಾಗಿದ್ದಾರೆ. ಮಾತನಾಡಿದವರನ್ನು ಮಾತ್ರ ವೈರಿಗಳಂತೆ  ಬಿಂಬಿಸಲಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಮಾರುಕಟ್ಟೆಯಲ್ಲಿ ವಸ್ತುಗಳ ದರ ಹೆಚ್ಚಾಗುತ್ತಿರುವುದರಿಂದ ಜನಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ. ಕಡು ಬಡ ಮಹಿಳೆಯರಿಗೆ ಸಹಾಯ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಅವರ ನೋವುಗಳಿಗೆ ಸ್ಪಂದಿಸಬೇಕು ಎಂಬ ಆಸೆ ಹೊಂದಿದ್ದೇನೆ’ ಎಂದರು.

‘ಈ ಹಿಂದೆ ಅತ್ಯಾಚಾರದ ಬಗ್ಗೆ ಹೇಳಿಕೊಳ್ಳುತ್ತಿರಲಿಲ್ಲ. ಈಗ ಹೇಳಕೊಳ್ಳುತ್ತಿದ್ದಾರೆ. ಇದರಿಂದ ಅತ್ಯಾಚಾರ ಪ್ರಕರಣಗಳು ಹೊರ ಬರುತ್ತಿವೆ. ಅತ್ಯಾಚಾರದ ಬಗ್ಗೆ ಮಾನಸಿಕವಾಗಿ ಬದಲಾಗಬೇಕು. ಅತ್ಯಾಚಾರಕ್ಕೊಳಗಾದವರಿಗೆ ಧೈರ್ಯ ತುಂಬಬೇಕು’ ಎಂದು ತಿಳಿಸಿದರು.

‘ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅವಮಾನ ಅನುಭವಿಸಿ ಬೇಸರವಾಗಿ ಸ್ವಯಂ ನಿವೃತ್ತಿ ತೆಗೆದುಕೊಂಡೆ. ನಂತರ ಸಿನಿಮಾ ಪತ್ರಕರ್ತೆಯಾದೆ. ಚಿತ್ರರಂಗ ಸಹ ಪ್ರೋತ್ಸಾಹ ನೀಡಿತು’ ಎಂದು ಹೇಳಿದರು. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯಾಧ್ಯಕ್ಷೆ ಸುನಂದಾ ಕಡಮೆ, ಕೋಶಾಧ್ಯಕ್ಷೆ ಡಾ. ಪ್ರಜ್ಞಾ ಮತ್ತಿಹಳ್ಳಿ, ಸರಸ್ವತಿ ಬೋಸಲೆ, ಕಾರ್ಯದರ್ಶಿ ಲಲಿತಾ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry