ಶುಕ್ರವಾರ, ಡಿಸೆಂಬರ್ 6, 2019
24 °C

ನಮ್ಮೊಳಗಿನ ‘ರುಬ್ಬುವ ಯಂತ್ರ’ಗಳಿಗೆ ವಿಶ್ರಾಂತಿ ಕೊಡೋಣ

Published:
Updated:
ನಮ್ಮೊಳಗಿನ ‘ರುಬ್ಬುವ ಯಂತ್ರ’ಗಳಿಗೆ ವಿಶ್ರಾಂತಿ ಕೊಡೋಣ

ಆಯುರ್ವೇದ ತಜ್ಞರು ಆಹಾರವನ್ನು ಭೂಮಿ ತತ್ವ, ಜಲ ತತ್ವ, ಅಗ್ನಿ ತತ್ವ, ವಾಯು ತತ್ವ, ಆಕಾಶ ತತ್ವ ಎಂದು ವಿಂಗಡಿಸುತ್ತಾರೆ. ಅಕ್ಕಿ, ಗೋಧಿ, ಕಾಳು ಮತ್ತು ತರಕಾರಿಗಳನ್ನು ಭೂಮಿತತ್ವದ ಆಹಾರಗಳೆಂದೂ, ನೀರು, ಮಜ್ಜಿಗೆ, ಹಣ್ಣಿನ ರಸ, ತರಕಾರಿ ಸೂಪ್‌ಗಳನ್ನು ಜಲ ತತ್ವದ ಆಹಾರಗಳೆಂದೂ, ಮೆಣಸಿನಕಾಯಿ, ಶುಂಠಿ, ಹಿಪ್ಪಲಿ ಮುಂತಾದುವುಗಳನ್ನು ಅಗ್ನಿ ತತ್ವದವುಗಳೆಂದೂ, ಹಳದಿ ಬಣ್ಣದ ಬೇಳೆ ಕಾಳುಗಳು, ಗೆಡ್ಡೆಗಳನ್ನು ವಾಯು ತತ್ವದವುಗಳೆಂದೂ ಗುರುತಿಸುತ್ತಾರೆ. ಆದರೆ ಆರು ರಸಗಳಿಂದ ಅಂದರೆ ಉಪ್ಪು, ಹುಳಿ, ಖಾರ, ಒಗರು, ಕಹಿ ಮತ್ತು ಸಿಹಿಯಿಂದ ಸಂತುಲಿತವಾದ ಆಹಾರ ಸೇವನೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಉಪವಾಸ ಮತ್ತು ಶಿವೋಪಾಸನೆಗೆ ಮೀಸಲಾದ ಶಿವರಾತ್ರಿಯಂದು ಮತ್ತು ಮರು ಮುಂಜಾನೆ ಸೇವಿಸುವ ಅಲ್ಪಾಹಾರವು ದ್ರವಾಹಾರವಾಗಿರಬೇಕು ಮತ್ತು ಹಸಿಯಾಗಿರಬೇಕು ಎಂದು ಬಯಸುವವರಿದ್ದಾರೆ.

ಆರೋಗ್ಯವಂತರಿಗೆ ಒಂದು ದಿನದ ಉಪವಾಸದಿಂದ ತೀರಾ ದಣಿವು ಅನಿಸದೇ ಇರಬಹುದು. ಆದರೆ ನಿತ್ರಾಣದಿಂದ ಬಳಲುತ್ತಿರುವವರಿಗೆ ಉಪವಾಸದ ವೇಳೆ ತಲೆ ಸುತ್ತುವುದು, ವಾಕರಿಕೆ, ಬಳಲಿಕೆ, ಮೈಕೈ ನಡುಕ, ತಲೆನೋವು, ಕಣ್ಣು ಮಂಜಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ದ್ರವಾಹಾರ ಸೇವನೆ ಅತ್ಯಂತ ಅವಶ್ಯ. ಕನಿಷ್ಠ ಎರಡು ಗಂಟೆಗೊಮ್ಮೆ ನೀರು, ಹಣ್ಣಿನ ರಸ, ಎಳನೀರು ಸೇವಿಸುತ್ತಿರಬೇಕು. ದೇವರ ಹೆಸರಿನಲ್ಲಿ ಮಾಡುವ ಉಪವಾಸದ ಹಿಂದೆ ಆರೋಗ್ಯದ ಗುಟ್ಟೂ ಇದೆ.

