ಬುಧವಾರ, ಡಿಸೆಂಬರ್ 11, 2019
15 °C

ಕಟ್ಟುಮಸ್ತು ದೇಹ ರೂಪುಗೊಂಡ ಕಥೆ

Published:
Updated:
ಕಟ್ಟುಮಸ್ತು ದೇಹ ರೂಪುಗೊಂಡ ಕಥೆ

ನಾನು ಹುಟ್ಟಿದ್ದು ಹುಬ್ಬಳ್ಳಿಯ ಹೆಗ್ಗೇರಿಯಲ್ಲಿ. ತಂದೆ ರಾಮಪ್ಪ, ತಾಯಿ ತುಳಸವ್ವ. ತಂಗಿ ಹಾಗೂ ನಾಲ್ವರು ತಮ್ಮಂದಿರಿದ್ದಾರೆ. ನಾನೇ ದೊಡ್ಡವನು. ಎಪಿಎಂಸಿ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡಿಯೇ ತಂದೆ ನಮ್ಮನ್ನು ಸಾಕಿದರು. ಶಾಲೆಗೆ ಹೋಗುವಾಗ ಹೋಟೆಲ್, ಎಪಿಎಂಸಿ, ಮರಳು ಲಾರಿಗಳಲ್ಲಿ ಕೆಲಸ ಮಾಡುತ್ತಿದ್ದೆ. ಗೋಪನಕೊಪ್ಪದ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಓದುವಾಗ ನನ್ನ ದೇಹದ ತೂಕ ಬರೀ 47 ಕೆ.ಜಿ. ಇತ್ತು.

ಅಪ್ಪನ ಜತೆ ಎಪಿಎಂಸಿಗೆ ಕೆಲಸಕ್ಕೆ ಹೋಗುತ್ತಿದ್ದಾಗ, ಅಲ್ಲಿಯ ಕಾರ್ಮಿಕರ ಕಟ್ಟುಮಸ್ತಾದ ದೇಹ ನೋಡುತ್ತಿದ್ದೆ. ಅದರಂತೆ ನನ್ನ ದೇಹವೂ ಆಗಬೇಕೆಂದು ಆಸೆಪಡುತ್ತಿದ್ದೆ. ಟೀವಿ ಹಾಗೂ ಪತ್ರಿಕೆಯಲ್ಲಿ ಬರುತ್ತಿದ್ದ ದೇಹದಾರ್ಢ್ಯ ಪಟುಗಳ ಚಿತ್ರ ನೋಡಿ, ಅದು ಕಂಪ್ಯೂಟರ್‌ ಸೃಷ್ಟಿ ಎಂದು ನಗುತ್ತಿದ್ದೆ.

ಪಿಯು ಮೊದಲ ವರ್ಷದಲ್ಲಿರುವಾಗಲೇ ದೇಹ ದಂಡಿಸಲು ಶುರು ಮಾಡಿದೆ. ಬೆಳಿಗ್ಗೆ 2 ಗಂಟೆ ಹಾಗೂ ಸಂಜೆ 3 ಗಂಟೆ ಕಸರತ್ತು ಮಾಡುತ್ತಿದ್ದೆ. ಎರಡೇ ವರ್ಷಗಳಲ್ಲಿ ನನ್ನ ದೇಹವು ದೇಹದಾರ್ಢ್ಯ ಸ್ಪರ್ಧೆಗೆ ಅರ್ಹತೆ ಪಡೆಯಿತು. ಪಿಯುಸಿ ಬಳಿಕ ಧಾರವಾಡದ ಅಂಜುಮನ್ ಕಾಲೇಜಿನಲ್ಲಿ ಬಿಎ ಓದಲು ಸೇರಿಕೊಂಡೆ. ಅದೇ ವೇಳೆ, ಇಂಡಿಯನ್ ದೇಹದಾರ್ಢ್ಯ ಪಟುಗಳ ಫೆಡರೇಷನ್‌ (ಐಬಿಬಿಎಫ್) ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಮೊದಲ ಪ್ರಯತ್ನದಲ್ಲೇ ’ಮಿಸ್ಟರ್‌ ಇಂಡಿಯಾ’ ಆಗಿ ಹೊರಹೊಮ್ಮಿದೆ. ಅಂದು ಆದ ಆನಂದ ಅಷ್ಟಿಷ್ಟಲ್ಲ. ಐಬಿಎಫ್‌ಎಫ್‌ ಹಿರಿಯ ವಿಭಾಗ, ದಕ್ಷಿಣ ಭಾರತ ಚಾಪಿಯನ್, ಮಿಸ್ಟರ್ ಕರ್ನಾಟಕ, ಮಿಸ್ಟರ್‌ ಹುಬ್ಬಳ್ಳಿ, ಮಿಸ್ಟರ್‌ ಧಾರವಾಡ, ದಸರಾ ಚಾಂಪಿಯನ್‌ ಪಟ್ಟ ದೊರೆಯಿತು.

