ಸೋಮವಾರ, ಡಿಸೆಂಬರ್ 9, 2019
24 °C

ಮನೆ ಬಾಗಿಲಿಗೆ ಗುಲಾಬಿ ಗುಚ್ಛ!

Published:
Updated:
ಮನೆ ಬಾಗಿಲಿಗೆ ಗುಲಾಬಿ ಗುಚ್ಛ!

ಸಾವಿರಾರು ವರ್ಷಗಳಿಂದ ಗುಲಾಬಿಯನ್ನು ಪ್ರೇಮದ ಸಂಕೇತವಾಗಿ ಬಳಸಲಾಗುತ್ತಿದೆ. ಪ್ರೀತಿಯಲ್ಲಿ ಗುಲಾಬಿ ಸರ್ವ ಶ್ರೇಷ್ಠ ಎನ್ನುವ ಕಾರಣಕ್ಕೆ ಗುಲಾಬಿ ಗುಚ್ಛದ ಉಡುಗೊರೆ ನೀಡುವ ಪರಿಕಲ್ಪನೆಯಲ್ಲಿ ಜನ್ಮ ತಾಳಿರುವುದೇ ಪ್ಲಷ್‌ ಬೆಂಗಳೂರು.

ಪ್ರೇಮಿಗಳ ದಿನದಂದು ಎಲ್ಲೆಲ್ಲೋ ಅಲೆದಾಡಿ, ಗುಲಾಬಿ ಹೂವನ್ನು ತಂದು ನಿಮ್ಮ ಪ್ರೇಮಿಗೆ ನೀಡುವಷ್ಟರಲ್ಲಿ ಗುಲಾಬಿ ಹೂ ಬಾಡಿ ಬೆಂಡಾಗಬಹುದು. ಈ ಸಮಸ್ಯೆಗೆ ಪರಿಹಾರ ನೀಡಿದೆ ಈ ಸಂಸ್ಥೆ. ಪ್ಲಷ್ ಬೆಂಗಳೂರು ನೀವು ಹೇಳಿದ ವಿಳಾಸಕ್ಕೆ, ಹೇಳಿದ ಸಮಯಕ್ಕೆ, ಹೇಳಿದ ಆಕಾರದ ಗುಲಾಬಿ ಗುಚ್ಛವನ್ನೇ ನಿಮ್ಮ ಪ್ರೇಮಿಯ ಮುಂದೆ ಇಡುತ್ತದೆ. ಈ ಗುಲಾಬಿ ಏಳು ದಿನಗಳ ತನಕ ಬಾಡದೇ ಹಾಗೆ ನಗುತ್ತಿರುತ್ತದೆ. ನೀವು ನೀರು ಸಿಂಪಡಿಸದಿದ್ದರೂ ಅದರ ಪಕಳೆಗಳು ಬಾಡುವುದಿಲ್ಲ.

ಇಂತಹ ಒಂದು ಹೊಸ ಪ್ರಯೋಗದ ಮೂಲಕ ಮಾರುಕಟ್ಟೆಗೆ ಇಳಿದವರು ನೈದಿಲೆ ರಂಗನಾಥ್ ಮತ್ತು ಅನ್ಮೋಲ್ ಬಜಾಜ್‌. ಈ ಇಬ್ಬರೂ ಸ್ನೇಹಿತೆಯರು ರಜಾದಿನಗಳಲ್ಲಿ ವಿದೇಶ ಸುತ್ತುತ್ತಿದ್ದವರು. ಅಲ್ಲಿ ಅವರಿಗೆ ಕಾಣಿಸಿದ್ದು ಮನೆ ಬಾಗಿಲಿಗೆ ಗುಲಾಬಿ ತಂದುಕೊಡುವವರು. ಅದು ಕೇವಲ ಪ್ರೇಮಿಗಳ ದಿನ ಮಾತ್ರವಲ್ಲ. ವಿವಾಹ ವಾರ್ಷಿಕೋತ್ಸವ, ಮದುವೆ, ಹುಟ್ಟುಹಬ್ಬ ಹೀಗೆ ಯಾವುದೇ ವಿಶೇಷ ಸಂದರ್ಭಗಳಲ್ಲಿ ಪ್ರೀತಿ ಪಾತ್ರರ ಮನೆ ಮುಂದೆ ಹೂಗುಚ್ಛ ರೆಡಿ ಇರುತ್ತಿತ್ತು. ಇಂತಹ ಒಂದು ಆನ್‌ಲೈನ್ ಉದ್ಯಮ ನಗರದಲ್ಲಿ ಇಲ್ಲ. ನಾವು ಇದನ್ನು ಇಲ್ಲಿ ಆರಂಭಿಸಿದರೆ ಉತ್ತಮ ಎಂಬ ಯೋಚನೆ ಬಂದ ತಕ್ಷಣವೇ ಉದ್ಯಮ ಆರಂಭಿಸಿಯೇ ಬಿಟ್ಟರು. 2017 ಸೆಪ್ಟೆಂಬರ್‌ನಲ್ಲಿ ಈ ಸಂಸ್ಥೆ ಪ್ರಾರಂಭವಾಯಿತು.