ಶಿವಧ್ಯಾನ, ಜಪ ಮಾಡುತ್ತಾ ಉಪವಾಸ ಮಾಡುವಾಗ ದ್ರವಾಹಾರ ಮತ್ತು ಲಘು ಆಹಾರ ಸೇವನೆ ಮಾಡುವ ಮೂಲಕ ಪಚನಾಂಗಗಳಿಗೆ ವಿಶ್ರಾಂತಿ ಕೊಡುವುದು ಆ ಮೂಲಕ ದೇಹದಲ್ಲಿನ ಕೊಬ್ಬು ಕರಗಿಸಿ, ಟಾಕ್ಸಿನ್‌ ಎಂಬ ವಿಷವನ್ನು ಹೊರಹಾಕುವುದೇ ಈ ಗುಟ್ಟು. ಹಾಗಿದ್ದರೆ, ಬನ್ನಿ, ಅಂತಹ ಒಂದಿಷ್ಟು ಸರಳ ಮತ್ತು ಲಘು ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ...

ಎಲೆಕೋಸು, ಸೇಬು, ಲಿಂಬೆ ಜ್ಯೂಸ್‌: ಹಸಿರು ಅಥವಾ ನೇರಳೆ ಬಣ್ಣದ ಎಲೆಕೋಸು (ಕ್ಯಾಬೇಜ್‌) ಮತ್ತು ಸೇಬನ್ನು ಸಣ್ಣದಾಗಿ ಕತ್ತರಿಸಿ ಅಥವಾ ತುರಿದು ಜ್ಯೂಸ್‌ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ಕೋಸಿನ ಹಸಿ ವಾಸನೆ ನಿವಾರಿಸಲು ಶುಂಠಿ ಮತ್ತು ಏಲಕ್ಕಿ ಸೇರಿಸಿಕೊಳ್ಳಬಹುದು. ಜ್ಯೂಸ್‌ ಕುಡಿಯುವ ಮುನ್ನ ಒಂದು ಲಿಂಬೆ ಹಣ್ಣಿನ ರಸವನ್ನೂ, ಸ್ವಲ್ಪ ಚಾಟ್‌ ಮಸಾಲಾ ಪುಡಿಯನ್ನೂ ಬೆರೆಸಿಕೊಳ್ಳಿ. ಮಕ್ಕಳ ಕಣ್ಣಿಗೆ ಆಕರ್ಷಕವಾಗಿಸಿಕೊಳ್ಳಬೇಕೆಂದಿದ್ದರೆ, ಲಿಂಬೆ ಹಣ್ಣಿನ ಚಕ್ರಾಕಾರದ ಹೋಳನ್ನು ಲೋಟದ ಬಾಯಿಗೆ ಸಿಕ್ಕಿಸಿಕೊಡಿ. ಎಲೆಕೋಸು ಕಬ್ಬಿಣ, ನಾರಿನಂಶ, ಆ್ಯಂಟಿ ಆಕ್ಸಿಡೆಂಟ್‌ನ ಗಣಿ.

ಎಳನೀರು, ನಿಂಬೆ ರಸ: ಶಿವರಾತ್ರಿಯಂದು ಮತ್ತು ಮರುದಿನವೂ ರಜೆ ಇಲ್ಲ, ಕಚೇರಿಗೆ ಹೋಗಲೇಬೇಕಲ್ಲಾ ಎಂಬ ಒತ್ತಡದಲ್ಲಿದ್ದೀರಾ? ಎರಡೂ ದಿನಗಳಲ್ಲಿ ತಲಾ ಎರಡಾದರೂ ಎಳನೀರು ಕುಡಿಯಿರಿ. ಹದವಾಗಿರುವ ಅದರ ಗಂಜಿಯನ್ನೂ ತಿನ್ನಿ. ಹತ್ತೇ ನಿಮಿಷದಲ್ಲಿ ನಿಮ್ಮಲ್ಲಿ ಹೊಸ ಚೈತನ್ಯವನ್ನು ಗುರುತಿಸುತ್ತೀರಿ. ಎಳನೀರಿಗೆ ಅರ್ಧ ಲಿಂಬೆ ಹೋಳಿನ ರಸ ಹಿಂಡಿ, ತೀರಾ ಅಗತ್ಯವಿದ್ದರೆ ಒಂದು ಚಮಚ ಸಕ್ಕರೆ ಬೆರೆಸಿ, ಏಲಕ್ಕಿ ಮತ್ತು ಶುಂಠಿಯನ್ನೂ ಅರೆದು ಬೆರೆಸಿಕೊಳ್ಳಿ. ಉಪವಾಸದಿಂದಾಗುವ ದಣಿವು, ತಲೆನೋವು, ಸಂಕಟ ದೂರವಾಗುತ್ತದೆ.

ಮಜ್ಜಿಗೆ, ಹಾಲು: ಫ್ರಿಡ್ಜ್‌ನಲ್ಲಿಟ್ಟು ತಣಿಸಿದ ಮಜ್ಜಿಗೆಗಿಂತ ಸಾಮಾನ್ಯ ವಾತಾವರಣದಲ್ಲಿರುವ ಮಜ್ಜಿಗೆ ಸೇವನೆ ಸೂಕ್ತ. ತೀರಾ ಸುಸ್ತು, ಬಳಲಿಕೆ ಅನಿಸಿದರೆ ಬಿಸಿಯಾದ ಹಾಲು ಸೇವಿಸಬಹುದು.

ಎಲ್ಲಾ ಹಣ್ಣುಗಳ ರಸ: ಒಂದೇ ಬಗೆಯ ಹಣ್ಣಿನ ರಸಕ್ಕಿಂತ ಬಗೆ ಬಗೆಯ ಹಣ್ಣುಗಳ ರಸ (ಮಿಕ್ಸೆಡ್‌ ಫ್ರೂಟ್‌ ಜ್ಯೂಸ್‌) ಸೇವಿಸುವುದು ಬಾಯಿಗೂ ರುಚಿಕರವಾಗಿರುತ್ತದೆ. ದೇಹಕ್ಕೂ ಅಗತ್ಯ ಪೌಷ್ಠಿಕಾಂಶ, ನಾರಿನಂಶ ಮತ್ತು ದ್ರವಾಂಶವನ್ನು ಏಕಕಾಲಕ್ಕೆ ಒದಗಿಸುತ್ತದೆ. ಉಪವಾಸ ಇರುವಾಗ ಪದೇಪದೇ ಆಹಾರ ಸೇವನೆ ಒಲ್ಲದವರು ಮಿಕ್ಸೆಡ್‌ ಫ್ರೂಟ್‌ ಜ್ಯೂಸ್‌ ಸೇವಿಸಬಹುದು. ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿದರೆ ಇನ್ನಷ್ಟು ಸಮೃದ್ಧವಾಗುತ್ತದೆ.

