ಭಾನುವಾರ, ಡಿಸೆಂಬರ್ 8, 2019
25 °C

‘ಏಕಾಗ್ರತೆಯೇ ಇಲ್ಲವಲ್ಲ!’

Published:
Updated:
‘ಏಕಾಗ್ರತೆಯೇ ಇಲ್ಲವಲ್ಲ!’

1 . ನಾನು ಓದುವಾಗ ಎಷ್ಟೇ ಪ್ರಯತ್ನ ಮಾಡಿದರೂ ಏಕಾಗ್ರತೆ ಕಾಯ್ದುಕೊಳ್ಳಲು ಆಗುತ್ತಿಲ್ಲ. ಏನು ಮಾಡುವುದು?

-ದಯಾನಂದ, ಜಮಖಂಡಿ

ಉತ್ತರ: ನೀವು ಇಲ್ಲಿ ನಿಮ್ಮ ವಯಸ್ಸನ್ನು ತಿಳಿಸಿಲ್ಲ. ಅದೇನೇ ಇರಲಿ, ನೀವೊಬ್ಬ ವಿದ್ಯಾರ್ಥಿ. ನಾನು ಏನು ಹೇಳಲು ಬಯಸುತ್ತೇನೆಂದರೆ ನಿಮ್ಮ ದೈನಂದಿನ ಚಟುವಟಿಕೆಯನ್ನು ಸಮತೋಲನದಲ್ಲಿರಿಸಿಕೊಳ್ಳಿ. ಆರೋಗ್ಯಕರ ಡಯೆಟ್‌, ವ್ಯಾಯಾಮ ಮತ್ತು ಓದನ್ನು ರೂಢಿಸಿಕೊಳ್ಳಿ. ವ್ಯಾಯಾಮದೊಂದಿಗೆ ಕೆಲವು ಸ್ನೇಹಿತರೊಂದಿಗೆ ಸೇರಿ ಒಳ್ಳೆಯ ಆಟಗಳನ್ನು ಆಡಿ. ಇದು ನಿಮ್ಮ ವಯಸ್ಸಿನವರಿಗೆ ತುಂಬಾ ಮುಖ್ಯ. ಪ್ರತಿದಿನ ಎರಡು ಗಂಟೆಯಷ್ಟು ಆಟವಾಡಿ. ಒಮ್ಮೆ ಆಟದ ಸಮಯದಿಂದ ಮರಳಿದ ಮೇಲೆ 20 ನಿಮಿಷ ಧ್ಯಾನ ಮಾಡಿ. ನಂತರ ನಿಮ್ಮ ಓದನ್ನು ಆರಂಭಿಸಿ. ಕೆಲವೊಮ್ಮೆ ಸ್ನೇಹಿತರೊಂದಿಗೆ ಜೊತೆಗೂಡಿ ಓದುವುದರಿಂದ ಕೂಡ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯ

ವಾಗುತ್ತದೆ. ಅದರೊಂದಿಗೆ ನಿಮ್ಮ ಗಮನ ಕೂಡ ಹೆಚ್ಚುತ್ತದೆ.  ಆಗ ನಿಮ್ಮ ಗಮನ ಹೆಚ್ಚಾದಾಗ ಏಕಾಗ್ರತೆಯೂ ಹೆಚ್ಚುತ್ತದೆ; ಆಗ ಓದಿನಲ್ಲಿ ನೀವು ಮುಂದೆ ಬರಲು ಸಾಧ್ಯ.

2. ನನಗೆ ಮದುವೆ ಆಗಿ ಎರಡು ಮಕ್ಕಳಿವೆ. ಡಿಗ್ರಿಯನ್ನು ಅರ್ಧಕ್ಕೆ ಮುಗಿಸಿದ್ದೇನೆ. ನನಗೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ಏನಾದರೂ ಕೆಲಸಕ್ಕೆ ಹೋಗಬೇಕು ಎನ್ನುವ ಹಂಬಲ. ಆದರೆ ಮನೆಯಲ್ಲಿ ಅತ್ತೆ, ಮಾವ, ಗಂಡ ಯಾರೂ ಸಹಕಾರ ನೀಡುತ್ತಿಲ್ಲ. ಇದರಿಂದ ಜೀವನ ಬೇಸರವಾಗಿದೆ.

