ಶುಕ್ರವಾರ, ಡಿಸೆಂಬರ್ 6, 2019
26 °C

ಆದಿನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ

ಬಿ.ಪಿ. ಜಯಕುಮಾರ್‌ Updated:

ಅಕ್ಷರ ಗಾತ್ರ : | |

ಆದಿನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ

ಶ್ರವಣಬೆಳಗೊಳ : ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಅಂಗವಾಗಿ ಫೆ. 8ರಿಂದ ಧಾರ್ಮಿಕ ಪಂಚಕಲ್ಯಾಣ ಕಾರ್ಯಕ್ರಮಗಳು ಚಾಲನೆ ಪಡೆದಿವೆ. ಗೊಮ್ಮಟೇಶ್ವರನ ತಂದೆ ಆದಿನಾಥ ಸ್ವಾಮಿಯ ಪಂಚಕಲ್ಯಾಣದ ಮೂಲಕ ಮಹೋತ್ಸವದ ಪೂರ್ವಭಾವಿಯಾಗಿ ಮೊಟ್ಟ ಮೊದಲ ಧಾರ್ಮಿಕ ಕಾರ್ಯಕ್ರಮ ವಿಧಿಗಳು ಪ್ರಾರಂಭವಾಗುತ್ತವೆ. ಈ ವಿಧಿ, ವಿಧಾನಗಳು 4ನೇ ಬಾರಿ ಮಸ್ತಕಾಭಿಷೇಕದ ನೇತೃತ್ವದ ವಹಿಸಿರುವ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮರ್ಗದರ್ಶನ, ನೇತೃತ್ವದಲ್ಲಿ ಮತ್ತು ಆಚಾರ್ಯರರ ಸಾನಿಧ್ಯದಲ್ಲಿ ಫೆ. 7ರಿಂದ 11ರವರೆಗೆ ನಡೆಯಲಿದೆ.

ಬಾಹುಬಲಿ ಪ್ರಥಮ ಮೋಕ್ಷಗಾಮಿಯಾದರೂ ತೀರ್ಥಂಕರನಲ್ಲ. ಆದಿನಾಥರಿಂದ ಮಹಾವೀರರವರೆಗೆ 24 ತೀರ್ಥಂಕರರು ಮಾತ್ರ ಇದ್ದು, ಪಂಚಕಲ್ಯಾಣ ಮಹೋತ್ಸವ ತೀರ್ಥಂಕರರಿಗೆ ಮಾತ್ರ ನೆರವೇರಿಸುವ ಧಾರ್ಮಿಕ ಆಚರಣೆಯಾಗಿದೆ.

ಆದಿನಾಥರು ಮನುಕುಲಕ್ಕೆ ದಾರಿ ತೋರಿದವರು. ಭೋಗ ಭೂಮಿಯ ಮೇಲೆ ಕಲ್ಪವೃಕ್ಷದ ಕಾಲ ಮುಗಿದ ಮೇಲೆ ಜನರಿಗೆ ಈ ಕರ್ಮ ಭೂಮಿಯಲ್ಲಿ ಹೇಗೆ ಜೀವನ ನಡೆಸಬೇಕೆಂದು ದಾರಿ ಕಾಣದಾದಾಗ, ಅಸಿ, ಮಸಿ, ಕೃಷಿ, ವಾಣಿಜ್ಯ, ಶಿಲ್ಪ ಮತ್ತು ವಿದ್ಯೆಗಳೆಂಬ 6 ವೃತ್ತಿ ತಿಳಿಸಿಕೊಟ್ಟು ಜೀವನೋಪಾಯ ತೋರಿದರು. ಹಾಗೆಯೇ ಶ್ರಾವಕರಿಗೆ ದೇವಪೂಜೆ, ಗುರುಗಳ ಸೇವೆ, ಸ್ವಾಧ್ಯಾಯ, ಸಂಯಮ, ತಪ, ದಾನ ಗಳೆಂಬ 6 ಕ್ರಿಯೆಗಳನ್ನು ಪಾಲಿಸಿ ಅಹಿಂಸಾ ಮಾರ್ಗದಲ್ಲಿ ನಡೆಯಲು ಮಾರ್ಗ ತೋರಿಸಿದರು. ಅವರ ಸ್ಮರಣೆಗಾಗಿಯೇ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪೂರ್ವಭಾವಿಯಾಗಿ ವಿಜೃಂಭಣೆಯಿಂದ ಆದಿನಾಥ ತೀರ್ಥಂಕರರ ಪಂಚಕಲ್ಯಾಣದ ಪೂಜೆ ಮತ್ತು ವಿಧಿ, ವಿಧಾನಗಳನ್ನು ತೀರ್ಥಂಕರರಿಗಾಗುವ 5 ಕಲ್ಯಾಣಗಳನ್ನು ನಡೆಸಲಾಗುತ್ತದೆ.

ಆದಿನಾಥರು ನಾಭಿರಾಜ, ಮರುದೇವಿ ಪುತ್ರರಾಗಿ ಅಯೋಧ್ಯೆ ಬಳಿ ಇರುವ ಸಾಕೇತ ಪಟ್ಟಣದಲ್ಲಿ ಜನಿಸಿ, ಕೈಲಾಸದಲ್ಲಿ ಮೋಕ್ಷ ಪಡೆದರು. ಗರ್ಭಕಲ್ಯಾಣ, ಜನ್ಮಕಲ್ಯಾಣ, ದೀಕ್ಷಾಕಲ್ಯಾಣ, ಕೇವಲ ಜ್ಞಾನ ಕಲ್ಯಾಣ, ಮೋಕ್ಷಕಲ್ಯಾಣಗಳೆಂದು ಒಟ್ಟು 5 ಕಲ್ಯಾಣಗಳಿದ್ದು, ಅವುಗಳ ವಿಧಿ, ವಿಧಾನಗಳನ್ನು ಪಂಚಕಲ್ಯಾಣದ ಸಮಯದಲ್ಲಿ

ನೆರವೇರಿಸಲಾಗುತ್ತದೆ.

ಗರ್ಭ ಕಲ್ಯಾಣ : ತೀರ್ಥಂಕರನಾಗುವ ಜೀವ ತನ್ನ ಮಾತೆಯ ಗರ್ಭಕ್ಕೆ ಆಗಮಿಸುವುದಕ್ಕೆ 6 ತಿಂಗಳು ಮುಂಚೆಯೇ ಸೌಧರ್ಮ ಇಂದ್ರನ ಆಜ್ಞೆಯಂತೆ ಕುಬೇರ ತನ್ನ ವಿವಿಧ ದೇವ ಸಮೂಹದ ಜೊತೆಯಲ್ಲಿ ಸ್ವರ್ಗದಿಂದ ಇಳಿದು ನಗರವನ್ನು ರತ್ನ ತೋರಣಗಳಿಂದ ಸಿಂಗರಿಸಿ ಪ್ರತಿನಿತ್ಯ ನಾಲ್ಕು ಬಾರಿ ಮೂರೂವರೆ ಕೋಟಿ ರತ್ನಗಳ ಮಳೆಗರೆಯುತ್ತಾನೆ. ಶುಭ ಮುಹೂರ್ತದಲ್ಲಿ ತೀರ್ಥಂಕರರ ಮಾತೆ ಬೆಳಗಿನ ಜಾವ 16 ಶುಭ ಸ್ವಪ್ನಗಳನ್ನು ಕಂಡು ಅವುಗಳ ಫಲ ಕೇಳಿ ತಿಳಿದು ತೀರ್ಥಂಕರನ ಜೀವ ತನ್ನ ಗರ್ಭದಲ್ಲಿ ಬಂದಿರುವುದನ್ನು ಕೇಳಿ ಹರ್ಷಗೊಳ್ಳುತ್ತಾಳೆ. ನಂತರ ಸೌಧರ್ಮ ಇಂದ್ರ ಮುಂತಾದ ದೇವತೆಗಳು ತೀರ್ಥಂಕರನ ತಂದೆ, ತಾಯಿಗಳ ಸತ್ಕಾರ ಮಾಡಿ ಮಾತೆಯ ಸೇವೆಗಾಗಿ ಅನೇಕ ದೇವಿಯರನ್ನು ನಿಯೋಜಿಸುತ್ತಾನೆ.

ಜನ್ಮಕಲ್ಯಾಣ : ತೀರ್ಥಂಕರ ಬಾಲಕನ ಜನ್ಮವಾದಾಗ ಸೌಧರ್ಮ ಇಂದ್ರಾದಿ ದೇವತೆಗಳು ಅವಧಿ ಜ್ಞಾನದ ಮೂಲಕ ತಿಳಿದು ಪರೋಕ್ಷವಾಗಿ ನಮಸ್ಕರಿಸಿ ಭಗವಂತನ ಜನ್ಮಸ್ಥಳಕ್ಕೆ ಸಾಗುತ್ತಾರೆ. ಅಲ್ಲಿ ಇಂದ್ರಾಣಿಯು ತೀರ್ಥಂಕರರ ಮಾತೆಗೆ ಸ್ವಲ್ಪವೂ ಕಷ್ಟ ನೀಡದೇ ಅವಳ ಬಳಿ ತೀರ್ಥಂಕರ ಮಾಯಾ ಶಿಶುವನ್ನು ಇರಿಸಿ ತೀರ್ಥಂಕರ ಬಾಲಕನನ್ನು ಕರೆತಂದು ಸೌಧರ್ಮೇಂದ್ರನಿಗೆ ನೀಡುತ್ತಾಳೆ. ಆ ಶಿಶುವನ್ನು ಐರಾವತ ಆನೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮೂಲಕ ಪಾಂಡುಕ ಶಿಲೆ ಮೇಲೆ ಕುಳ್ಳಿರಿಸಿ ಕ್ಷೀರ ಸಾಗರದ ಜಲವನ್ನು ರತ್ನಮಯ, ಸ್ವರ್ಣಮಯ 1008 ಕಲಶಗಳಿಂದ ತಂದು ತನ್ನ ಪರಿವಾರದೊಡನೆ ಜನ್ಮಾಭಿಷೇಕ ಮಾಡುತ್ತಾನೆ. ನಂತರ ಬಾಲಕನನ್ನು ನವ ವಸ್ತ್ರ ಆಭರಣಗಳಿಂದ ಅಲಂಕರಿಸಿ ಆತನ ಹೆಸರು ಮತ್ತು ಚಿಹ್ನೆಯನ್ನು ನಿರ್ಣಯಿಸಿ ಆತನ ತಂದೆ ತಾಯಿಗಳಿಗೆ ಸಮರ್ಪಿಸುತ್ತಾನೆ.

ದೀಕ್ಷಾಕಲ್ಯಾಣ

ಯಾವುದೋ ವಿಶೇಷವಾದ ನಿಮಿತ್ತ ಕಾರಣ ಸಂಸಾರದ ನಶ್ವರತೆ ತಿಳಿದ ತೀರ್ಥಂಕರರು ವೈರಾಗ್ಯ ಭಾವನೆ ಹೊಂದಿದಾಗ ಲೌಕಾಂತಿಕ ದೇವತೆಗಳು ತೀರ್ಥಂಕರರನ್ನು ಸ್ತುತಿಸುತ್ತಾ ವೈರಾಗ್ಯವನ್ನು ಪ್ರಶಂಸಿಸುತ್ತಾರೆ. ನಂತರ ದೇವತೆಗಳಿಂದ ನಿರ್ಮಿತವಾದ ಉತ್ತಮ ರತ್ನಮಯ ಪಲ್ಲಕ್ಕಿಯನ್ನು ತೀರ್ಥಂಕರರು ಏರಿದಾಗ ಮೊದಲು ಮನುಷ್ಯರು, ನಂತರ ವಿದ್ಯಾಧರರು, ಮುಂದೆ ಸೌಧರ್ಮ ಇಂದ್ರ ಮುಂತಾದ ದೇವತೆಗಳು ಪಲ್ಲಕ್ಕಿಯನ್ನು ವನದವರೆಗೆ ಕೊಡೊಯ್ಯುತ್ತಾರೆ. ಅಲ್ಲಿ ಶ್ರೇಷ್ಠವಾದ ಶಿಲೆಯ ಮೇಲೆ ವಿರಾಜಮಾನರಾದ ನಂತರ ವಸ್ತ್ರಾಭೂಷಣಗಳನ್ನು ತ್ಯಾಗ ಮಾಡಿ ನಮಃ ಸಿದ್ಧೇಭ್ಯಃ ಎನ್ನುತ್ತಾ ಕೇಶಲೋಚನ ಮಾಡಿಕೊಳ್ಳುತ್ತಾರೆ. ನಂತರ ಪರಮ ದಿಗಂಬರ ಮುನಿಗಳಾಗಿ ಆತ್ಮಧ್ಯಾನದಲ್ಲಿ ಲೀನರಾಗುತ್ತಾರೆ.

ಕೇವಲಜ್ಞಾನ ಕಲ್ಯಾಣ : ಆಗಮಾನುಸಾರ ಆಹಾರ ಚರ್ಯೆ, ಸಾಮಾಯಿಕ ಮುಂತಾದ ಘೋರ ತಪ ಮಾಡುತ್ತಾ ಧ್ಯಾನದ ಸಮಯದಲ್ಲಿ ಶುಕ್ಲ ಧ್ಯಾನದಲ್ಲಿ ಲೀನರಾಗಿ 4 ಘಾತಿ ಕರ್ಮಗಳನ್ನು ನಾಶ ಮಾಡಿಕೊಂಡು ಕೇವಲ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಸೌಧರ್ಮೇಂದ್ರನ ಆಜ್ಞೆಯಂತೆ 7 ಪ್ರಕಾರದ ಭೂಮಿಗಳು, 12 ಸಭೆಗಳು ಮುಂತಾದ ಆಶ್ಚರ್ಯಕಾರಿ ಸುಂದರ ಸಮವಸರಣ ರಚನೆ ಮಾಡಿ ಭಗವಂತನ ಪೂಜೆಯನ್ನು ವೈಭವದಿಂದ ಮಾಡುತ್ತಾನೆ. ಅಲ್ಲಿ ಮುನಿಗಳು, ಆರ್ಯಿಕೆ, ಶ್ರಾವಕ, ಶ್ರಾವಕಿಯರು, ದೇವತೆಗಳು, ಪ್ರಾಣಿಗಳು ಇರುತ್ತಾರೆ. 18 ಮಹಾ ಭಾಷೆಗಳು ಮತ್ತು 700 ಲಘು ಭಾಷೆಗಳಲ್ಲಿ ಹೊರಟ ಭಗವಂತನ ದಿವ್ಯಧ್ವನಿ ಸಮವಸರಣದಲ್ಲಿರುವ ಎಲ್ಲಾ ಜನರಿಗೆ ಸಂತುಷ್ಠಿ ಉಂಟುಮಾಡುತ್ತದೆ.

ಮೋಕ್ಷಕಲ್ಯಾಣ : ತೀರ್ಥಂಕರರು ತಮ್ಮ ಆಯುಷ್ಯದ ಸಮಾಪ್ತಿಯ ಕಾಲ ತಿಳಿದು ಸಮವಸರಣ ತ್ಯಜಿಸಿ ಕಾಡಿನಲ್ಲಿ ತಪ ಮಾಡುತ್ತಾರೆ. ಅಲ್ಲಿ ಭಗವಂತರು 4 ಅಘಾತಿ ಕರ್ಮಗಳನ್ನು ನಾಶ ಮಾಡಿ ಸಂಪೂರ್ಣ ಕರ್ಮಗಳಿಂದ ಮುಕ್ತರಾಗುತ್ತಾರೆ. ಅವರ ಆತ್ಮವು ಶುದ್ಧವಾಗಿ ಲೋಕದ ಮೇಲ್ಬಾಗದ ಸಿದ್ಧಶಿಲೆಗೆ ಹೋಗಿ ಅನಂತಕಾಲದವರೆಗೆ ವಿರಾಜಮಾನವಾಗುತ್ತದೆ, ಭಗವಂತನ ಮೋಕ್ಷ ಪ್ರಾಪ್ತಿಯ ಮಂಗಲ ಕ್ಷಣದಲ್ಲಿ ದೇವತೆಗಳ ಸಮೂಹ ಅನಂತಜ್ಞಾನಾದಿ ಗುಣಗಳಿಂದ ಕೂಡಿದ ಸಿದ್ಧ ಪರಮೇಷ್ಠಿ ಭಗವಂತನನ್ನು ಉತ್ತಮ ರೀತಿಯಲ್ಲಿ ಪೂಜಿಸಿ, ಭಜನೆ ಮಾಡುತ್ತಾರೆ.

‘ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ವೃಷಭನಾಥ ತೀರ್ಥಂಕರರಿಗೆ ಐದೂ ಕಲ್ಯಾಣಗಳನ್ನು ನೆರವೇರಿಸಿ, ನಂತರ ಬಾಹುಬಲಿಗೆ ಮಹಾಮಜ್ಜನ ನೆರವೇರಿಸುತ್ತಾರೆ. ಈ ಪಂಚಕಲ್ಯಾಣ ಕಾರ್ಯಕ್ರಮ ಪ್ರತಿಷ್ಠಾ ಮಂಟಪದಲ್ಲಿ ದೃಶ್ಯ ರೂಪದಲ್ಲಿ ಬಹಳ ವೈಭವವಾಗಿ ವಿಜೃಂಭಣೆಯಿಂದ ನೆರವೇರುವುದನ್ನು ಕಂಡಾಗ ಆದಿನಾಥ ತೀರ್ಥಂಕರರ ಕಾಲದಲ್ಲಿ ಇದ್ದೇವೆಯೋ ಎಂಬಂತೆ ಭಾಸವಾಗುತ್ತದೆ’ ಎಂದು ಇತಿಹಾಸಕಾರ ಪ್ರಾಧ್ಯಾಪಕ ಜೀವೇಂದ್ರ ಕುಮಾರ್ ಹೋತಪೇಟೆ ‘ಪ್ರಜಾವಾಣಿ’ಗೆ ತಿಳಿಸಿದರು.

 

ಪ್ರತಿಕ್ರಿಯಿಸಿ (+)