ಬುಧವಾರ, ಡಿಸೆಂಬರ್ 11, 2019
23 °C

ಶಿವರಾತ್ರಿ ಉಪವಾಸದ ಉಪಾಹಾರ

Published:
Updated:
ಶಿವರಾತ್ರಿ ಉಪವಾಸದ ಉಪಾಹಾರ

ಅಂದು ಪೂರ್ಣ ಉಪವಾಸವನ್ನು ಕೆಲವರು ಮಾಡಿದರೆ, ಅಲ್ಪ ಆಹಾರವನ್ನು ಮತ್ತೆ ಕೆಲವರು ಸೇವಿಸುವುದುಂಟು. ಶಿವರಾತ್ರಿಯ ಉಪವಾಸಕಾಲಕ್ಕೆ ಸೇವಿಸಬಹುದಾದ ಕೆಲವು ಉಪಾಹಾರಗಳನ್ನು ತಯಾರಿಸುವ ವಿಧಾನವನ್ನು ಇಲ್ಲಿ ವಿವರಿಸಿದ್ದಾರೆ, ಜಯಶ್ರೀ ಕಾಲ್ಕುಂದ್ರಿ.

ಸಬ್ಬಕ್ಕಿ ವಡೆ

ಬೇಕಾಗುವ ಸಾಮಗ್ರಿಗಳು:
 ಸಬ್ಬಕ್ಕಿ ಹಿಟ್ಟು – 3ಕಪ್, ಬೇಯಿಸಿ ಮಸೆದ ಆಲೂಗಡ್ಡೆ - 1/2ಕಪ್, ಕಡಲೆಕಾಯಿ ಬೀಜ - 1/2ಕಪ್, ಇಂಗು - 1/4ಚಮಚ, ಕತ್ತರಿಸಿದ ಹಸಿಮೆಣಸಿನಕಾಯಿ - 5-6, ಕತ್ತರಿಸಿದ ಕೊತ್ತಂಬರಿಸೊಪ್ಪು - 3ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು - 2ಚಮಚ, ಶುಂಠಿತುರಿ - 1ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ - ಕರಿಯಲು

ತಯಾರಿಸುವ ವಿಧಾನ: ಸಬ್ಬಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ, ಬಸಿದಿಡಿ. ಕಡಲೆಕಾಯಿಬೀಜವನ್ನು ತರಿತರಿಯಾಗಿ ಪುಡಿ ಮಾಡಿಡಿ. ಸಬ್ಬಕ್ಕಿ, ಆಲೂಗಡ್ಡೆ, ಪುಡಿ ಮಾಡಿರಿಸಿದ ಕಡಲೆಕಾಯಿ ಬೀಜ, ಇಂಗು, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಕರಿಬೇವಿನಸೊಪ್ಪು, ಶುಂಠಿತುರಿ, ಉಪ್ಪುಗಳನ್ನು ಸೇರಿಸಿ, ಕಲಕಿ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ವಡೆಯ ಹದಕ್ಕೆ ಕಲಿಸಿಡಿ. ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ವಡೆಯಾಕಾರದಲ್ಲಿ ತಟ್ಟಿ ಕಾಯಿಸಿದ ಎಣ್ಣೆಯಲ್ಲಿ ಕರಿದರೆ ಗರಿಗರಿಯಾದ ಸಬ್ಬಕ್ಕಿ ವಡೆ ಸವಿಯಲು ಸಿದ್ಧ.

*ಕ್ಯಾರೆಟ್ ಹಲ್ವಾ

ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್ ತುರಿ - 2ಕಪ್, ಸಕ್ಕರೆ - 3/4ಕಪ್, ತುಪ್ಪ - 3/4ಕಪ್, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ–ಏಲಕ್ಕಿಪುಡಿ - 1/2ಚಮಚ, ಲವಂಗದ ಪುಡಿ - 1ಚಮಚ, ಜಾಕಾಯಿಪುಡಿ - 1/4ಚಮಚ, ಹಾಲು - 3/4ಕಪ್, ಉಪ್ಪು - ಚಿಟಿಕೆ