–ಸವಿತಾ, ಊರು ಬೇಡ

ಉತ್ತರ: ಈಗ ನೀವು ಮೊದಲು ಮಾಡಬೇಕಾಗಿರುವುದು ಅರ್ಧಕ್ಕೆ ನಿಲ್ಲಿಸಿದ ನಿಮ್ಮ ಓದನ್ನು ಮುಂದುವರಿಸುವುದು. ಅದಕ್ಕೆ ನಿಮಗೆ ಒಪ್ಪಿಗೆ ಹಾಗೂ ಸಹಕಾರ ಬೇಕಿಲ್ಲ. ಇದನ್ನು ದೂರಶಿಕ್ಷಣದ ಮೂಲಕವು ಮಾಡಿಕೊಳ್ಳಬಹುದು ಮತ್ತು ನಿಮಗೆ ಸಿಗುವ ಸಮಯದಲ್ಲೇ ಓದಿಕೊಳ್ಳಬಹುದು. ಒಮ್ಮೆ ನೀವು ಡಿಗ್ರಿ ಪಡೆದರೆ ಮನೆಯ ಹಿರಿಯರ ಜೊತೆ ಮಾತನಾಡಬಹುದು ಮತ್ತು ಎಷ್ಟು ಸುಲಭವಾಗಿ ಕೆಲಸ ಪಡೆದುಕೊಳ್ಳಬಹುದು ಮತ್ತು ಅದರಲ್ಲಿ ಎಷ್ಟು ಪರಿಣಾಮಕಾರಿಯಾಗಿ ತೊಡಗಿಕೊಳ್ಳಬಹುದು ಎಂಬುದನ್ನು ನಿಮ್ಮ ಗಂಡನಿಗೆ ಮನವರಿಕೆ ಮಾಡಿಕೊಡಬಹುದು. ಇವೆಲ್ಲದರ ಜೊತೆ ಜೊತೆಗೆ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತೀರಿ ಎಂದು ಮನೆಯವರಿಗೆ ಭರವಸೆ ನೀಡಿ. ಕೆಲಸ ಜೀವನದ ಜೊತೆಗೆ ಕುಟುಂಬ ಜೀವನವನ್ನು ಸರಿದೂಗಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿ. ಆಗ ಖಂಡಿತ ಅವರು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಒಪ್ಪುತ್ತಾರೆ. ತಾಳ್ಮೆಯಿಂದಿರಿ. ನೀವು ಅಂದುಕೊಂಡಂತೆ ನಡೆಯಬಹುದು.

3. ನನಗೆ ಓದಿದ ಮೇಲೆ ಏನು ನೆನಪಲ್ಲಿ ಉಳಿಯುವುದಿಲ್ಲ. ಬೇರೆ ಬೇರೆ ಏನೆಲ್ಲಾ ಯೋಚನೆಗಳು ತಲೆಯಲ್ಲಿ ಮುತ್ತಿಕೊಳ್ಳುತ್ತವೆ. ನಾನು ಅವಶ್ಯಕತೆ ಇರುವುದಕ್ಕಿಂತ ಹೆಚ್ಚಿಗೆ ಯೋಚಿಸುತ್ತೇನೆ, ಹೀಗೆಲ್ಲಾ ಯಾಕೆ ಎಂಬುದು ತಿಳಿಯುತ್ತಿಲ್ಲ.

–ರಮೇಶ್, ಬೆಂಗಳೂರು

ಉತ್ತರ: ನೀವು ಇಲ್ಲಿ ನಿಮ್ಮ ವಯಸ್ಸು ಹಾಗೂ ನೀವು ಏನು ಓದುತ್ತಿದ್ದೀರಾ ಎಂಬುದನ್ನು ತಿಳಿಸಿಲ್ಲ. ಅದೇನೇ ಇರಲಿ, ನಿಮ್ಮ ಗಮನವನ್ನು ಸುಧಾರಿಸಿಕೊಳ್ಳುವ ಮೂಲಕ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಮತ್ತು ನೀವು ಏನು ಮಾಡಬೇಕು ಎಂಬುದರ ಮೇಲೆ ಗಮನ ನೀಡಿ. ಅದಕ್ಕಾಗಿ ನೀವು ದೈಹಿಕ ಹಾಗೂ ಮಾನಸಿಕವಾಗಿ ಕೆಲಸ ಮಾಡಬೇಕು. ಧ್ಯಾನದೊಂದಿಗೆ ಉತ್ತಮ ಏಕ್ಸ್‌ಸೈಜ್ ಹಾಗೂ ಯೋಗ ನಿಮ್ಮ ಗಮನಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಆರೋಗ್ಯಕರ ಡಯೆಟ್ ಹಾಗೂ ಧನಾತ್ಮಕ ವರ್ತನೆ ಕೂಡ ನಿಮ್ಮ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ. ಅತಿಯಾಗಿ ಯೋಚಿಸುವ ಬದಲು ಧನಾತ್ಮಕವಾಗಿ ನಿಮ್ಮಲ್ಲೇ ಮಾತನಾಡಿಕೊಳ್ಳಿ. ಆಗ ನಿಧಾನಕ್ಕೆ ನಿಮ್ಮಲ್ಲಿ ಬದಲಾವಣೆಯನ್ನು ಗುರುತಿಸುತ್ತೀರಿ. ಹಾಗಾಗಿ ತಾಳ್ಮೆ ಇರಲಿ.

4. ನನಗೆ ಮದುವೆ ಆಗಿ 10 ವರ್ಷ ಆಯ್ತು. ಆದರೆ ನಾನು ಗಂಡನ ಜೊತೆ ಇದ್ದಿದ್ದು ಕೇವಲ ಎರಡು ವರ್ಷ ಮಾತ್ರ. ಮನೆಯಲ್ಲಿ ಬೇರೆ ಸಂಬಂಧ ನೋಡಿ ಮದುವೆ ಮಾಡಲು ಹೊರಟಿದ್ದಾರೆ. ನನಗೆ ಆರು ವರ್ಷಗಳಿಂದ ಒಬ್ಬರ ಪರಿಚಯ ಇದೆ. ಅವರು ನನ್ನನ್ನೇ ಮದುವೆ ಆಗುವೆ ಎಂದು ಭರವಸೆ ನೀಡಿದ್ದಾರೆ. ಆದರೆ ಅವರ ಮನೆಯವರು ನಮ್ಮ ಮದುವೆಗೆ ಸಮ್ಮತಿ ಸೂಚಿಸಿಲ್ಲ. ಈಗ ನನ್ನ ಪ್ರಶ್ನೆ ಎಂದರೆ ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗುವುದೆ? ಅಥವಾ ನನ್ನ ಪರಿಚಯದವರನ್ನು ಮದುವೆಯಾಗುವುದೆ?

–ವೀಣಾ, ಊರು ಬೇಡ

ಉತ್ತರ: ನೀವು ಇಲ್ಲಿ ನಿಮ್ಮ ನಡುವೆ ವಿಚ್ಛೇದನ ಆಗಿದೆಯೆ? ಇಲ್ಲವೆ? – ಎಂಬುದನ್ನು ತಿಳಿಸಿಲ್ಲ. ಒಂದೊಮ್ಮೆ ಆಗಿಲ್ಲದಿದ್ದರೆ, ಮೊದಲು ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ. ನಂತರದ್ದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು. ನಿಮಗೆ ಕಳೆದ ಆರು ವರ್ಷದಿಂದ ತಿಳಿದಿರುವ ವ್ಯಕ್ತಿಯ ಬಳಿ ಮಾತನಾಡಿ. ಅವರು ಅವರ ಮನೆಯವರ ವಿರೋಧದರ ನಡುವೆಯೂ ನಿಮ್ಮನ್ನು ಮದುವೆಯಾಗಲು ಒಪ್ಪಿದರೆ ನೀವು ನಿಮ್ಮ ಮನೆಯವರ ಜೊತೆ ಈ ಬಗ್ಗೆ ಮಾತನಾಡಿ. ಒಂದು ವೇಳೆ ಅವರಲ್ಲಿ ಈ ಬಗ್ಗೆ ಸ್ವಷ್ಟತೆ ಇಲ್ಲದಿದ್ದರೆ ಅಥವಾ ಗೊಂದಲದಲ್ಲಿದ್ದರೆ ಅವಕಾಶಕ್ಕೆ ಕಾಯಬೇಡಿ. ಆಗ ನಿಮ್ಮ ಕುಟುಂಬಸ್ಥರು ನೋಡಿದ ಹುಡುಗನನ್ನು ಮದುವೆಯಾಗುವುದು ಉತ್ತಮ. ಇದರಿಂದ ನಿಮ್ಮ ಮನೆಯವರಿಂದ ನಿಮಗೆ ಸಂಪೂರ್ಣ ಸಹಕಾರ ಸಿಗುತ್ತದೆ. ಅವರ ಸಹಕಾರವೂ ನಿಮಗೆ ತುಂಬಾ ಅವಶ್ಯಕ.

*

ನಾದ್ರೂ ಕೇಳ್ಬೋದು

ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. ಇಮೇಲ್ ವಿಳಾಸ; bhoomika@prajavani.co.in ವಾಟ್ಸ್ಯಾಪ್: 9482006746

*

ಪ್ರತಿಕ್ರಿಯಿಸಿ (+)