ಸೌತೆಕಾಯಿ ರಸ: ಎಳೆಸೌತೆಕಾಯಿಯ ಸಿಪ್ಪೆ ಸುಲಿದು (ಸುಲಿಯದಿದ್ದರೆ ನಾರಿನಂಶ ಉಳಿಯುತ್ತದೆ) ಕತ್ತರಿಸಿ ಸ್ವಲ್ಪವೇ ನೀರು, ಏಲಕ್ಕಿ, ಒಂದು ಲವಂಗ, ಸಣ್ಣ ತುಂಡು ಶುಂಠಿ, ಚಿಟಿಕೆ ಉಪ್ಪು ಸೇರಿಸಿ ರುಬ್ಬಿ. ಹಸಿರು ಬಣ್ಣದ ಸೌತೆ ಕಾಯಿ ರಸ ನೋಡಲೂ ಆಕರ್ಷಕ, ದೇಹಕ್ಕೂ ಸ್ನೇಹಿತ.

ಪುದೀನಾ ರಸ: ಪುದೀನಾ ಸೊಪ್ಪನ್ನು ತೊಳೆದು ಉಪ್ಪು ಬೆರೆಸಿದ ನೀರಿನಲ್ಲಿ ಐದು ನಿಮಿಷ ನೆನೆಸಿ. ಸಣ್ಣ ತುಂಡು ಶುಂಠಿ, ಏಲಕ್ಕಿ, ಒಂದೆರಡು ಕಾಳು ಮೆಣಸು, ಚಿಟಿಕೆ ಉಪ್ಪು, ನೀರು ಸೇರಿಸಿ ರುಬ್ಬಿ. ಕಡು ಹಸಿರು ಬಣ್ಣದ ಪುದೀನಾ ಜ್ಯೂಸ್‌ ದೇಹದ ವಿಷಾಂಶವನ್ನು ನಿವಾರಿಸುವ ರಾಮಬಾಣ.

ಬೂದುಗುಂಬಳದ ರಸ: ನಾರಿನಂಶ ಮತ್ತು ನೀರಿನಂಶ ಹೆಚ್ಚಾಗಿರುವ ಬೂದುಗುಂಬಳ ಕರುಳಿನಲ್ಲಿ ಸೇರಿಕೊಂಡಿರುವ ಕಶ್ಮಲವನ್ನೂ ಹೊರಹಾಕುವ ಶಕ್ತಿಯನ್ನು ಹೊಂದಿದೆ. ಅಲ್ಲದೆ, ಆಹಾರದ ಮೂಲಕ ಸಂಗ್ರಹವಾಗುವ ವಿಷ ಮತ್ತು ಅನಪೇಕ್ಷಿತ ಕೊಬ್ಬಿನಂಶವನ್ನು ನಿವಾರಿಸಲೂ ಇದು ಸಹಾಯಕ.

ಕುಂಬಳಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಿ ಇಲ್ಲವೇ ತುರಿದುಕೊಳ್ಳಿ. ಒಂದು ತುಂಡು ಶುಂಠಿ ಮತ್ತು ಒಂದು ಏಲಕ್ಕಿ ಕಾಳೂ ಸೇರಿಸಿ. ನೀರು ಹಾಕದೆ ರುಬ್ಬಿಕೊಳ್ಳಿ. ಕುಡಿಯುವ ಮುನ್ನ ಅರ್ಧ ಹೋಳು ನಿಂಬೆ ರಸ ಮತ್ತು ಸೈಂದವ ಲವಣ ಸೇರಿಸಿಕೊಳ್ಳಿ.

ಗರಿಕೆ ಹುಲ್ಲಿನ ರಸ: ಒಂದೆರಡು ಹಿಡಿ ಗರಿಕೆ ಹುಲ್ಲನ್ನು ಚೆನ್ನಾಗಿ ತೊಳೆದು ಒಂದು ತುಂಡು ಶುಂಠಿ, ಒಂದು ಏಲಕ್ಕಿ, ನಾಲ್ಕು ಕಾಳು ಮೆಣಸು, ಸೈಂದವ ಲವಣದೊಂದಿಗೆ ರುಬ್ಬಿ ಸೋಸಿಕೊಂಡು, ಜೇನು ತುಪ್ಪ ಬೆರೆಸಿ ಕುಡಿಯಿರಿ. ನರ ದೌರ್ಬಲ್ಯ ಮತ್ತು ಸುಸ್ತು ನಿವಾರಿಸುವ ಈ ರಸ ಮಧುಮೇಹಿಗಳಿಗೂ ಉತ್ತಮ.