ತಯಾರಿಸುವ ವಿಧಾನ: ಬಾಣಲೆಯಲ್ಲಿ ತುಪ್ಪವನ್ನು ಕಾಯಿಸಿ, ಕ್ಯಾರೆಟ್ ತುರಿ ಹಾಕಿ ಬಾಡಿಸಿ ಹಾಲು ಸೇರಿಸಿ ಕುದಿಸಿ. ಬೆಂದ ಮೇಲೆ, ಸಕ್ಕರೆ, ಏಲಕ್ಕಿಪುಡಿ, ಜಾಕಾಯಿಪುಡಿ, ಉಪ್ಪು, ಲವಂಗದ ಪುಡಿಗಳನ್ನು ಹಾಕಿ ಚೆನ್ನಾಗಿ ಗೊಟಾಯಿಸಿ. ಮಿಶ್ರಣ ಬಾಣಲೆಯ ತಳ ಬಿಟ್ಟ ಮೇಲೆ, ದ್ರಾಕ್ಷಿ, ಗೋಡಂಬಿಗಳನ್ನು ಸೇರಿಸಿ ಒಲೆಯಿಂದ ಕೆಳಗಿರಿಸಿ. ಈಗ ರುಚಿಯಾದ ಕ್ಯಾರೆಟ್ ಹಲ್ವಾ ರೆಡಿ.

*ಸಾಮೆ ಅಕ್ಕಿ ಮೊಸರನ್ನ

ಬೇಕಾಗುವ ಸಾಮಗ್ರಿಗಳು:
ಸಾಮೆ ಅಕ್ಕಿ - 2ಕಪ್, ಗಟ್ಟಿ ಮೊಸರು - 2ಕಪ್, ಹಾಲು - 2ಕಪ್, ಜೀರಿಗೆ-3 ಚಮಚ, ಎಣ್ಣೆ – 2ಚಮಚ, ಕತ್ತರಿಸಿದ ಹಸಿಮೆಣಸಿನಕಾಯಿ – 5-6, ಶುಂಠಿತುರಿ – 1ಚಮಚ, ಕರಿಬೇವಿನ ಎಲೆಗಳು - 8-10, ಕತ್ತರಿಸಿದ ಕೊತ್ತಂಬರಿಸೊಪ್ಪು - 2ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ತೆಂಗಿನಕಾಯಿ ತುರಿ - 1/2ಕಪ್

ತಯಾರಿಸುವ ವಿಧಾನ: ಸಾಮೆಅಕ್ಕಿಯಿಂದ ಮೆತ್ತಗೆ ಅನ್ನ ಮಾಡಿ, ಮಸೆದಿರಿಸಿ. ಮಸೆದಿರಿಸಿದ ಅನ್ನಕ್ಕೆ, ಹಾಲು, ಮೊಸರು, ತುರಿದ ಶುಂಠಿ, ತೆಂಗಿನಕಾಯಿತುರಿ, ಉಪ್ಪು – ಇಷ್ಟನ್ನು ಹಾಕಿ ಕಲಕಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಜೀರಿಗೆ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ, ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಹಾಕಿ ಬಾಡಿಸಿ, ಮಸೆದಿರಿಸಿದ ಅನ್ನಕ್ಕೆ ಬೆರೆಸಿ. ಚನ್ನಾಗಿ ಕಲಕಿ. ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿದರೆ, ಸವಿಯಾದ ಮೊಸರನ್ನ ಸವಿಯಲು ಸಿದ್ಧ.

*ಒಣಹಣ್ಣುಗಳ ಉಂಡೆ

ಬೇಕಾಗುವ ಸಾಮಗ್ರಿಗಳು:
 ಖರ್ಜೂರ - 2ಕಪ್, ಬಾದಾಮಿ ತುಂಡುಗಳು - 1/2ಕಪ್, ಗೋಡಂಬಿ ತುಂಡುಗಳು - 1/2ಕಪ್, ಒಣದ್ರಾಕ್ಷಿ - 1/4ಕಪ್, ಒಣಕೊಬ್ಬರಿತುರಿ - 1ಕಪ್, ಸಕ್ಕರೆಪುಡಿ - 1ಕಪ್, ತುಪ್ಪ - 1/2ಕಪ್, ಜೇನುತುಪ್ಪ - 3ಚಮಚ, ಏಲಕ್ಕಿಪುಡಿ - 1ಚಮಚ

ತಯಾರಿಸುವ ವಿಧಾನ: ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿಗಳನ್ನು ಬೇರೆಬೇರೆಯಾಗಿ ತುಪ್ಪದಲ್ಲಿ ಹುರಿದು, ಒಣಕೊಬ್ಬರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಕಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಸಕ್ಕರೆ ಸೇರಿಸಿ ಕರಗಿಸಿ. ಸಕ್ಕರೆ ಕರಗಿದ ನಂತರ, ಜೇನುತುಪ್ಪ, ಒಣಹಣ್ಣುಗಳ ಮಿಶ್ರಣಗಳನ್ನು ಸೇರಿಸಿ, ಕೈಯಾಡಿ, ಒಲೆಯಿಂದ ಕೆಳಗಿರಿಸಿ. ತಣಿದ ನಂತರ ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ. ಮಕ್ಕಳಿಗೂ ಇಷ್ಟವಾಗುವ ರುಚಿಕರವಾದ, ಪುಷ್ಟಿದಾಯಕವಾದ ಒಣಹಣ್ಣುಗಳ ಉಂಡೆ ತಯಾರು.

*ಸಿಹಿಗೆಣಸಿನ ಬಿಲ್ಲೆ

ಬೇಕಾಗುವ ಸಾಮಗ್ರಿಗಳು:
ಸಿಪ್ಪೆತೆಗೆದು ಕತ್ತರಿಸಿದ ಸಿಹಿಗೆಣಸಿನ ಬಿಲ್ಲೆಗಳು - 10-12, ತುಪ್ಪ - 1/2ಕಪ್, ಜೇನುತುಪ್ಪ - 1/2ಕಪ್, ತೆಂಗಿನಕಾಯಿತುರಿ - 1/4ಕಪ್, ಏಲಕ್ಕಿ ಪುಡಿ - 1/2ಚಮಚ,  ಕೇಸರಿಬಣ್ಣ - 1/4ಚಮಚ, ಲವಂಗದ ಪುಡಿ - 1/2ಚಮಚ, ಜಾಕಾಯಿ ಪುಡಿ - 1/4ಚಮಚ

ತಯಾರಿಸುವ ವಿಧಾನ: ಕೇಸರಿಬಣ್ಣವನ್ನು ಹಾಲಿನಲ್ಲಿ ಹಾಕಿ ಕದಡಿಡಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಸಿಹಿಗೆಣಸಿನ ಬಿಲ್ಲೆಗಳನ್ನು ಬಾಡಿಸಿ. ಜೇನುತುಪ್ಪ. ತೆಂಗಿನಕಾಯಿ ತುರಿ, ಏಲಕ್ಕಿಪುಡಿ, ಕೇಸರಿಬಣ್ಣ, ಲವಂಗದ ಪುಡಿ, ಜಾಕಾಯಿಪುಡಿಗಳನ್ನು ಸೇರಿಸಿ ಮಿಶ್ರಣ ತಯಾರಿಸಿ. ಈ ಮಿಶ್ರಣದಲ್ಲಿ ಬಾಡಿಸಿದ ಗೆಣಸಿನ ಬಿಲ್ಲೆಗಳನ್ನು ಒಂದೊಂದಾಗಿ ಅದ್ದಿ ತೆಗೆದರೆ, ರುಚಿರುಚಿಯಾದ ಸಿಹಿಗೆಣಸಿನ ಬಿಲ್ಲೆಗಳು ರೆಡಿ.

*ಹೆಸರುಕಾಳಿನ ಜ್ಯೂಸ್‌

ಬೇಕಾಗುವ ಸಾಮಗ್ರಿಗಳು:
ಹೆಸರುಕಾಳು – 1ಕಪ್, ತೆಂಗಿನಕಾಯಿತುರಿ - 1/2ಕಪ್, ಬೆಲ್ಲದ ತುರಿ - 3/4ಕಪ್, ಪುದಿನಾ ಎಲೆಗಳು - 7-8, ಏಲಕ್ಕಿಪುಡಿ - 1/2ಚಮಚ, ನಿಂಬೆರಸ - 1ಚಮಚ, ಉಪ್ಪು - 1/2ಚಮಚ

ತಯಾರಿಸುವ ವಿಧಾನ: ಹೆಸರುಕಾಳುಗಳನ್ನು 5 ಘಂಟೆಗಳ ಕಾಲ ನೆನೆಸಿ ಬಸಿದು, ತೆಂಗಿನಕಾಯಿತುರಿ, ಬೆಲ್ಲದ ತುರಿ, ಪುದಿನಾ ಎಲೆಗಳನ್ನು ಸೇರಿಸಿ ನುಣ್ಣಗೆ ಅರೆಯಿರಿ. ಅರೆದ ಮಿಶ್ರಣಕ್ಕೆ, ಏಲಕ್ಕಿಪುಡಿ, ನಿಂಬೆರಸ, ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಕಿ. ಜ್ಯೂಸ್ ಹದಕ್ಕೆ ನೀರು ಬೆರೆಸಿ, ಕಲಕಿದರೆ ರುಚಿಯಾದ ಹೆಸರುಕಾಳಿನ ಜ್ಯೂಸ್ ಕುಡಿಯಲು ಸಿದ್ಧ.

*–ಜಯಶ್ರೀ ಕಾಲ್ಕುಂದ್ರಿ

ಪ್ರತಿಕ್ರಿಯಿಸಿ (+)