ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

66 ಸಾವಿರ ಜನರಿಗೆ ‘ಶಾದಿಭಾಗ್ಯ’ ಸಹಾಯಧನ: ಸಚಿವ ಸೇಠ್‌

Last Updated 9 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾದಿ ಭಾಗ್ಯ’ ಯೋಜನೆಯಡಿ ನೆರವು ಕೋರಿ ಮೂರು ವರ್ಷಗಳಲ್ಲಿ 78,725 ಅರ್ಜಿಗಳು ಬಂದಿದ್ದು, 66,010 ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್‌ ಸಚಿವ ತನ್ವೀರ್‌ ಸೇಠ್‌ ಅವರು ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಕಾಂಗ್ರೆಸ್‌ನ ಶ್ರೀನಿವಾಸ್‌ ಮಾನೆ ಪ್ರಶ್ನೆಗೆ ಉತ್ತರಿಸಿ, ಇನ್ನೂ 12,715 ಫಲಾನುಭವಿಗಳಿಗೆ ಸಹಾಯ ಧನ ನೀಡಬೇಕಾಗಿದೆ ಎಂದು ಹೇಳಿದರು.

2013–14 ರಲ್ಲಿ ₹ 10.46 ಕೋಟಿ, 2014–15 ರಲ್ಲಿ ₹ 34.83 ಕೋಟಿ, 2015–16 ರಲ್ಲಿ ₹ 100 ಕೋಟಿ, 2017–18 ರಲ್ಲಿ ₹ 159.26 ಕೋಟಿ ಈ ಯೋಜನೆಗಾಗಿ ಅನುದಾನ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಕುಟುಂಬದ ಮಹಿಳೆಯರು, ವಿಚ್ಛೇದಿತ ಮಹಿಳೆ ಮತ್ತು ವಿಧವೆಯರಿಗೆ ಮದುವೆ ನಿಮಿತ್ತ ವಿವಾಹದ ಖರ್ಚು– ವೆಚ್ಚಗಳು, ಜೀವನಾವಶ್ಯಕ ಸಾಮಗ್ರಿಗಳಿಗಾಗಿ ₹ 50 ಸಾವಿರ ಸಹಾಯಧನ ನೀಡಲಾಗುತ್ತಿದೆ ಎಂದರು.

115 ಶಾಲಾ ಕೊಠಡಿಗಳ ಮರು ನಿರ್ಮಾಣ: ಮಂಡ್ಯ ಜಿಲ್ಲೆಯಲ್ಲಿ 799 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು ಈ ಸಾಲಿನಲ್ಲಿ 99 ಶಾಲೆಗಳಲ್ಲಿ 115 ಕೊಠಡಿಗಳ ಮರು ನಿರ್ಮಾಣಕ್ಕೆ ಆದೇಶ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿ, ಸರ್ಕಾರಿ ಶಾಲೆಗಳಲ್ಲಿ 326 ಕೊಠಡಿಗಳ ಕೊರತೆ ಇದೆ ಎಂದರು.

115 ಕೊಠಡಿಗಳು ಇರುವ ಕಟ್ಟಡಗಳನ್ನು ಹಂತ–ಹಂತವಾಗಿ ನೆಲಸಮ ಮಾಡಿ ಮರು ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಇದಕ್ಕಾಗಿ ₹ 103 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಟ್ರಕ್‌ ಟರ್ಮಿನಲ್‌ ಸ್ವಚ್ಛತೆಗೆ ₹6 ಕೋಟಿ: ಯಶವಂತಪುರ ಟ್ರಕ್‌ ಟರ್ಮಿನಲ್‌ ನಲ್ಲಿರುವ ಕಸ ವಿಲೇವಾರಿ, ಸ್ವಚ್ಛತೆ ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸಲು ₹ 6 ಕೋಟಿ ಖರ್ಚು ಮಾಡಲಾಗುವುದು ಎಂದು ಸಾರಿಗೆ ಸಚಿವರ ಅನುಪಸ್ಥಿತಿಯಲ್ಲಿ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಹೇಳಿದರು.

ದಾಸನಪುರ ಬಳಿ ಇರುವ ಟ್ರಕ್‌ ಟರ್ಮಿನಲ್‌ಗೆ ಸಂಪರ್ಕ ರಸ್ತೆ ಕಲ್ಪಿಸಲು ಭೂಮಿ ಸ್ವಾದೀನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್‌ನ ಜಯಮಾಲ ಅವರಿಗೆ ಉತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT