ಶುಕ್ರವಾರ, ಡಿಸೆಂಬರ್ 6, 2019
24 °C

ಚೆಲುವು ಒಲವು

Published:
Updated:
ಚೆಲುವು ಒಲವು

ತಾನು ವಿನ್ಯಾಸ ಮಾಡುವ ದಿರಿಸಿನಲ್ಲಿ ಹೊಸತನವಿರಬೇಕು, ಸಂಪ್ರದಾಯದ ಶ್ರೀಮಂತಿಕೆಯಿರಬೇಕು. ದಿರಿಸಿನೊಂದಿಗೆ ತೊಟ್ಟಾಕೆಯ ಚೆಲುವೂ ಇಮ್ಮಡಿಯಾಗಬೇಕು ಎಂದು ಬಯಸುವ ವಿನ್ಯಾಸಕ ಗಿರೀಶ್‌. ದಕ್ಷಿಣ ಭಾರತ ಫ್ಯಾಷನ್‌ ಲೋಕದಲ್ಲಿ ಸೆಲೆಬ್ರಿಟಿ ಡಿಸೈನರ್‌ ಎಂದೇ ಜನಪ್ರಿಯರು. ಅವರು ತಮ್ಮ ಭಿನ್ನ, ವಿಭಿನ್ನ ನಡೆಯಿಂದಲೂ ಮನೆಮಾತಾದವರು.

‘ನಾನು ಕನ್ನಡಿಗ‘ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಗಿರೀಶ್‌ ದೆಹಲಿಯ ನಿಫ್ಟ್‌ ಸಂಸ್ಥೆಯಲ್ಲಿ ಫ್ಯಾಷನ್‌ ಲೋಕದ ಪಟ್ಟುಗಳನ್ನು ಅರಿತರು. ಮುಂಬೈನ ಅಸ್ಲಾಂ ಖಾನ್ ಅವರ ಬಳಿ ಎರಡು ವರ್ಷ ಇಂಟರ್ನ್‌ಶಿಪ್‌ ಮಾಡಿದರು. ವೃತ್ತಿ ಬದುಕಿನ ಮುಂದಿನ ಪಯಣಕ್ಕೆ ಬೆಂಗಳೂರು ಆರಿಸಿಕೊಂಡರು.

‘ಕನ್ನಡನಾಡಿನಲ್ಲಿಯೇ ಏನಾದರೂ ಮಾಡಬೇಕು ಎನ್ನುವ ತುಡಿತದಿಂದ ಬೆಂಗಳೂರಿಗೆ ಬಂದೆ. ‘ಸರ್ಗ’ ಎನ್ನುವ ನನ್ನದೇ ಬ್ರಾಂಡ್‌ ಕಟ್ಟಿಕೊಂಡೆ. ಪ್ರಾರಂಭದಲ್ಲಿ ನಾನು ಮಾಡಿದ ಕ್ಯಾಲೆಂಡರ್ ಶೂಟ್‌ಗಳು ಸಾಕಷ್ಟು ಜನಪ್ರಿಯತೆ ತಂದುಕೊಟ್ಟವು. ಇಲ್ಲಿನ ಫ್ಯಾಷನ್‌ ಜಗತ್ತು ನನ್ನ ಪ್ರತಿ ಹೆಜ್ಜೆಯನ್ನೂ ಪ್ರೋತ್ಸಾಹಿಸಿತು’ ಎನ್ನುವ ಗಿರೀಶ್‌ ಪ್ರಾರಂಭದ ತಮ್ಮ ಪ್ರಯತ್ನಕ್ಕೆ ನಟಿ ಪ್ರೇಮಾ ಹಾಗೂ ಲವ್‌ಗುರು ರಾಜೇಶ್‌ ನೀಡಿದ ಸಹಕಾರವನ್ನು ನೆನೆಯುತ್ತಾರೆ.

ಸ್ಯಾಂಡಲ್‌ವುಡ್‌ ಹಾಗೂ ಟಾಲಿವುಡ್‌ನ ಅನೇಕ ನಟ ನಟಿಯರಿಗೆ ಗಿರೀಶ್‌ ವಸ್ತ್ರ ವಿನ್ಯಾಸ ಮಾಡಿದ್ದಾರೆ. ನಟಿ ಮಯೂರಿ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಪ್ರಿಯಾಮಣಿ, ಶ್ರುತಿ ಹರಿಹರನ್‌, ಟಾಲಿವುಡ್‌ನಲ್ಲಿ ಖ್ಯಾತಿ ಗಳಿಳಿಸಿರುವ ಆರ್ಯ, ಜೀವಾ ಮುಂತಾದವರ ನೆಚ್ಚಿನ ವಿನ್ಯಾಸಕರ ಪಟ್ಟಿಯಲ್ಲಿಯೂ ಗಿರೀಶ್‌ ಅವರಿಗೆ ಸ್ಥಾನವಿದೆ.

‘ಉತ್ತರ ಭಾರತದಲ್ಲಿ ಕ್ಯಾಲೆಂಡರ್ ಶೂಟ್‌ ಪರಿಕಲ್ಪನೆ ಜನಪ್ರಿಯ. ವಿನ್ಯಾಸಕರಿಗೆ ಹಾಗೂ ಮಾಡೆಲ್‌ಗಳಿಗೆ ಇದೊಂದು ಪ್ರತಿಷ್ಠೆ. ಆದರೆ ನಾನು ಬಂದಾಗ ಈ ಪರಿಕಲ್ಪನೆ ದಕ್ಷಿಣ ಭಾರತದಲ್ಲಿ ಇರಲಿಲ್ಲ. ಎಲ್ಲರೂ ಮೆಚ್ಚಿಕೊಂಡರು ಕೂಡ. ಈ ವರ್ಷ ಲುಕ್‌ಬುಕ್‌ ಎನ್ನುವ ಹೊಸ ಪರಿಕಲ್ಪನೆಯನ್ನು ಸಾಕಾರ ಮಾಡುವ ಉದ್ದೇಶವಿದೆ’ ಎಂದು ಮಾಹಿತಿ ನೀಡುತ್ತಾರೆ ಅವರು. ಸದ್ಯ ಲುಕ್‌ಬುಕ್‌ಗಾಗಿ ಫೋಟೊ ಶೂಟ್‌ ನಡೆಯುತ್ತಿದೆ.

ಗಿರೀಶ್‌ ಅವರ ವಿನ್ಯಾಸದಲ್ಲಿ ಮೂಡಿ ಬಂದಿರುವ ಎಲ್ಲ ವಿನ್ಯಾಸದ ದಿರಿಸನ್ನು ಪರಿಚಯಿಸುವ ಕ್ಯಾಟ್‌ಲಾಗ್‌ ರೀತಿಯಲ್ಲಿ ಈ ಲುಕ್‌ಬುಕ್‌ ಇರಲಿದೆ.

ವಸ್ತ್ರ ವಿನ್ಯಾಸ ಮಾಡುವಾಗ ಗಿರೀಶ್‌ ಅವರ ಮೊದಲ ಆಯ್ಕೆ ರೇಷ್ಮೆಯೇ ಆಗಿರುತ್ತದೆ. ಕಾಟನ್‌, ಖಾದಿ, ರೇಷ್ಮೆ ಕಾಟನ್‌ ಸಮ್ಮಿಶ್ರಣದ ಬಟ್ಟೆಯನ್ನೂ ಅವರು ಬಳಸಿಕೊಳ್ಳುತ್ತಾರೆ. ಗಿರೀಶ್‌ ಅವರ ಇತ್ತೀಚಿನ ಕ್ರೇಜ್‌ ಖಾದಿ. ಖಾದಿಯನ್ನು ಬ್ರೈಡಲ್‌ ವೇರ್‌ ವಿನ್ಯಾಸಕ್ಕೆ ಒಗ್ಗಿಸುವ ಪ್ರಯತ್ನದಲ್ಲೂ ಅವರು ಯಶ ಕಂಡಿದ್ದಾರೆ. ಖಾದಿಯಲ್ಲಿಯೂ ಮಕ್ಕಳ ದಿರಿಸು ವಿನ್ಯಾಸ ಮಾಡಿದ್ದಾರೆ ಗಿರೀಶ್‌.

‘ಖಾದಿ ನಮ್ಮ ಆರೋಗ್ಯಕ್ಕೆ ಉತ್ತಮ. ನಿತ್ಯ ಬಳಕೆಗೂ ಯೋಗ್ಯವಾಗುವಂತೆ ಖಾದಿಯನ್ನು ಎಲ್ಲ ವಿನ್ಯಾಸದಲ್ಲಿ ತರಬೇಕು ಎನ್ನುವ ಪ್ರಯತ್ನದಲ್ಲಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ ಗಿರೀಶ್‌.

ಬಾಂಧ್ಯವದ ಬೆಸುಗೆ

ಮದುವೆ ಪ್ರತಿಹೆಣ್ಣಿನ ಬದುಕಿನ ಅಮೂಲ್ಯ ಕ್ಷಣ. ಅಂದು ಎಷ್ಟು ಚೆನ್ನಾಗಿ ಕಾಣಿಸಿದರೂ ಆಕೆಯ ಮನಸಿಗೆ ಸಮಾಧಾನ ಸಿಗದು. ಹೀಗಾಗಿ ವಿಭಿನ್ನ ದಿರಿಸು, ಮೇಕಪ್‌ಗಳ ಮೊರೆ ಹೋಗುವುದು ಸಹಜ. ಆದರೆ ಇತ್ತೀಚಿನ ಹೊಸ ಟ್ರೆಂಡ್‌ ಎಂದರೆ ಹೊಸ ವಿನ್ಯಾಸ ತಳೆದ ಹಳೆಯ ಸೀರೆ ತೊಡುವುದು. ಅಜ್ಜಿ, ಅಮ್ಮ ಅವರ ಮದುವೆಯಲ್ಲಿ ತೊಟ್ಟಿದ್ದ ರೇಷ್ಮೆ ಸೀರೆಯನ್ನು ಕಪಾಟಿನಿಂದ ತೆಗೆದು ವಿನ್ಯಾಸಕರ ಕೈಯಲ್ಲಿಡುವುದು ಹೆಚ್ಚುತ್ತಿದೆ.

ಮದುವೆ ಸೀರೆ ಎಂದರೆ ಒಲವು ಜಾಸ್ತಿಯೇ ಇರುತ್ತದೆ. ಆದರೆ ಒಂದೇ ರೇಷ್ಮೆ ಸೀರೆಯನ್ನು ಎಷ್ಟು ಅಂತ ತೊಡುವುದು. ಹೀಗಾಗಿ ನಿಧಾನವಾಗಿ ಅವು ಮೂಲೆ ಸೇರುತ್ತವೆ. ಹೀಗೆ ಮೂಲೆ ಸೇರಿರುವ ಹಿರೀಕರ ಸೀರೆಗಳಿಗೆ ಗಿರೀಶ್‌ ಆಧುನಿಕ ಹಾಗೂ ಸಾಂಪ್ರದಾಯಿಕ ಮೆರುಗಿನ ವಸ್ತ್ರ ವಿನ್ಯಾಸ ಮಾಡುತ್ತಾರೆ. ಹಿರಿಯರ ದಿರಿಸು ತೊಟ್ಟ ಖುಷಿ ಮದುಮಗಳಿಗಾದರೆ, ತಾವು ತೊಟ್ಟಿದ್ದ ಸೀರೆಗೆ ಮರುಜೀವ ಸಿಕ್ಕ ಖುಷಿ ಅಮ್ಮ ಅಜ್ಜಿಗೆ. ಲೆಹೆಂಗಾ, ಗೌನ್‌, ಅನಾರ್ಕಲಿ, ಸ್ಕರ್ಟ್‌ ಮುಂತಾದ ಸ್ವರೂಪದಲ್ಲಿ ಅವುಗಳು ಗಿರೀಶ್‌ ಸಂಗ್ರಹದಲ್ಲಿ ಮಿನುಗುತ್ತಿವೆ.

ಪ್ರತಿಕ್ರಿಯಿಸಿ (+)