ಬೀಟ್‌ರೂಟ್‌ ರಸ: ಮಧುಮೇಹ ಸಮಸ್ಯೆ ಇಲ್ಲದವರು ಬೀಟ್‌ರೂಟ್ ರಸ ಸೇವಿಸಬಹುದು. ಹಸಿ ವಾಸನೆ ನಿವಾರಿಸಲು ಶುಂಠಿ ಮತ್ತು ನಿಂಬೆ ರಸವನ್ನೂ ಸೇರಿಸಬಹುದು.

ಕ್ಯಾರೆಟ್‌, ಬೀಟ್‌ರೂಟ್‌, ಸೇಬಿನ ರಸ: ಕ್ಯಾರೆಟ್‌ ಅಥವಾ ಬೀಟ್‌ರೂಟ್‌ ರಸ ಕೆಲವರಿಗೆ ಇಷ್ಟವಾಗುವುದಿಲ್ಲ. ಅದಕ್ಕೆ ಕ್ಯಾರೆಟ್‌, ಬೀಟ್‌ರೂಟ್‌ ಮತ್ತು ಸೇಬನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ತುರಿದು ರುಬ್ಬಿ, ಜೇನುತುಪ್ಪ ಬೆರೆಸಿ ಸೇವಿಸಬಹುದು.

ಒಣಹಣ್ಣುಗಳ ಜ್ಯೂಸ್‌: ಬೆಳಗ್ಗಿನಿಂದ ರಾತ್ರಿವರೆಗೂ ಹಸಿವಾಗದೇ ಇರಬೇಕು, ಶಿವಧ್ಯಾನದಲ್ಲಿ ಕಳೆಯಬೇಕು ಎಂದು ಬಯಸುವವರು ಶಕ್ತಿದಾಯಕ ಡ್ರೈಫ್ರೂಟ್ಸ್‌ ಜ್ಯೂಸ್‌ ಕುಡಿಯಬಹುದು.

ನೀರಲ್ಲಿ ನೆನೆಹಾಕಿದ ಒಣದ್ರಾಕ್ಷಿ, ಅಂಜೂರ, ಒಣಖರ್ಜೂರ, ಬಾದಾಮಿಯ ಜತೆಗೆ ಪಿಸ್ತಾವನ್ನೂ ಸೇರಿಸಿ ಮೊದಲು ಪುಡಿ ಮಾಡಿಕೊಂಡು ನಂತರ ಸ್ವಲ್ಪ ನೀರು ಇಲ್ಲವೇ ಹದವಾದ ಬಿಸಿಹಾಲು ಸೇರಿಸಿ ರುಬ್ಬಿಕೊಳ್ಳಿ.

ಎರಡು ಚಮಚ ಜೇನುತುಪ್ಪ ಬೆರೆಸಿದರೆ ಇನ್ನಷ್ಟು ಸಮೃದ್ಧವಾಗುತ್ತದೆ. ಇದಕ್ಕೆ ಸೇಬನ್ನೂ ಸೇರಿಸಿಕೊಳ್ಳಬಹುದು. ಈ ಜ್ಯೂಸ್‌ ಸೇವಿಸಿದರೆ ದಿನವಿಡೀ ದಣಿವು, ಹಸಿವು ಕಾಡುವುದಿಲ್ಲ. ಹಾಗಾಗಿ ಬರಿಯ ನೀರು ಸೇವಿಸುತ್ತಿದ್ದರೂ ಸಾಕು. 

***

ಸಾಬೂದಾನಿ, ಸಿಹಿಗೆಣಸು ತಿನಿಸುಗಳೇ ಪ್ರಧಾನ

ನಾವು ಶಿವಾರಾಧಕರು. ಲಿಂಗಧಾರಣೆ ಮಾಡಿರುವ ಕಾರಣ ಹೆಚ್ಚಿನ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿಯನ್ನು ಆಚರಿಸುತ್ತೇವೆ. ಉಪವಾಸ, ಶಿವ ಧ್ಯಾನ ಮತ್ತು ಜಾಗರಣೆಗೆ ಆದ್ಯತೆ ಕೊಡುತ್ತೇವೆ. ಸಾಯಂಕಾಲ ಮತ್ತು ಮಾರನೆ ದಿನ ಬೆಳಿಗ್ಗೆ ಅರ್ಪಿಸಿದ ನೈವೇದ್ಯವೇ ನಮಗೂ ಆಹಾರ. ವಿಜಯಪುರ ನಮ್ಮ ತವರು. ಹಾಗಾಗಿ ಅಲ್ಲಿನ ಆಚರಣಾ ಶೈಲಿಯನ್ನೇ ನಾವು ಪಾಲಿಸುತ್ತೇವೆ. ಸಾಬೂದಾನಿ (ಸಬ್ಬಕ್ಕಿ), ಸಿಹಿಗೆಣಸು, ಶೇಂಗಾ ಉಂಡೆ, ಎಳನೀರು ಮತ್ತು ಹಣ್ಣಿನ ರಸ ಶಿವರಾತ್ರಿಯಂದು ನಮಗೆ ಮುಖ್ಯ ಆಹಾರ. ಅನಾರೋಗ್ಯವಿದ್ದವರು ಮಜ್ಜಿಗೆ ಮತ್ತು ಹಾಲನ್ನೂ ಸೇವಿಸುವುದುಂಟು.

ಸಾಬೂದಾನಿ ಒಗ್ಗರಣೆ: ಸಾಬೂದಾನಿಯನ್ನು ಬೆಳಿಗ್ಗೆಯೇ ನೀರಲ್ಲಿ ನೆನೆಹಾಕಿ ಬಸಿದು ಅದೇ ಬೋಗುಣಿಯಲ್ಲಿ ಮುಚ್ಚಳ ಮುಚ್ಚಿ ಇಡಬೇಕು. ಸಾಬೂದಾನಿ ನೆನೆಹಾಕುವುದೂ ಒಂದು ಕಲೆ. ನೀರು ಕಡಿಮೆಯಾದರೆ ಸಾಬೂದಾನಿ ಒಣಗಿದಂತಿರುತ್ತದೆ. ನೀರು ಹೆಚ್ಚಾದರೆ ಹಿಟ್ಟಿನಂತಾಗುತ್ತದೆ. ಇದನ್ನು ತಪ್ಪಿಸಲು ನೀರಿನಲ್ಲಿ ತೊಳೆದು ಬಸಿದು ಪಾತ್ರೆಯಲ್ಲಿ ಹಾಕಿ ಇಡುವುದು. ಒಂದು ವೇಳೆ ನೀರು ಪೂರ್ತಿ ಇಂಗಿಹೋಗಿ ಒಣಗಿದಂತಾದರೆ ನೀರು ಇಲ್ಲವೇ ಉಪ್ಪಿನ ನೀರು ಚಿಮುಕಿಸಬಹುದು. ಸಂಜೆಯ ಹೊತ್ತಿಗೆ ಸಾಬೂದಾನಿ ಉಬ್ಬಿಕೊಳ್ಳುತ್ತದೆ.

ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ, 2–3 ಹಸಿ ಮೆಣಸಿನ ಕಾಯಿ, ಅರಸಿನಪುಡಿ, ಕೆಂಪು ಉಪ್ಪು ಹಾಕಿ ಚಟಪಟ ಎಂದ ಮೇಲೆ ಸಾಬೂದಾನಿ ಹಾಕಿ ಚೆನ್ನಾಗಿ ಕಲಸಬೇಕು. ಸಾಬೂದಾನಿ ಬೇಯುವವರೆಗೂ ತಳಹಿಡಿಯದಂತೆ ಸೌಟಿನಿಂದ ತಿರುವುತ್ತಾ ಇರಬೇಕು. ನೈವೇದ್ಯ ಮಾಡಿ ಸೇವಿಸುವ ಮುನ್ನ ಲಿಂಬೆ ರಸ ಬೆರೆಸಿಕೊಂಡರೆ ರುಚಿಯಾಗಿರುತ್ತದೆ.

ಸಿಹಿಗೆಣಸು, ಶಿವರಾತ್ರಿಯ ವಿಶೇಷ ತಿನಿಸು. ಉಪ್ಪು ಹಾಕಿ ಬೇಯಿಸಿಕೊಂಡು ಹಾಗೇ ತಿನ್ನುವುವೇ ಹೆಚ್ಚು. ಹಾಲು ಮತ್ತು ಬೆಲ್ಲದ ಪುಡಿ ಬೆರೆಸಿಕೊಂಡೂ ತಿನ್ನುತ್ತೇವೆ. ಸಾಬೂದಾನಿಯಂತೆಯೇ ಒಗ್ಗರಣೆ ಮಾಡಿಕೊಳ್ಳುವುದಾದರೆ, ಬೇಯಿಸಿದ ಗೆಣಸಿನ ಸಿಪ್ಪೆ ಸುಲಿದು ವೃತ್ತಾಕಾರದಲ್ಲಿ ಕತ್ತರಿಸಿ, ಒಗ್ಗರಣೆಗೆ ಹಾಕಿ ಚೆನ್ನಾಗಿ ತಿರುವಿಕೊಂಡರಾಯಿತು. ಇಳಿಸುವ ಮುನ್ನ ತೆಂಗಿನ ಕಾಯಿ ತುರಿ ಸೇರಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

ಹಸಿರು ದ್ರಾಕ್ಷಿಯ ಸೀಸನ್‌ ಇದೇ ಆಗಿರುವ ಕಾರಣ ತಾಜಾ ದ್ರಾಕ್ಷಿ ಯಥೇಚ್ಛವಾಗಿ ಸಿಗುತ್ತದೆ. ಹಸಿರು ದ್ರಾಕ್ಷಿ ಮತ್ತು ಹಸಿ ಖರ್ಜೂರ, ಶೇಂಗಾ ಬೀಜವೂ ಶಿವರಾತ್ರಿ ಉಪವಾಸದ ಆಹಾರದಲ್ಲಿ ಸೇರಿರುತ್ತದೆ. ಹುರಿದ ಶೇಂಗಾ ಬೀಜದ ಸಿಪ್ಪೆ ಸುಲಿದು ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಂಡು ಬೆಲ್ಲದ ಪುಡಿಯೊಂದಿಗೆ ಕಲಸಿ ಉಂಡೆ ಕಟ್ಟಿದರೆ ಶೇಂಗಾ ಉಂಡೆ ಸಿದ್ಧವಾಗುತ್ತದೆ. ಕೆಲವರು ಸಿಹಿಗೆಣಸು ಒಗ್ಗರಣೆಗೆ ಬೇಯಿಸಿದ ಶೇಂಗಾವನ್ನೂ ಸೇರಿಸಿಕೊಳ್ಳುತ್ತಾರೆ.

– ಶ್ರೀದೇವಿ ಎಸ್. ಕಬ್ಬಿಣಕಂತಿ, ಮಲ್ಲೇಶ್ವರಂ

ಪ್ರತಿಕ್ರಿಯಿಸಿ (+)