ಸ್ವಚ್ಛತೆ, ಕೆರೆ, ಉದ್ಯಾನ ಅಭಿವೃದ್ಧಿಗೆ ಆದ್ಯತೆ ನೀಡಿ

7

ಸ್ವಚ್ಛತೆ, ಕೆರೆ, ಉದ್ಯಾನ ಅಭಿವೃದ್ಧಿಗೆ ಆದ್ಯತೆ ನೀಡಿ

Published:
Updated:

ಅರಕಲಗೂಡು: ‘ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ. ಎಲ್ಲ ಬಡಾವಣೆಗಳಲ್ಲಿ ಉದ್ಯಾನ, ಈಜುಕೊಳ ನಿರ್ಮಾಣ ಮಾಡಬೇಕು’ ಎಂದು ನಾಗರಿಕರು ಮನವಿ ಮಾಡಿದರು. ಗುರುವಾರ ನಡೆದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ನಾಗರಿಕರು ಹಲವು ಸಲಹೆಗಳನ್ನು ನೀಡಿದರು.

ಕೆಲಸಕ್ಕಾಗಿ ಬರುವ ಸಾರ್ವಜನಿಕರನ್ನು ಪದೇಪದೇ ಕಚೇರಿಗೆ ಅಲೆಸಬೇಡಿ ಎಂದು ಮನವಿ ಮಾಡಿದರು. ವಕೀಲ ಶಂಕರಯ್ಯ ಮಾತನಾಡಿ, ‘ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಹತ್ತಕ್ಕೂ ಹೆಚ್ಚಿನ ಕೆರೆಗಳ ಹೂಳು ತೆಗೆಸಿ ಅಭಿವೃದ್ಧಿ ಪಡಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ಪರಿಸರವೂ ಶುದ್ಧವಾಗುತ್ತದೆ. ಮೀನು ಸಾಕಣೆ ನಡೆಸಿದರೆ ಪ.ಪಂಗೆ ಹೆಚ್ಚಿನ ಆದಾಯವೂ ದೊರೆಯುತ್ತದೆ’ ಎಂದು ಹೇಳಿದರು.

‘ಎಲ್ಲ ಬಡಾವಣೆಗಳಲ್ಲಿ ಉದ್ಯಾನ ಕ್ಕಾಗಿ ಮೀಸಲಿಟ್ಟಿರುವ ನಿವೇಶನಗಳಿಗೆ ಬೇಲಿ ನಿರ್ಮಿಸಲಾಗಿದೆಯೇ ಹೊರತು ಗಿಡಗಳನ್ನು ನೆಟ್ಟಿಲ್ಲ. ಇವುಗಳ ಅಭಿವೃದ್ಧಿಯಾಗಬೇಕು. ಪಟ್ಟಣದ ಕ್ರೀಡಾಂಗಣದ ಸಮೀಪ ಈಜುಕೊಳ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಪರಿಸರದ ಸ್ವಚ್ಛತೆಗಾಗಿ ಕಾಳಜಿ ವಹಿಸಿ’ ಎಂದು ಸಲಹೆ ನೀಡಿದರು.

ಹಿರಿಯ ನಾಗರಿಕಕರಾದ ಪಿ.ಎನ್‌.ರಂಗನಾಥ್‌ ಮಾತನಾಡಿ, ‘ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ ಪಟ್ಟಣವನ್ನು ಸುಂದರವಾಗಿ ಇಡುವ ಕುರಿತು ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು. ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರಿಗಳೊಂದಿಗೆ ಬಡಾವಣೆಗಳಿಗೆ ಭೇಟಿ ನೀಡಿ ನಾಗರಿಕರಿಂದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

‘ಯುಜಿಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಯುಜಿಡಿ ತ್ಯಾಜ್ಯ ನಿರ್ವಹಣೆಗೆ ಎಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ’ ಎಂಬ ಕುರಿತು ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ಸರ್ಕಾರದಿಂದ ಅಭಿವೃದ್ಧಿಗೆ ಪೂರಕವಾದ ಪ್ರಮಾಣದಲ್ಲಿ ಹಣ ಬಿಡುಗಡೆಯಾಗುತ್ತಿಲ್ಲ. ಇದರಿಂದ ಅಭಿವೃದ್ದಿ ಕುಂಠಿತವಾಗುತ್ತಿದೆ. ಈ ಬಗ್ಗೆ ಜನ ಪ್ರತಿನಿಧಿಗಳ ಮೂಲಕ ಒತ್ತಡ ತಂದು ಅಗತ್ಯ ಅನುದಾನ ಪಡೆದುಕೊಳ್ಳಬೇಕು’ ಎಂದು ಪ.ಪಂ ಮಾಜಿ ಸದಸ್ಯ ಎನ್‌.ರವಿಕುಮಾರ್‌ ಸಲಹೆ ನೀಡಿದರು.

‘ಕಸ ಸಂಗ್ರಹ ವಾಹನ ಬಂದರೂ ಕೆಲವರು ಕಸವನ್ನು ರಸ್ತೆಗೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇಂಥವರಿಗೆ ದಂಡ ಹಾಕಬೇಕು’ ಎಂದು ಯುವ ಕಾಂಗ್ರೆಸ್‌ ಕಾರ್ಯದರ್ಶಿ ರಘು ಸಲಹೆ ನೀಡಿದರು.

ವಾರದ ಸಂತೆ ನಡೆಯುವ ಸ್ಥಳ ಕಿಷ್ಕಿಂಧೆಯಾಗಿದ್ದು, ಜನ ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸಂತೆ ಮೈದಾನಕ್ಕೆ ಪ್ರತ್ಯೇಕ ಜಾಗ ಗುರುತಿಸುವಂತೆ ಜಬೀಉಲ್ಲಾ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಹಲವು ನಾಗರಿಕರು ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳ ಕುರಿತು ಸಲಹೆಗಳನ್ನು ಹೇಳಿದರು. ಪ.ಪಂ ಅಧ್ಯಕ್ಷ ಕೆ.ಸಿ.ಲೋಕೇಶ್‌ ಮಾತನಾಡಿ, ‘ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ. ನಾಗರಿಕರು ಪ.ಪಂ ಸಂಗಡ ಕೈಜೋಡಿಸಿದಾಗ ಹೆಚ್ಚಿನ ಅಭಿವೃದ್ಧಿ ಸಾಧ್ಯ. 14ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಎಲ್ಲ ಬಡಾವಣೆಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಸಲಹೆಗಳನ್ನು ಮುಂಗಡ ಪತ್ರದಲ್ಲಿ ಅಳವಡಿಸಿಕೊಂಡು ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಲಾಗುವುದು’ ಎಂದು ಹೇಳಿದರು.

ಉಪಾಧ್ಯಕ್ಷೆ ಸಾಕಮ್ಮ, ಸದಸ್ಯರಾದ ನಿರಂಜನ್‌, ಸಲೀಂ ಅಹಮದ್‌, ಎಚ್‌.ಎಸ್‌.ಮಂಜುನಾಥ್‌, ಶಶಿಕುಮಾರ್‌, ಅಲೀಂ ಪಾಷ, ಶಾರದಮ್ಮ, ಮಂಜುಳಾ, ಮುಖ್ಯಾಧಿಕಾರಿ ಸುಜಯ್‌ ಕುಮಾರ್‌ ಇದ್ದರು. ಪ.ಪಂನ ಬಹಳಷ್ಟು ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry