ಮಂಗಳವಾರ, ಡಿಸೆಂಬರ್ 10, 2019
21 °C

ಅವಕಾಶಗಳ ನಿರೀಕ್ಷೆಯಲ್ಲಿ ತೇಜಸ್ ಕಿಶೋರ್

Published:
Updated:
ಅವಕಾಶಗಳ ನಿರೀಕ್ಷೆಯಲ್ಲಿ ತೇಜಸ್ ಕಿಶೋರ್

‘ಅದು ‘ಗುಣಮುಖ’ ನಾಟಕ. ನಾಸಿರ್ ಷಾ ಪಾತ್ರಕ್ಕೆ ತುಸು ಕಠಿಣ ಎನಿಸುವ ಮನಸಿನ ಹುಡುಗ ಬೇಕಿತ್ತು. ನಾಸಿರ್ ಷಾನ ವಿಕ್ಷಿಪ್ತ ವ್ಯಕ್ತಿತ್ವವನ್ನು ಅನಾವರಣ ಮಾಡುವ ಸಾಮರ್ಥ್ಯದ ನಟ ಬೇಕಿತ್ತು. ನನಗೋ ಅದೇ ಪಾತ್ರ ಮಾಡಬೇಕೆಂಬ ಆಸೆ. ಆದರೆ, ಕೆಂಪುಕೆಂಪಗೆ, ತೆಳ್ಳಗೆ ಇರುವ ನನ್ನನ್ನು ನೋಡಿದವರು ಈ ಪಾತ್ರ ನಿನ್ನಿಂದ ಆಗಲ್ಲ ಬಿಡು. ನೀನು ಇಷ್ಟೊಂದು ಮುದ್ದುಮುದ್ದಾಗಿದ್ದೀಯಾ ಅಂಥ ಪಾತ್ರ ಹೇಗೆ ಮಾಡ್ತೀಯಾ ಅಂತ ಕಾಲೆಳೆಯುತ್ತಿದ್ದರು. ಆದರೆ, ಅದನ್ನೇ ಸವಾಲಾಗಿ ತೆಗೆದುಕೊಂಡು ಕೊನೆಗೂ ಆ ಪಾತ್ರವನ್ನು ಮಾಡಿದೆ. ಕಾಲೆಳೆದವರೇ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು....’

– ಹೀಗೆ ರಂಗಭೂಮಿಯ ತಮ್ಮ ಅನುಭವದ ಬುತ್ತಿಗಂಟನ್ನು ಬಿಚ್ಚಿಟ್ಟರು ಯುವನಟ ತೇಜಸ್‌ ಕಿಶೋರ್.

ತೆಳ್ಳಗೆ, ಬೆಳ್ಳಗೆ ನೋಡಲು ಮುದ್ದುಮುದ್ದಾಗಿರುವ ತೇಜಸ್, ಬಾಲ್ಯದಲ್ಲೇ ನಟನಾಗುವ ಕನಸು ಕಂಡವರು. ಅದಕ್ಕೆ ತಕ್ಕಂತೆ ಮನೆಯಲ್ಲಿ ಅಪ್ಪ–ಅಮ್ಮನ ಹಾವಭಾವ ಅನುಸರಿಸುತ್ತಾ ಕನ್ನಡಿಯ ಮುಂದೆ ನಟನೆ ಮಾಡುತ್ತಿದ್ದರಂತೆ ಅವರು. ಉತ್ತರ ಭಾರತದ ಅಪ್ಪ, ದಕ್ಷಿಣ ಭಾರತದ ಅಮ್ಮನ ಮುದ್ದಿನ ಮಗನಾಗಿರುವ ತೇಜಸ್‌ ಅವರದ್ದು ತುಸು ನಾಚಿಕೆಯ ಸ್ವಭಾವ.

‘ಪದವಿ ಮುಗಿಯವ ತನಕ ಇದೇ ನಾಚಿಕೆಯ ಸ್ವಭಾವ ನನ್ನ ನಟನೆಗೆ ಮುಳ್ಳಾಗಿತ್ತು. ಮನೆಯ ಸಮೀಪದಲ್ಲೇ ರಂಗಭೂಮಿಯ ತಂಡವೊಂದು ನಡೆಸುತ್ತಿದ್ದ ರಿಹರ್ಸಲ್ ನೋಡಿ ಆನಂದಿಸುತ್ತಿದ್ದೆ. ನನ್ನ ಮನದಾಸೆಯನ್ನು ಗಮನಿಸಿದ ಅಮ್ಮ, ಆ ತಂಡದ ಜೊತೆಗೆ ಮಾತನಾಡಿ ಅಲ್ಲಿಗೆ ಸೇರಿಸಿದರು. ಮೊದಮೊದಲು ರಂಗಭೂಮಿಯ ನೇಪಥ್ಯದಲ್ಲಿದ್ದುಕೊಂಡೇ ನಾಟಕವೊಂದರ ಹಿನ್ನೆಲೆ, ತಯಾರಿ, ಅಭಿನಯ, ಬೆಳಕು ಎಲ್ಲವನ್ನೂ ಗಮನಿಸುತ್ತಿದ್ದೆ. ಮುಂದೆ ಇದು ನಟನೆಯ ಹಂಬಲವನ್ನು ಹೆಚ್ಚಿಸಿತು. ನೇಪಥ್ಯವಷ್ಟೇ ಅಲ್ಲ ರಂಗದ ಮೇಲೂ ನನ್ನ ಛಾಪು ಮೂಡಿಸಬೇಕು ಅನಿಸುತ್ತಿತ್ತು. ಹಾಗಾಗಿ, ಹಲವಾರು ತಂಡಗಳ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಿಸಿಕೊಂಡೆ’ ಎಂದು ತಮ್ಮ ರಂಗಭೂಮಿಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ತೇಜಸ್.

‘ಮೊದಲ ನಾಟಕದಲ್ಲಿ ಪ್ರಧಾನ ಪಾತ್ರ ದೊರೆಯದಿದ್ದರೂ, ಅದು ನನ್ನ ಸಭಾಕಂಪನಕ್ಕೆ ಇತಿಶ್ರೀ ಹಾಕಿತ್ತು. ಅಲ್ಲಿಂದ ಮುಂದೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡೆ. ರಾಷ್ಟ್ರೀಯ ನಾಟಕ ಶಾಲೆಗೆ ಸೇರ್ಪಡೆಯಾದೆ. ಅಲ್ಲಿ ಇದ್ದ ಒಂದು ವರ್ಷದಲ್ಲಿ ಸಮಗ್ರ ರಂಗಭೂಮಿಯ ಕುರಿತು ನನ್ನ ಜ್ಞಾನವನ್ನು ಹೆಚ್ಚಿಸಿಕೊಂಡೆ. ನನ್ನ ಸಾಮರ್ಥ್ಯ, ಇತಿಮಿತಿಗಳನ್ನು ಚೆನ್ನಾಗಿ ಅರಿತು ನಟನೆಯ ಪಟ್ಟುಗಳನ್ನು ಕರಗತಗೊಳಿಸಿಕೊಳ್ಳಲು ಯತ್ನಿಸಿದೆ. ರಂಗಭೂಮಿ ಎಂಬುದು ವಿಶಾಲ ಸಾಗರವಿದ್ದಂತೆ ಎಷ್ಟು ಕಲಿತರೂ ಕಲಿಯುವುದು ಇನ್ನೂ ಸಾಕಷ್ಟಿರುತ್ತದೆ. ಜೀವನದುದ್ದಕ್ಕೂ ಅದು ನಮ್ಮನ್ನು ವಿದ್ಯಾರ್ಥಿಯಾಗಿ ಮಾಡುತ್ತದೆ. ಕಲಿಕೆಯ ಹಂಬಲದಲ್ಲೇ ನಟನೊಬ್ಬ ಪರಿಪೂರ್ಣತೆಯನ್ನು ಸಾಧಿಸಲು ಯತ್ನಿಸುತ್ತಾನೆ. ಇಂಥ ಹಾದಿಯಲ್ಲಿಯೇ ನನ್ನನ್ನು ನಾನು ಕಂಡುಕೊಳ್ಳಬೇಕೆಂದಿರುವೆ’ ಎಂದು ನಮ್ರವಾಗಿ ನುಡಿಯುತ್ತಾರೆ ಅವರು.

ವಿಎಎಸ್‌ಪಿ, ವಟಿಕುಟೀರ, ಅಂತರಂಗ, ಕಲಾಗಂಗೋತ್ರಿ, ಸ್ಪಂದನ, ಸೈಲೆಂಟ್ ಥಿಯೇಟರ್ ಲ್ಯಾಬೊರೇಟರಿ, ರಂಗಸ್ಮೃತಿ, ಹಶ್ಮಿ ಥಿಯೇಟರ್ ಫೋರಂ, ಕ್ರಿಯೇಟಿವ್ ಥಿಯೇಟರ್ ಹೀಗೆ ಹಲವು ರಂಗತಂಡಗಳಲ್ಲಿ ತೇಜಸ್ 12ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಗಾಂಧಾರಿ’, ’ಹರಹರ ಮಹಾದೇವ’, ‘ಗಂಗಾ’, ‘ಶಾಂತಂ ಪಾಪಂ’ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ತಮಿಳಿನ ಜಾಹೀರಾತಿನಲ್ಲೂ ಅವರು ಮಿಂಚಿದ್ದಾರೆ.

‘ಪಾತ್ರ ಯಾವುದಾದರೇನು ನಾನೊಬ್ಬ ನಟ ಎನ್ನುವುದನ್ನು ಸಾಬೀತುಪಡಿಸಬೇಕು’ ಎನ್ನುವ ಆಸೆ ನನ್ನದು ಎನ್ನುತ್ತಾರೆ ತೇಜಸ್. ಇದೀಗ ಅವರು ತಮ್ಮ ಹೆಸರನ್ನು ಅಗಸ್ತ್ಯಕುಮಾರ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಹೆಸರಾದರೂ ಅವಕಾಶದ ಬಾಗಿಲು ತೆರೆಯಲಿ ಎಂಬ ನಿರೀಕ್ಷೆ ಅವರದು.

ತೇಜಸ್ ಫೇಸ್‌ಬುಕ್ ಕೊಂಡಿ: http://facebook.com/tejas.kg

ಪ್ರತಿಕ್ರಿಯಿಸಿ (+)