ಬುಧವಾರ, ಡಿಸೆಂಬರ್ 11, 2019
24 °C

ಪ್ರೀತಿಯ ಹೂ ಅರಳುವ ನಂದನವನ

Published:
Updated:
ಪ್ರೀತಿಯ ಹೂ ಅರಳುವ ನಂದನವನ

ನಾಲ್ಕಾರು ಜನರು ಒಟ್ಟಿಗೆ ಒಂದು ಸೂರಿನಡಿ ವಾಸಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಅದು ಮನೆ ಎನಿಸಿಕೊಳ್ಳುವುದಿಲ್ಲ. ಮನೆ ಎಂದರೆ ಕೇವಲ ಕಟ್ಟಡ, ಆಶ್ರಯಸ್ಥಾನ, ಉಪಹಾರಗೃಹ, ವಿಶ್ರಾಂತಿ ನಿಲಯವೂ ಅಲ್ಲ. ಒಂದು ಕುಟುಂಬದವರು ವಾಸ ಮಾಡುವ ಎಲ್ಲರೂ ಒಗ್ಗಟ್ಟಿನಿಂದ ಇರುವ ಸ್ಥಳವೇ ಮನೆ. ಮನೆ ಎಂದರೆ ಅಲ್ಲಿ ವಾಸಿಸುವ ಜನರನ್ನು ಉತ್ತಮರನ್ನಾಗಿಸುವ ಕೇಂದ್ರ.

ನಮ್ಮ ಭಾವನೆಗಳನ್ನು ಯಾವ ಸಂಕೋಚವಿಲ್ಲದೇ ನಮ್ಮ ಮನೆಯಲ್ಲಿ ಮಾತ್ರ ಹೊರಹಾಕಲು ಸಾಧ್ಯ. ಸಂತೋಷವಾದರೆ ನಗುತ್ತೇವೆ, ದುಃಖವಾದರೆ ಅತ್ತು ದುಖಖಶಮನ ಮಾಡಿಕೊಳ್ಳುತ್ತೇವೆ; ಸಿಟ್ಟು ಬಂದರೆ ಕೂಗಾಡುತ್ತೇವೆ. ಇಂಥವನ್ನೆಲ್ಲ ಮನೆ ಬಿಟ್ಟು ಬೇರೆ ಕಡೆ ಅಳುಕಿಲ್ಲದೇ ಮಾಡಲು ಸಾಧ್ಯವೇ?

ಮನೆ ದೊಡ್ಡದಿರಲಿ, ಸಣ್ಣದಿರಲಿ, ಗುಡಿಸಲೇ ಇರಲಿ, ನಮ್ಮ ಮನೆಯಂಥ ಜಾಗ ಇನ್ನೊಂದಿಲ್ಲ ಎಂದು ಎಲ್ಲರಿಗೂ ಅನಿಸುವುದು ಸಹಜ. ನಮ್ಮ ಮನೆಗಿಂತ ಸಾವಿರ ಪಟ್ಟು ಉತ್ತಮವಾದ ಸೌಕರ್ಯವಿರುವ ಬೇರೆಯವರ ಮನೆಯಲ್ಲೋ ಅಥವಾ ಫೈವ್‌–ಸ್ಟಾರ್ ಹೋಟೆಲ್‍ನಲ್ಲೋ ಇದ್ದರೆ ನಾಲ್ಕಾರು ದಿನ ಮಜವಾಗಿರಬಹುದು. ನಂತರ ನಮ್ಮ ಮನೆಗೆ ಯಾವಾಗ ಹೋಗುತ್ತೇವೋ ಅನಿಸುತ್ತದೆ. ನಮ್ಮ ಕುಟುಂಬದವರನ್ನು ಯಾವಾಗ ಸೇರುತ್ತೇವೋ ಅನಿಸುತ್ತದೆ. ಮನೆಯ ಆಕರ್ಷಣೆಯೇ ಅಂಥದ್ದು.

ವ್ಯಕ್ತಿಯು ಸುಂದರವಾದ ಬದುಕನ್ನು ನಡೆಸಲು ಅವಶ್ಯಕವಾದ ಗುಣಗಳನ್ನು ಕಲಿಯುವುದು ಮನೆಯಿಂದಲೇ. ಅದಕ್ಕೆ ಅಲ್ಲವೇ ’ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು’ ಎನ್ನುವರು. ಹಿಂದೆಲ್ಲ ಎಲ್ಲೆಲ್ಲೂ ಕೂಡು ಕುಟುಂಬಗಳೇ ಇರುತ್ತಿದ್ದವು. ನಾಲ್ಕಾರು ಕುಟುಂಬಗಳು ಒಟ್ಟಿಗೆ ವಾಸಿಸುವ ಇಂಥ ಮನೆಗಳಲ್ಲಿ ಹಿರಿಯರ ಮಾರ್ಗದರ್ಶನ ಕಿರಿಯರಿಗೆ ಇರುತ್ತಿತು. ಸರಿಯಾದ ಅಕ್ಷರಜ್ಞಾನದಿಂದ ಮಾತೆಯರೂ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಸುಂದರವಾದ ಕುಸುಮಗಳನ್ನಾಗಿ ಅರಳಿಸುತ್ತಿದ್ದರು. ಮನೆಯ ಚೌಕಟ್ಟಿನೋಳಗೆ ವಾಸಿಸುವ ವಿಭಿನ್ನ ಅಭಿರುಚಿಗಳನ್ನು, ಆಸಕ್ತಿಗಳನ್ನು, ಅಭಿಪ್ರಾಯಗಳನ್ನು ಹೊಂದಿರುವ ವ್ಯಕ್ತಿಗಳು ಪರಸ್ಪರ ಹೊಂದಿಕೊಂಡು ಹೋಗುತ್ತಿದ್ದರು. ಆದ್ದರಿಂದ ಮನೆಗಳು ನಂದಗೋಕುಲದಂತಿದ್ದವು.

ಇಂದು ಅನೇಕ ಮನೆಗಳಲ್ಲಿ ಸಾಮರಸ್ಯವಿಲ್ಲ. ಗಂಡ-ಹೆಂಡತಿ ನಡುವೆ ಜಗಳ, ತಂದೆ-ತಾಯಿ-ಮಕ್ಕಳ ನಡುವೆ ಮನಸ್ತಾಪ, ಅಣ್ಣ-ತಮ್ಮರ ನಡುವೆ ಮತ್ಸರ, ಅಪನಂಬಿಕೆ, ಅವ್ಯವಸ್ಥೆಗಳು ತಾಂಡವವಾಡುತ್ತಿವೆ. ಇಳಿ ವಯಸ್ಸಿನವರನ್ನು, ದುರ್ಬಲರನ್ನು, ರೋಗಿಗಳನ್ನು ನೋಡಿಕೊಳ್ಳುವವರಿಲ್ಲ. ಒಟ್ಟಿಗಿದ್ದರೂ ಮನೆಯ ಪ್ರತಿಯೊಬ್ಬರೂ ಒಂಟಿತನ ಅನುಭವಿಸುತ್ತಿದ್ದಾರೆ. ಪಾಲು ಕೇಳುತ್ತಾರೆಯೇ ಹೊರತು ಜವಾಬ್ಬಾರಿ, ಕರ್ತವ್ಯದತ್ತ ಗಮನವೇ ಇಲ್ಲ. ಹೀಗಾಗಿ ಅನೇಕ ಮನೆಗಳಲ್ಲಿ ಇಂದು ನಿತ್ಯ ಕುರುಕ್ಷೇತ್ರ, ಅಶಾಂತಿ, ತಳಮಳ. ಎಲ್ಲವೂ ಇದ್ದು ಕುಟುಂಬಪ್ರೀತಿಗಾಗಿ ಪರಿತಪಿಸುವ ತಬ್ಬಲಿಗಳ ತಾಣದಂತಿರುವ ಇಂಥ ಮನೆಗಳು ಮನೆಗಳೆನಿಸಿಕೊಳ್ಳುವದಿಲ್ಲ. ಹಾಗಾದರೆ ‘ಮನೆ’ ಎಂದರೇನು?

ಮನೆ ಎಂದಾಕ್ಷಣ ಈಗಲೂ ಬಹಳ ಜನ ವಾಸ್ತು ಆಧಾರಿತ ಮನೆಯ ಹೊರ ಲಕ್ಷಣದ ಬಗ್ಗೆಯೇ ಚಿಂತಿಸುತ್ತಾರೆ! ಮನೆಯೆಂದರೆ ಕಲ್ಲು, ಮಣ್ಣು, ಸಿಮೆಂಟ್, ಕಬ್ಬಿಣ ಎಂದು ತಿಳಿದರೆ ನಾವು ದಾರಿ ತಪ್ಪಿದಂತಾಗುತ್ತದೆ. ಮನೆಯ ನಿರ್ಮಾಣ ಮನೆಯಲ್ಲಿ ವಾಸಿಸುವ ಜನರ ನಡವಳಿಕೆಯಿಂದಲೇ ಆಗುತ್ತದೆ. ಬರಿಯ ಮಹಲನ್ನು ಕಟ್ಟಿದರೆ ಅದು ಮನೆ ಎನಿಸಿಕೊಳ್ಳುವುದಿಲ್ಲ. ಆ ಮನೆಯ ಜನರ ಆಚಾರ, ವಿಚಾರ, ತ್ಯಾಗ, ನಿಷ್ಠೆಯಂಥ ಗುಣಗಳು ಕಣ್ಣ ಮುಂದೆ ಹಾದು ಹೋಗಬೇಕು. ಮನೆಗಳು ಮಾನವನನ್ನು ಮಾಧವನನ್ನಾಗಿಸುವ ಕಮ್ಮಟಗಳಾದಾಗ ಮಾತ್ರ ಅದು ಮನೆ ಎನಿಸಿಕೊಳ್ಳುತ್ತದೆ.

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮನೆಯೆಂಬ ಮಂಟಪದೊಳಗೆ ಪ್ರೀತಿಯ ಹಣತೆ ಬೆಳಗಬೇಕು. ಮನೆಯ ಮಕ್ಕಳಿಗೆ ಮಾತೃವಾತ್ಸಲ್ಯ, ಅಮ್ಮನ ತೋಳತೆಕ್ಕೆ, ಅಪ್ಪನ ಭದ್ರ ಕವಚ ಸಿಗಬೇಕು. ಕೂಡು ಕುಟುಂಗಳ ಕಾಲ ಇದಲ್ಲವಾದರೂ ಕೂಡಿ ಬಾಳುವುದಂತೂ ಇದ್ದೇ ಇದೆಯಲ್ಲವೇ? ಮನೆಯ ಸದಸ್ಯರ ನಡುವೆ ಪ್ರೀತಿ, ಸಹಕಾರ, ಸ್ನೇಹಮಯ ಮೆದುಮಾತು ಇರಬೇಕು. ಮಾನವೀಯ ಮೌಲ್ಯಗಳ ಹಂಬಲ, ಪ್ರೀತಿ ಎಂಬ ಜೀವಜಲ, ಕಣ್ಣೀರನ್ನು ಪನ್ನೀರನ್ನಾಗಿಸುವ ಛಲ ಮನೆಯ ಸದಸ್ಯರಲ್ಲಿ ಇರಬೇಕು. ಮನೆಗಳಲ್ಲಿ ಹೀಗಿದ್ದಾಗ ಅದೊಂದು ಮನೆ ಎನಿಸಿಕೊಂಡು ‘ಬಾಳೊಂದು ನಂದನ... ಅನುರಾಗ ಬಂಧನ....’ ಎಂಬ ಹಳೆಯ ಹಾಡು ನೆನಪಾಗುತ್ತದೆ. ಮನುಷ್ಯಮೃಗ ಆಗದೇ ಮಗು ಆಗಬೇಕು. ಆಗ ಮನೆಯೂ ಮೃಗಾಲಯವಾಗದೇ ದೇವಾಲಯವಾದೀತು... ಮನಸ್ಸು ದೇವಾಲಯವಾದಾಗ ಮನೆಯೇ ಮಂತ್ರಾಲಯವಾದೀತು. ಆಗ ಮನೆ ಒಂದು ನೆಮ್ಮದಿಯ ತಾಣವೂ ಆದೀತು. ಇದೇ ನಿಜವಾದ ಮನೆ. 

ಪ್ರತಿಕ್ರಿಯಿಸಿ (+)