ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿಲ್ಜಿ ದೇಹ, ಮನಸ್ಸಿನ ಕಷ್ಟಗಳು

Last Updated 9 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಈಗ ಶಾಲಾ-ಕಾಲೇಜು ಮಕ್ಕಳ ಬಾಯಲ್ಲಿಯೂ ರಣವೀರ್ ಸಿಂಗ್ ಹೇಗೆ ಖಿಲ್ಜಿಯಾಗಿ ಕಾಣಿಸಿಕೊಂಡಿದ್ದಾರೆ ಎಂಬ ಕುರಿತೇ ಮಾತು. ಅದರಲ್ಲೂ ತರುಣಿಯರಿಗೆ ರಣವೀರ್ ಕಟೆದ ಬೃಹತ್ ದೇಹ ಆಪ್ಯಾಯಮಾನ. ಒಂದು ಕಾಲದಲ್ಲಿ ಅತಿ ದಡೂತಿ ದೇಹ ಇದ್ದರೆ ಅದು ರಾಕ್ಷಸನ ಲಕ್ಷಣವೆಂದೂ, ಅನುಕರಣೀಯ ಅಲ್ಲವೆಂದೂ ಹೇಳುತ್ತಿದ್ದರು. ಭೀಮನ ಕಾಯ ಇಷ್ಟಪಟ್ಟವರು ಬಕಾಸುರನ ಕಾಯವನ್ನು ಮೆಚ್ಚಲಾಗುತ್ತಿತ್ತೆ? ದುರ್ಯೋಧನನ ಛಲ ಅನುಕರಣೀಯವಾದರೂ ಅವನ ವ್ಯಕ್ತಿತ್ವವನ್ನು ಇಷ್ಟಪಡದವರೇ ಹೆಚ್ಚಾಗಿದ್ದರು.

‘ಪದ್ಮಾವತ್’ ಹಿಂದಿ ಸಿನಿಮಾ ತೆರೆಕಂಡ ಮೇಲೆ ಆ ಚಿತ್ರದ ನಾಯಕ ಅಲ್ಲಾವುದ್ದೀನ್ ಖಿಲ್ಜಿಯೇ ಆಗಿದ್ದಾನೆ ಎಂದು ಅನೇಕರು ಹೇಳಲು ನಿರ್ದೇಶಕರು ಆ ಪಾತ್ರಕ್ಕೇ ಹೆಚ್ಚು ಒತ್ತು ನೀಡಿರುವುದೇ ಕಾರಣ. ಇಂಥ ಪಾತ್ರದ ಪರಕಾಯ ಪ್ರವೇಶ ಮಾಡಲು ರಣವೀರ್ ಸಿಂಗ್ ಅನುಭವಿಸಿದ ಯಾತನೆಯಲ್ಲಿ ಪ್ರೇರಣೆ ನೀಡುವಂಥ ಕಥನವಿದೆ.

ಮೊದಲಿಗೆ ಅವರು ಪಾತ್ರದ ರೂಹು ಹೇಗಿದೆ ಎಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೇಳಿದ ಸಂಕ್ಷಿಪ್ತ ಕಥನದಿಂದ ತಿಳಿದುಕೊಂಡರು. ಆಮೇಲೆ ಒಂದಿಷ್ಟು ಓದಿಕೊಂಡರು. ಮದೋನ್ಮತ್ತನಾದ ಅಲ್ಲಾವುದ್ದೀನ್ ಖಿಲ್ಜಿ ಆಗಬೇಕಾದರೆ ಮನಸ್ಸಿನಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಸ್ವಾರ್ಥ, ನಕಾರಾತ್ಮಕ ಮನೋಭಾವ, ಕ್ರೌರ್ಯ ತುಂಬಿಕೊಳ್ಳಬೆಕು ಎಂದು ಅರಿತರು. ತಮ್ಮ ಮನೆಯ ಕೋಣೆಯಲ್ಲಿ ಕದವಿಕ್ಕಿಕೊಂಡು ಗಂಟೆಗಟ್ಟಲೆ ಕೂತರು.

ಸಿದ್ಧತೆ ಬರೀ ಅಷ್ಟಕ್ಕೇ ಸೀಮಿತಗೊಳ್ಳಲಿಲ್ಲ. ದಿನಕ್ಕೆ ಆರು ತಾಸಿನಷ್ಟು ವ್ಯಾಯಾಮಕ್ಕೆ ಅವರು ಒಡ್ಡಿಕೊಳ್ಳಬೇಕಾಯಿತು; ಅದೂ ಚಿತ್ರೀಕರಣ ಪ್ರಾರಂಭವಾಗುವ ತಿಂಗಳುಗಳಷ್ಟು ಮೊದಲು. ನಟ ಹೃತಿಕ್ ರೋಷನ್ ಅವರಿಗೆ ವ್ಯಾಯಾಮದ ತರಬೇತುದಾರ ಆಗಿರುವ ಮುಸ್ತಫಾ ಅಹಮದ್ ಬಳಿಗೆ ಹೋದರು.

ಮೊದಲಿಗೆ ದೇಹ ಪ್ರಕೃತಿ ಅರಿತುಕೊಳ್ಳುವ ಮುಸ್ತಫಾ, ಆಮೇಲೆ ಪಥ್ಯ ಹೇಗಿರಬೇಕು ಎನ್ನುವುದನ್ನು ಸೂಚಿಸುತ್ತಾರೆ. ರಣವೀರ್ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ದೇಹ ಲೀಲಾಜಾಲವಾಗಿ ಬಾಗುವಂತೆಯೂ ರೂಪಿಸಬೇಕಿತ್ತು. ಇದು ದೊಡ್ಡ ಸವಾಲು. ಬರೀ ದೇಹದ ಮಾಂಸಗಳನ್ನು ಹುರಿಗಟ್ಟಿಸಿಕೊಳ್ಳುವುದಾದರೆ ಆರು ತಾಸಿನ ವ್ಯಾಯಾಮ ಅಗತ್ಯವಿಲ್ಲ. ರಣವೀರ್ ಗೆ ಮುಸ್ತಫಾ ಸೂಚಿಸಿದ್ದು ‘ಹೈ ಇಂಟೆನ್ಸಿಟಿ ಇಂಟರ್ವಲ್ ಟ್ರೇನಿಂಗ್’. ಆಗೀಗ ವಿಶ್ರಾಂತಿ ಪಡೆದು, ಹೆಚ್ಚು ವ್ಯಾಯಾಮ ಮಾಡುವ ಪ್ರಕ್ರಿಯೆಯನ್ನ ಹೀಗೆ ಕರೆಯುತ್ತಾರೆ.

ಬೆಳಿಗ್ಗೆ ಮುಕ್ಕಾಲು ಗಂಟೆ ಕಾರ್ಡಿಯೊ ಹಾಗೂ ಮೊಬಿಲಿಟಿ ಡ್ರಿಲ್ ಮಾಡುತ್ತಿದ್ದ ರಣವೀರ್, ಸಂಜೆ ಒಂದೂವರೆ ಗಂಟೆ ಭಾರ ಎತ್ತುತ್ತಿದ್ದರು. ಈ ಎರಡೂ ಪ್ರಕ್ರಿಯೆಗಳ ನಡುವೆ ಒಂದಿಷ್ಟು ವಾರ್ಮ್ ಅಪ್, ಓಡುವುದು, ದೇಹ ಬಾಗಿಸುವ ಸರಳ ವ್ಯಾಯಾಮಗಳನ್ನು ಪದೇ ಪದೇ ಮಾಡುತ್ತಿರಬೇಕಿತ್ತು. ವಾರಕ್ಕೆ ಒಂದು ದಿನ ವ್ಯಾಯಾಮಕ್ಕೆ ಬಿಡುವು. ಆ ದಿನ ಬೇಕಿದ್ದರೆ ಈಜುವಂತೆ ಮುಸ್ತಫಾ ಹೇಳಿದ್ದರು.

ಆರು ತಿಂಗಳು ಸಕ್ಕರೆಯಿಂದ ದೂರ ಉಳಿಯುವಂತೆ ತಾಕೀತು ಮಾಡಿದ್ದರು. ವಾರಕ್ಕೆ ಒಂದು ದಿನ ಮಾತ್ರ ಸಿಹಿ ಅಥವಾ ಜಂಕ್ ಫುಡ್ ತಿನ್ನಲು ವಿನಾಯಿತಿ ನೀಡಿದ್ದರಷ್ಟೆ. ಹಾಗೆ ಪಥ್ಯ ಮೀರಿ ತಿನ್ನುವುದನ್ನು ‘ಚೀಟ್ ಮೀಲ್ಸ್’ ಎನ್ನುತ್ತಾರೆ.

2017ರ ಜೂನ್ ಹೊತ್ತಿಗೆ ರಣವೀರ್ ದೇಹ ದಡೂತಿಯೂ, ಲೀಲಾಜಾಲವಾಗಿ ಆಡಿಸಬಲ್ಲಂಥ ಸ್ನಾಯುಗಳನ್ನು ಒಳಗೊಂಡಂಥದ್ದೂ ಆಗಿ ರೂಪುಗೊಂಡಿದ್ದನ್ನು ಇನ್‌ಸ್ಟಾಗ್ರಾಂ ಫೋಟೊಗಳನ್ನು ನೋಡಿ ಅನೇಕರು ಸ್ಫೂರ್ತಿಗೊಂಡರು. ಶಾಲೆಗಳಲ್ಲಿ ಕಲಿಯುವ ಕೆಲವು ಪಡ್ಡೆ ಹುಡುಗರಲ್ಲೂ ದೇಹವನ್ನು ಹಾಗೆ ಕಟೆದುಕೊಳ್ಳುವ ಬಯಕೆ ಮೂಡಿತು. ಅದು ಸಾಧ್ಯವಿಲ್ಲ ಎಂದು ಮುಸ್ತಫಾ ಅವರನ್ನೂ ಒಳಗೊಂಡಂತೆ ಅನೇಕ ತರಬೇತುದಾರರು ಸ್ಪಷ್ಟಪಡಿಸಿದರು.

ಇಂಥ ಸ್ಫೂರ್ತಿ ಕಥನಗಳನ್ನು ಕಲಿಯುವ ಮಕ್ಕಳು ಕೇಳಬಹುದು, ನೋಡಬಹುದು. ಅನುಕರಿಸುವಷ್ಟು ಮಾಂಸಖಂಡಗಳು ಕಸುವು ಪಡೆದುಕೊಂಡಿರುವುದಿಲ್ಲ. ಹದಿನೆಂಟು ದಾಟುವ ಮೊದಲು ಅತಿ ವ್ಯಾಯಾಮ ಒಳ್ಳೆಯದಲ್ಲ ಎಂಬ ಎಚ್ಚರಿಕೆಯನ್ನು ರಣವೀರ್ ಸಹ ನೀಡಿದರು.

ಅಲ್ಲಾವುದ್ದೀನ್ ಖಿಲ್ಜಿಯಂತೆ ದೇಹ, ಮನಸ್ಸನ್ನು ರೂಪಿಸಿಕೊಂಡ ರಣವೀರ್ ಪರದಾಡಿದರು. ಮನೋವೈದ್ಯರ ಆಪ್ತಸಲಹೆ ಪಡೆದ ನಂತರವಷ್ಟೆ ಅವರು ಸಹಜ ಸ್ಥಿತಿಗೆ ಮರಳಿದ್ದು.ಡಡ

ವರ್ತನೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಿದ್ದನ್ನು ಅವರ ಸ್ನೇಹಿತರೂ ಗಮನಿಸಿದ್ದರು. ಅಷ್ಟೆಲ್ಲ ಕಷ್ಟ ಪಟ್ಟಿದ್ದರ ಫಲ ತೆರೆಮೇಲೆ ಕಾಣುತ್ತಿದೆ. ಆದರೆ, ಅವರ ಪಾತ್ರದ ವರ್ತನೆಯನ್ನು ಯಾರೂ ಅನುಕರಿಸದೇ ಇರುವುದು ಉತ್ತಮ. ಈ ಸಲಹೆಯನ್ನೂ ಖುದ್ದು ರಣವೀರ್ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT