ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದೀಯ ಪರಂಪರೆ ಬದ್ಧತೆ ಪ್ರದರ್ಶಿಸಿ

Last Updated 9 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಸಂಸತ್ತಿನ ಉಭಯ ಸದನಗಳಲ್ಲಿ ನಡೆದ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಿಸುತ್ತಾ ಲೋಕಸಭೆಯಲ್ಲಿ ಬುಧವಾರ ಪ್ರದರ್ಶಿಸಿದ ವಾಗ್ಝರಿ ವಿಶೇಷವಾಗಿತ್ತು. ಅಪ್ರತಿಮ ಮಾತುಗಾರಿಕೆಯ ಮೂಲಕ ತಮ್ಮ ಭಾಷಣ ವೈಖರಿಗೆ ಹೆಸರಾಗಿರುವ ಪ್ರಧಾನಿಯವರು ಈ ಬಾರಿ ತಮ್ಮ ವಾಗ್ಬಾಣಗಳಲ್ಲೇ ಪ್ರತಿಪಕ್ಷ ಕಾಂಗ್ರೆಸ್‍‍ ವಿರುದ್ಧ ಸಂಸತ್‍‍ನಲ್ಲಿ ಸಮರ ಸಾರಿದರು. ಈ ‘ವಾಗ್ವಿಲಾಸ’, ಈವರೆಗೆ ನಡೆದುಕೊಂಡು ಬಂದ ಸಂಸದೀಯ ಸಂಪ್ರದಾಯಗಳಿಗೆ ತಿಲಾಂಜಲಿ ಇತ್ತಿದ್ದು ಹೊಸ ಬೆಳವಣಿಗೆ.

ಸಂಸದೀಯ ನಡವಳಿಕೆಯ ಔಚಿತ್ಯ ತಪ್ಪಿದಂತಹ ಈ ನಡೆ ವಿಷಾದನೀಯ. ವಾಸ್ತವವಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ತಮ್ಮ ಸರ್ಕಾರದ ಸಾಧನೆ ಹಾಗೂ ಮುಂದಿನ ವರ್ಷಕ್ಕೆ ಸರ್ಕಾರದ ಯೋಜನೆಗಳನ್ನು ಕುರಿತು ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ಮಾಡುವ ಭಾಷಣದಲ್ಲಿ ರಾಷ್ಟ್ರಪತಿಯವರು ಪ್ರಸ್ತಾಪಿಸುತ್ತಾರೆ. ರಾಷ್ಟ್ರಪತಿಯವರ ಈ ಭಾಷಣದಲ್ಲಿನ ವಿಚಾರಗಳ ಬಗ್ಗೆ ನಂತರ ಉಭಯ ಸದನಗಳಲ್ಲೂ ಚರ್ಚೆ ನಡೆಯುತ್ತದೆ. ಸರ್ಕಾರದ ಕ್ರಮಗಳು ಹಾಗೂ ಭವಿಷ್ಯದ ಯೋಜನೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸುವ ಪ್ರಕ್ರಿಯೆಯಾಗಿರುತ್ತದೆ ಈ ಚರ್ಚೆ ಎಂಬುದನ್ನು ಮರೆಯಲಾಗದು. ಈ ಚರ್ಚೆ ಸಂದರ್ಭದಲ್ಲಿ ಎತ್ತಲಾದ ವಿಚಾರಗಳು ಹಾಗೂ ಪ್ರಶ್ನೆಗಳಿಗೆ ಪ್ರಧಾನಿಯವರು ತಮ್ಮ ಭಾಷಣದಲ್ಲಿ ಉತ್ತರಿಸುತ್ತಾರೆ.

ಹೀಗಾಗಿ ಪ್ರಧಾನಿಯವರ ಈ ಭಾಷಣದ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಅಷ್ಟೇ ಅಲ್ಲ, ತಮ್ಮ ಸರ್ಕಾರದ ನೀತಿಗಳು ಹಾಗೂ ಕಾರ್ಯಕ್ರಮಗಳ ಸಮರ್ಥನೆಯೂ ಪ್ರಧಾನಿಯವರ ಭಾಷಣದಲ್ಲಿರುತ್ತದೆ. ಇದು ನಡೆದು ಬಂದ ಸಂಸದೀಯ ಸಂಪ್ರದಾಯ. ಆದರೆ ಸರ್ಕಾರದ ನೀತಿಗಳು ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ತಮ್ಮ ಸರ್ಕಾರದ ಅಧಿಕೃತ ನಿಲುವುಗಳನ್ನು ಸದನದ ಮುಂದಿಡುವ ಬದಲಿಗೆ ಕಾಂಗ್ರೆಸ್ ಟೀಕೆಗೆ ಇದನ್ನು ವೇದಿಕೆಯಾಗಿ ಪ್ರಧಾನಿಯವರು ಈ ಬಾರಿ ಬಳಸಿಕೊಂಡಿದ್ದು ಅಸಂಗತ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮಾಡುವ ಪ್ರಚಾರ ಭಾಷಣದ ಮಟ್ಟಕ್ಕೆ ಸಂಸತ್‍ನಲ್ಲಿನ ಭಾಷಣವನ್ನು ಇಳಿಸಿದ್ದು ವಿಷಾದನೀಯ.

‘ದೇಶ ವಿಭಜನೆಗೆ ಕಾರಣವಾದ ಕಾಂಗ್ರೆಸ್‌ ಪಕ್ಷ ಬಿತ್ತಿದ ವಿಷಬೀಜ 70 ವರ್ಷಗಳ ನಂತರವೂ ಈ ದೇಶದ ಜನ ನರಳುವಂತೆ ಮಾಡಿದೆ. ಒಂದು ಕುಟುಂಬದ ಒಳಿತಿಗಾಗಿ ಭಾರತ ಮಾತೆಯನ್ನೇ ಛಿದ್ರಗೊಳಿಸಿದವರು ಜನರ ಆಶೋತ್ತರಗಳಿಗೆ ಸ್ಪಂದಿಸದೆ, ಸ್ವಾರ್ಥ ಸಾಧನೆಯನ್ನೇ ಮುಖ್ಯವಾಗಿಸಿಕೊಂಡರು’ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಪ್ರಧಾನಿಯವರು ಪ್ರತಿಪಕ್ಷದ ಜೊತೆಗೆ ತಮ್ಮ ಸರ್ಕಾರ ಹೊಂದಿರುವ ಕಹಿಯನ್ನು ಅನಾವರಣಗೊಳಿಸಿದರು. ಗತ ಇತಿಹಾಸ ಹೀಗೆ ಇದ್ದಿದ್ದರೆ... ಹಾಗೆ ಇದ್ದಿದ್ದರೆ... ಎಂಬಂತಹ ಹಳಹಳಿಕೆ ಕಾಂಗ್ರೆಸ್ ವಿರುದ್ಧದ ಅಸಹನೆಯಾಗಿ ಪ್ರದರ್ಶಿತವಾದದ್ದು ಶೋಚನೀಯ. ವಸೂಲಾಗದ ಸಾಲದಿಂದಾಗಿ (ಎನ್‌ಪಿಎ) ಬ್ಯಾಂಕಿಂಗ್‌ ಕ್ಷೇತ್ರ ತೀವ್ರ ಸಮಸ್ಯೆ ಎದುರಿಸುವಂತಾಗಿರುವುದಕ್ಕೂ ಕಾಂಗ್ರೆಸ್ ಕೈವಾಡವೇ ಕಾರಣ ಎನ್ನುತ್ತಾ ‘ಅದು ನಿಮ್ಮ ಪಾಪದ ಫಲ’ ಎಂಬಂತಹ ಮಾತುಗಳನ್ನು ಹೇಳಿರುವುದು ಹತಾಶೆಯ ಆಕ್ರೋಶಕ್ಕೆ ಪ್ರತೀಕ.

ಸಾಮಾನ್ಯ ಜನರ ಬದುಕನ್ನು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆಗಳಿಂದ ಗಮನವನ್ನು ದೂರ ಸೆಳೆಯಲು ಯತ್ನಿಸುವ ವಿಭಜಕ ಕಥನ ಇದು ಎನ್ನದೇ ವಿಧಿ ಇಲ್ಲ. ದೇಶ ವಿಭಜನೆಯಲ್ಲಿ ಕಾಂಗ್ರೆಸ್ ಪಾತ್ರ ಹಾಗೂ ಕಾಶ್ಮೀರ ಸಮಸ್ಯೆಯಲ್ಲಿ ಜವಾಹರಲಾಲ್ ನೆಹರೂ ಪಾತ್ರ ಕುರಿತಂತಹ ಮಾತುಗಳು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಹೇಗೆ ಪ್ರಸ್ತುತ?

‘ರಾಷ್ಟ್ರವನ್ನು 60 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಆಳಿದೆ. ನಮಗೆ 60 ತಿಂಗಳು ಅವಕಾಶ ಕೊಡಿ’ ಎಂದು ಮೋದಿಯವರು 2014ರಲ್ಲಿ ಹೇಳಿದ್ದರು. ಈಗ ಕೇಂದ್ರದಲ್ಲಷ್ಟೇ ಅಲ್ಲ, ಹೆಚ್ಚಿನ ರಾಜ್ಯಗಳಲ್ಲೂ ಅವರ ಪಕ್ಷವೇ ಆಡಳಿತ ನಡೆಸುತ್ತಿದೆ. ಆಡಳಿತದ ಬಗ್ಗೆ ಟೀಕೆ ಹಾಗೂ ವಿರೋಧಗಳಿರುವುದು ಪ್ರಜಾಪ್ರಭುತ್ವದ ಮೂಲ ಸತ್ವ. ಅಧಿಕಾರದಲ್ಲಿ ಇರುವವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳುವ ಹೊರೆ ಇರುತ್ತದೆ. ಆದರೆ ಹಾಗೆ ಸಮರ್ಥಿಸಿಕೊಳ್ಳುವ ಭರದಲ್ಲಿ ರಾಜಕೀಯ ವಾಗ್ವಾದವನ್ನು ವೈಯಕ್ತಿಕಗೊಳಿಸುವುದು ಖಂಡಿತಾ ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT