ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಸಕೊಪ್ಪದ ನುಗ್ಗೆ ರಾಜಧಾನಿಗೆ ಲಗ್ಗೆ

Last Updated 9 ಫೆಬ್ರುವರಿ 2018, 10:08 IST
ಅಕ್ಷರ ಗಾತ್ರ

ಗಜೇಂದ್ರಗಡ: ಸಮೀಪದ ಸಣ್ಣ ಹಳ್ಳಿ ನಾಗರಸಕೊಪ್ಪದ ರೈತನೊಬ್ಬ ಬೆಳೆದ ನುಗ್ಗೆಕಾಯಿಗಳು ಇಲ್ಲಿಂದ ವಾರದಲ್ಲಿ ಎರಡು ಸಲ ರಾಜಧಾನಿ ಬೆಂಗಳೂರಿಗೆ ಪೂರೈಕೆಯಾಗುತ್ತವೆ ಎಂಬುದು ಇಲ್ಲಿನ ಅನೇಕರಿಗೆ ಗೊತ್ತಿಲ್ಲ.

ಪಟ್ಟಣದಿಂದ ಸುಮಾರು 5 ಕಿ.ಮೀ. ದೂರದ ಗೋಗೇರಿ ಸನಿಹದಲ್ಲಿರುವ ನಾಗರಸಕೊಪ್ಪ ಸಣ್ಣ ಕುಗ್ರಾಮ. ಆದರೆ ಅಲ್ಲಿನ ರೈತ ಕುಬೇರ ಬಡಿಗೇರ ಅವರು ತಮ್ಮ ಜಮೀನಿನಲ್ಲಿ ಬೆಳೆದ ನುಗ್ಗೇಕಾಯಿಯ ರುಚಿಯನ್ನು ಬೆಂಗಳೂರಿನ ಜನರಿಗೆ ಹಚ್ಚಿದ್ದಾರೆ. ಇದರಿಂದ ವಾರದಲ್ಲಿ ಎರಡು ಸಲ ತಪ್ಪದೇ ಪಟ್ಟಣದಿಂದ ನುಗ್ಗೆಕಾಯಿಗಳನ್ನು ಲಾರಿಗಳ ಮೂಲಕ ಸರಬರಾಜು ಮಾಡುತ್ತಾರೆ.

ಗೋಗೇರಿ ಗ್ರಾಮದ ಸನಿಹದ ಎರಡು ಎಕರೆ ಜಮೀನಿನಲ್ಲಿ ಅಲ್ಪ ಪ್ರಮಾಣದಲ್ಲಿರುವ ಕೊಳವೆ ಬಾವಿಯ ನೀರಿನಿಂದ ಏನೂ ಬೆಳೆಯಲು ಆಗುತ್ತಿಲ್ಲವೆಂದು ಗೊಣಗುತ್ತಿರುವವರಿಗೆ ಇವರು ಮಾದರಿಯಾಗಿದ್ದಾರೆ.

ದಾಳಿಂಬೆ, ಚಿಕ್ಕು, ಮಾವು. ನಿಂಬೆ, ಪೇರಲ, ಸಾಗವಾನಿ ಗಿಡಗಳಿಂದ ತಮ್ಮ ಜಮೀನನ್ನು ತುಂಬಿಸಿದ್ದಾರೆ. ದಾಳಿಂಬೆ ಬೆಳೆಯ ಮಧ್ಯದಲ್ಲಿ ಸುಮಾರು 800ಕ್ಕೂ ಹೆಚ್ಚು ನುಗ್ಗೆ ಗಿಡಗಳನ್ನು ಬೆಳೆಸಿದ್ದಾರೆ.

ಅವು ಈಗ ಉದ್ದನೆಯ ಕಾಯಿಗಳನ್ನು ಹೊತ್ತು ನೆಲಕ್ಕೆ ಬಾಗಿವೆ. ಸಣ್ಣ ಹೈಬ್ರಿಡ್ ತಳಿಯ ನುಗ್ಗೆ ಈಗ ಮೊದಲ ಬಾರಿಗೆ ಫಸಲು ಕೊಡುತ್ತಿದೆ. ‘ತೋಟವೆಂದರೆ ಪಾಟು’ ಎನ್ನುವ ಗಾದೆಯಂತೆ ಮನೆಯ ಸದಸ್ಯರೊಂದಿಗೆ ಆಳುಗಳನ್ನು ಹಚ್ಚಿ ಕಾಯಿಗಳನ್ನು ಹರಿಯುತ್ತಾರೆ. ನಂತರ ಪಟ್ಟಣಕ್ಕೆ ತಂದು ಅವುಗಳನ್ನು ರಾಜಧಾನಿಗೆ ರವಾನೆ ಮಾಡುತ್ತಾರೆ. ಒಮ್ಮೆ ಸುಮಾರು 2 ಕ್ವಿಂಟಲ್‌ವರೆಗೂ ಕಳಿಸುತ್ತಾರೆ.

‘ಇಲ್ಲಿನ ಪೇಟೆಯಲ್ಲಿ ಸರಿಯಾದ ದರ ಇಲ್ಲದ ಕಾರಣ ಬೆಂಗಳೂರಿಗೆ ಕಳಿಸುತ್ತಿದ್ದೇನೆ. ಮೊದಲು ಒಂದು ಕ್ವಿಂಟಾಲ್ ಗೆ ₹ 6000–₹ 7000ಗೆ ಮಾರಿದರೆ, ಈಗ ಅದು ನೆಲಕಚ್ಚಿದ್ದು ಸುಮಾರು ₹2500ರಿಂದ ₹ 3000ರವರೆಗೆ ಮಾರಾಟವಾಗುತ್ತವೆ. ನಾವು ಬೆಳೆದ ನುಗ್ಗೆಯನ್ನು ಅಲ್ಲಿನ ಜನರು ಒತ್ತಾಯಿಸಿ ತರಿಸಿಕೊಳ್ಳುತ್ತಿದ್ದಾರೆ’ ಎಂದು ಕುಬೇರ ಹೆಮ್ಮೆಯಿಂದ ಹೇಳುತ್ತಾರೆ.

ಪಟ್ಟಣದಿಂದ ರಾತ್ರಿ ಬಸ್ಸಿಗೆ ಲೋಡ್‌ ಮಾಡಿದರೆ ಅಲ್ಲಿ ವ್ಯಾಪಾರಿಗಳು ಬೆಳಗಿನ 6 ಗಂಟೆಗೆ ಇಳಿಸಿಕೊಂಡು ಯಶವಂತಪುರ ಹಾಗೂ ಕೆ.ಆರ್‌. ಮಾರ್ಕೆಟ್‌ಗೆ ಸಾಗಿಸಿ ಮಾರಾಟ ಮಾಡುತ್ತಾರೆ. ಇಲ್ಲಿ ರವಾನೆ ಮಾಡಲು ಸಾರಿಗೆ ಸಂಸ್ಥೆಯವರು ಒಂದು ಕೆ.ಜಿಗೆ ₹ 3 ದರ ನಿಗದಿ ಮಾಡಿದ್ದಾರೆ. ಇದರಿಂದ ಇವುಗಳ ಸಾಗಾಣಿಕೆಗಾಗಿ ₹ 350 ಖರ್ಚಾಗುತ್ತದೆ. ಇದರಿಂದ ಲಾಭವಿಲ್ಲದಿದ್ದರೂ ನಾವು ಮಾಡಿದ ಖರ್ಚು ಬಂದರೆ ಸಾಕು ಎನ್ನುತ್ತಾರೆ ಕುಬೇರ.

ಒಕ್ಕಲುತನವೆಂದರೆ ಜೂಜಾಟ ದಂತೆ. ಅದರಲ್ಲೂ ನೀರಾವರಿ ಎಂದರೆ ತುಂಬಾ ಶ್ರಮ ಪಡಬೇಕು. ಕುಬೇರ ಅವರು ಬೆಳೆದ ನುಗ್ಗೆ ಬೆಂಗಳೂರಿಗೆ ಲಗ್ಗೆ ಹಾಕಿದ್ದು ನಿಜಕ್ಕೂ ಸಂತಸ’ ಎನ್ನುತ್ತಾರೆ ನಾಗರಸಕೊಪ್ಪದ ರೈತ ಶರಣಪ್ಪ ಸೊಬರದ.

ಶ್ರೀಶೈಲ ಎಂ. ಕುಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT