ಶುಕ್ರವಾರ, ಡಿಸೆಂಬರ್ 13, 2019
27 °C

ಸೌಂದರ್ಯ ಸಿರಿಯ ಅಡುಗೆ ಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಂದರ್ಯ ಸಿರಿಯ ಅಡುಗೆ ಲೋಕ

ಚಂದದ ನಿಲುವು, ಆಕರ್ಷಕ ಮೈಮಾಟ, ಹೂಬಿರಿದಂತಹ ನಗು...

ಇಷ್ಟು ಓದುವ ಹೊತ್ತಿಗೆ ನಿಮ್ಮ ಮನಃಪಟಲದಲ್ಲಿ ಶಿಲ್ಪಾ ಶೆಟ್ಟಿಯ ಬಿಂಬ ಮೂಡಿರಬಹುದು. ಮಾಡೆಲಿಂಗ್‌ ಲೋಕದಲ್ಲಿ ಇಂದಿಗೂ ಬೆಳಗುತ್ತಿರುವ ಈ ನಕ್ಷತ್ರ ಚಿತ್ರಲೋಕದಲ್ಲಿ ಅದೃಷ್ಟ ಪರೀಕ್ಷಿಸಿ ಗೆದ್ದಿದ್ದು ಹಳೆಯ ಮಾತು. ತಮ್ಮ ಆಕರ್ಷಕ ಮೈಮಾಟದ ರಹಸ್ಯವನ್ನು ಇದೀಗ ಶಿಲ್ಪಾ ಯುಟ್ಯೂಬ್ ಚಾನೆಲ್ ಮೂಲಕ ವಿಶ್ವದೆದುರು ಸಾರಿ ಹೇಳುತ್ತಿದ್ದಾರೆ.

‘ಆರೋಗ್ಯಕರ ಜೀವನ ಶೈಲಿಯೇ ನನ್ನ ಸೌಂದರ್ಯದ ಗುಟ್ಟು’ ಎಂಬುದು ಅವರ ನಂಬಿಕೆ.  ಮನೆಯ ಸಮೀಪದಲ್ಲಿಯೇ ಪುಟ್ಟದೊಂದು ತೋಟ ಮಾಡಿಕೊಂಡು, ಸಾವಯವ ಪದ್ಧತಿಯಲ್ಲಿ ತರಕಾರಿ, ಹಣ್ಣುಗಳನ್ನು ಬೆಳೆಯುತ್ತಾರೆ. ‘ಕೃಷಿ ಚಟುವಟಿಕೆ ಒತ್ತಡಕ್ಕೆ ಮದ್ದು. ನಾನು ಹಸಿರಿನ ಮಧ್ಯೆ ನಲಿಯುವುದರಿಂದ ಒತ್ತಡ ನನ್ನನ್ನು ಏನೂ ಮಾಡದು’ ಎಂದು ಖುಷಿಖುಷಿಯಾಗಿ ಮಾತನಾಡುತ್ತಾರೆ.

ಯುಟ್ಯೂಬ್ ಚಾನೆಲ್‌ನಲ್ಲಿ (Shilpa Shetty Kundra) ಯೋಗ, ಫಿಟ್‌ನೆಸ್‌ ಹಾಗೂ ಪೌಷ್ಟಿಕಾಂಶಯುಕ್ತ ಆಹಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತಾರೆ. ಪಾರಂಪರಿಕೆ ಅಡುಗೆಗಳನ್ನು ಆಧುನಿಕ ಜೀವನಶೈಲಿಗೆ ತಕ್ಕಂತೆ ಬದಲಿಸಿಕೊಳ್ಳುವ ವಿಧಾನ, ಕಡಿಮೆ ಸಮಯದಲ್ಲಿ ನಾಲಿಗೆಗೆ ಸವಿ, ದೇಹಕ್ಕೆ ಹಿತ ಎನಿಸುವಂಥ ಅಡುಗೆ ಮಾಡುವ ಬಗೆಬಗೆ ರೆಸಿಪಿಗಳನ್ನು ತಿಳಿಸಿಕೊಡುತ್ತಾರೆ. ಯಾವ ವಯಸ್ಸಿನವರಿಗೆ ಯಾವ ರೀತಿಯ ಆಹಾರ ಸೂಕ್ತ? ಒಂದೇ ಪದಾರ್ಥದಿಂದ ಹೇಗೆ ಬೇರೆಬೇರೆ ಅಡುಗೆಗಳನ್ನು ಮಾಡಬಹುದು ಎಂಬುದನ್ನೂ ಹೇಳಿಕೊಡುತ್ತಾರೆ. ಅಂದಹಾಗೆ ಶಿಲ್ಪಾ ಹೇಳಿಕೊಡುವ ಅಡುಗೆಗಳು ಡಯೆಟ್‌ ಪ್ರಿಯರಿಗೆ ಇಷ್ಟವಾಗುವಂತೆಯೇ ಇರುತ್ತವೆ.

ಯುಟ್ಯೂಬ್‌ನಲ್ಲಿ ಜಗತ್ತಿನ ಎದುರು ತೋರಿಕೆಗೆ ಮಾತ್ರ ಇಂಥ ಅಡುಗೆ ಮಾಡುತ್ತಾರೆ ಎಂದು ಭಾವಿಸಿಕೊಳ್ಳಬೇಡಿ. ಸದ್ಗೃಹಿಣಿಯಾಗಿ ಅಡುಗೆಮನೆ ಆಳುತ್ತಿರುವ ಶಿಲ್ಪಾ ಮನೆಯಲ್ಲಿಯೂ ಇಂಥದ್ದೇ ಅಡುಗೆಗೆ ಮಣೆ ಹಾಕುತ್ತಾರೆ. ಮಗ ವಿಹಾನ್ ಮತ್ತು ಗಂಡ ರಾಜ್‌ ಕುಂದ್ರಾ ಅವರಿಗೆ ಅಧಿಕ ಪೌಷ್ಟಿಕಾಂಶ ಇರುವ ಹಾಗೂ ಕಡಿಮೆ ಕೊಬ್ಬಿನ ಅಂಶ ಹೊಂದಿರುವ ತಿಂಡಿಗಳನ್ನೇ ಮಾಡಿಕೊಡುತ್ತಾರೆ. ಹಾಗೆಂದು ರುಚಿಯ ವಿಚಾರದಲ್ಲಿ ರಾಜಿಯಾಗುವುದಿಲ್ಲ.

‘ನಾವು ಮಾಡುವ ಅಡುಗೆ ಆರೋಗ್ಯಕ್ಕೆ ಒಳ್ಳೆಯದಾಗಿರಬೇಕು, ಗಂಡ–ಮಗ ಇಷ್ಟಪಟ್ಟು ತಿನ್ನುವಂತಿರಬೇಕು’ ಎನ್ನುವುದು ಅವರು ರೂಪಿಸಿಕೊಂಡಿರುವ ಅಡುಗೆ ಸೂತ್ರ.

ಶಿಲ್ಪಾ ಮನೆಯಲ್ಲಿ ಬೆಳಿಗ್ಗೆ 7.30ಕ್ಕೆ ಉಪಾಹಾರ. ‘ಬೆಳಗಿನ ತಿಂಡಿ ರಾಜನಂತಿರಬೇಕು, ಈಟ್ ಬ್ರೇಕ್‌ಫಾಸ್ಟ್‌ ಲೈಕ್‌ ಎ ಕಿಂಗ್’ ಎನ್ನುವುದನ್ನು ಮನದಲ್ಲಿರಿಸಿಕೊಂಡೇ ತಿಂಡಿ ತಿನ್ನುತ್ತಾರೆ. ತರಕಾರಿ ಅಥವಾ ಹಣ್ಣುಗಳ ಸ್ಮೂತಿ, ಹೆಸರುಕಾಳು, ಕಡಲೆ ಉಸುಲಿಯ ತಿಂಡಿ ಸಾಮಾನ್ಯ. ರಾತ್ರಿ ಊಟ 7.30ಕ್ಕೆ ಮುಗಿಯುತ್ತದೆ.

‘ನಾನು ಏನು ಮಾಡುತ್ತೇನೋ, ತಿನ್ನುತ್ತೇನೋ ಅದನ್ನೇ ನನ್ನ ವೀಕ್ಷಕರಿಗೂ ತಿಳಿಸುತ್ತೇನೆ’ ಎಂದು ತಮ್ಮ ಚಾನೆಲ್‌ನ ಉದ್ದೇಶವನ್ನು ಹಂಚಿಕೊಳ್ಳುತ್ತಾರೆ.

ಚಾನೆಲ್– Shilpa Shetty Kundra

ವಿಷಯ– ಅಡುಗೆ, ಯೋಗ, ಫಿಟ್‌ನೆಸ್

ಚಂದಾದಾರರು– 474,170

ವೈಶಿಷ್ಟ್ಯ– ಲವಲವಿಕೆಯ ನಿರೂಪಣೆ, ಉತ್ತಮ ಗುಣಮಟ್ಟದ ವಿಡಿಯೊ, ಸರಳ ಭಾಷೆ

ಪ್ರತಿಕ್ರಿಯಿಸಿ (+)