ಪ್ಲಷ್ ಬೆಂಗಳೂರು ಗ್ರಾಹಕರು

ಪ್ಲಷ್‌ ಬೆಂಗಳೂರು ಆರಂಭವಾಗಿ ಐದು ತಿಂಗಳಲ್ಲಿ ಸುಮಾರು 900 ಬಾಕ್ಸ್ ಗುಲಾಬಿ ಗುಚ್ಛಗಳು ಮಾರಾಟ ಆಗಿವೆ. ಬಿಳಿ ಗುಲಾಬಿ ಬಾಕ್ಸ್‌ಗೆ ಬೇಡಿಕೆ ಹೆಚ್ಚು. ಅದರಲ್ಲೂ ಉದ್ಯೋಗ ನಿಮಿತ್ತ ಮಕ್ಕಳು – ಸಂಸಾರದಿಂದ ದೂರ ಇರುವವರು, ದುಡಿಯುವ ಸಲುವಾಗಿ ತಂದೆ–ತಾಯಿಯಿಂದ ದೂರವಿದ್ದು ವಿದೇಶಗಳಲ್ಲಿರುವವರು, ವಿದೇಶದಲ್ಲಿ ಓದುವ ಮಕ್ಕಳು ತಮ್ಮ ತಾಯಂದಿರಿಗೆ ಹೆಚ್ಚಾಗಿ ಇದನ್ನು ಆರ್ಡರ್ ಮಾಡುತ್ತಾರಂತೆ.

ಪ್ರೇಮಿಗಳ ದಿನದ ವಿಶೇಷ ಪ್ರೇಮಿಗಳ ದಿನಕ್ಕೆ ಪ್ರೇಮಿಗಳಿಗೆ ವಿಶೇಷವಾದ ಉಡುಗೊರೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಭಿನ್ನವಾದ ಬಾಕ್ಸ್‌ ಒಂದನ್ನು ತಯಾರಿಸಿದೆ ಈ ಸಂಸ್ಥೆ. ಹೃದಯಾಕಾರದ ಈ ಚಂದದ ಬಾಕ್ಸ್‌ನಲ್ಲಿ ಚಾಕೊಲೆಟ್‌, ಗುಲಾಬಿ ಹೂಗಳು ಹಾಗೂ 2 ವೈನ್ ಬಾಟಲಿಗಳು ಇರುತ್ತವೆ. ಇದರ ಬೆಲೆ ₹3,000. ಈಗಾಗಲೇ ಪ್ರೇಮಿಗಳ ದಿನಕ್ಕಾಗಿ 60ಕ್ಕೂ ಹೆಚ್ಚು ಆರ್ಡರ್‌ಗಳು ಸಿಕ್ಕಿವೆ.

ಆರ್ಡರ್ ಮಾಡುವ ವಿಧಾನ

ಈಗಾಗಲೇ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಗ್ರಾಹಕರನ್ನು ತಲುಪಿರುವ ಪ್ಲಷ್ ಬೆಂಗಳೂರು ವಾಟ್ಸಾಪ್ ಮೂಲಕ ಆರ್ಡರ್‌ಗಳನ್ನು ಸ್ವೀಕರಿಸುತ್ತಿವೆ. ನಿಮ್ಮ ಮನದಲ್ಲಿರುವ ಅಡ್ರೆಸ್ ಟೈಪಿಸಿ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿದರೆ ಸಾಕು ನೀವು ಇಷ್ಟಪಟ್ಟವರ ಮನೆ ಮುಂದೆ ಹೂಗುಚ್ಛವಿರುತ್ತದೆ. ಭಿನ್ನವಾದ ಬಾಕ್ಸ್ ಹಾಗೂ ಆಕಾರದಲ್ಲಿ ಇರುವ ಬಣ್ಣದ ಗುಲಾಬಿಗಳು ಅವರಿಗೆ ಇಷ್ಟವಾಗದೇ ಇರದು.

‘ನಾವು ತಯಾರಿಸುವ ಗುಲಾಬಿ ಬಾಕ್ಸ್ ಭಿನ್ನವಾಗಿದೆ, ಇದನ್ನು ತಯಾರಿಸುವಾಗಲೇ ಬಾಕ್ಸ್‌ನ ಕೆಳಗಡೆ ಫ್ಲೋರಲ್ ಫೋಮ್ ಹಾಕಿರು‌ತ್ತೇವೆ, ಇದರಲ್ಲಿ ನೀರಿನಂಶವೂ ಇರುತ್ತದೆ. ಉಡುಗೊರೆ ಪಡೆದ ಮೇಲೆ ಅವರು ಮತ್ತೆ ಅದನ್ನು ನೀರಿನಲ್ಲಿ ಹಾಕಿ ಇಡುವ ಅವಶ್ಯಕತೆ ಇಲ್ಲ. ಏಳು ದಿನ ಬಾಡದೆ ಹಾಗೇ ಇರುತ್ತದೆ. ನಮ್ಮ ತಂಡದಲ್ಲಿ ಒಟ್ಟು ಒಂಬತ್ತು ಮಂದಿ ಇದ್ದೇವೆ. ಇಬ್ಬರು ಡೆಲಿವರಿ ಹುಡುಗರಿದ್ದಾರೆ. ಉಚಿತ ಡೆಲಿವರಿ ನೀಡುವುದು ನಮ್ಮ ಇನ್ನೊಂದು ವಿಶೇಷ’ ಎಂದು ಪ್ಲಷ್‌ ಬೆಂಗಳೂರಿನ ಸ್ವರೂಪವನ್ನು ನೈದಿಲೆ ವಿವರಿಸುತ್ತಾರೆ.

ಸಂಪರ್ಕಕ್ಕೆ: facebook.com/plush.bengaluru 

ಪ್ರತಿಕ್ರಿಯಿಸಿ (+)