ವಿಶ್ವವಿದ್ಯಾಲಯದ ಗುಂಡು ಎಸೆತ, ಕಬಡ್ಡಿ ಕ್ರೀಡೆಯಲ್ಲೂ ತೊಡಗಿಸಿಕೊಂಡೆ. ಮೂರು ಬಾರಿ ಯೂನಿವರ್ಸಿಟಿ ಬ್ಲ್ಯೂ ಆಗಿದ್ದೆ. ಒಮ್ಮೆ ದೇಹದಾರ್ಢ್ಯ ಸ್ಪರ್ಧೆಗೆ ಹೋದಾಗ ಮಿಸ್ಟರ್‌ ಇಂಡಿಯಾ ಪ್ರಶಸ್ತಿ ವಿಜೇತ ದಾವಣಗೆರೆಯ ಆರ್.ಟಿ.ಸತ್ಯನಾರಾಯಣ ಅವರ ಪರಿಚಯವಾಯಿತು. ಅವೈಜ್ಞಾನಿಕವಾಗಿ ಕಸರತ್ತು ಮಾಡುತ್ತಿದ್ದ ನನಗೆ, ವೈಜ್ಞಾನಿಕವಾಗಿ ಕಸರತ್ತು ಮಾಡುವುದನ್ನು ಅವರು ಹೇಳಿಕೊಟ್ಟರು. 

ಸಾಧನೆ ಗಮನಿಸಿದ ಸಾಹಸ ನಿರ್ದೇಶಕ ಡಿಫರೆಂಟ್‌ ಡ್ಯಾನಿ ಅವರು, ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಕೋಟೆ’ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು. ನಂತರ ನಿರ್ದೇಶಕ ಗುರುಪ್ರಸಾದ್‌ ಹಾಗೂ ನಟ ಕೋಮಲ್‌, ‘ಮರ್ಯಾದೆ ರಾಮಣ್ಣ’ ಸಿನಿಮಾಕ್ಕೆ ಕರೆದುಕೊಂಡರು. ಮಚ್ಚು ಹಿಡಿದುಕೊಂಡು ಓಡಾಡುವ ವಿಲನ್‌ ಪಾತ್ರ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಥ್ರಿಲ್ಲರ್ ಮಂಜು ಸಹ ನನ್ನನ್ನು ಗುರುತಿಸಿ, ಮತ್ತಷ್ಟು ಅವಕಾಶಗಳು ಸಿಗುವಂತೆ ಮಾಡಿದರು. ಬಳಿಕ ‘ನಂದೀಶ್‘, ‘ಪೊಲೀಸ್ ಸ್ಟೋರಿ‘, ‘ಭೀಮಾ ತೀರದಲ್ಲಿ’, ‘ಬುಲೆಟ್ ಬಸ್ಯಾ’, ‘ರಾಜಕುಮಾರ’ ಸಿನಿಮಾಗಳಲ್ಲಿ ನಟಿಸಿದೆ.

‘ಬುಲೆಟ್ ಬಸ್ಯಾ’ ಸಿನಿಮಾದಲ್ಲಿ ಕುಸ್ತಿ ಮಾಡುವ ಪೈಲ್ವಾನ್ ಪಾತ್ರ ನನ್ನದು. ನಟ ಶರಣ್‌ ಜತೆ ಕುಸ್ತಿ ಆಡುತ್ತೇನೆ. ನನ್ನ ವಿರುದ್ಧ ಶರಣ್‌ ಗೆದ್ದ ನಂತರವೇ ಸಿನಿಮಾ ಆರಂಭವಾಗುತ್ತದೆ. ಇನ್ನು ಪುನೀತ್‌ ರಾಜ್‌ಕುಮಾರ್‌ ಅವರ ಜತೆ ಮಾಡಿದ ‘ರಾಜ್‌ಕುಮಾರ್’ ಸಿನಿಮಾ  ಖುಷಿಕೊಟ್ಟಿತು. ಎಲ್ಲೋ ಹುಬ್ಬಳ್ಳಿಯಲ್ಲಿದ್ದು, ಟೀವಿಯಲ್ಲಿ ಪುನೀತ್‌ ಅವರನ್ನು ನೋಡುತ್ತಿದ್ದೆ. ಅವರ ಪಕ್ಕದಲ್ಲೇ ನಿಂತು ನಟಿಸಿದ್ದು ಖುಷಿಕೊಡ್ತು. ನನ್ನನ್ನು ಖುದ್ದು ಮಾತನಾಡಿಸಿದ್ದ ಅವರು, ‘ನಿನ್ನ ದೇಹ ಇಷ್ಟು ಬಲಶಾಲಿಯಾಗಿದ್ದು ಹೇಗೆ?’ ಎಂದು ಕೇಳಿದ್ದರು.

ತೆಲುಗು, ತಮಿಳು ಸಿನಿಮಾದಲ್ಲೂ ಅವಕಾಶಗಳು ಬರುತ್ತಿವೆ. ಇತ್ತೀಚೆಗಷ್ಟೇ ತೆಲುಗು ಸಿನಿಮಾವೊಂದರಲ್ಲಿ ಕುಸ್ತಿ ಪೈಲ್ವಾನ್‌ ಪಾತ್ರ ಮಾಡಿ ಬಂದಿದ್ದೇನೆ. ಅದನ್ನು ನೋಡಿದ ನಿರ್ದೇಶಕರು, ಖುಷಿಪಟ್ಟು ತಮ್ಮ ಚಿತ್ರಗಳನ್ನು ನನಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಂದು 47 ಕೆ.ಜಿ. ಇದ್ದೇನೆ ಎಂದು ಸುಮ್ಮನೇ ಕುಳಿತಿದ್ದರೆ ಇಲ್ಲಿಯವರೆಗೂ ಬರುತ್ತಿರಲಿಲ್ಲ. ನನ್ನ ದೇಹವೇ ನನ್ನನ್ನು ಈ ಮಟ್ಟಕ್ಕೆ ಬೆಳಸುತ್ತಿದೆ. ಕನ್ನಡ ಸಿನಿಮಾಗಳಲ್ಲಿ ಹೆಚ್ಚು ಬೆಳೆಯಬೇಕೆಂಬ ಆಸೆ ಇದೆ. ಸಿನಿಮಾ ಮಂದಿ ಹಾಗೂ ಕನ್ನಡಿಗರ ಆಶೀರ್ವಾದ ನನಗೆ ಬೇಕು.

ಬಡ ಕ್ರೀಡಾಪಟುಗಳಿಗೆ, ವಿದ್ಯಾರ್ಥಿಗಳಿಗೆ, ಪೊಲೀಸ್ ಉದ್ಯೋಗಾಕಾಂಕ್ಷಿಗಳಿಗೆ ದೈಹಿಕ ಸಾಮರ್ಥ್ಯದ ಬಗ್ಗೆ ಉಚಿತ ಸಲಹೆ ಹಾಗೂ ತರಬೇತಿ ನೀಡುತ್ತಿದ್ದೇನೆ. ನನ್ನ ಬಳಿ ತರಬೇತಿ ಪಡೆದ ಹಲವರು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆಲ್ಲುತ್ತಿದ್ದಾರೆ.

ಕೆಲವರು ನನ್ನ ಬೆನ್ನುತಟ್ಟಿ ಶಹಭಾಷ್‌ ಹೇಳುತ್ತಾರೆ. ಅದರಿಂದ ಹೊಟ್ಟೆ ತುಂಬುವುದಿಲ್ಲ. ಸಿನಿಮಾದಿಂದ ಬರುವ ಅಲ್ಪ ಹಣ ಯಾವುದಕ್ಕೂ ಸಾಲದು. ಬಡ ಕುಟುಂಬ ನಮ್ಮದು. ರಾಜ್ಯದೆಲ್ಲೆಡೆ ಜಿಮ್‌ಗಳಿದ್ದು, ಅವುಗಳ ತರಬೇತುದಾರರ ಹುದ್ದೆಗಳು ಖಾಲಿ ಇವೆ. ನನ್ನಂಥವರಿಗೆ ಅವಕಾಶಕೊಟ್ಟರೆ ಸಾಧನೆ ಮಾಡಲು ಅನುಕೂಲವಾಗುತ್ತದೆ.

ದಿನಕ್ಕೆ 100 ಮೊಟ್ಟೆ

ದೇಹ ಬೆಳೆಸಲು ಸಾಕಷ್ಟು ತ್ಯಾಗಗಳನ್ನು ಮಾಡಬೇಕು. ಸಿಹಿ ತಿನ್ನಬಾರದು. ಮಿತ ಆಹಾರ ಸೇವಿಸಬೇಕು. ನಿರಂತರ ಶ್ರಮ ಹಾಗೂ ಡಯಟ್ ಬೇಕೇ ಬೇಕು. ನಾನು ದಿನಕ್ಕೆ 50ರಿಂದ 100 ಮೊಟ್ಟೆ ತಿನ್ನುತ್ತೇನೆ. ಎರಡು ಕೆ.ಜಿ. ಚಿಕನ್ ಹಾಗೂ ಎರಡು ಕೆ.ಜಿ. ಹಣ್ಣು ಬೇಕು. 20 ಚಪಾತಿ, ಒಂದು ಲೀಟರ್ ಹಾಲು, ಬಾಳೆಹಣ್ಣು ಹಾಗೂ ಮೊಸರು ಸೇವಿಸುತ್ತೇನೆ. ಸ್ಪರ್ಧೆಗಳು ಇದ್ದಾಗ, ಉಪ್ಪು ಹಾಗೂ ಎಣ್ಣೆ ಪದಾರ್ಥ ತ್ಯಜಿಸುತ್ತೇನೆ.

ಪ್ರತಿಕ್ರಿಯಿಸಿ (+)