ಮಂಗಳವಾರ, ಡಿಸೆಂಬರ್ 10, 2019
18 °C

ಶಿವರಾತ್ರಿಯ ಸೊಗಸು

Published:
Updated:
ಶಿವರಾತ್ರಿಯ ಸೊಗಸು

ರಾಮ, ಕೃಷ್ಣ ಮತ್ತು ಶಿವ – ಈ ಮೂರು ತತ್ತ್ವಗಳು ಭಾರತೀಯ ಸಂಸ್ಕೃತಿಯ ಮೂಲಧಾತುಗಳು ಎಂದಿದ್ದಾರೆ, ರಾಮಮನೋಹರ ಲೋಹಿಯಾ. ರಾಮನು ಮನುಷ್ಯನಾಗಿದ್ದುಕೊಂಡೇ ದೈವತ್ವದ ಪಟ್ಟವನ್ನು ಅಲಂಕರಿಸಿದವನು; ದೈವವಾಗಿದ್ದೂ ಮನುಷ್ಯನಂತೆ ನಡೆದುಕೊಂಡವನು ಕೃಷ್ಣ. ಶಿವನು ಮಾತ್ರವೇ ದೇವರಾಗಿಯೇ ಕಾಣಿಸಿಕೊಂಡು ಮಾನುಷಸಂವೇದನೆಯನ್ನು ಪ್ರಭಾವಿಸುತ್ತ ಬಂದವನು.

ವೇದಕಾಲದಿಂದಲೂ ಶಿವತತತ್ತ್ವವನ್ನು ಕಾಣಬಹುದು. ‘ರುದ್ರ’ ಎನ್ನುವುದು ಶಿವನ ಹಲವು ಹೆಸರುಗಳಲ್ಲಿ ಒಂದು. ಅವನು ವೇದದಲ್ಲಿ ಪ್ರಧಾನ ದೇವತೆ. ‘ರುದ್ರ’ ಎಂದರೇನು? ‘ರೋದಯತೇ ರುದ್ರ’ – ಅಳುವಂತೆ ಮಾಡುವವನೇ ರುದ್ರ. ಶತ್ರುಗಳನ್ನು ಅಳುವಂತೆ ಮಾಡುತ್ತಾನೆ ಎಂದು ಅರ್ಥೈಸುವುದುಂಟು. ‘ಶಿವ’ ಎಂದರೆ ಮಂಗಳಕರ ಎಂದು ಅರ್ಥ.

ತ್ರಿಮೂರ್ತಿಗಳಲ್ಲಿ ಶಿವನೂ ಒಬ್ಬ. ಶಿವನ ಆಕಾರ, ವೇಷಭೂಷಣಗಳು ಹಲವು ತತ್ತ್ವಗಳನ್ನು ಪ್ರತಿನಿಧಿಸುತ್ತವೆ. ಶಿವನು ನೃತ್ಯ ಕೂಡ ಮಾಡುತ್ತಾನೆ; ಇದೇ ತಾಂಡವನೃತ್ಯ. ಹೀಗೆ ಅವನು ನರ್ತಿಸುವಾಗ ಅವನು ತನ್ನ ಡಮರುವನ್ನು ಹದಿನಾಲ್ಕು ಬಾರಿ ನುಡಿಸಿದನಂತೆ. ಆಗ ಹೊರಹೊಮ್ಮಿದ ಸ್ವರಗಳೇ ‘ಮಾಹೇಶ್ವರಸೂತ್ರಗಳು’ ಎಂದು ಹೆಸರಾದವು. ಈ ಸೂತ್ರಗಳೇ ವ್ಯಾಕರಣಸೂತ್ರಗಳಾದವು. ಕಲೆಯ ಹುಟ್ಟಿಗೂ ಶಿವನೇ ಕಾರಣನಾಗಿದ್ದಾನೆ ಎನ್ನುವುದು ಪರಂಪರೆಯ ನಂಬಿಕೆ. ಅವನ ನಟರಾಜನ ಕಲ್ಪನೆಯಲ್ಲಿ ಎಲ್ಲ ಕಲೆಗಳ ಮೂಲವನ್ನು ನೋಡಬಹುದಾಗಿದೆ. ಶಿವನನ್ನು ‘ಮಹಾನಟ’ ಎಂದೇ ಒಕ್ಕಣಿಸಲಾಗುತ್ತದೆ. ಸಾಹಿತ್ಯದಲ್ಲೂ ಶಿಲ್ಪಕಲೆಯಲ್ಲೂ ಸಂಗೀತದಲ್ಲೂ ಶಿವತತ್ತ್ವದ ಗಾಢವಾದ ಪ್ರಭಾವವನ್ನು ನೋಡಬಹುದು. ವೇದಗಳು, ಸಂಸ್ಕೃತಸಾಹಿತ್ಯ, ಪುರಾಣಗಳು ಮಾತ್ರವಲ್ಲದೆ ದೇಶೀಯ ಭಾಷೆಗಳಲ್ಲೂ ಶಿವನ ಮಹಿಮೆಯನ್ನೂ ತತ್ತ್ವವನ್ನೂ ಧಾರಾಳವಾಗಿ ನೋಡಬಹುದು. ಶಿವನನ್ನು ನಾವು ಪೂಜಿಸುವುದು ‘ಲಿಂಗ’ರೂಪದಲ್ಲಿಯೇ. ‘ಲಿಂಗ’ ಎಂದರೆ ಸಂಕೇತ, ಚಿಹ್ನೆ ಎಂದು ಅರ್ಥ. ಎಲ್ಲೆಲ್ಲೂ ಇರುವ ಶಿವನನ್ನು ಸೀಮಿತ ಶಕ್ತಿಯ ನಮ್ಮ ಇಂದ್ರಿಯಗಳು ಗ್ರಹಿಸಲಾರವು. ಆದುದರಿಂದಾಗಿ ಸಂಕೇತವೊಂದರಲ್ಲಿ ಅವನನ್ನು ಕಂಡು, ಆರಾಧಿಸುವುದಕ್ಕಾಗಿ ನಾವು ಆರಿಸಿಕೊಳ್ಳುವ ಪ್ರತ್ಯಕ್ಷರೂಪವೇ ‘ಲಿಂಗ’.

‘ಶಿವನ ಆಭರಣ ಎಂದರೆ ಹಾವು; ಅದು ಹೆದರಿಕೆಯನ್ನು ಉಂಟುಮಾಡುವಂಥದ್ದು. ಆದರೆ ಹಾವಿನಿಂದ ಶಿವನಿಗೆ ಎಂಥ ಭಯವಿದ್ದೀತು? ಎಲ್ಲರೂ ಇಷ್ಟಪಡುವ ಚಂದ್ರನನ್ನು ಅವನು ತಲೆಯಲ್ಲಿಯೇ ಧರಿಸಿದ್ದಾನೆ; ಹೀಗೆಂದು ಅವನಿಗೆ ಅದರ ಮೇಲೆ ವಿಶೇಷ ಪ್ರೀತಿಯೇನಿಲ್ಲ. ಶಿವ ತೊಟ್ಟಿರುವ ಮಾಲೆ ತಲೆಬುರುಡೆಗಳ ಹಾರ; ಹಾಗೆಂದು ಅವನಿಗೇನೂ ಮೈಲಿಗೆಯಿಲ್ಲ. ಪವಿತ್ರವಾದ ಗಂಗೆಯನ್ನು ಜಟೆಯಲ್ಲಿಯೇ ಇಟ್ಟುಕೊಂಡಿದ್ದಾನೆ. ಸ್ಮಶಾನದ ಬೂದಿಯನ್ನು ಮೈಗೆಲ್ಲ ಬಳೆದುಕೊಂಡಿದ್ದಾನೆ; ಇದೇನೂ ಅವನಿಗೆ ಕಸಿವಿಸಿಯನ್ನುಂಟುಮಾಡಿಲ್ಲ. ಪಾರ್ವತಿಯನ್ನು ತನ್ನ ಶರೀರದ ಅರ್ಧ ಭಾಗವನ್ನಾಗಿಸಿಕೊಂಡಿದ್ದಾನೆ; ಆದರೆ ಅವನು ಪರಮ ವಿರಾಗಿ. ಹಿತದಲ್ಲೂ ಅಹಿತದಲ್ಲೂ ಸಮರಸವಾಗಿರುವವನೇ ಶಿವ’. ಇಂಥ ಶಿವನ ಆರಾಧನೆಗೆ ಮೀಸಲಾದ ಪರ್ವವೇ ಮಹಾಶಿವರಾತ್ರಿ.

ಪ್ರತಿಕ್ರಿಯಿಸಿ (+)